ಬೆಂಗಳೂರು, ಜೂನ್ 13: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಹಳದಿ ಲೈನ್ (Yellow Line) (ಆರ್ವಿ ರಸ್ತೆ ಹಾಗೂ ರಸ್ತೆ ಬೊಮ್ಮ ಸಂದ್ರ ನಡುವಣ ಮಾರ್ಗ) ಉದ್ದಕ್ಕೂ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ (CSB) ವರೆಗೆ ವ್ಯಾಪಿಸಿರುವ 3.3 ಕಿಮೀ ಡಬಲ್ ಡೆಕ್ಕರ್ ಫ್ಲೈಓವರ್ ಕಾಮಗಾರಿ ಪೂರ್ಣಗೊಂಡಿದೆ. ಅಂತಿಮ ತಪಾಸಣೆ ಬಾಕಿ ಉಳಿದಿದ್ದು, ಇದು ಪೂರ್ಣಗೊಂಡ ಬೆನ್ನಲ್ಲೇ ಜೂನ್ 15 ರಂದು ಅಥವಾ ನಂತರದ ದಿನಗಳಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ಗೆ ವಾಹನ ಸಂಚಾರ ಆರಂಭಗೊಳ್ಳಲಿದೆ. ಪ್ರೈಓವರ್ನ ಕೆಳ ಸ್ತರದಲ್ಲಿ ವಾಹನಗಳು ಸಂಚರಿಸಲಿದ್ದು, ಮೇಲ್ಸ್ತರದಲ್ಲಿ ಮೆಟ್ರೋ ರೈಲು ಸಂಚರಿಸಲಿದೆ.
ಹೆಚ್ಚುವರಿಯಾಗಿ, ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಐದು ಲೂಪ್‌ಗಳು ಮತ್ತು ರ‍್ಯಾಂಪ್‌ಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳನ್ನು ಎ, ಬಿ, ಸಿ, ಡಿ, ಮತ್ತು ಇ ರ‍್ಯಾಂಪ್‌ಗಳೆಂದು ಗುರುತಿಸಲಾಗಿದ್ದು, ಎ, ಬಿ ಮತ್ತು ಸಿ ರಾಗಿಗುಡ್ಡ/ ಬಿಟಿಎಂ ಲೇಔಟ್ ಕಡೆಯಿಂದ ಕೆಆರ್ ಪುರಂ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸಲಿವೆ. ಡಿ ಮತ್ತು ಇ ಕೆಆರ್ ಪುರಂ ಅನ್ನು ಬಿಟಿಎಂ ಲೇಔಟ್ ಮತ್ತು ರಾಗಿಗುಡ್ಡ ರಸ್ತೆಯನ್ನು ಸಂಪರ್ಕಿಸಲಿವೆ. ಎ, ಬಿ, ಸಿ, ರ‍್ಯಾಂಪ್‌ಗಳ ಪ್ರಮುಖ ಕಾಮಗಾರಿ ಮುಕ್ತಾಯದ ಹಂತದಲ್ಲಿವೆ ಮತ್ತು ಜೂನ್ ಅಂತ್ಯದ ಒಳಗೆ ಕಾರ್ಯಾರಂಭಕ್ಕೆ ಸಿದ್ಧವಾಗಿದೆ. ಆದರೆ ಡಿ ಮತ್ತು ಇ ರ‍್ಯಾಂಪ್‌ಗಳು 2025 ರ ಜೂನ್ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ವಾಹನ ಸಂಚಾರದ ಫ್ಲೈಓವರ್ ನೆಲ ಮಟ್ಟದಿಂದ ಎಂಟು ಮೀಟರ್‌ಷ್ಟು ಎತ್ತರ ಮತ್ತು ಮೆಟ್ರೋ ಲೇನ್ 16 ಮೀಟರ್‌ಗಳಷ್ಟು ಎತ್ತರದಲ್ಲಿದೆ ಎಂದು ‘ಮನಿಕಂಟ್ರೋಲ್’ ವರದಿ ಉಲ್ಲೇಖಿಸಿದೆ. ಈ ಫ್ಲೈಓವರ್ನೊಂದಿಗೆ ಇಂಥ ಡಬಲ್ ಡೆಕ್ಕರ್ ಮೇಲ್ಸೇತುವೆಗಳನ್ನು ಹೊಂದಿರುವ ಜೈಪುರ, ನಾಗ್ಪುರ ಮತ್ತು ಮುಂಬೈನಂತಹ ನಗರಗಳ ಸಾಲಿಗೆ ಬೆಂಗಳೂರು ಕೂಡ ಸೇರಲಿದೆ ಎಂದು ವರದಿ ತಿಳಿಸಿದೆ.
ಈ ಡಬಲ್ ಡೆಕ್ಕರ್ ಫ್ಲೈಓವರ್ ಸಾಮಾನ್ಯ ಪ್ರಯಾಣಿಕರಿಗೆ ಬಹಳಷ್ಟು ಪ್ರಯೋಜನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ ರಾಗಿಗುಡ್ಡ ಹಾಗೂ ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆಯ ಉದ್ದಕ್ಕೂ ಸಂಚಾರ ದಟ್ಟಣೆಯನ್ನು ನಿವಾರಿಸುವಲ್ಲಿ, ಸಿಗ್ನಲ್-ಮುಕ್ತ ಕಾರಿಡಾರ್ ಆಗಿ ಪರಿವರ್ತಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ. ರಾಗಿಗುಡ್ಡದಿಂದ ಪ್ರಯಾಣಿಸುವವರು ಇನ್ನು ಮುಂದೆ ಸಿಗ್ನಲ್ ಇಲ್ಲದೆ ಸಿಲ್ಕ್ ಬೋರ್ಡ್ ಜಂಕ್ಷನ್ಗೆ ಪ್ರಯಾಣಿಸಬಹುದಾಗಿದೆ. ಇದು ಹೆಚ್ಎಸ್ಆರ್ ಲೇಔಟ್ ಮತ್ತು ಹೊಸೂರು ರಸ್ತೆಗೆ ಸುಗಮ ಸಂಪರ್ಕವನ್ನು ಒದಗಿಸಲಿದೆ.
ಇದನ್ನೂ ಓದಿ: ಬೆಂಗಳೂರು ವಿವಿ ಆವರಣದಲ್ಲಿ ಸಾರ್ವಜನಿಕ ವಾಹನ ಸಂಚಾರ ನಿಷೇಧಿಸಿ: ಸರ್ಕಾರಕ್ಕೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರ
ಬೆಂಗಳೂರಿನ ಅತ್ಯಂತ ಜನನಿಬಿಡ ಹಾಗೂ ಸಂಚಾರ ದಟ್ಟಣೆಯ ಪ್ರದೇಶವೆಂದೇ ಹೆಸರುವಾಸಿಯಾಗಿರುವ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಎರಡು ಮೆಟ್ರೋ ನಿಲ್ದಾಣಗಳು ಇರಲಿದ್ದು, ಹೆಚ್ಚಿನ ಅನುಕೂಲ ಮಾಡಿಕೊಡಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ