ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್‌ ರಹಿತ ಪ್ರಯಾಣಿಕರಿಗೆ ಶಾಕ್: 30 ಬಸ್‌ಗಳಲ್ಲಿ ಸ್ವಯಂಚಾಲಿತ ಪ್ರಯಾಣಿಕರ ಎಣಿಕೆ ಹೈಟೆಕ್ ಸಿಸ್ಟಮ್ ಜಾರಿ

ಬಿಎಂಟಿಸಿ ತನ್ನ ಸಾರಿಗೆ ವ್ಯವಸ್ಥೆಗೆ ಹೈಟೆಕ್ ಸ್ಪರ್ಶ ನೀಡಲು 'ಸ್ವಯಂಚಾಲಿತ ಪ್ರಯಾಣಿಕರ ಎಣಿಕೆ ವ್ಯವಸ್ಥೆ' (APC) ತಂತ್ರಜ್ಞಾನ ಅಳವಡಿಸುತ್ತಿದೆ. 30 ಬಸ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಲಿರುವ ಈ ವ್ಯವಸ್ಥೆ, ಪ್ರಯಾಣಿಕರ ನಿಖರ ಸಂಖ್ಯೆ, ರಶ್ ಪ್ರಮಾಣ, ಹಾಗೂ ಟಿಕೆಟಿಂಗ್ ವ್ಯವಸ್ಥೆಯ ನೈಜತೆಯನ್ನು ಪರಿಶೀಲಿಸುತ್ತದೆ. ಇದು ಆದಾಯ ಸೋರಿಕೆ ತಡೆಗಟ್ಟಲು, ಟಿಕೆಟ್‌ರಹಿತ ಪ್ರಯಾಣಕ್ಕೆ ಬ್ರೇಕ್ ಹಾಕಲು ಹಾಗೂ ಮಾರ್ಗ ಸುಧಾರಣೆಗೆ ಸಹಕಾರಿಯಾಗಲಿದೆ.

ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್‌ ರಹಿತ ಪ್ರಯಾಣಿಕರಿಗೆ ಶಾಕ್: 30 ಬಸ್‌ಗಳಲ್ಲಿ ಸ್ವಯಂಚಾಲಿತ ಪ್ರಯಾಣಿಕರ ಎಣಿಕೆ ಹೈಟೆಕ್ ಸಿಸ್ಟಮ್ ಜಾರಿ
ಸಾಂದರ್ಭಿಕ ಚಿತ್ರ
Image Credit source: Tv9 kannada

Updated on: Oct 02, 2026 | 10:51 AM

ಮುಖ್ಯಾಂಶಗಳು

  • ಸಾರಿಗೆ ವ್ಯವಸ್ಥೆಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದೆ
  • ಏನಿದು APC ತಂತ್ರಜ್ಞಾನ? ಹೇಗೆ ಕೆಲಸ ಮಾಡುತ್ತೆ?
  • ಆದಾಯ ಸೋರಿಕೆ ಹಾಗೂ 'ಟಿಕೆಟ್‌ ರಹಿತ' ಪ್ರಯಾಣಕ್ಕೆ ಬ್ರೇಕ್

ಬೆಂಗಳೂರು, ಅ.2: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ತನ್ನ ಸಾರಿಗೆ ವ್ಯವಸ್ಥೆಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದೆ. ಬಸ್ಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ನಿಖರ ಸಂಖ್ಯೆ, ಬಸ್ ಹತ್ತುವ ಹಾಗೂ ಇಳಿಯುವ ಸ್ಥಳಗಳು, ರಶ್ (ಜನದಟ್ಟಣೆ) ಪ್ರಮಾಣ ಹಾಗೂ ಟಿಕೆಟಿಂಗ್‌ ವ್ಯವಸ್ಥೆಯ ನೈಜತೆಯನ್ನು ಪರಿಶೀಲಿಸಲು ‘ಸ್ವಯಂಚಾಲಿತ ಪ್ರಯಾಣಿಕರ ಎಣಿಕೆ ವ್ಯವಸ್ಥೆ’ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ 30 ಬಸ್‌ಗಳಲ್ಲಿ ಅಳವಡಿಸಲು ನಿರ್ಧರಿಸಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಬಿಎಂಟಿಸಿ ಈಗಾಗಲೇ ಅಧಿಕೃತವಾಗಿ ಟೆಂಡರ್ ಆಹ್ವಾನಿಸಿದ್ದು, ಅಕ್ಟೋಬರ್ 12, 2026 ರವರೆಗೆ ಬಿಡ್ ಸಲ್ಲಿಸಲು ಅವಕಾಶ ನೀಡಲಾಗಿದೆ.

ಏನಿದು APC ತಂತ್ರಜ್ಞಾನ? ಹೇಗೆ ಕೆಲಸ ಮಾಡುತ್ತೆ?:

APC ಎನ್ನುವುದು ಬಸ್‌ಗಳ ಮುಂಭಾಗ ಮತ್ತು ಹಿಂಭಾಗದ ಬಾಗಿಲುಗಳ ಬಳಿ ಅಳವಡಿಸಲಾಗುವ ಅತ್ಯಾಧುನಿಕ ಸೆನ್ಸರ್‌ಗಳು ಹಾಗೂ ಆನ್‌‌ಬೋರ್ಡ್ ಕ್ಯಾಮೆರಾ/ಉಪಕರಣಗಳ ಆಧಾರಿತ ತಂತ್ರಜ್ಞಾನವಾಗಿದೆ. ಬಸ್‌ಗೆ ಪ್ರಯಾಣಿಕರು ಪ್ರವೇಶಿಸುವಾಗ ಮತ್ತು ನಿರ್ಗಮಿಸುವಾಗ ಸೆನ್ಸರ್‌ಗಳು ಸ್ವಯಂಚಾಲಿತವಾಗಿ ಎಣಿಕೆ ಮಾಡುತ್ತವೆ. ಪ್ರತಿಯೊಂದು ಬಸ್ ನಿಲ್ದಾಣದಲ್ಲಿ ಎಷ್ಟು ಜನ ಹತ್ತಿದರು, ಎಷ್ಟು ಜನ ಇಳಿದರು ಹಾಗೂ ಪ್ರಸ್ತುತ ಬಸ್‌ನಲ್ಲಿರುವ ಒಟ್ಟು ಪ್ರಯಾಣಿಕರ ಸಂಖ್ಯೆ ಎಷ್ಟು ಎನ್ನುವ ಲೈವ್ ಮಾಹಿತಿಯನ್ನು ಇದು ನೀಡುತ್ತದೆ. ಈ ಸಿಸ್ಟಮ್ ಕಾರ್ಯಾಚರಣೆಗೆ ಬರುವಾಗ ಕನಿಷ್ಠ ಶೇ. 95 ರಷ್ಟು ಎಣಿಕೆಯ ನಿಖರತೆಯನ್ನು (Accuracy) ಹೊಂದಿರಬೇಕು ಎಂದು ಟೆಂಡರ್‌ನಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.

ETM ಮತ್ತು ಪಾಸ್‌ಗಳ ಪರಿಶೀಲನೆಗೆ ಸಹಕಾರಿ:

ಬಿಎಂಟಿಸಿಯಲ್ಲಿ ಪ್ರಸ್ತುತ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್ (ETM) ಬಳಕೆಯಲ್ಲಿದೆ. ಅದಾಗ್ಯೂ, ಉಚಿತ ಪಾಸ್ (ಶಕ್ತಿ ಯೋಜನೆ, ಹಿರಿಯ ನಾಗರಿಕ ಪಾಸ್, ವಿದ್ಯಾರ್ಥಿ ಪಾಸ್) ಪಡೆಯುವವರ ಸಂಖ್ಯೆ ಹೆಚ್ಚಿರುವುದರಿಂದ, ಬಸ್‌ನಲ್ಲಿರುವ ನಿಜವಾದ ಪ್ರಯಾಣಿಕರ ಸಂಖ್ಯೆಯನ್ನು ಟಿಕೆಟ್ ಡೇಟಾಗೆ ಹೋಲಿಸಿ ಪರಿಶೀಲಿಸುವುದು ಬಿಎಂಟಿಸಿಗೆ ಸವಾಲಾಗಿತ್ತು. ಈ ಹೊಸ APC ಸಿಸ್ಟಮ್‌ನ ಡೇಟಾವನ್ನು ETM ನೊಂದಿಗೆ ಸಂಯೋಜಿಸುವುದರಿಂದ, ಎಷ್ಟು ಜನ ಪಾಸ್/ಟಿಕೆಟ್ ಪಡೆದಿದ್ದಾರೆ ಮತ್ತು ನಿಜವಾಗಿಯೂ ಬಸ್‌ನಲ್ಲಿ ಎಷ್ಟು ಜನರಿದ್ದಾರೆ ಎಂಬುದನ್ನು ಸ್ವತಂತ್ರವಾಗಿ ಪರಿಶೀಲಿಸಬಹುದು.

ಆದಾಯ ಸೋರಿಕೆ ಹಾಗೂ ‘ಟಿಕೆಟ್‌ ರಹಿತ’ ಪ್ರಯಾಣಕ್ಕೆ ಬ್ರೇಕ್:

ಬಿಎಂಟಿಸಿಗೆ ದೊಡ್ಡ ತಲೆನೋವಾಗಿರುವ ಆದಾಯ ಸೋರಿಕೆ (Revenue Leakage) ತಡೆಯಲು ಈ ಸಿಸ್ಟಮ್ ಮಹತ್ವದ ಪಾತ್ರ ವಹಿಸಲಿದೆ. ಬಸ್‌ನಲ್ಲಿರುವ ಪ್ರಯಾಣಿಕರ ಎಣಿಕೆಗೂ, ವಿತರಣೆಯಾದ ಟಿಕೆಟ್‌‌ಗಳ ಸಂಖ್ಯೆಗೂ ವ್ಯತ್ಯಾಸ ಕಂಡುಬಂದರೆ ಆನ್‌ಲೈನ್‌ನಲ್ಲಿ ತಕ್ಷಣವೇ ಬಿಎಂಟಿಸಿ ಕಂಟ್ರೋಲ್ ರೂಮ್‌ಗೆ ಮೆಸೇಜ್ ರವಾನೆಯಾಗುತ್ತದೆ. ಕಂಡಕ್ಟರ್‌ಗಳು ಟಿಕೆಟ್ ನೀಡದೆ ಹಣ ಪಡೆದು ಅಕ್ರಮ ಎಸಗುವುದು ಅಥವಾ ಭ್ರಷ್ಟಾಚಾರದಲ್ಲಿ ಭಾಗಿಯಾಗುವುದನ್ನು ಪತ್ತೆಹಚ್ಚಲು ಈ ಸ್ವತಂತ್ರ ತಂತ್ರಜ್ಞಾನ ನೆರವಾಗಲಿದೆ.

ಇದನ್ನು ಓದಿ; ಭಾರತದ ಗುರಿಗೆ ನಡುಗಿದ ಕೊರಿಯಾ: ಕೊನೆಯ ಬಾಣದಲ್ಲಿ 10ಕ್ಕೆ ಗುರಿಯಿಟ್ಟ ಕುಮ್‌ಕುಮ್; ಮೊದಲ ಬಾರಿಗೆ ಸ್ವರ್ಣ ಕಿರೀಟ

ಮಾರ್ಗ ಸುಧಾರಣೆ ಮತ್ತು ಬಸ್‌ಗಳ ವೇಳಾಪಟ್ಟಿ ನಿರ್ವಹಣೆ:

ಈ ಯೋಜನೆಯಿಂದ ಕೇವಲ ತಪಾಸಣೆ ಮಾತ್ರವಲ್ಲದೆ, ಬಿಎಂಟಿಸಿಯ ಕಾರ್ಯಾಚರಣೆಯಲ್ಲೂ ದೊಡ್ಡ ಮಟ್ಟದ ಸುಧಾರಣೆ ತರಬಹುದು. ಜಿಪಿಎಸ್ ಮತ್ತು ವಿಎಲ್‌ಟಿ ವ್ಯವಸ್ಥೆಯೊಂದಿಗೆ APC ಸಂಯೋಜನೆಗೊಳ್ಳುವುದರಿಂದ ಯಾವ ಮಾರ್ಗದಲ್ಲಿ, ಯಾವ ಸಮಯದಲ್ಲಿ ಜನದಟ್ಟಣೆ ಹೆಚ್ಚಿರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಪ್ರಯಾಣಿಕರಿಲ್ಲದ ಮಾರ್ಗಗಳಲ್ಲಿ ಬಸ್‌ಗಳನ್ನು ಕಡಿಮೆ ಮಾಡಿ, ವಿಪರೀತ ರಶ್ ಇರುವ ಮಾರ್ಗಗಳಿಗೆ ಹೆಚ್ಚು ಬಸ್‌ಗಳನ್ನು ನಿಯೋಜಿಸಲು ಸಂಸ್ಥೆಗೆ ಸುಲಭವಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us