ಬೆಂಗಳೂರಿನಲ್ಲಿ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ನೇಪಾಳಿ ದಂಪತಿಗೆ ಬಲೆ ಬೀಸಿದ ಪೊಲೀಸರು!

ಬೆಂಗಳೂರಿನಲ್ಲಿ ಈ ಹಿಂದೆ ನಡೆದಿದ್ದ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣ ಭಾರಿ ಸಂಚಲನ ಮೂಡಿಸಿದೆ. ಮನೆಕೆಲಸದ ಹೆಸರಿನಲ್ಲಿ ವಿಶ್ವಾಸ ಗಳಿಸಿ ದಂಪತಿ ನಗರದಲ್ಲಿ ಬಂಗಾರ ದೋಚಿದ್ದರು. ಇದೀಗ ಆರೋಪಿಗಳು ನೇಪಾಳಿ ದಂಪತಿ ಎಂದು ಮಾರತ್ ಹಳ್ಳಿ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ದೇಶದ ಹಲವೆಡೆ ಇದೇ ರೀತಿಯ ಕೃತ್ಯ ಎಸಗಿರುವ ಈ ಜೋಡಿಗಾಗಿ ವಿಶೇಷ ತಂಡಗಳು ಮುಂಬೈ, ಕೋಲ್ಕತ್ತಾ ಹಾಗೂ ನೇಪಾಳದಲ್ಲಿ ಶೋಧ ಕಾರ್ಯ ನಡೆಸುತ್ತಿವೆ. ಕಳ್ಳರನ್ನು ಹಿಡಿಯಲು ಬಲೆ ಬೀಸಲಾಗಿದೆ.

ಬೆಂಗಳೂರಿನಲ್ಲಿ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ನೇಪಾಳಿ ದಂಪತಿಗೆ ಬಲೆ ಬೀಸಿದ ಪೊಲೀಸರು!
ಬೆಂಗಳೂರಿನಲ್ಲಿ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ ನೇಪಾಳಿ ದಂಪತಿ!

Updated on: Feb 02, 2026 | 10:43 AM

ಬೆಂಗಳೂರು, ಫೆಬ್ರುವರಿ 02: ಬೆಂಗಳೂರಿನಲ್ಲಿ (Bengaluru) ಇತ್ತೀಚಿಗೆ ಬರೋಬ್ಬರಿ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿದ್ದು,  ಮಾರತ್ ಹಳ್ಳಿ ಪೊಲೀಸರು ತಡವಾದರೂ ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮನೆಕೆಲಸದ ಹೆಸರಿನಲ್ಲಿ ವಿಶ್ವಾಸ ಗಳಿಸಿ ಸುಮಾರು ಬಂಗಾರ ದೋಚುತ್ತಿದ್ದ ಆರೋಪಿಗಳು ನೇಪಾಳಿ ದಂಪತಿ ಎಂಬುದು ತನಿಖೆಯಿಂದ ದೃಢಪಟ್ಟಿದ್ದು, ಕದೀಮರನ್ನು ಹಿಡಿಯಲು ಬಲೆ ಬೀಸಿದ್ದಾರೆ.

ತನಿಖೆ ವೇಳೆ ದಂಪತಿಯ ಸತ್ಯ ಬಯಲು

ಬೆಂಗಳೂರಿನಲ್ಲಿ ಹಿಂದೆ ನಡೆದಿದ್ದ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನದ ಜಾಡು ಹಿಡಿದು ಹೊರಟ ಪೊಲೀಸರಿಗೆ ಕದೀಮ ದಂಪತಿಯ ಕುರಿತ ಹಲವು ವಿಷಯಗಳು ತಿಳಿದು ಬಂದಿವೆ. ತನಿಖೆ ನಡೆಸಿದ ಪೊಲೀಸರು, ಆರೋಪಿಗಳು ದಿನೇಶ್ ಹಾಗೂ ಕಮಲ ಅಥವಾ ಸಲೀನಾ ಎಂಬ ನಕಲಿ ಹೆಸರುಗಳನ್ನು ಬಳಸಿಕೊಂಡು ಮನೆಕೆಲಸಕ್ಕೆ ಸೇರಿ ಕಳ್ಳತನ ನಡೆಸುತ್ತಿದ್ದರೆಂದು ತಿಳಿಸಿದ್ದಾರೆ. ಈ ದಂಪತಿ ದೇಶದ ಅನೇಕ ಭಾಗಗಳಲ್ಲಿ ಇದೇ ರೀತಿಯ ಕೃತ್ಯಗಳನ್ನು ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಈ ಪ್ರಕರಣದ ಬೆನ್ನತ್ತಿರುವ ಮಾರತ್ ಹಳ್ಳಿ ಪೊಲೀಸರು ಸುಮಾರು ಏಳು ವಿಶೇಷ ತಂಡಗಳನ್ನು ರಚಿಸಿ ಮುಂಬೈ, ಕೊಲ್ಕತ್ತಾ ಹಾಗೂ ನೇಪಾಳ ಸೇರಿ ಹಲವು ಕಡೆಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆರೋಪಿಗಳು ನೇಪಾಳಕ್ಕೆ ಪರಾರಿಯಾಗಿದ್ದರೆ ಅವರನ್ನು ಪತ್ತೆಹಚ್ಚುವುದು ಕಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಸ್ಥಳೀಯವಾಗಿ ಯಾರಾದರೂ ಆರೋಪಿಗಳಿಗೆ ಸಹಾಯ ಮಾಡಿದ್ದಾರೆಯೇ ಎಂಬುದರ ಕುರಿತಾದ ತನಿಖೆಯೂ ಮುಂದುವರಿದಿದೆ ಎಂದು ತಿಳಿಸಲಾಗಿದೆ.

ಈ ಹಿಂದೆಯೂ ವಿವಿಧೆಡೆ ಕಳ್ಳತನ ಮಾಡಿದ್ದ ಜೋಡಿ

ಪುಣೆಯ ಭಾವ್ಧಾನ್ ಪ್ರದೇಶದ ವಿಂಡ್ಮಿಲ್ ಸೊಸೈಟಿಯ ರತ್ನಾದೀಪ್ ರಂಗನಾಥ್ ರಾವ್ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿ ಸುಮಾರು ಆರು ತಿಂಗಳ ಬಳಿಕ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಲಾಕರ್ ಒಡೆದು ಕಳ್ಳತನ ಮಾಡಿ ಆರೋಪಿಗಳು ಪರಾರಿಯಾಗಿದ್ದರು.  2025ರ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿಯ ಮನೆಯಲ್ಲಿ 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರೆಂದು ಕಾರ್ಯಾಚರಣೆ ವೇಳೆ ತಿಳಿದುಬಂದಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:50 am, Mon, 2 February 26