ಬೆಂಗಳೂರು: ನಗರದ ಚಾಮರಾಜಪೇಟೆ ಈದ್ಗಾ ಮೈದಾನದ (Chamrajpet Idgah Maidan Case) ವಿವಾದವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ದಾಖಲೆಗಳಲ್ಲೇ ಲೋಪಗಳಿವೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈದ್ಗಾ ಮೈದಾನ ಎಂಬ ಪದದಲ್ಲಿ ಈದ್ಗಾ ಎಂಬ ಪದಕ್ಕೆ ಗೀಚು ಹಾಕಿರುವ ದಾಖಲೆಯೊಂದು ಪತ್ತೆಯಾಗಿದೆ. ಈದ್ಗಾ ಎಂಬ ಪದವನ್ನು ಕೈಬಿಟ್ಟು ಮೈದಾನ ಎಂದು ಪುಸ್ತಕದಲ್ಲಿ ನಮೂದಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಿವಿಲ್ ಕೋರ್ಟ್, ಮೈಸೂರು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನಲ್ಲಿ ನಡೆದಿದ್ದ ವಾದ-ಪ್ರತಿವಾದಗಳನ್ನ ಇಲ್ಲಿ ಸಂಗ್ರಹಿಸಲಾಗಿದೆ.
ಚಾಮರಾಜಪೇಟೆಯ ಸರ್ವೆ ನಂಬರ್ 40ಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಮುಸ್ಲಿಮ್ ಸಮುದಾಯದ ನಾಯಕರು ನಿರ್ಬಂಧಕಾಜ್ಞೆ ಕೋರಿದ್ದರು. ಮುಸ್ಲಿಮರು ಈ ಜಾಗವನ್ನು ಪ್ರಾರ್ಥನೆಗೆ ಬಳಸುತ್ತಿರುವುದರಿಂದ ಈ ಮೈದಾನದ ಸ್ವಾಧೀನದಲ್ಲಿ ಪಾಲಿಕೆಯು ಹಸ್ತಕ್ಷೇಪ ಮಾಡದಂತೆ ನಿರ್ಬಂಧಕಾಜ್ಞೆ ನೀಡಿತ್ತು. ಪಾಲಿಕೆಯ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ ಸಿವಿಲ್ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದ ವಿಚಾರವನ್ನು ಹಲವು ಹಂಚಿಕೊಂಡಿದ್ದಾರೆ. ಬೆಂಗಳೂರು ಸಿವಿಲ್ ಕೋರ್ಟ್ನಲ್ಲಿ 1959ರಲ್ಲಿ ಸಿವಿಲ್ ದಾವೆ ಹೂಡಲಾಗಿತ್ತು.
ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಮೇಲ್ಮನವಿಯು ತಿರಸ್ಕೃತಗೊಂಡಿದ್ದು, ಈ ಸಂಬಂಧ 1964ರಲ್ಲಿಯೇ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಮುಸ್ಲಿಮರ ಸ್ವಾಧೀನದಲ್ಲಿರುವ ಈ ಪ್ರದೇಶದಲ್ಲಿ ಪಾಲಿಕೆಯು ಹಸ್ತಕ್ಷೇಪ ಮಾಡುವಂತಿಲ್ಲವೆಂದು ನಿರ್ಬಂಧಕಾಜ್ಞೆ ನೀಡಿದೆ ಎಂದು ಮುಸ್ಲಿಮ್ ಸಮುದಾಯದ ಮುಖಂಡರು ತಿಳಿಸಿದ್ದಾರೆ. ಪಾಲಿಕೆ ಕಟ್ಟಡ ಕಟ್ಟಲು ಸರ್ವೆ ನಂಬರ್ 40ರ ಜಮೀನು ಅಗೆಯುವಾಗ ಅದಕ್ಕೆ ಮುಸ್ಲಿಮ್ ಸಮುದಾಯದ ಪರವಾಗಿ ಎಸ್.ಅಬ್ದುಲ್ ವಾಜಿದ್ ತಕರಾರು ದಾವೆ ಸಲ್ಲಿಸಿದ್ದರು. ಪಾಲಿಕೆ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧ ವಿಧಿಸಬೇಕು ಎಂದು ಕೋರಿದ್ದರು. ಸದ್ಯ ಈದ್ಗಾ ಮೈದಾನದ 2.10 ಎಕರೆ ಜಮೀನು ಈಗ ವಿವಾದದ ಕೇಂದ್ರವಾಗಿದೆ.
ಮುಸ್ಲಿಮರ ವಾದ ಏನಾಗಿತ್ತು
1871ರ ಪಹಣಿಯ ಪ್ರಕಾರ ಈದ್ಗಾ ಮೈದಾನದ ವಿಸ್ತೀರ್ಣವು 10.5 ಎಕರೆ. ಬೆಂಗಳೂರಿನ ಖಾಜಿ ಸಾಹೇಬರು ಸ್ಮಶಾನಕ್ಕೆಂದು ಖರಾಬ್ ಜಾಗ ನೀಡಿದ್ದರು. ಉಳಿದ ಭೂಮಿಯಲ್ಲಿ ರಾಗಿ ಬೆಳೆ ಬೆಳೆಯಲಾಗಿದೆ ಎಂಬ ಉಲ್ಲೇಖವಿದೆ. 1877ರ ಫೈಸಲ್ ಪತ್ರಿಕಾದಲ್ಲಿ ಸರ್ಕಾರಿ ಖಾಸಿ ಸಾಬ್ ಜಾಗವೆಂಬ ಉಲ್ಲೇಖವಿದೆ. 1901ರ ಖೇತ್ವರ್ ಪತ್ರಿಕಾದಲ್ಲಿ 10-05 ಎಕರೆ ಸರ್ಕಾರಿ ಎಂದು ಉಲ್ಲೇಖಿಸಲಾಗಿದೆ. ಖಾಜಿ ಸಾಹೇಬರ ಸ್ಮಶಾನ ಭೂಮಿ ಎಂದೂ ಉಲ್ಲೇಖಿಸಲಾಗಿದೆ. ಬೆಂಗಳೂರು ಮುನಿಸಿಪಲ್ ಕಮಿಟಿ 1938-1941ರವರೆಗೆ ಲೈಸೆನ್ಸ್ ನೀಡಿದೆ. ಈ ಲೈಸೆನ್ಸ್ಗಳಲ್ಲಿ ಈದ್ಗಾ ಭೂಮಿ ಎಂದು ಉಲ್ಲೇಖಿಸಲಾಗಿದೆ. ಪ್ರತಿ ವರ್ಷ ಎರಡು ಬಾರಿ ಪ್ರಾರ್ಥನೆಗಾಗಿ ಈ ಭೂಮಿಯನ್ನು ಬಳಸಲಾಗುತ್ತಿದೆ ಎಂಬ ಉಲ್ಲೇಖವಿದೆ.
ಸಿಟಿ ಕಾರ್ಪೊರೇಷನ್ ಪ್ರತಿವಾದ
ಮುಸ್ಲಿಮರ ವಾದವನ್ನು ಮೊದಲಿನಿಂದಲೂ ಬೆಂಗಳೂರು ಸಿಟಿ ಕಾರ್ಪೊರೇಷನ್ ಒಪ್ಪಿರಲಿಲ್ಲ. ಜಮೀನಿನಲ್ಲಿರುವ ವೇದಿಕೆ ಮಾತ್ರ ಮುಸ್ಲಿಮರ ಪ್ರಾರ್ಥನೆಗೆ ಬಳಕೆಯಾಗುತ್ತಿತ್ತು, ಉಳಿದ ಜಾಗ ಬಯಲು ಪ್ರದೇಶವಾಗಿ ಬಳಕೆಯಾಗುತ್ತಿದೆ. ಸ್ಮಶಾನಗಳೂ ಪಾಲಿಕೆಗೆ ಸೇರಿದ್ದ ಸ್ವತ್ತು. ಖಾಸಗಿಯವರ ಮಾಲೀಕತ್ವದಲ್ಲಿ ಇಲ್ಲದ ಜಾಗವು ಪಾಲಿಕೆಗೆ ಸೇರುತ್ತದೆ ಎಂದು ಬೆಂಗಳೂರು ಸಿಟಿ ಕಾರ್ಪೊರೇಷನ್ ವಾದ ಮಂಡಿಸಿತ್ತು.
ಸ್ಮಶಾನದ ಭೂಮಿ ಕೂಡಾ ಪಾಲಿಕೆಯ ಮಾಲಿಕತ್ವದ್ದೆಂದು ವಾದ ಮಂಡಿಸಿದ್ದ ಸಿಟಿ ಕಾರ್ಪೊರೇಷನ್, 1933ರ ಮೈಸೂರು ಸಿಟಿ ಮುನಿಸಿಪಾಲಿಟಿ ಕಾಯ್ದೆ, ಮೈಸೂರು ಲ್ಯಾಂಡ್ ರೆವಿನ್ಯೂ ಕೋಡ್ ಉಲ್ಲೇಖಿಸಿತ್ತು. ವಿವಾದಿತ ಜಾಗದಲ್ಲಿ ಸಾರ್ವಜನಿಕ ನಲ್ಲಿ ಮತ್ತು ಮುನಿಸಿಪಲ್ ಟ್ಯಾಂಕ್ ಇದೆ. ಎಲ್ಲಾ ಧರ್ಮದ ಮಕ್ಕಳೂ ಅಲ್ಲಿ ಆಟವಾಡುತ್ತಾರೆ. ಜನರು ದಾರಿಯಾಗಿ ಆ ಜಾಗವನ್ನು ಉಪಯೋಗಿಸುತ್ತಿದ್ದಾರೆ. ಜಮೀನಿನಲ್ಲಿರುವ ಎರಡು ಫುಟ್ಪಾತ್ಗಳನ್ನು ಸಾರ್ವಜನಿಕರು ಬಳಸುತ್ತಿದ್ದಾರೆ. ಪಾಲಿಕೆಯ ಪೌರಕಾರ್ಮಿಕರು ವಾರಕ್ಕೊಮ್ಮೆ ಅಲ್ಲಿ ಸೇರುತ್ತಾರೆ. ಹೀಗಾಗಿ ಇದು ಪಾಲಿಕೆಗೆ ಸೇರಿದ ಜಾಗ ಎಂದು ಸಿಟಿ ಕಾರ್ಪೊರೇಷನ್ ಪ್ರತಿಪಾದಿಸಿತ್ತು.
ಸುಪ್ರೀಂಕೋರ್ಟ್ ಆದೇಶ ಹೀಗಿತ್ತು
ಈ ಜಾಗಕ್ಕೆ ಮಾಲೀಕರಿಲ್ಲದಿದ್ದರೆ ಅದು ಸರ್ಕಾರಕ್ಕೆ ಸೇರಿದ್ದು ಎಂದು ಒಪ್ಪಬಹುದಿತ್ತು. ಆದರೆ ಬಯಲು ಜಾಗವಾದ ಕಾರಣ ಸರ್ಕಾರಕ್ಕೆ ಸೇರಿದ್ದು ಎಂದು ಹೇಳಲು ಆಗುವುದಿಲ್ಲ. ಒಂದು ಸಮುದಾಯವು ಈ ಜಾಗವನ್ನು ತನ್ನ ಧಾರ್ಮಿಕ ನಂಬಿಕೆಯಂತೆ ಸ್ಮಶಾನವಾಗಿ ಬಳಸುತ್ತಿದೆ. ಸ್ಮಶಾನದ ಪ್ರದೇಶವನ್ನು ಪಾಲಿಕೆ ನಿಯಂತ್ರಣ ಮಾಡಬಹುದು. ಆದರೆ ಇದರಿಂದ ಪಾಲಿಕೆಗೆ ಮಾಲೀಕತ್ವ ದೊರಕುವುದಿಲ್ಲ. ನಲ್ಲಿ ಮತ್ತು ನೀರಿನ ಟ್ಯಾಂಕ್ನಿಂದಲೇ ಸಂಪೂರ್ಣ ಜಾಗದ ಮಾಲೀಕತ್ವ ಪಾಲಿಕೆಗೆ ಸಿಗಲು ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.
ಮಕ್ಕಳು ಆಟವಾಡುವುದು, ಜನರು ದಾರಿಯಾಗಿ ಬಳಸುವುದು, ಪೌರಕಾರ್ಮಿಕರು ಸೇರುವುದು ಮಾಲಿಕತ್ವಕ್ಕೆ ಪುರಾವೆ ಆಗುವುದಿಲ್ಲ. ಈದ್ಗಾ ಮತ್ತು ಸ್ಮಶಾನ ಬಹುಕಾಲದಿಂದ ಅಸ್ತಿತ್ವದಲ್ಲಿದೆ. 1938ರ ದಾಖಲೆಗಳಲ್ಲೂ ಈದ್ಗಾ ಎಂಬ ಉಲ್ಲೇಖವೇ ಇದೆ. 1871ರ ದಾಖಲೆಗಳಲ್ಲಿ ಸ್ಮಶಾನ ಎಂದು ಉಲ್ಲೇಖಿಸಲಾಗಿದೆ. ವಿಸ್ತೀರ್ಣವು ಕಾಲಕ್ರಮೇಣ ಕಡಿಮೆಯಾಗಿದೆ. ಹೀಗಾಗಿ ಸ್ಮಶಾನಕ್ಕಾಗಿ ಜಾಗವನ್ನು ದೂರದಲ್ಲಿ ನೀಡಲಾಗಿದೆ. ಸ್ಮಶಾನಕ್ಕೆ ಜಾಗ ನೀಡಿದ ಮಾತ್ರಕ್ಕೆ ಈ ಜಾಗ ವಿನಿಮಯವಾಗಿದೆ ಎಂದು ಭಾವಿಸಲು ಆಗುವುದಿಲ್ಲ ಎಂದು ಹೇಳಿದ್ದ ಸುಪ್ರೀಂಕೋರ್ಟ್ ಪಾಲಿಕೆಯ ಮೇಲ್ಮನವಿ ವಜಾಗೊಳಿಸಿದ ಆದೇಶ ಸರಿಯಿದೆ. ಈ ಸಂಬಂಧ ಮೈಸೂರು ಹೈಕೋರ್ಟ್ ಆದೇಶ ಸೂಕ್ತವಾಗಿದೆ ಎಂದು ಹೇಳಿತ್ತು.
ಈದ್ಗಾ ಮೈದಾನ ವಕ್ಫ್ ಬೋರ್ಡ್ ಆಸ್ತಿ: ಮೌಲಾನಾ ಶಾಫಿ ಸಅದಿ
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನವು ಬಿಬಿಎಂಪಿಗೆ ಸೇರಿದ್ದಲ್ಲ. ಅದು ವಕ್ಫ್ ಬೋರ್ಡ್ಗೆ ಸೇರಿದ ಆಸ್ತಿ. ಹಬ್ಬದ ಆಚರಣೆಗೆ ಬೇರೆಯವರಿಗೆ ಹೇಗೆ ಅವಕಾಶ ನೀಡಲು ಸಾಧ್ಯ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಟಿವಿ9ಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಪ್ರಶ್ನಿಸಿದರು. ಸುಪ್ರೀಂಕೋರ್ಟ್ ಆದೇಶದ ಪ್ರಕಾರವೇ ಈ ಮೈದಾನವು ವಕ್ಫ್ ಬೋರ್ಡ್ ಆಸ್ತಿ ಎಂದು ಪರಿಗಣಿಸಲಾಗಿದೆ. ಬಿಬಿಎಂಪಿ ಇತರ ಆಚರಣೆಗಳಿಗೆ ಅನುಮತಿ ನೀಡುವ ಮೊದಲು ಯೋಚನೆ ಮಾಡಬೇಕು. ಇಲ್ಲದಿದ್ದರೆ ಕೋಮು ಗಲಭೆಗೆ ಕಾರಣವಾಗುವ ಸಾಧ್ಯತೆಯಿದ್ದು, ರಾಜಧಾನಿ ಬೆಂಗಳೂರಿಗೆ ಕೆಟ್ಟ ಹೆಸರು ಬರುವ ಕೆಲಸವಾಗುತ್ತದೆ ಎಂದರು.
ಈದ್ಗಾ ಮೈದಾನದಲ್ಲಿ ವಕ್ಫ್ ಮಂಡಳಿಯ ಪ್ರತಿನಿಧಿಗಳು ಮತ್ತು ಸ್ಥಳೀಯ ಶಾಸಕರು ಸ್ವಾತಂತ್ರ್ಯ ದಿನಾಚರಣೆ ಮಾಡುತ್ತಾರೆ. ನಮ್ಮ ಮನೆಗೆ ಬಂದು ಬೇರೆಯವರು ಅದು ಹೇಗೆ ಸ್ವಾತಂತ್ರ್ಯ ದಿನ ಆಚರಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಬಹುಶಃ ಬಿಬಿಎಂಪಿಯವರ ಜಾಗ ಬೇರೆ ಇರಬಹುದು, ಒಮ್ಮೆ ಅವರು ಸರ್ವೆ ಮಾಡಿಸಲಿ ಎಂದು ಸಲಹೆ ಮಾಡಿದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:52 pm, Tue, 7 June 22