Kannada News Karnataka Bengaluru CM progress review meeting of power department, decides to supply power to farmers in 3 shifts daily
ಸಿಎಂ ನೇತೃತ್ವದಲ್ಲಿ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ: ರೈತರಿಗೆ ಪ್ರತಿದಿನ 3 ಪಾಳಿಗಳಲ್ಲಿ ವಿದ್ಯುತ್ ಪೂರೈಕೆಗೆ ತೀರ್ಮಾನ
ಸಿಎಂ ಸಿದ್ದರಾಮಯ್ಯ ಇಂದು ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಮಾಡಿದ್ದು, ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ರೈತರಿಗೆ ಪ್ರತಿದಿನ 3 ಪಾಳಿಗಳಲ್ಲಿ ನಿರಂತರ 5 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುವಂತೆ ಹಾಗೂ ಲೋಡ್ ಶೆಡ್ಡಿಂಗ್ ಆಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.
ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ
Follow us on
ಬೆಂಗಳೂರು, ಅಕ್ಟೋಬರ್ 13: ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಪ್ರಗತಿ ಪರಿಶೀಲನಾ ಸಭೆ ಮಾಡಿದ್ದಾರೆ. ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ರೈತರಿಗೆ ಪ್ರತಿದಿನ ಮೂರು ಪಾಳಿಗಳಲ್ಲಿ ನಿರಂತರ ಐದು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುವಂತೆ ಹಾಗೂ ಲೋಡ್ ಶೆಡ್ಡಿಂಗ್ ಆಗದಂತೆ ಎಚ್ಚರಿಕೆ ವಹಿಸುವಂತೆ ಎಸ್ಕಾಂ ಎಂ.ಡಿ.ಗಳಿಗೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಐಇಎಕ್ಸ್/ಬಿಐಎಲ್ಎಟಿಇಆರ್ಎಎಲ್ ವಿದ್ಯುತ್ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ನವೆಂಬರ್ನಲ್ಲಿ ಉತ್ತರಪ್ರದೇಶದಲ್ಲಿ 300 ಮೆಗಾವ್ಯಾಟ್. ಪಂಜಾಬ್ನಿಂದ 600 ಮೆಗಾವ್ಯಾಟ್ ವಿದ್ಯುತ್ ಪಡೆಯಲಾಗುವುದು.
ಕೆ.ಇ.ಆರ್.ಸಿ ಅನುಮೋದನೆಯೊಂದಿಗೆ 1500 ಮೆಗಾವ್ಯಾಟ್ ಖರೀದಿಗೆ ಸಜ್ಜಾಗಿದ್ದು, ಆ ಮೂಲಕ ರಾಜ್ಯದಲ್ಲಿ ವಿದ್ಯುತ್ ಕೊರತೆ ನಿವಾರಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಸಿದ್ದರಾಮಯ್ಯ ಟ್ವೀಟ್
ಮುಖ್ಯಮಂತ್ರಿ @siddaramaiah ಅವರು ಇಂದು ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಚರ್ಚಿಸಿದರು. ಈ ವೇಳೆ ಅವರ ಮಾತುಗಳು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ರೈತರಿಗೆ ಪ್ರತಿದಿನ ಮೂರು ಪಾಳಿಗಳಲ್ಲಿ ನಿರಂತರ ಐದು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು ಹಾಗೂ… pic.twitter.com/jXO9Ro7ZOV
ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು ಹೀಗಿವೆ
ಕೃಷಿ ಕ್ಷೇತ್ರದಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದ್ದು, ರೈತರಿಗೆ ಕನಿಷ್ಠ ಐದು ಗಂಟೆ ನಿರಂತರ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ
ಲಭ್ಯವಿರುವ ವಿದ್ಯುತ್ತಿನ ದಕ್ಷ ಹಂಚಿಕೆಯೂ ಅತಿ ಮುಖ್ಯವಾಗಿದ್ದು, ಎಸ್ಕಾಂಗಳ ಎಂ.ಡಿ.ಗಳು ಈ ಕುರಿತು ಹೆಚ್ಚಿನ ನಿಗಾ ವಹಿಸಿ ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಎಲ್ಲ ಮುಖ್ಯ ಎಂಜಿನಿಯರುಗಳನ್ನು ಜಿಲ್ಲೆಗೊಬ್ಬರಂತೆ ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದ್ದು, ಅವರು ನಿರಂತರ 5 ಗಂಟೆ ವಿದ್ಯುತ್ ಪೂರೈಕೆ ಯಾವುದೇ ಅಡಚಣೆಯಿಲ್ಲದೆ ಆಗುವಂತೆ ಖಾತರಿಪಡಿಸಬೇಕು ಎಂದು ಸೂಚಿಸಿಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಇಂದಿನ ಸಭೆಯ ತೀರ್ಮಾನಗಳ ಪಾಲನೆಯಾಗುತ್ತಿರುವುದನ್ನು ಖಾತರಿಪಡಿಸಬೇಕು.
ಕಳೆದ ಐದು ವರ್ಷಗಳಿಂದ ವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯ ಹೆಚ್ಚಳ ಕೇವಲ 4000 ಮೆಗಾವ್ಯಾಟ್ ನಷ್ಟು ಮಾತ್ರ ಇದೆ. ರಾಜ್ಯದ ಒಟ್ಟಾರೆ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 32,000 ಮೆಗಾವ್ಯಾಟ್ ಇದ್ದರೂ ಇದರಲ್ಲಿ 16 ಸಾವಿರ ಮೆಗಾವ್ಯಾಟ್ ಸೌರ ವಿದ್ಯುತ್ ಆಗಿದ್ದು, ಇದು ಹಗಲು ಹೊತ್ತಿನಲ್ಲಿ ಮಾತ್ರ ಉತ್ಪಾದನೆ ಆಗುವುದರಿಂದ ಬೇಡಿಕೆ ನಿರ್ವಹಣೆಯಲ್ಲಿ ವ್ಯತ್ಯಯವಾಗುತ್ತಿದೆ. ಜೊತೆಗೆ ಕಲ್ಲಿದ್ದಲಿನಲ್ಲಿ ಕೆಲವು ಸಮಸ್ಯೆಗಳಿದ್ದುದನ್ನು ನಿವಾರಿಸಲಾಗಿದ್ದು, ಇದೀಗ ಆಮದು ಕಲ್ಲಿದ್ದಲು ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
ರಾಜ್ಯದಲ್ಲಿನ ವಿದ್ಯುತ್ ಉತ್ಪಾದಕರಿಂದ ವಿದ್ಯುತ್ ಪಡೆಯಲು ರಾಷ್ಟ್ರೀಯ ವಿಪತ್ತಿನಡಿಯಲ್ಲಿ ವಿದ್ಯುತ್ ಕಾಯ್ದೆಯ ಸೆಕ್ಷನ್ 11ನ್ನು ಜಾರಿಗೊಳಿಸಲಾಗಿದೆ. ಆ ಮೂಲಕ ವಿದ್ಯುತ್ ಕೊರತೆಯನ್ನು ನಿವಾರಿಸಲಾಗುವುದು ಎಂದು ಅಧಿಕಾರಿಗಳು ವಿವರಿಸಿದರು.
ದಕ್ಷಿಣದ ಎಲ್ಲ ರಾಜ್ಯಗಳಲ್ಲಿ ವಿದ್ಯುತ್ ಕೊರತೆ ತೀವ್ರವಾಗಿದೆ. ಪ್ರತಿ ವರ್ಷ ನೀವು contingency plan ಹೊಂದಿರಬೇಕು. ಯುದ್ಧ ಕಾಲೇ ಶಸ್ತ್ರಾಭ್ಯಾಸ ಎಂಬಂತೆ ಕಾರ್ಯಪ್ರವೃತ್ತರಾದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಎಚ್ಚರಿಸಿದರು.
ಶೇ.13 ರಷ್ಟು ವಿದ್ಯುತ್ ವಿತರಣಾ ನಷ್ಟವಾಗುತ್ತಿದೆ. ವಿದ್ಯುತ್ ಕಳವು ಗೃಹ ಜ್ಯೋತಿಯಿಂದ ಕಡಿಮೆಯಾಗಿದೆ. ಕೈಗಾರಿಕಾ ವಿದ್ಯುತ್ ಕಳವು ಅತಿ ಕಡಿಮೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.
ಕಬ್ಬಿನ ಬೆಳೆಗೆ ನೀರು ಹಾಯಿಸಲು ಕೆಲವು ಜಿಲ್ಲೆಗಳಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕಬ್ಬಿನ ಕಟಾವು, ಅರೆಯುವಿಕೆ ಪ್ರಾರಂಭವಾದ ಕೂಡಲೇ ಬೇಡಿಕೆ ಇಳಿಕೆಯಾಗಲಿದ್ದು, ಕಬ್ಬು ಅರೆಯುವಿಕೆಯೊಂದಿಗೆ ಕೊ-ಜೆನರೇಶನ್ನಿಂದ ವಿದ್ಯುತ್ ಲಭ್ಯವಾಗುತ್ತದೆ ಎಂದು ಸಭೆಗೆ ವಿವರಿಸಲಾಗಿದೆ.