ಬೆಂಗಳೂರಿನಲ್ಲಿ ಇಂದಿನಿಂದ ಬೋಂಜೂರ್ ಇಂಡಿಯಾ ಸಾಂಸ್ಕೃತಿಕ ಹಬ್ಬ ಪ್ರಾರಂಭವಾಗಲಿದೆ. ಇದು ಫ್ರೆಂಚ್ ಮತ್ತು ಭಾರತೀಯ ಸಂಸ್ಕೃತಿಯನ್ನು ಸಾರುವ ಹಬ್ಬ. ಈ ಉತ್ಸವದಲ್ಲಿ ಫ್ರಾನ್ಸ್ ಮತ್ತು ಭಾರತದ ಸಂಸ್ಕೃತಿ, ಪರಂಪರೆಗಳ ಸಮ್ಮಿಳಿತವಾಗುತ್ತದೆ. ಅಂದಹಾಗೇ, ಬೋಂಜೂರ್ ಇಂಡಿಯಾ ಎಂಬುದನ್ನು ಭಾರತದಲ್ಲಿ ಶುರು ಮಾಡಿದ್ದೇ ಇಲ್ಲಿರುವ ಫ್ರಾನ್ಸ್ ರಾಯಭಾರಿ ಕಚೇರಿ. ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ಕಚೇರಿಯ ಸಾಂಸ್ಕೃತಿಕ ಸೇವಾ ಸಂಸ್ಥೆಯಾದ ಇನ್ಸ್ಟಿಟ್ಯೂಟ್ ಫ್ರಾಂಚೈಸ್ ಎನ್ ಇಂಡೆ (ಐಎಫ್ಐ), ಅಲಿಯನ್ಸ್ ಫ್ರಾನ್ಸ್ ಸೇರಿ ನಡೆಸುವ ಸಾಂಸ್ಕೃತಿಕ ಉತ್ಸವ ಆಗಿದೆ. ಇದೀಗ ಪ್ರಾರಂಭವಾಗುತ್ತಿರುವುದು ಬೋಂಜೂರ್ ಇಂಡಿಯಾದ ನಾಲ್ಕನೇ ಆವೃತ್ತಿ. ಇದು ಏಪ್ರಿಲ್ನಿಂದ ಜೂನ್ ತಿಂಗಳವರೆಗೆ ದೇಶದ ವಿವಿಧ 19 ಮಹಾ ನಗರಗಳಲ್ಲಿ ನಡೆಯಲಿದ್ದು, ಬೆಂಗಳೂರಿನಲ್ಲಿ ಏಪ್ರಿಲ್ 25 (ಇಂದು)ರಿಂದ ಪ್ರಾರಂಭಗೊಳ್ಳಲಿದೆ.
ಈ ಬೋಂಜೂರ್ ಇಂಡಿಯಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿಟಿ ಫಾರ್ ಆಲ್? (City For All?) ಎಂಬ ಕಾರ್ಯಕ್ರಮವೂ ಕೂಡ ಮಹತ್ವದ್ದಾಗಿದೆ. ಭಾರತದ ಮಹಾನಗರಗಳ ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಗೆ ಇನ್ನಷ್ಟು ಮುಕ್ತ ಪ್ರವೇಶ ಕಲ್ಪಿಸುವುದು ಹೇಗೆ? ಅಂದರೆ, ಈ ವರ್ಗದ ಜನರು ಮಧ್ಯರಾತ್ರಿಯಲ್ಲೂ ಭಯವಿಲ್ಲದೆ ಸಂಚರಿಸುವುದು, ಎಲ್ಲೋ ಹೋಗುತ್ತಿರುವಾಗ ಮೂತ್ರ ವಿಸರ್ಜನೆ ಮಾಡಬೇಕು ಅನ್ನಿಸಿದಾಗ ತಕ್ಷಣಕ್ಕೆ ಅವರಿಗೆ ವ್ಯವಸ್ಥೆ ಸಿಗುವಂತೆ ಹೇಗೆ ನಗರಗಳನ್ನು ವಿನ್ಯಾಸಗೊಳಿಸಬಹುದು ಎಂಬಿತ್ಯಾದಿ ವಿಷಯಗಳನ್ನು ಈ ಪ್ರದರ್ಶನ ಕಾರ್ಯಕ್ರಮ ತೋರಿಸುತ್ತದೆ. ಅಂದರೆ ಜನಸಮೂಹವನ್ನು ವಿವಿಧ ಕಲಾ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಿಟಿ ಫಾರ್ ಆಲ್? ಎಕ್ಸಿಬಿಶನ್ ನಡೆಯಲಿದೆ ಎಂದು ಫ್ರೆಂಚ್ ರಾಯಭಾರಿ ಕಚೇರಿ ತಿಳಿಸಿದೆ. ಸಿಟಿ ಫಾರ್ ಆಲ್? ಎಕ್ಸಿಬಿಶನ್ ಏಪ್ರಿಲ್ 29ರಂದು ಸಂಜೆ 6ಗಂಟೆಗೆ ಬೆಂಗಳೂರಿನ ಎಂಜಿ ರೋಡ್ನಲ್ಲಿರುವ ರಂಗೋಲಿ ಮೆಟ್ರೋ ಆರ್ಟ್ ಸೆಂಟರ್ನಲ್ಲಿ ಉದ್ಘಾಟನೆಗೊಳ್ಳಲಿದೆ. ಈ ವೇಳೆ ಫ್ರಾನ್ಸ್ನ ರಾಯಭಾರಿ ಥಿಯೆರಿ ಬರ್ಥೆಲೋಟ್ ಉಪಸ್ಥಿತರಿರುವರು. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮತ್ತು ತೃತೀಯಲಿಂಗಿಗಳು ಹೇಗೆ ಸುರಕ್ಷಿತವಾಗಿ, ಮುಕ್ತವಾಗಿ ಪ್ರವೇಶ ಮಾಡಬಹುದು ಎಂಬುದನ್ನು ಎಕ್ಸಿಬಿಶನ್ನಲ್ಲಿ ನೋಡಬಹುದು. ಉದ್ಘಾಟನೆಯ ದಿನ ಗೋಪಾಲ್ ನವಲೆ ಸಂಗೀತದೊಂದಿಗೆ ಸಿಟಿ ಫಾರ್ ಆಲ್? ಪ್ರದರ್ಶನ ನಡೆಯಲಿದ್ದು, ಕಲಾವಿದೆ ಮತ್ತು ವಾಸ್ತುಶಿಲ್ಪಿ ಸ್ವಾತಿ ಜಾನು ಕೂಡ ಇರುವರು.
ಸಿಟಿ ಫಾರ್ ಆಲ್? ಪ್ರದರ್ಶನಕ್ಕೂ ಪೂರ್ವ ಇಡೀ ಬೆಂಗಳೂರಿನ ನಕ್ಷೆಯೊಂದನ್ನು ಬೆಂಗಳೂರಿನ ನೆರೆಹೊರೆಯಲ್ಲಿರುವ ಒಟ್ಟು 6 ಪ್ರದೇಶಗಳಿಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿನ ವಿವಿಧ ವರ್ಗದ ಜನರನ್ನು ಕುಟುಂಬ ಸಮೇತವಾಗಿ ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಕೇಳಲಾಗುತ್ತದೆ. ನಂತರ ಚಟುವಟಿಕೆಗೆ ಆಯ್ಕೆಯಾದ ಜನರ ಬಳಿ, ನೀವು ನಿಮ್ಮ ಕುಟುಂಬದವರ ಅಥವಾ ಸ್ನೇಹಿತರ ಜತೆ ಬೆಂಗಳೂರಿನ ಯಾವ ಭಾಗಕ್ಕೆ ಹೋಗಲು ಬಯಸುತ್ತೀರಿ ಎಂಬ ಪ್ರಶ್ನೆ ಕೇಳಲಾಗುತ್ತದೆ. ಅವರು ಎಲ್ಲಿಗೆ ಹೋಗಲು ಬಯಸುತ್ತಾರೋ ಆ ಪ್ರದೇಶವನ್ನು ಮ್ಯಾಪ್ ಮೇಲೆ ಕೊಟ್ಟಿರುವ ಬಣ್ಣದ ಪಿನ್ನಿಂದ ಗುರುತಿಸಬೇಕು. ಅಂದರೆ ಅಲ್ಲಿ ಪಿನ್ ಸಿಕ್ಕಿಸಬೇಕು. ನಂತರ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳುವ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿರುವ ವ್ಯವಸ್ಥೆಗಳು, ಅದರಾಚೆಗೆ ಹೇಗೆ ಇರಬೇಕು ಎಂದು ಜನರು ಬಯಸುತ್ತಾರೆ ಎಂಬಿತ್ಯಾದಿ ಚರ್ಚೆಗಳನ್ನು ನಡೆಸಲಾಗುತ್ತದೆ. ಸಿಟಿ ಫಾರ್ ಆಲ್ ಪ್ರದರ್ಶನಕ್ಕೆ ಇವೆಲ್ಲ ಪೂರಕ ಅಂಶಗಳಾಗುತ್ತವೆ. ಏಪ್ರಿಲ್ 29 ಮತ್ತು 30ರಂದು ನಡೆಯಲಿರುವ ಸಿಟಿ ಫಾರ್ ಆಲ್? ಪ್ರದರ್ಶನದಲ್ಲಿ ಹೀಗೆ ಪಿನ್ಗಳಿಂದ ಗುರುತಾದ ಮ್ಯಾಪ್ಗಳನ್ನೂ ಇಡಲಾಗುತ್ತದೆ. ಪ್ರತಿ ವರ್ಗದ ಜನರೊಂದಿಗೆ ನಡೆದ ಚರ್ಚೆಗಳು, ಸಂದರ್ಶನಗಳ ಬಗ್ಗೆಯೂ ಇಲ್ಲಿ ಮಾಹಿತಿ ಇರುತ್ತದೆ.
ಸ್ವಾತಿ ಜನು ಹೇಳಿದ್ದೇನು?
ವಿಶ್ವಾದ್ಯಂತ ನಗರಗಳನ್ನು ಪುರುಷರೇ ವಿನ್ಯಾಸಗೊಳಿಸುತ್ತಾರೆ. ಎಲ್ಲರೂ ಮುಂದುವರಿದ ರೀತಿಯಲ್ಲಿಯೇ ನಗರಗಳು ಇರಬೇಕು ಎಂದು ಬಯಸಿ, ಹಾಗೇ ನಿರ್ಮಾಣ ಮಾಡಲಾಗುತ್ತದೆ. ಆದರೆ ಮಹಿಳೆಯರು ಮತ್ತು ತೃತೀಯ ಲಿಂಗಿಗಳ ಮೂಲಭೂತ ಸಮಸ್ಯೆಗಳಿಗೂ ಸ್ಪಂದಿಸುವ ರೀತಿಯಲ್ಲಿ ಸಿಟಿಗಳನ್ನು ವಿನ್ಯಾಸಗೊಳಿಸಬೇಕು. ಈ ವರ್ಗದವೂ ನಗರದಾದ್ಯಂತ, ಯಾವುದೇ ಹೊತ್ತಲ್ಲಿ ಆರಾಮಾಗಿ ಸಂಚರಿಸುವಂತಾಗಬೇಕು. ಅಗತ್ಯಗಳನ್ನು ಪೂರೈಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಸಿಟಿ ಫಾರ್ ಆಲ್? ತುಂಬ ಮಹತ್ವದ್ದು ಎಂದು ವಾಸ್ತುಶಿಲ್ಪಿ ಸ್ವಾತಿ ಜನು ಹೇಳಿದ್ದಾರೆ.
ಇದನ್ನೂ ಓದಿ: ಯಾದಗಿರಿಯಲ್ಲಿ ಹಿಜಾಬ್ಗಾಗಿ ಪಿಯು ಪರೀಕ್ಷೆ ಬಹಿಷ್ಕರಿಸಿದ 6 ವಿದ್ಯಾರ್ಥಿನಿಯರು
Published On - 2:16 pm, Mon, 25 April 22