ಬೆಂಗಳೂರು, ಆಗಸ್ಟ್ 7: ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ 2019-20ರ ಸಾಲಿನಿಂದ 2022-23ರವರೆ ನಡೆದ ಕಾಮಗಾರಿ ಅಕ್ರಮಗಳ ತನಿಖೆಗೆ ಪ್ರತ್ಯೇಕ ಸಮಿತಿಗಳನ್ನು ರಚನೆ ಮಾಡಿ ಬೆಂಗಳೂರು (Bengaluru) ನಗರಾಭಿವೃದ್ಧಿ ಇಲಾಖೆ ಆದೇಶ ಹೊರಸಿದೆ. ಗುತ್ತಿಗೆದಾರರನ್ನು ಬಿಟ್ಟು ನಕಲಿ ಗುತ್ತಿಗೆದಾರರಿಗೆ ಹಣ ಪಾವತಿ, ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆ, ನಕಲಿ ಬಿಲ್ ಸೃಷ್ಟಿ ಸೇರಿದಂತೆ ಹಲವು ಆರೋಪಗಳ ಕುರಿತು ತನಿಖೆಗೆ ಸಮಿತಿ ರಚಿಸಲಾಗಿದೆ.
ಘನತ್ಯಾಜ್ಯ ನಿರ್ವಹಣೆ ಕಾಮಗಾರಿ ತನಿಖೆಗೆ ಉಜ್ವಲ್ ಕುಮಾರ್ ಘೋಷ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ತನಿಖೆಗೆ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಅಧ್ಯಕ್ಷತೆಯಲ್ಲಿ, ಬೃಹತ್ ನೀರುಗಾಲುವೆ ಅಕ್ರಮ ತನಿಖೆಗೆ ಪಿ.ಸಿ.ಜಾಫರ್ ಅಧ್ಯಕ್ಷತೆಯಲ್ಲಿ, ಕೆರೆ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಕಾಮಗಾರಿ ತನಿಖೆಗೆ ಡಾ.ವಿಶಾಲ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಅಗತ್ಯ ಬಿದ್ದರೆ ಥರ್ಡ್ ಪಾರ್ಟಿ ಮೂಲಕ ಗುಣಮಟ್ಟದ ಪರಿಕ್ಷೆಗೂ ಸೂಚನೆ ನೀಡಲಾಗಿದೆ.
ಅಕ್ರಮಗಳ ಆರೋಪದ ಬಗ್ಗೆ ಮಾತನಾಡಿದ ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಆರೋಪದ ಬಗ್ಗೆ ತನಿಖೆ ಮಾಡಿಸೋಣ ಬಿಡಿ. ನನ್ನ ವಿರುದ್ಧ ತನಿಖೆ ಮಾಡಿಸಬೇಕೆಂದು ಡಾ.ಅಶ್ವತ್ಥ ನಾರಾಯಣ ಹೇಳಿದ್ದರು. ಮುನಿರತ್ನ ವಿರುದ್ಧದ ಆರೋಪ ಬಗ್ಗೆ ತನಿಖೆ ಮಾಡಿಸಿ ಎಂದಿದ್ದರು. ಬಿಬಿಎಂಪಿಯಲ್ಲಿ ನಡೆದ ಅಕ್ರಮಗಳ ಬಗ್ಗೆಯೂ ತನಿಖೆ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಬಿಬಿಎಂಪಿ ಮೇಲೆ ಡಿಕೆ ಶಿವಕುಮಾರ್ ಮತ್ತಷ್ಟು ಹಿಡಿತ; 2019-2023ರ ನಡುವಿನ ಕಾಮಗಾರಿಗಳ ವಿವರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ
ಬಿಬಿಎಂಪಿಯಲ್ಲಿ ಕೆಲಸ ಯಾರು ಕೊಟ್ಟರು ಗೊತ್ತಿಲ್ಲ, ಟೆಂಡರ್ ಆಗಿಲ್ಲ ಆದರೂ ಕಾಮಗಾರಿ ಮಾಡಿದ್ದಾರೆ. 25 ದಿನಕ್ಕೆ, 15 ದಿನಕ್ಕೆ ಬಿಲ್ ಆಗಿಡುತ್ತದಯೇ? ಹದಿನೈದೇ ದಿನಕ್ಕೆ ಇಲ್ಲಿ ಕೆಲಸ ಆಗಿಬಿಡತ್ತಾ? ಈ ಅನುಮಾನ ಹಿನ್ನೆಲೆ ಪರಿಶೀಲನೆಗೆ ಅಧಿಕಾರಿಗಳನ್ನು ಹಾಕಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಗುತ್ತಿಗೆದಾರರು ಬಂದಿದ್ದರು, ನೈಜತೆಯ ಕೆಲಸಗಳ ಬಗ್ಗೆ ನಮಗೆ ತಕರಾರಿಲ್ಲ. ನಮ್ಮ ಜಲಸಂಪನ್ಮೂಲ ಇಲಾಖೆಯಲ್ಲಿ ದುಡ್ಡು ಇರುವುದು 600 ಕೋಟಿ ರೂ. ಆದರೆ ಬಿಲ್ ಬಂದಿರುವುದು 25 ಸಾವಿರ ಕೋಟಿಗೆ. ನಾವು ಯಾರಿಗೆ ಅಂತ ಹಣ ಬಿಡುಗಡೆ ಮಾಡಲಿ. ಗುತ್ತಿಗೆದಾರರು ನೊಂದಿದ್ದಾರೆ. ನಮಗೂ ಜವಾಬ್ದಾರಿ ಇದೆ. ಇದೇ ಅಶ್ವಥ್ ನಾರಾಯಣ ಸದನದಲ್ಲಿ ತನಿಖೆ ಮಾಡಿಸಿ ಅಂತ ಆಗ್ರಹಿಸಿದ್ದರು. ಹೀಗಾಗಿ ಅವರ ನುಡಿಮುತ್ತುಗಳನ್ನು ನಾವು ಕೇಳಲೇಬೇಕಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Mon, 7 August 23