
ಬೆಂಗಳೂರು, ಅಕ್ಟೋಬರ್ 26: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ನೌಕರರ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದೊಂದಿಗೆ ಮಾಡಿಕೊಂಡಿರುವ ಪರಿಷ್ಕೃತ ಒಪ್ಪಂದದ ಪ್ರಕಾರ, ಬಿಎಂಟಿಸಿ ಸಿಬ್ಬಂದಿಯ ವೈಯಕ್ತಿಕ ಅಪಘಾತ ವಿಮಾ ಪರಿಹಾರ ಮೊತ್ತವನ್ನು ಈ ಹಿಂದೆ ಇದ್ದ 50 ಲಕ್ಷ ರೂ.ಗಳಿಂದ ಬರಾಬ್ಬರಿ 1 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.
ಯೂನಿಯನ್ ಬ್ಯಾಂಕ್ನಲ್ಲಿ ವೇತನ ಖಾತೆ ಹೊಂದಿರುವ ನೌಕರರು ದುರಾದೃಷ್ಟವಶಾತ್ ಅಪಘಾತದಲ್ಲಿ ಮೃತಪಟ್ಟರೆ, ಅವರ ನಾಮನಿರ್ದೇಶಿತರಿಗೆ ಒಟ್ಟು 1 ಕೋಟಿ ರೂ. ವಿಮಾ ಪರಿಹಾರ ದೊರೆಯಲಿದೆ. ಇದರೊಂದಿಗೆ ನೌಕರರಿಗೆ ಸಂಪೂರ್ಣ ಅಥವಾ ಭಾಗಶಃ ಶಾಶ್ವತ ಅಂಗವೈಕಲ್ಯ ಉಂಟಾದ ಸಂದರ್ಭದಲ್ಲೂ 1 ಕೋಟಿ ರೂ. ವರೆಗೆ ವಿಮಾ ರಕ್ಷಣೆ ಸಿಗಲಿದೆ. ಅಲ್ಲದೆ, ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಮೂಲಕ 4 ಲಕ್ಷ ರೂ.ನಿಂದ 15 ಲಕ್ಷ ರೂ.ವರೆಗೆ ಹೆಚ್ಚುವರಿ ಪರಿಹಾರ ಹಾಗೂ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುವ ನೌಕರರಿಗೆ ವಾರ್ಷಿಕ 30,000 ರೂ.ವರೆಗೆ ವೈದ್ಯಕೀಯ ನೆರವು ನೀಡಲು ನೂತನ ಒಡಂಬಡಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸಹಜ ಸಾವು ಅಥವಾ ಇತರ ಕಾರಣಗಳಿಂದ ನೌಕರರು ಮೃತಪಟ್ಟರೆ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ವ್ಯವಸ್ಥೆಯೂ ಇದ್ದು, 25,000 ರೂ.ಗಿಂತ ಕಡಿಮೆ ವೇತನ ಪಡೆಯುವವರಿಗೆ 5 ಲಕ್ಷ ರೂ. ಹಾಗೂ ಹೆಚ್ಚಿನ ವೇತನ ಪಡೆಯುವವರಿಗೆ 10 ಲಕ್ಷ ರೂ. ಪರಿಹಾರ ಸಿಗಲಿದೆ. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ ಮೂರ್ತಿ ಹಾಗೂ ಯೂನಿಯನ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಚ್.ಟಿ. ವಾಸಪ್ಪ ಅವರು ಈ ನೂತನ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಐತಿಹಾಸಿಕ ನಿರ್ಧಾರದಿಂದ ಸಾವಿರಾರು ಸಾರಿಗೆ ನೌಕರರ ಕುಟುಂಬಗಳಿಗೆ ತೀವ್ರ ಸಂಕಷ್ಟದ ಸಮಯದಲ್ಲಿ ದೊಡ್ಡ ಮಟ್ಟದ ಆರ್ಥಿಕ ಭದ್ರತೆ ದೊರೆತಂತಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ