ಬೆಂಗಳೂರಿನ ‘ಸೂಪರ್​​ಮ್ಯಾನ್’ ಮಣಿವೇಲ್; ಸ್ಯಾನಿಟರಿ ಪ್ಯಾಡ್, ವೈಫೈ ಮತ್ತು ಪುಸ್ತಕಗಳ ಜೊತೆ ಇವರ ಆಟೋದಲ್ಲಿ ಇನ್ನೂ ಏನೇನಿದೆ ಗೊತ್ತಾ?

ಬೆಂಗಳೂರಿನ ಆಟೋ ಚಾಲಕ ತನ್ನ ವಿಭಿನ್ನ ಕಾರ್ಯದಿಂದ ಗುರುತಿಸಿಕೊಂಡಿದ್ದಾರೆ. ಚಾಲಕ ಮಣಿವೇಲ್ ಸಿ ತಮ್ಮ ರಿಕ್ಷಾದಲ್ಲಿ ಸ್ಯಾನಿಟರಿ ಪ್ಯಾಡ್, ವೈಫೈ, ನೀರು, ಪುಸ್ತಕಗಳು, ಟಿವಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಿ 'ಸೂಪರ್‌ಮ್ಯಾನ್' ಎನಿಸಿಕೊಂಡಿದ್ದಾರೆ. ಆಟೋಗಾಗಿ ತಿಂಗಳಿಗೆ 4-5 ಸಾವಿರ ರೂ ಖರ್ಚು ಮಾಡುವ ಇವರು, ಬೆಂಗಳೂರಿಗರಿಂದ ಪ್ರಶಂಸೆ ಪಡೆದಿದ್ದಾರೆ.

ಬೆಂಗಳೂರಿನ ಸೂಪರ್​​ಮ್ಯಾನ್ ಮಣಿವೇಲ್; ಸ್ಯಾನಿಟರಿ ಪ್ಯಾಡ್, ವೈಫೈ ಮತ್ತು ಪುಸ್ತಕಗಳ ಜೊತೆ ಇವರ ಆಟೋದಲ್ಲಿ ಇನ್ನೂ  ಏನೇನಿದೆ ಗೊತ್ತಾ?
ಬೆಂಗಳೂರಿನ 'ಸೂಪರ್​​ಮ್ಯಾನ್' ಮಣಿವೇಲ್; ಇವರ ಆಟೋದಲ್ಲಿ ಏನೆಲ್ಲಾ ಇದೆ ಗೊತ್ತಾ?

Updated on: Nov 10, 2025 | 10:26 AM

ಬೆಂಗಳೂರು, ನವೆಂಬರ್ 10: ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುವ ಹಲವಾರು ಆಟೋ ರಿಕ್ಷಾ ಚಾಲಕರ ಮಧ್ಯೆ ಓರ್ವ ಚಾಲಕ ತನ್ನ ವಿಭಿನ್ನ ಕಾರ್ಯದಿಂದ ಗುರುತಿಸಿಕೊಂಡಿದ್ದಾರೆ. ಆಟೋ ಚಾಲಕ ಮಣಿವೇಲ್ ಸಿ (Auto Driver Manivel), ತಮ್ಮ ರಿಕ್ಷಾದಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ಗಳು ಮತ್ತು ಪುಸ್ತಕಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದ್ದು, ಪ್ರಯಾಣಿಕರಿಂದ ಮೆಚ್ಚುಗೆ ಪಡೆದಿದ್ದಾರೆ.

ಮಣಿವೇಲ್ ತಮ್ಮ ಆಟೋದಲ್ಲಿ ನ್ಯಾಪ್ಕಿನ್‌ಗಳು, ಫ್ಯಾನ್, ವೈ-ಫೈ, ನೀರಿನ ಬಾಟಲಿಗಳು, ಸಣ್ಣ ಟಿವಿ, ಸಿಸಿಟಿವಿ ಕ್ಯಾಮೆರಾಗಳು ಮತ್ತು ಪುಸ್ತಕಕಗಳನ್ನು ಇಟ್ಟುಕೊಂಡಿದ್ದಾರೆ. ಈ ಪುಸ್ತಕಗಳು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಎಂಬ ಐದು ಭಾಷೆಗಳಿಂದ ಕನ್ನಡವನ್ನು ಕಲಿಯಲು ಸಹಾಯ ಮಾಡುತ್ತದೆ. ತಮ್ಮ ವಾಹನದೊಳಗೆ ಅನೇಕ ಸ್ಟಿಕರ್​ಗಳನ್ನು ಇವರು ಅಂಟಿಸಿಕೊಂಡಿದ್ದು, ಗರ್ಭಿಣಿಯರು ಮತ್ತು ಡಯಾಲಿಸಿಸ್ ರೋಗಿಗಳಿಗೆ 10 ಕಿ.ಮೀ ಒಳಗೆ ಉಚಿತ ಸವಾರಿ ಎಂಬ ಸ್ಟಿಕರ್ ಇದುವರೆಗೂ ಹಲವಾರು ಪ್ರಯಾಣಿಕರ ಗಮನ ಸೆಳೆದಿದೆ. ಅವರ ಈ ಕಾರ್ಯದಿಂದಾಗಿ ಜನರಿಂದ ‘ಸೂಪರ್‌ಮ್ಯಾನ್’ ಎಂಬ ಹೆಸರನ್ನೂ ಸಂಪಾದಿಸಿದ್ದಾರೆ.

ಇವರ ಆಟೋದಲ್ಲಿ ಗರ್ಭಿಣಿಯರಿಗೆ ಉಚಿತ ಪ್ರಯಾಣ

ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಬೆಳೆದ ಮಣಿವೇಲ್, ನಾಲ್ಕನೇ ವಯಸ್ಸಿನಲ್ಲಿ ಪಾಲಕರಿಬ್ಬರನ್ನೂ ಕಳೆದುಕೊಂಡಿದ್ದರು. ಬೆಂಗಳೂರಿಗೆ ಬಂದು ಸ್ಥಳೀಯರೊಂದಿಗೆ ಸಂವಹನ ನಡೆಸುವ ಮೂಲಕ ಕನ್ನಡ ಕಲಿತರು. 2017 ರಲ್ಲಿ ಮಣಿವೇಲ್ ಅವರ ಪತ್ನಿ ಗರ್ಭಿಣಿಯಾಗಿದ್ದಾಗ ದ್ವಿಚಕ್ರವಾಹನವಿಲ್ಲದೆ ಆಸ್ಪತ್ರೆಗೆ ಕರೆದೊಯ್ಯಲು ಕಷ್ಟ ಪಟ್ಟಿದ್ದರು. ಹೀಗಾಗಿ ಎರಡು ವರ್ಷಗಳ ನಂತರ ಸ್ವಂತ ಆಟೋರಿಕ್ಷಾ ಖರೀದಿಸಿದ ಮಣಿವೇಲ್, ಗರ್ಭಿಣಿಯರಿಗೆ ಉಚಿತ ಪ್ರಯಾಣವನ್ನು ನೀಡಲು ನಿರ್ಧರಿಸಿದರು. ಇನ್ನೋರ್ವ ಆಟೋ ಚಾಲಕ ಅವರ ಆಪ್ತ ಸ್ನೇಹಿತರಾಗಿದ್ದು, ಅವರು ನಿಯಮಿತ ಆಸ್ಪತ್ರೆ ಭೇಟಿಗಳಿಗಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದನ್ನು ಕಂಡ ಮಣಿವೇಲ್ , ಡಯಾಲಿಸಿಸ್ ರೋಗಿಗಳಿಗೆ ಸಹ ಉಚಿತ ಪ್ರಯಾಣವನ್ನು ನೀಡುತ್ತಿದ್ದಾರೆ.

ಆಟೋಗಾಗಿ ತಿಂಗಳಿಗೆ 4000ರೂ ಖರ್ಚು

ಮಣಿವೇಲ್ ತಮ್ಮ ಆಟೋವನ್ನು ನಿರ್ವಹಿಸಲು ಮತ್ತು ನೀರು, ಬ್ಯಾಟರಿಗಳು, ಸ್ಯಾನಿಟರಿ ಪ್ಯಾಡ್‌ಗಳು ಮತ್ತು ವೈ-ಫೈ ಸೇರಿದಂತೆ ಉಳಿದ ಸೌಲಭ್ಯಗಳಿಗಾಗಿ ಪ್ರತಿ ತಿಂಗಳು ಸುಮಾರು 4,000ರೂ. ಇಂದ 5,000 ರೂ. ಖರ್ಚು ಮಾಡುತ್ತಾರೆ. ಇತ್ತೀಚಿನ ಐಪಿಎಲ್ ಸಮಯದಲ್ಲಿ ಮಣೀವೇಲ್ ಆಟೋದ ಸಣ್ಣ ಪರದೆಯ ಮೇಲೆ ಪಂದ್ಯವನ್ನು ವೀಕ್ಷಿಸುತ್ತಿದ್ದ ಸವಾರರೊಬ್ಬರು ಪಂದ್ಯ ಮುಗಿಯುವವರೆಗೂ ಆಟೋದಿಂದ ಇಳಿಯಲು ನಿರಾಕರಿಸಿದರು. ವಿಜಯನಗರದಿಂದ ಸದಾಶಿವನಗರಕ್ಕೆ ಮೂರು ಗಂಟೆಗಳ ಕಾಲ ನಡೆದ ಸಣ್ಣ ಪ್ರಯಾಣಕ್ಕೆ ಪ್ರಯಾಣಿಕ 3,000 ರೂ.ಗಳನ್ನೂ ಸಹ ಪಾವತಿಸಿದ್ದರು.

ಸೂಪರ್ ಆಟೋ ಅಪ್ಲಿಕೇಶನ್ ಆರಂಭಿಸಲಿರುವ ಮಣಿವೇಲ್

ಹೈದ್ರಾಬಾದ್​ನಲ್ಲಿ ಮೆಚ್ಚುಗೆ ಗಳಿಸಿರುವ ಸೂಪರ್ ಆಟೊದಿಂದ ಪ್ರೇರಣೆ ಪಡೆದು ಮಣಿವೇಲ್ ಈಗ ಸೂಪರ್ ಆಟೋ ಎಂಬ ಅಪ್ಲಿಕೇಶನ್ ಅನ್ನು ಪ್ರಾರಂಭಿಸುತ್ತಿದ್ದಾರೆ. ಚಾಲಕರು ಅವರಂತೆಯೇ ಸೌಲಭ್ಯಗಳನ್ನು ಒದಗಿಸಿದರೆ ತಮ್ಮ ವಾಹನಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.