ಬಿಎಂಟಿಸಿಯ ಈ ಬಸ್ಸಿನಲ್ಲಿ ಕೇವಲ 6 ರೂ.ಗೆ ಮೆಟ್ರೋ ನಿಲ್ದಾಣಕ್ಕೆ ಹೋಗಬಹುದು!: ಎಲ್ಲಿಂದ ಎಲ್ಲಿಗೆ? ಇಲ್ಲಿದೆ ಮಾಹಿತಿ

ಬಿಎಂಟಿಸಿ ಬೆಂಗಳೂರಿನ ಹಳದಿ ಮಾರ್ಗ ಮೆಟ್ರೋ ನಿಲ್ದಾಣಗಳಿಗೆ ಹೊಸ ಫೀಡರ್ ಬಸ್ ಸೇವೆಗಳನ್ನು (MF-22E, MF-22EA) ಆರಂಭಿಸಿದೆ. ಕೇವಲ 6 ರೂ. ಶುಲ್ಕದಿಂದ ಪ್ರಾರಂಭವಾಗುವ ಈ ಬಸ್ಸುಗಳು ಹರಲೂರು, ಕಸವನಹಳ್ಳಿ ಪ್ರದೇಶಗಳ ನಿವಾಸಿಗಳಿಗೆ ಮೆಟ್ರೋ ತಲುಪಲು ನೆರವಾಗಲಿವೆ. ಸಾರ್ವಜನಿಕ ಸಾರಿಗೆಯ ಕೊರತೆಯಿದ್ದ ದಟ್ಟಣೆಯ ಪ್ರದೇಶಗಳಲ್ಲಿ ಸ್ವಂತ ವಾಹನಗಳ ಅವಲಂಬನೆ ತಪ್ಪಿಸಿ, ಸುಗಮ ಪ್ರಯಾಣಕ್ಕೆ ಅನುಕೂಲ ಕಲ್ಪಿಸುತ್ತವೆ. ಪ್ರಯಾಣಿಕರ ಬೇಡಿಕೆ ಹೆಚ್ಚಾದಂತೆ ಬಸ್‌ಗಳ ಸಂಖ್ಯೆ ಹೆಚ್ಚಿಸುವ ಭರವಸೆ ನೀಡಲಾಗಿದೆ.

ಬಿಎಂಟಿಸಿಯ ಈ ಬಸ್ಸಿನಲ್ಲಿ ಕೇವಲ 6 ರೂ.ಗೆ ಮೆಟ್ರೋ ನಿಲ್ದಾಣಕ್ಕೆ ಹೋಗಬಹುದು!: ಎಲ್ಲಿಂದ ಎಲ್ಲಿಗೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Image Credit source: Tv9 kannada

Updated on: Apr 13, 2026 | 12:11 PM

ಬೆಂಗಳೂರು, ಏ.13: ಸಿಲಿಕಾನ್​​ ಸಿಟಿಯ ಜನರಿಗೆ ಒಂದು ಗುಡ್​​​ ನ್ಯೂಸ್​​ ಕಾದಿದೆ. ಇನ್ಮುಂದೆ ಬಿಎಂಟಿಸಿಯ ಈ ಬಸ್ಸಿನಲ್ಲಿ ಕೇವಲ 6 ರೂ, ಗೆ ಹೋಗಬಹುದು. ನಗರದ ಹರಲೂರು, ಕಸವನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಮೆಟ್ರೋ ನಿಲ್ದಾಣ ತಲುಪಲು ಇದ್ದ ಅತಿದೊಡ್ಡ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದೆ. ಬಿಎಂಟಿಸಿಯು ‘ಹಳದಿ ಮಾರ್ಗ’ದ (Yellow Line) ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲು MF-22E ಮತ್ತು MF-22EA ಎಂಬ ಹೊಸ ಫೀಡರ್ ಬಸ್ ಸೇವೆಗಳನ್ನು ಆರಂಭಿಸಿದೆ.

ಈ ಫೀಡರ್ ಬಸ್‌ಗಳು ಹೊಸ ರೋಡ್ ಮೆಟ್ರೋ ನಿಲ್ದಾಣದಿಂದ ಸಂಚಾರ ಆರಂಭಿಸಿ ಪುನಃ ಅದೇ ನಿಲ್ದಾಣಕ್ಕೆ ಬಂದು ತಲುಪಲಿವೆ. ಈ ಮಾರ್ಗವು ಚೂಡಸಂದ್ರ ಸರ್ಕಲ್, ಸಿಲ್ವರ್ ಕೌಂಟಿ ರಸ್ತೆ, ಹರಲೂರು ಗ್ರಾಮ, ಸರ್ಜಾಪುರ ರಸ್ತೆ, ಇಬ್ಲೂರು ಜಂಕ್ಷನ್ ಮತ್ತು ಎಚ್‌ಎಸ್‌ಆರ್ ಲೇಔಟ್‌ನ 27ನೇ ಮೇನ್ ರಸ್ತೆಯನ್ನು ಒಳಗೊಂಡಿದೆ. ವಾಪಸ್ ಬರುವಾಗ ಸೋಮಸುಂದರಪಾಳ್ಯ, ಕೂಡ್ಲು ಮತ್ತು ಕೂಡ್ಲು ಮೆಟ್ರೋ ನಿಲ್ದಾಣದ ಮೂಲಕ ಹಾದು ಹೋಗಲಿವೆ.

ಈ ಬಸ್ಸುಗಳ ಟಿಕೆಟ್ ದರವು ಕನಿಷ್ಠ 6 ರೂಪಾಯಿಯಿಂದ ಗರಿಷ್ಠ 25 ರೂಪಾಯಿವರೆಗೆ ಇರಲಿದೆ. ಸುಮಾರು 6,000 ದಿಂದ 10,000 ಅಪಾರ್ಟ್‌ಮೆಂಟ್‌ಗಳಿರುವ ಈ ದಟ್ಟಣೆಯ ಪ್ರದೇಶದಲ್ಲಿ ಕಿರಿದಾದ ರಸ್ತೆಗಳ ಕಾರಣದಿಂದಾಗಿ ಈ ಹಿಂದೆ ಸಾರ್ವಜನಿಕ ಸಾರಿಗೆಯ ಕೊರತೆ ಇತ್ತು. ಈಗ ಫೀಡರ್ ಬಸ್ ಆರಂಭವಾಗಿರುವುದರಿಂದ ನಿವಾಸಿಗಳು ಸ್ವಂತ ವಾಹನಗಳನ್ನು ಅವಲಂಬಿಸುವುದು ತಪ್ಪಲಿದೆ.

ಇದನ್ನೂ ಓದಿ: ಎರಡು ಬೆಕ್ಕುಗಳ ಮಿಲನ, ನಾಲ್ಕು ಮರಿ ಜನನ: ಮಾಲೀಕರ ಕಿತ್ತಾಟ ಜೋರಾದ ಬೆನ್ನಲ್ಲೇ ಪೊಲೀಸ್ ಎಂಟ್ರಿ!

ಸದ್ಯಕ್ಕೆ ಪೀಕ್ ಅವರ್‌ಗಳಲ್ಲಿ 35 ರಿಂದ 40 ನಿಮಿಷಗಳ ಅಂತರದಲ್ಲಿ ಮೂರು ಬಸ್ಸುಗಳು ಸಂಚರಿಸುತ್ತಿವೆ. ಆದರೆ, ‘ನಮ್ಮ ಬಿಎಂಟಿಸಿ’ ಆ್ಯಪ್‌ನಲ್ಲಿ ಬಸ್ ಟ್ರ್ಯಾಕಿಂಗ್ ಸರಿಯಾಗಿ ಆಗುತ್ತಿಲ್ಲ ಮತ್ತು ಬಸ್ಸುಗಳ ಸಂಖ್ಯೆ ಹೆಚ್ಚಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:10 pm, Mon, 13 April 26

Follow Us