ಕಾವೇರಿ ಜಲವಿವಾದ: ತಮಿಳುನಾಡಿಗೆ ಶಾಕ್​​ ಕೊಟ್ಟ ಸುಪ್ರೀಂಕೋರ್ಟ್​​, ಅರ್ಜಿಗಳು ವಜಾ

ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದಿಂದ ಹೆಚ್ಚುವರಿ ನೀರು ಬಿಡುಗಡೆಗೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸುವ ಮೂಲಕ ತಮಿಳುನಾಡಿಗೆ ಭಾರಿ ಶಾಕ್ ನೀಡಿದೆ. ಆಗಸ್ಟ್‌ನಲ್ಲಿ ರಾಜ್ಯದಲ್ಲಿ ಮಳೆ ಕೊರತೆ ಎದುರಾಗಿದ್ದರೂ ಕರ್ನಾಟಕದಿಂದ ತನಗೆ ನಿಗದಿಪಡಿಸಿದ ನೀರಿನ ಪಾಲು ಲಭಿಸಿಲ್ಲ ಎಂದು ತಮಿಳುನಾಡು ಆರೋಪಿಸಿತ್ತು.

ಕಾವೇರಿ ಜಲವಿವಾದ: ತಮಿಳುನಾಡಿಗೆ ಶಾಕ್​​ ಕೊಟ್ಟ ಸುಪ್ರೀಂಕೋರ್ಟ್​​, ಅರ್ಜಿಗಳು ವಜಾ
ಕಾವೇರಿ ಜಲವಿವಾದ: ತಮಿಳುನಾಡಿಗೆ ಶಾಕ್​​ ಕೊಟ್ಟ ಸುಪ್ರೀಂಕೋರ್ಟ್
Image Credit source: PTI

Updated on: Nov 20, 2026 | 11:33 AM

ನವದೆಹಲಿ, ನವೆಂಬರ್​ 20: ಕಾವೇರಿ ಜಲ ವಿವಾದ ಸಂಬಂಧ ನೆರೆ ರಾಜ್ಯ ತಮಿಳುನಾಡಿಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ. ಕರ್ನಾಟಕದಿಂದ ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಪರೇಶ್ ಕುಮಾರ್ ಸಿಂಗ್ ಅವರನ್ನೊಳಗೊಂಡ ಪೀಠ ಈ ಬಗ್ಗೆ ಮಹತ್ವದ ಆದೇಶ ನೀಡಿದೆ. ತಮಗೆ ಬರಬೇಕಾದ ಕಾವೇರಿ ನೀರಿನ ಪಾಲನ್ನು ತಕ್ಷಣ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಎರಡು ಅರ್ಜಿಗಳನ್ನು ಸಲ್ಲಿಸಿತ್ತು.

ಅಕ್ಟೋಬರ್ 6ರವರೆಗೆ ಅಂತರರಾಜ್ಯ ಗಡಿ ಪ್ರದೇಶವಾದ ಬಿಳಿಗುಂಡ್ಲುವಿನಲ್ಲಿ ತಮಿಳುನಾಡಿಗೆ ತಲುಪಬೇಕಿದ್ದ ನೀರಿನ ಪ್ರಮಾಣದಲ್ಲಿ 11.719 ಟಿಎಂಸಿ ಅಡಿ ಕೊರತೆಯಾಗಿದೆ ಎಂದು ತಮಿಳುನಾಡು ವಾದಿಸಿತ್ತು. ಸಾಕಷ್ಟು ನೀರಿನ ಸಂಗ್ರಹವಿದ್ದರೂ ಕರ್ನಾಟಕ ಸರ್ಕಾರ ನೀರು ಬಿಡುಗಡೆ ಮಾಡದೆ ತಡೆಹಿಡಿದಿದೆ ಎಂದು ಆರೋಪಿಸಿತ್ತು. ನೀರಿನ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ, ತಮಿಳುನಾಡಿನ ಆರೋಪವನ್ನು ಕರ್ನಾಟಕ ಸರ್ಕಾರ ನಿರಾಕರಿಸಿತ್ತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶಗಳನ್ನು ಪಾಲಿಸುತ್ತಿರುವುದಾಗಿ ಸ್ಪಷ್ಟಪಡಿಸಿತ್ತು.

Loading...

ಇದನ್ನೂ ಓದಿ: ಕಾವೇರಿ ಜಲ ವಿವಾದ: ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್​​ಗೆ ದೂರು; ತಮಿಳುನಾಡಿನಿಂದ ತುರ್ತು ಮನವಿ

ತಮಿಳುನಾಡು ವಾದ ಏನಾಗಿತ್ತು?

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕರ್ನಾಟಕಕ್ಕೆ ನೀರು ಬಿಡುಗಡೆ ಮಾಡುವಂತೆ ನೀಡಿರುವ ನಿರ್ದೇಶನಗಳನ್ನು ಜಾರಿಗೊಳಿಸಲು ಒತ್ತಾಯಿಸಿ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ನದಿಯ ನೀರಿನಲ್ಲಿ ತನಗೆ ನಿಗದಿಪಡಿಸಿದ ಪಾಲು ಸಿಗುತ್ತಿಲ್ಲ ಎಂಬುದು ತಮಿಳುನಾಡಿನ ಪ್ರಮುಖ ಆರೋಪವಾಗಿತ್ತು. ಕಾವೇರಿ ನೀರು ವಿವಾದ ನ್ಯಾಯಮಂಡಳಿಯ ತೀರ್ಪಿನ ಪ್ರಕಾರ ತಮಿಳುನಾಡಿಗೆ ವಾರ್ಷಿಕ 64 ಟಿಎಂಸಿ ನೀರು ಹಂಚಿಕೆಯಾಗಬೇಕಿದೆ. ಹಿಂದಿನ ವಿಚಾರಣೆಯೊಂದರಲ್ಲಿ ತನಗೆ ಕೇವಲ 14 ಟಿಎಂಸಿ ನೀರು ಮಾತ್ರ ಲಭಿಸಿದೆ ಎಂದು ತಮಿಳುನಾಡು ನ್ಯಾಯಾಲಯಕ್ಕೆ ತಿಳಿಸಿತ್ತು. ನದಿ ಜಲಾನಯನ ಪ್ರದೇಶದಲ್ಲಿನ ನೀರಿನ ಹರಿವಿನ ಕೊರತೆಯನ್ನು ಪರಿಗಣಿಸಿದರೂ ತನಗೆ ಅನುಪಾತದ ಪ್ರಕಾರ ಶೇ.55.29ರಷ್ಟು ಪಾಲು ದೊರೆಯಬೇಕು. ಹೀಗಾಗಿ ಸುಮಾರು 20 ಟಿಎಂಸಿ ನೀರಿನ ಕೊರತೆಯಾಗಿದೆ ಎಂದು ವಾದಿಸಿತ್ತು.

ಆಗಸ್ಟ್ 3ರ ವೇಳೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಕರ್ನಾಟಕದ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಒಟ್ಟು 77.537 ಟಿಎಂಸಿ ನೀರಿನ ಸಂಗ್ರಹವಿತ್ತು. ಇದರಲ್ಲಿ 67.517 ಟಿಎಂಸಿ ಬಳಕೆಗೆ ಲಭ್ಯವಿರುವ ನೀರಾಗಿತ್ತು ಎಂದು ತಮಿಳುನಾಡು ತನ್ನ ಅರ್ಜಿಯಲ್ಲಿ ಉಲ್ಲೇಖಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ 15 ದಿನಗಳ ಕಾಲ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ್ದ ನಿರ್ದೇಶನ ಸಾಕಾಗುವುದಿಲ್ಲ ಎಂದು ವಾದಿಸಿತ್ತು. ಜೂನ್ 1ರಿಂದ ಆಗಸ್ಟ್ 12ರವರೆಗಿನ ಅವಧಿಯಲ್ಲಿ ಅನುಪಾತದ ಪ್ರಕಾರ ತನಗೆ ಬರಬೇಕಿದ್ದ 26.954 ಟಿಎಂಸಿ ನೀರಿನ ಕೊರತೆಯನ್ನು ಸರಿದೂಗಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಮತ್ತು ನೀರು ಹಂಚಿಕೆ ಒಪ್ಪಂದದ ಪ್ರಕಾರ ನೀರು ಬಿಡುಗಡೆ ಖಚಿತಪಡಿಸಬೇಕು ಎಂದು ತಮಿಳುನಾಡು ಕೋರಿತ್ತು.

ಜುಲೈ 28ರಂದು ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) 139ನೇ ಸಭೆಯಲ್ಲಿ, ಜುಲೈ 29ರಿಂದ 15 ದಿನಗಳ ಕಾಲ ಬಿಳಿಗುಂಡ್ಲುವಿನಲ್ಲಿ 3,500 ಕ್ಯೂಸೆಕ್ ನೀರಿನ ಹರಿವು ಖಚಿತಪಡಿಸಲು ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳಿಂದ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸಲಾಗಿತ್ತು. ಜುಲೈ 30ರಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 54ನೇ ತುರ್ತು ಸಭೆಯಲ್ಲೂ ಈ ಶಿಫಾರಸಿಗೆ ಅನುಮೋದನೆ ನೀಡಲಾಗಿತ್ತು. ಆದರೆ, ಕರ್ನಾಟಕ ಸರ್ಕಾರ ಈ ಆದೇಶ ಪಾಲಿಸಿಲ್ಲ ಎಂದು ಆರೋಪಿಸಿ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ನಂತರ ಆಗಸ್ಟ್ 12ರಿಂದ 15 ದಿನಗಳ ಕಾಲ ಪ್ರತಿದಿನ 12,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿತ್ತು. ಇದಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ಅನುಮೋದನೆ ನೀಡಿತ್ತು. ಆಗಸ್ಟ್ 17ರಂದು ನಡೆದ ವಿಚಾರಣೆಯಲ್ಲಿ ಕರ್ನಾಟಕ ಸರ್ಕಾರ ತಮಿಳುನಾಡಿನ ಆರೋಪಗಳನ್ನು ನಿರಾಕರಿಸಿತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆಯ ಪರಿಸ್ಥಿತಿ ಇದೆ ಎಂದು ವಾದಿಸಿತ್ತು. ಈ ವೇಳೆ ಸುಪ್ರೀಂ ಕೋರ್ಟ್, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನಗಳನ್ನು ಪಾಲಿಸುವಂತೆ ಕರ್ನಾಟಕಕ್ಕೆ ಸೂಚಿಸಿ, ಈ ಕುರಿತು ಸ್ಥಿತಿಗತಿ ವರದಿ ಸಲ್ಲಿಸುವಂತೆ ಆದೇಶಿಸಿತ್ತು.

ಆಗಸ್ಟ್ 24ರಂದು ನಡೆದ ವಿಚಾರಣೆಯಲ್ಲಿ, ಅಂದು ಬೆಳಗ್ಗೆಯ ವೇಳೆಗೆ ಪ್ರಾಧಿಕಾರ ನಿರ್ದೇಶಿಸಿದ ನೀರು ತಮಗೆ ತಲುಪಿದೆ ಎಂದು ತಮಿಳುನಾಡು ತಿಳಿಸಿತ್ತು. ಆದರೆ, ತಮ್ಮ ಅನುಪಾತದ ಪಾಲಿನಲ್ಲಿರುವ ನೀರಿನ ಕೊರತೆಯನ್ನು ಸರಿದೂಗಿಸುವಂತೆ ಕರ್ನಾಟಕಕ್ಕೆ ಪ್ರಾಧಿಕಾರ ನಿರ್ದೇಶನ ನೀಡಿಲ್ಲ ಎಂದು ಆಕ್ಷೇಪಿಸಿತ್ತು. ಕರ್ನಾಟಕದ ಜಲಾಶಯಗಳಲ್ಲಿ ಸುಮಾರು 78 ಟಿಎಂಸಿ ನೀರಿನ ಸಂಗ್ರಹವಿದೆ ಎಂದು ಉಲ್ಲೇಖಿಸಿದ್ದ ತಮಿಳುನಾಡು, ಈ ವಿಚಾರವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಪ್ರಸ್ತಾಪಿಸುವುದಾಗಿ ತಿಳಿಸಿತ್ತು. ಬಳಿಕ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿತ್ತು. ಅಂತಿಮವಾಗಿ, ಬಿಡುಗಡೆ ಮಾಡಬೇಕಿದ್ದ ನೀರಿನ ಪ್ರಮಾಣದಲ್ಲಿನ ಕೊರತೆಯನ್ನು ಸರಿದೂಗಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:18 am, Fri, 20 November 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us