ಬೆಂಗಳೂರು: ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದ ತನಿಖೆಯ ಭಾಗವಾಗಿ, ಚೀನಾ ಪ್ರಜೆಗಳ ಸಂಪೂರ್ಣ ಮಾಲೀಕತ್ವ ಮತ್ತು ನಿಯಂತ್ರಣದಲ್ಲಿರುವ ಬೆಂಗಳೂರಿನ ಆನ್‌ಲೈನ್ ಶಿಕ್ಷಣ ಕಂಪನಿಯಿಂದ 8.26 ಕೋಟಿ ರೂಪಾಯಿ ಮೌಲ್ಯದ ಹಣವನ್ನು ವಶಪಡಿಸಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ (ED) ಶುಕ್ರವಾರ ತಿಳಿಸಿದೆ. ಪೀಜನ್ ಎಜುಕೇಶನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್‌ನ ಹಣವನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ಸೆಕ್ಷನ್ 37 ಎ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಂಪನಿಯು ‘ಒಡಾಕ್ಲಾಸ್’ ಬ್ರಾಂಡ್ ಅಡಿಯಲ್ಲಿ ಆನ್‌ಲೈನ್ ಶಿಕ್ಷಣವನ್ನು ಒದಗಿಸಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಜಾರಿ ನಿರ್ದೇಶನಾಲಯವು ಏಪ್ರಿಲ್‌ನಲ್ಲಿ ಕಂಪನಿಯ ಕಚೇರಿಗಳಲ್ಲಿ ಶೋಧಕಾರ್ಯ ನಡೆಸಿತ್ತು. ಕಂಪನಿಯು ಶೇ 100 ಚೀನೀ ಪ್ರಜೆಗಳ ಒಡೆತನದಲ್ಲಿದೆ ಮತ್ತು ಹಣಕಾಸು ನಿರ್ಧಾರಗಳನ್ನು ಒಳಗೊಂಡಂತೆ ಕಂಪನಿಯ ಎಲ್ಲಾ ವ್ಯವಹಾರಗಳನ್ನು ಚೀನಾದಲ್ಲಿ ಕುಳಿತಿರುವ ವ್ಯಕ್ತಿಗಳು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಶೋಧ ಕಾರ್ಯ ನಡೆಸಿದಾಗ ತಿಳಿದುಬಂದಿತ್ತು.
ಚೀನಾದ ನಿರ್ದೇಶಕ ಲಿಯು ಕ್ಯಾನ್ ಅವರ ಸೂಚನೆಯ ಮೇರೆಗೆ ಕಂಪನಿಯು ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚಗಳ ಹೆಸರಿನಲ್ಲಿ ಚೀನಾ ಮತ್ತು ಹಾಂಗ್ ಕಾಂಗ್‌ಗೆ 82.72 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದೆ ಎಂದು ಇ.ಡಿ ಆರೋಪಿಸಿದೆ.
ಇದನ್ನೂ ಓದಿ: Karnataka Oath-Ttaking: ನಾಳೆ ಸಿಎಂ, ಡಿಸಿಎಂ ಪ್ರಮಾಣವಚನ; ಸಂಚಾರ ಬದಲಾವಣೆ ವಿವರ ಇಲ್ಲಿದೆ
ಜಾಹೀರಾತು ವೆಚ್ಚಗಳಿಗೆ ಸಂಬಂಧಿಸಿ ಕಂಪನಿಯು ರಶೀದಿ ಅಥವಾ ಯಾವುದೇ ಪುರಾವೆಯನ್ನು ನೀಡಿಲ್ಲ ಎಂದೂ ಜಾರಿ ನಿರ್ದೇಶನಾಲಯ ಹೇಳಿದೆ.
ಗೂಗಲ್ ಮತ್ತು ಫೇಸ್‌ಬುಕ್ ಮೂಲಕ ಜಾಹೀರಾತುಗಳನ್ನು ಪ್ರಕಟಿಸಲಾಗಿದೆ ಎಂದು ಚೀನಾದ ನಿರ್ದೇಶಕರು ಹೇಳಿದ್ದಾರೆ ಎಂದು ಕಂಪನಿಯ ಭಾರತೀಯ ನಿರ್ದೇಶಕ ವೇದಾಂತ ಹಮಿರ್ವಾಸಿಯಾ ಹೇಳಿದ್ದಾರೆ. ಆದಾಗ್ಯೂ, ಈ ಪ್ಲಾಟ್‌ಫಾರ್ಮ್‌ಗಳಿಂದ ಯಾವುದೇ ದೃಢೀಕರಣ ಅಥವಾ ಇನ್‌ವಾಯ್ಸ್ ಅನ್ನು ಸಲ್ಲಿಸಲಾಗಿಲ್ಲ ಎಂದು ಇ.ಡಿ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ