ಬೆಂಗಳೂರು: ಆಟೋ ಆಸೆ ತೋರಿಸಿ ಪಟಾಕಿ ಹಚ್ಚಿದ ಡಬ್ಬದ ಮೇಲೆ ಕೂರಿಸಿ ಯುವಕನ ಪ್ರಾಣ ತೆಗೆದ ದುರುಳರು

ಪಟಾಕಿ ಜೊತೆ ಹುಡುಗಾಟ ಆಡಬೇಡಿ ಪೋಷಕರು ಪದೇ ಪದೇ ಹೇಳುತ್ತಿರುತ್ತಾರೆ. ಅದರೆ, ಯಾರು ಎಷ್ಟೇ ಹೇಳಿದರೂ, ಕೆಲವರು ಕಿವಿಗೆ ಹಾಕಿಕೊಳ್ಳದೆ ಜೀವಕ್ಕೆ ಕುತ್ತು ತಂದುಕೊಂಡಿರುವ ಹಲವು ಘಟನೆಗಳು ನಡೆದಿವೆ. ಅದೇ ರೀತಿಯಾಗಿ ಇಲ್ಲೊಂದು ಯುವಕರ ತಂಡ ಕೂಡ ದೀಪಾವಳಿ ಹಬ್ಬದ ದಿನ ಪಟಾಕಿ ಸಿಡಿಸುವ ವಿಚಾರಕ್ಕೆ ಚಾಲೆಂಜ್ ಮಾಡಿ, ಓರ್ವ ವ್ಯಕ್ತಿಯ ಸಾವಿಗೆ ಕಾರಣರಾಗಿದೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು, ನವೆಂಬರ್​ 05: ಪಟಾಕಿ (Fireworks) ಜೊತೆ ಹುಡುಗಾಟವಾಡಲು ಹೋಗಿ ಯುವಕ ಪ್ರಾಣ ಕಳೆದುಕೊಂಡಿರುವ ಘಟನೆ ಕೋಣನಕುಂಟೆ (Konankunte) ವ್ಯಾಪ್ತಿಯ ವಿವರ್ಸ್ ಕಾಲೋನಿಯಲ್ಲಿ ನಡೆದಿದೆ. ಶಬರೀಶ್​ (32) ಮೃತ ಯುವಕ. ಯುವಕರ ಹುಚ್ಚಾಟದ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಡಿಯೋದಲ್ಲಿನ ಐದಾರು ಮಂದಿ ಯುವಕರು ಶಬರೀಶ್​ಗೆ ಸವಾಲು ಹಾಕುತ್ತಾರೆ. ಪಟಾಕಿ ಅಂಟಿಸಿ, ಡಬ್ಬದಿಂದ ಮುಚ್ಚಿ, ಅದರ ಮೇಲೆ ಕೂರುತ್ತೀಯಾ ಅಂತ ಸವಾಲು ಹಾಕಿದ್ದಾರೆ. ಅದರಂತೆ ಡಬ್ಬದೊಳಗೆ ಪಟಾಕಿ ಇರಿಸಿ ಅದರ ಮೇಲೆ ಶಬರೀಶ್​ನನ್ನು ಕೂರಿಸಿದ್ದಾರೆ.‌ ನಂತರ ಪಟಾಕಿ ಹೊತ್ತಿಕೊಳ್ಳುತ್ತಿದ್ದಂತೆ ಯುವಕರೆಲ್ಲ ಓಡಿ ಹೋಗಿದ್ದಾರೆ. ಬಳಿಕ, ಪಟಾಕಿ ಸ್ಪೋಟಗೊಂಡು ಶಬರೀಶ್​ನ ಹಿಂಬದಿ ಮತ್ತು ಗುಪ್ತಾಂಗಗಳಿಗೆ ತೀವ್ರ ಗಾಯವಾಗಿದೆ. ಅಕ್ಟೋಬರ್ 31ರ ರಾತ್ರಿ ಘಟನೆ ನಡೆದಿದೆ.

ಕೂಡಲೆ ಶಬರೀಶ್​ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ, ಚಿಕಿತ್ಸೆ ಫಲಿಸದೆ ಎರಡು ದಿನಗಳ ಬಳಿಕ ಶಬರೀಶ್​ ಸುಟ್ಟಗಾಯಗಳ ವಿಭಾಗದಲ್ಲಿ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಡ್ರಮ್​ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು; ಶಾಕಿಂಗ್ ವಿಡಿಯೋ ವೈರಲ್

ಪಟಾಕಿ ಹಚ್ಚಿದ ಡಬ್ಬ ಮೇಲೆ ಕುಳಿತರೆ ಆಟೋ ಕೊಡಿಸುತ್ತೇವೆ ಅಂತ ಯುವಕರು ಚಾಲೆಂಜ್ ಹಾಕಿದ್ದರು. ಆಟೋ ಆಸೆಗಾಗಿ ಶಬರೀಶ್​ ಪಟಾಕಿ ಡಬ್ಬ ಮೇಲೆ ಕುಳಿತಿದ್ದನು ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.

ಸದ್ಯ ಆರು ಜನರ ವಿರುದ್ದ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹುಡುಗಾಟಕ್ಕೆ ಜೀವ ತೆಗೆದ ಆರೋಪಿಗಳಾದ ನವೀನ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್, ಸಂತೋಷ್​ನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:38 am, Tue, 5 November 24

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us