
ದೆಹಲಿ, ಅ.2: ಎಸ್ಐಆರ್ ಪೂರ್ಣಗೊಂಡಿರುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ, ವಿವಿಧ ಕಾರಣಗಳಿಂದ ಮತದಾರರ ಪಟ್ಟಿಯಿಂದ ಕೈಬಿಡಲ್ಪಟ್ಟ ಅರ್ಹ ಮತದಾರರು ಮತ್ತು ಹೊಸ ಯುವ ಮತದಾರರ ನೋಂದಣಿಗಾಗಿ ‘ವಿಶೇಷ ನೋಂದಣಿ ಅಭಿಯಾನ’ (Special Enrolment Drive) ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗವು ನಿರ್ದೇಶನ ನೀಡಿದೆ. ಈ ಸಂಬಂಧ ಸೆಪ್ಟೆಂಬರ್ 29 ರಂದು ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಲಿಖಿತ ಸೂಚನೆ ನೀಡಿದ್ದ ಆಯೋಗವು, ಗುರುವಾರ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಈ ನಿರ್ದೇಶನವನ್ನು ಪುನರುಚ್ಚರಿಸಿದೆ. ನಿರಂತರ ನವೀಕರಣ ಪ್ರಕ್ರಿಯೆಯಡಿಯಲ್ಲಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಮತದಾರರ ನೋಂದಣಾಧಿಕಾರಿಗಳಿಗೆ ಸೂಚಿಸಲಾಗಿದೆ.
ಎಸ್.ಐ.ಆರ್ (SIR) ಪ್ರಕ್ರಿಯೆ ಪೂರ್ಣಗೊಂಡಿರುವ 20 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಸರು ಕಳೆದುಕೊಂಡವರು ಅಥವಾ ಹೊಸದಾಗಿ ನೋಂದಾಯಿಸಿಕೊಳ್ಳುವವರು ಇನ್ಮುಂದೆ ಸಾಮಾನ್ಯ ಫಾರ್ಮ್ 6 (Form 6) ಬಳಸಿಯೇ ಅರ್ಜಿ ಸಲ್ಲಿಸಬಹುದು. ಎಸ್ಐಆರ್ಪ್ರಕ್ರಿಯೆಯ ಅವಧಿಯಲ್ಲಿ ಜಾರಿಯಲ್ಲಿದ್ದ ಹೆಚ್ಚುವರಿ ಸ್ವಯಂ ಘೋಷಣಾಪತ್ರದ ಅಗತ್ಯ ಇನ್ಮುಂದೆ ಇರುವುದಿಲ್ಲ. ಆನ್‌ಲೈನ್ ಫಾರ್ಮ್ 6 ನಲ್ಲಿ ಕೇಳಲಾಗುತ್ತಿದ್ದ “ಹಿಂದಿನ SIR ನಂತರ ನಿಮ್ಮ ಅಥವಾ ನಿಮ್ಮ ಪೋಷಕರ ಹೆಸರು ಪಟ್ಟಿಯಲ್ಲಿತ್ತೇ?” ಎಂಬ ಪ್ರಶ್ನೆಗೆ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ವಿರೋಧ ವ್ಯಕ್ತಪಡಿಸಿದ್ದರು. ಇದೀಗ 1960 ರ ಕಾಯ್ದೆಯನ್ವಯ ಸಾಮಾನ್ಯ ಫಾರ್ಮ್ 6 ರನ್ನೇ ಬಳಸಲು ಆಯೋಗ ಸ್ಪಷ್ಟಪಡಿಸಿದೆ.
SIR ಪ್ರಕ್ರಿಯೆಯ ಮುಂಚಿನ ಮತ್ತು ನಂತರದ ಮತದಾರರ ಪಟ್ಟಿಯನ್ನು ಹೋಲಿಸಿ, ಯಾವುದೇ ಬಲವಾದ ಕಾರಣವಿಲ್ಲದೆ ಅನ್ಯಾಯವಾಗಿ ಹೆಸರು ಡಿಲೀಟ್ ಆಗಿರುವ ಮತದಾರರನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಕಲಿ ಅಥವಾ ಮೃತಪಟ್ಟವರಲ್ಲದಿದ್ದರೂ ಪಟ್ಟಿಯಿಂದ ಕೈಬಿಡಲ್ಪಟ್ಟ ಮತದಾರರ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು ಸ್ವತಃ ಭೇಟಿ ನೀಡಿ ಅವರಿಂದ ಫಾರ್ಮ್ 6 ಭರ್ತಿ ಮಾಡಿಸಿಕೊಳ್ಳಲಿದ್ದಾರೆ. ಈ ನೋಂದಣಿ ಕಾರ್ಯಕ್ಕೆ ರಾಜಕೀಯ ಪಕ್ಷಗಳು ಹಾಗೂ ಅವರ ಬೂತ್ ಮಟ್ಟದ ಏಜೆಂಟ್‌ಗಳ (BLA) ನೆರವು ಪಡೆಯಲು ನಿರ್ದೇಶಿಸಲಾಗಿದೆ. ದೇಶಾದ್ಯಂತ ಸುಮಾರು 30 ರಾಜ್ಯ/UT ಗಳಲ್ಲಿ 13 ಕೋಟಿಗೂ ಹೆಚ್ಚು ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಪರಿಶೀಲನಾ ಅಭಿಯಾನ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ.
Special drive in States/UTs after completion of Special Intensive Revision (SIR)
Commission has instructed to undertake a special drive for enrolment of left-out and first time/young electors.
Read in detail 👇 pic.twitter.com/s80LByssWx
— Election Commission of India (@ECISVEEP) October 2, 2026
ಗೋವಾದಲ್ಲಿ ಅರ್ಹರಾಗಿದ್ದರೂ ಅಂತಿಮ ಪಟ್ಟಿಯಿಂದ ಬಿಟ್ಟುಹೋಗಿದ್ದ 97 ಮತದಾರರ ಮನೆಗೆ ಬಿಎಲ್‌ಒಗಳು ಭೇಟಿ ನೀಡಿ ಫಾರ್ಮ್ 6 ಭರ್ತಿ ಮಾಡಿಸಿಕೊಂಡಿದ್ದರು. ಈ ಪೈಕಿ 88 ಜನರ ಅರ್ಜಿ ಸ್ವೀಕೃತವಾಗಿದ್ದು, ಇಬ್ಬಂದಿ ಹೊಂದಿದ್ದ 3 ಪೋರ್ಚುಗೀಸ್ ಪಾಸ್‌ಪೋರ್ಟ್‌ದಾರರು ಹಾಗೂ 6 ಎನ್.ಆರ್.ಐಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ.
ಇದನ್ನೂ ಓದಿ: ‘ಫಾರಂ 7 ಬಗ್ಗೆ ನನಗೆ ಮಾಹಿತಿ ಕೊಡಿ, ನಿಮ್ಮ ಮತ ಉಳಿಸಿಕೊಡ್ತೇನೆ’: ಎಸ್ಐಆರ್ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸಂದೇಶ
ದೆಹಲಿಯಲ್ಲಿ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ ಅವಧಿಯನ್ನು ಅಕ್ಟೋಬರ್ 30 ರವರೆಗೆ ಹಾಗೂ ಪರಿಶೀಲನೆಯನ್ನು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಅರ್ಜಿ ಸಲ್ಲಿಕೆ ಅವಧಿಯನ್ನು ಅಕ್ಟೋಬರ್ 12 ಕ್ಕೆ ಹಾಗೂ ಪರಿಶೀಲನೆಯನ್ನು ನವೆಂಬರ್ 10 ರವರೆಗೆ ಲಂಬಿಸಲಾಗಿದೆ. ನೋಟಿಸ್ ಪಡೆದ ಮತದಾರರು ಅಧಿಕಾರಿಗಳ ಮುಂದೆ ಖುದ್ದಾಗಿ ಹಾಜರಾಗುವ ಅಗತ್ಯವಿಲ್ಲ, ಬಿಎಲ್‌ಒಗಳೇ ದಾಖಲೆ ಸಂಗ್ರಹಿಸಿ ECINET ವ್ಯವಸ್ಥೆಗೆ ಅಪ್‌ಲೋಡ್ ಮಾಡಲಿದ್ದಾರೆ. ಕರ್ನಾಟಕ ಸೇರಿದಂತೆ ಬಿಹಾರ, ಪಶ್ಚಿಮ ಬಂಗಾಳ ಸೇರಿ ಒಟ್ಟು 20 ರಾಜ್ಯಗಳಲ್ಲಿ SIR ಪೂರ್ಣಗೊಂಡಿದ್ದು, ಬಿಟ್ಟುಹೋದ ಪ್ರತಿಯೊಬ್ಬ ಅರ್ಹ ನಾಗರಿಕರಿಗೂ ವೋಟರ್ ಐಡಿ ಪಡೆಯಲು ಇದೊಂದು ಸುವರ್ಣಾವಕಾಶವಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:11 pm, Fri, 2 October 26