ಎಲ್ಲೋ ಅಪರಾಧ ನಡೆದರೆ ಮೊದಲು ನಾವೇ ಟಾರ್ಗೆಟ್; 75 ವರ್ಷ ಕಳೆದರೂ ಪೊಲೀಸರಿಂದ ನಮಗೆ ಸಿಕ್ಕಿಲ್ಲ ಸ್ವಾತಂತ್ರ್ಯ!

| Updated By: ಸಾಧು ಶ್ರೀನಾಥ್​

Updated on: Aug 16, 2021 | 12:11 PM

ಯಾರಿಗೆ ಬಂತು 47ರ ಸ್ವಾತಂತ್ರ್ಯ? ಎಂದು ಪ್ರಶ್ನಿಸುವಂತಾಗಿದೆ ಆ ಬುಡ್ಗ ಜನಾಂಗದವರ ಪರಿಸ್ಥಿತಿ. ಬೆಂಗಳೂರಿನ ಕೆಲ ಭಾಗದಲ್ಲಿ ಎಲ್ಲೆ ಕಳ್ಳತನ ಆದ್ರೂ ಪೊಲೀಸರಿಗೆ ಮೊದಲು ಆಹಾರ ಆಗೋದು ಇವರೇ.

ಎಲ್ಲೋ ಅಪರಾಧ ನಡೆದರೆ ಮೊದಲು ನಾವೇ ಟಾರ್ಗೆಟ್; 75 ವರ್ಷ ಕಳೆದರೂ ಪೊಲೀಸರಿಂದ ನಮಗೆ ಸಿಕ್ಕಿಲ್ಲ ಸ್ವಾತಂತ್ರ್ಯ!
ಎಲ್ಲೋ ಅಪರಾಧ ನಡೆದರೆ ಮೊದಲು ನಾವೇ ಟಾರ್ಗೆಟ್; 75 ವರ್ಷ ಕಳೆದರೂ ಪೊಲೀಸರಿಂದ ನಮಗೆ ಸಿಕ್ಕಿಲ್ಲ ಸ್ವಾತಂತ್ರ್ಯ!
Follow us on

ನೆಲಮಂಗಲ: ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಅನ್ನೋ ಕ್ರಾಂತಿ ಗೀತೆಯನ್ನ ನೀವೆಲ್ಲ ಕೇಳಿರುತ್ತೀರಾ. ಈ ಕ್ರಾಂತಿ ಗೀತೆಯಂತೆ ಅಲ್ಲೊಂದು ಗುಂಪಿನ ಜನರ ಪರಿಸ್ಥಿತಿ ಪ್ರಶ್ನಿಸುವಂತಾಗಿದೆ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಪೊಲೀಸರಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎನ್ನುತ್ತಿದ್ದಾರೆ ಬುಡಕಟ್ಟು ಜನಾಂಗ.

ಬುಡ್ಗ ಜನಾಂಗದ ಗೋಳು:
ಊರ ಹೊರಗಿನ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗ ಬುಟ್ಟಿ ಎಣೆಯುವಂತಹ ಕುಲಕಸುಬ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದ್ರೆ ಇಲ್ಲಿನ ಗುಡಿಸಲುಗಳಲ್ಲಿ ಗಂಡಸರುಗಳಿಲ್ಲದೆ ಕಣ್ಣೀರಿಡುತ್ತಿದ್ದಾರೆ ಇಲ್ಲಿನ ಮಹಿಳೆಯರು. ಬಡತನದ ಬೇಗೆಯಲ್ಲಿ ಬೇಯುತ್ತಾ ಕಣ್ಣೀರಿಡುತ್ತಿರುವ ಈ ಕುಟುಂಬಗಳ ಪರಿಸ್ಥಿತಿ ನಿಜಕ್ಕೂ ಶೋಚನೀಯ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಠಾಣೆ ವ್ಯಾಪ್ತಿಯ ಪ್ರಸಿದ್ಧ ಮದುರೆ ಶನಿಮಹಾದೇವ ಸನ್ನಿಧಿಯ ಸಮೀಪದ ಕೋಡಿಪಾಳ್ಯ ಗ್ರಾಮದಲ್ಲಿ ನೆಲೆಸಿರುವ ಬುಡ್ಗ ಜನಾಂಗ ಸಮುದಾಯ ಪರಿಸ್ಥಿತಿ ಹೇಳತೀರದಂತಾಗಿದೆ.

ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ನಿವಾಸಿಗಳು:
ಇಲ್ಲಿನ ಕುಟುಂಬಗಳ ಮಹಿಳೆಯರು ಪ್ರತಿನಿತ್ಯ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ ಎಂದರೆ ತಪ್ಪಾಗಲಾರದು, ಇವರ ಕಣ್ಣೀರಿಗೆ ಕಾರಣ ನಮ್ಮ ಪೊಲೀಸ್ ಇಲಾಖೆ ಎಂದು ಇಲ್ಲಿನ ಜನ ಆರೋಪಿಸುತ್ತಿದ್ದಾರೆ. ಪೊಲೀಸರು ನಮ್ಮ ಗಂಡುಮಕ್ಕಳನ್ನ ಕರ್ಕೊಂಡು ಹೋಗಿ ಹಿಂಸಿಸುತ್ತಿರುತ್ತಾರೆ,ಯಾವುದೇ ಕಾರು,ಅಷ್ಟೇ ಏಕೆ ರಸ್ತೆಯಲ್ಲಿ ಆಂಬುಲೆನ್ಸ್ ಸೈರನ್ ಬಂದ್ರು ನಮ್ ಮಕ್ಳು ಹೋಡಿ ಹೋಗ್ತಾರೆ, ಮನೆಗಳಿಗೆ ಸರಿಯಾಗಿ ಬರೋದಿಲ್ಲ ಎಂದು ಪ್ರತಿದಿನ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಪ್ರತಿಬಾರಿ ಸಮಸ್ಯೆ ಆದಾಗಲು ಊರಿನ ಮುಖಂಡರು ಇವರ ಸಹಾಯಕ್ಕೆ‌ ನಿಲ್ಲುತ್ತಿದ್ದು, ಯಾರಿಗೆ ಬಂದಿದೆ ಸ್ವಾತಂತ್ರ್ಯ ಎಂದು ಪ್ರಶ್ನಿಸುತ್ತಿದ್ದಾರೆ.

ಅಪರಾಧ ಕೃತ್ಯಗಳು ನಡೆದರೆ ಇವರೆ ಟಾರ್ಗೆಟ್:
ಬೆಂಗಳೂರು ನಗರದ ಕೆಲ ಭಾಗ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲೆ ಮನೆಗಳ್ಳತನ, ಕಳ್ಳತನ, ದರೋಡೆ, ರಾಬರಿ, ಸರಗಳ್ಳತನ ಪ್ರಕರಣಗಳು ನಡೆದರು ಮೊದಲು‌ ಪೊಲೀಸರಿಗೆ ಆಹಾರವಾಗೋದು ಈ ಗುಡಿಸಲು ವಾಸಿ ಗಂಡಸರೇ, ಆರೋಪಿಗಳ ವಿಚಾರಣೆ ನೆಪದಲ್ಲಿ ಇಲ್ಲಿನ ಯುವಕರನ್ನ ವಾರಾನುಗಟ್ಟಲೆ‌ ಕರೆದುಕೊಂಡು ಹೋಗಿ ಪೊಲೀಸರು ಹಿಂಸಿಸುತ್ತಾರಂತೆ. ನಾವು ತಪ್ಪು ಮಾಡಿಲ್ಲ ಸರ್ ನಮ್ಮನ್ನ ಬಿಟ್ಟು ಬಿಡಿ ಎಂದು ಎಷ್ಟೆ ಕೇಳಿದ್ರು ಬಿಡದೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸುತ್ತಾರೆ ಎನ್ನಲಾಗಿದೆ.

ಜ್ಯುವೆಲರಿ ಶಾಪ್ ತೋರಿಸುವಂತೆ ಒತ್ತಾಯ:
ಇಲ್ಲಿನ ಜನರನ್ನ ಕರೆದುಕೊಂಡು ಹೋಗಿ ಒಳ್ಳೊಳ್ಳೆ ವಡವೆ ಅಂಗಡಿಗಳು, ಸೇಟು ಅಂಗಡಿಗಳನ್ನ ತೋರಿಸು ಎಂದು ಹಿಂಸುತ್ತಾರಂತೆ. ಅಷ್ಟೆ ಅಲ್ಲ ಅರ್ಧ ರಾತ್ರಿಲಿ ಗುಡಿಸಲುಗಳಿಗೆ ದಾಳಿ ನಡೆಸಿ ಕದ್ದಿರುವ ಚಿನ್ನಾಭರಣ ಎಲ್ಲಿಟ್ಟೀದ್ದೀರೋ ಎಂದು ಚಿತ್ರ ಹಿಂಸೆ ನೀಡುತ್ತಾರಂತೆ, ಊರುರುಗಳ ಮೇಲೆ ಅಲೆದು ಪಿನ್ನು, ಹೇರ್​​ಪಿನ್​​ನ್ನು ಮಾರಾಟ ಮಾಡುತ್ತಾ, ಮಿಕ್ಸಿ ಕುಕ್ಕರು ರಿಪೇರಿ ಮಾಡುತ್ತಾ ಜೀವನ ಮಾಡೋ ನಮಗೆ ಪೊಲೀಸರ ಹಿಂದೆ ತಾಳಲು ಆಗುತ್ತಿಲ್ಲ,ನಮ್ಮ ಮಕ್ಕಳು ಪೊಲೀಸರ ಹಿಂಸೆಗೆ ತೋರಿಸುವ ಜ್ಯೂಲರಿ ಅಂಗಡಿಗಳಿಂದ ಕೆಲ ಪೊಲೀಸರಿಗೆ ಲಾಭ ಆಗಿದೆ.ಅಷ್ಟೇ ಅಲ್ಲದೆ ಪೊಲೀಸರು ಕೊಡುವ ಕಾಟಕ್ಕೆ ನಾವು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಣ್ಣೀರಿಡುತ್ತಿದ್ದಾರೆ.

ಮನೆ ಬಿಡುತ್ತಿರುವ ಯುವಕರು:
ಇಲ್ಲಿನ ನಿವಾಸಿ ಗಂಗಮ್ಮ ಮಾತನಾಡಿ ಪೊಲೀಸರು ಚಿತ್ರ ಹಿಂಸೆ ಕೊಡ್ತಾ ಇದಾರೆ ಸ್ವಾಮಿ, ಒಂದು ಕಾರು ನಮ್ಮ ಹಟ್ಟಿ ಕಡೆ ಬಂದ್ರೆ ನಮ್ಮ ಹುಡುಗರು ವಿಲ ವಿಲನೆ ಒದ್ದಾಡಿಬಿಡ್ತಾರೆ. ಅಷ್ಟೆ ಅಲ್ಲ ಮನೆ ಬಿಟ್ಟು ವಾರಾನುಗಟ್ಟಲೆ ತಲೆ ಮರೆಸಿಕೊಂಡು ದೂರದೂರುಗಳಿಗೆ ಹೋಗಿ ಬಿಡ್ತಾರೆ, ಈ ಗುಡಿಸಲುಗಳಲ್ಲಿ ಗಂಡಸರು ಇಲ್ಲದೆ ಬರೀ ಹೆಣ್ಣು ಮಕ್ಕಳು ಜೀವನ ಮಾಡೋದು ಹೆಂಗೆ. ನನ್ನ ಮಗ ಒಂದು ವಾರದ ಹಿಂದೆ ಮನೆ ಬಿಟ್ಟಿದ್ದವನು ಇವತ್ತು ಬಂದಿದ್ದಾನೆ, ಇಲ್ಲಿ ಎಲ್ಲರೂ ದುಡಿದು ತಿನ್ನುತ್ತಿದ್ದೇವೆ ಆದ್ರೆ ಬಡಿದು ತಿನ್ನುತ್ತಿಲ್ಲ. ಪೊಲೀಸರು ಇದೇ ರೀತಿ ಹಿಂಸಿಸುತ್ತಿದ್ದರೆ ನಮ್ಮ ಜನರೆಲ್ಲ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಣ್ಣೀರಿಟ್ಟರು.

ಸ್ಥಳೀಯ ಜನಪ್ರತಿನಿಧಿಗಳ ನೆರವು:
ಯಾವುದೇ ಅಪರಾದ ಕೃತಗಳಲ್ಲಿ ಭಾಗಿಯಾಗದ ಯುವಕರನ್ನ ಪೊಲೀಸರು ವಿಚಾರಣೆ ನೆಪದಲ್ಲಿ ಕರೆದುಕೊಂಡು ಹೋಗಿ ಹಿಂಸಿಸುವ ವೇಳೆ ಇಲ್ಲಿನ ಜನ ಸ್ಥಳೀಯ ಮುಖಂಡರ ಮೊರೆ ಹೋಗುತ್ತಾರಂತೆ. ಆಗ ಬೆಂಗಳೂರಿನ ಯಾವುದೇ ಪೊಲೀಸರು ಇವರನ್ನ ಬಂಧಿಸಿ ಎಳೆದೊಯ್ದಾಗ ಸ್ಥಳೀಯ ಮುಖಂಡರು ಪೊಲೀಸ್ ಠಾಣೆಗಳಿಗೆ ಅಲೆದು ಇವರನ್ನ ಬಿಡಿಸಿಕೊಂಡು ಬರಬೇಕು, ನಮಗಂತು ಪೊಲೀಸರಿಂದ ಮಾನಸಿಕವಾಗಿ ತೊಂದರೆಯಾಗುತ್ತಿದೆ. ಇವರಲ್ಲಿ ಕೆಲವರು ನಮ್ಮ ಹೊಲ ಗದ್ದೆ ತೋಟಗಳಲ್ಲಿ ಕೆಲಸ ಮಾಡುತ್ತಾರೆ ಅವರನ್ನೆಲ್ಲ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದೀರಾ ಎಂದು ಪೊಲೀಸರು ಎಳೆದುಕೊಂಡು ಹೋಗುತ್ತಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಗಮನವಹಿಸಿ ಇಲ್ಲಿನ ಬುಡಕಟ್ಟು ಜನಾಂಗದ ನೆರವಿಗೆ ಬರಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ಪುಷ್ಪಲತಾ.

ಒಟ್ಟಾರೆ 75ರ ಸ್ವಾತಂತ್ರ್ಯದ ಸಂಭ್ರಮದಲ್ಲಿ ಬುಡಕಟ್ಟು ಜನಾಂಗವೊಂದು ನಮಗೆ ಪೊಲೀಸರಿಂದ ಇಂದು ಸ್ವಾತಂತ್ರ್ಯ ಸಿಕ್ಕಿಲ್ಲ‌ ಸ್ವಾತಂತ್ರ್ಯ ಕೊಡಿಸಿ ಸ್ವಾಮಿ ಎಂದು ಗೋಗರೆದಿದ್ದಾರೆ. ಸಂಬಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸಲು ಮುಂಗಾಗಬೇಕಿದೆ.

ಯಾವುದೇ ಅಪರಾದ ಕೃತಗಳಲ್ಲಿ ಭಾಗಿಯಾಗದ ಯುವಕರನ್ನ ಪೊಲೀಸರು ವಿಚಾರಣೆ ನೆಪದಲ್ಲಿ ಕರೆದುಕೊಂಡು ಹೋಗಿ ಹಿಂಸಿಸುವ ವೇಳೆ ಇಲ್ಲಿನ ಜನ ಸ್ಥಳೀಯ ಮುಖಂಡರ ಮೊರೆ ಹೋಗುತ್ತಾರಂತೆ.

(chikka madhure shanimahatma temple kodipalya budga people struggle at police toture)

Published On - 12:07 pm, Mon, 16 August 21