ಬೆಂಗಳೂರು, ಸೆ.11:ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಬೈಯಪ್ಪನಹಳ್ಳಿ-ಕೆಆರ್ ಪುರಂ ಮತ್ತು ಕೆಂಗೇರಿ-ಚಲ್ಲಘಟ್ಟ ನಡುವೆ ಸೆಪ್ಟೆಂಬರ್ 15 ರಿಂದ ಮೆಟ್ರೋ ಸೇವೆ ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಪರಿಶೀಲಿಸಿ ಪ್ರಮಾಣೀಕರಿಸಿದ ನಂತರ ಮೆಟ್ರೋ ಸಂಚಾರಕ್ಕೆ ಆರಂಭಿಸಲಾಗುತ್ತದೆ.
ಮೆಟ್ರೋ ಸಂಚಾರ ಆರಂಭದ ಬಗ್ಗೆ ಮಾತನಾಡಿದ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ಬೈಯಪ್ಪನಹಳ್ಳಿ-ಕೆಆರ್ ಪುರಂ ಮತ್ತು ಕೆಂಗೇರಿ-ಚಲ್ಲಘಟ್ಟ ನಡುವಿನ ಮಾರ್ಗವನ್ನು ಸಿಎಂಆರ್‌ಎಸ್ ಪರಿಶೀಲಿಸಿ ಅನುಮತಿ ನೀಡಬೇಕು. ಸದ್ಯ ನಾವು ಇದಕ್ಕಾಗಿ ಕಾಯುತ್ತಿದ್ದೇವೆ. ಇದು ಶೀಘ್ರದಲ್ಲೇ ನಡೆದರೆ ಸೆಪ್ಟೆಂಬರ್ 15 ರಿಂದ ವೈಟ್‌ಫೀಲ್ಡ್-ಚಲ್ಲಘಟ್ಟ ಮಾರ್ಗದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಬಂದ್: ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಹಿನ್ನೆಲೆ ಮೆಟ್ರೋ ಓಡಾಟ ಹೆಚ್ಚಳ; 5 ನಿಮಿಷಕ್ಕೊಂದು ಟ್ರೈನ್
ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರಂ ನಡುವಿನ ಸಂಪರ್ಕ ಮತ್ತು ಕೆಂಗೇರಿಯಿಂದ ಚಲ್ಲಘಟ್ಟಕ್ಕೆ ವಿಸ್ತರಣೆಯು ಪೂರ್ವ ಮತ್ತು ಪಶ್ಚಿಮ ಬೆಂಗಳೂರನ್ನು ಸಂಪರ್ಕಿಸುವ ಮೆಟ್ರೋದ ನೇರಳೆ ಮಾರ್ಗದ ಭಾಗವಾಗಿದೆ. ಕಾರ್ಯಾಚರಣೆಗಳು ಪ್ರಾರಂಭವಾದ ನಂತರ ಮೆಟ್ರೋದಲ್ಲಿ ನಿತ್ಯ ಸಂಚರಿಸುವವರ ಸಂಖ್ಯೆ 75,000 ರಿಂದ ಸುಮಾರು 1 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.
ನೇರಳೆ ಲೈನ್‌ನ ಭಾಗವಾಗಿರುವ ವೈಟ್‌ಫೀಲ್ಡ್ ಮತ್ತು ಕೆಆರ್ ಪುರಂ ನಡುವಿನ 12.75 ಕಿಮೀ ಮಾರ್ಗವನ್ನು ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಧಾನಸಭೆ ಚುನಾವಣೆಗೂ ಮುನ್ನ ಉದ್ಘಾಟಿಸಿದ್ದರು. ವೈಟ್‌ಫೀಲ್ಡ್-ಕೆಆರ್ ಪುರಂ ಮಾರ್ಗದಲ್ಲಿ ಪ್ರಸ್ತುತ ದಿನಕ್ಕೆ ಸರಾಸರಿ 30,000 ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಈ ಪೈಕಿ ಹೆಚ್ಚಿನವರು ಐಟಿ ವೃತ್ತಿಪರರಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ