
ಬೆಂಗಳೂರು, ಅಕ್ಟೋಬರ್ 08: ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಹಣ ವಸೂಲಿ ಆರೋಪ ಹಿನ್ನಲೆ ಆರ್‌ಟಿಐ ಕಾರ್ಯಕರ್ತನೋರ್ವನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಮೂಲದ ಮುರಳಿ (45) ಬಂಧಿತ ಆರೋಪಿಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳ ಲೆಟರ್ ಹೆಡ್ ನಕಲಿ ಮಾಡ್ತಿದ್ದ ಈತ ಬಳಿಕ ಸರ್ಕಾರಿ ಅಧಿಕಾರಿಗಳಿಗೆ ಕಳುಹಿಸಿ ಹಣವಸೂಲಿ ಮಾಡುತ್ತಿದ್ದ. ಈತ ಅರಣ್ಯಾಧಿಕಾರಿ ಎಂಬಂತೆ ನಕಲಿ ಐಡಿ ಕಾರ್ಡ್ ಕೂಡ ಹೊಂದಿದ್ದ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಮುರಳಿ ಲೋಕಾಯುಕ್ತ ದೂರುಗಳಿಗಾಗಿ ಬಳಸುವ ನೈಜ ದೂರು ನಮೂನೆಗಳು ಹಾಗೂ ಅಫಿಡವಿಟ್ ಮಾದರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಈಗಾಗಲೇ ಇದ್ದ ದೂರುಗಳಲ್ಲಿನ ಹೆಸರು ಹಾಗೂ ಇತರ ವಿವರಗಳನ್ನು ಬದಲಿಸಿ, ಅಧಿಕಾರಿಗಳ ವಿರುದ್ಧ ಹೊಸದಾಗಿ ಭ್ರಷ್ಟಾಚಾರ ದೂರು ದಾಖಲಾಗಿದೆ ಎಂಬಂತೆ ನಕಲಿ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದ. ನಂತರ ಈ ನಕಲಿ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ವಿಳಾಸಕ್ಕೆ ಕಳುಹಿಸುತ್ತಿದ್ದ. ಕೆಲವೇ ದಿನಗಳ ಬಳಿಕ ಅಧಿಕಾರಿಗಳನ್ನು ಸಂಪರ್ಕಿಸಿ, ಅವರ ವಿರುದ್ಧ ದಾಖಲಾಗಿರುವುದಾಗಿ ಬಿಂಬಿಸಿದ ದೂರುಗಳನ್ನು ಸೆಟಲ್ ಮಾಡುವ ಅಥವಾ ಹಿಂಪಡೆಯುವ ಭರವಸೆ ನೀಡುತ್ತಿದ್ದ. ಇದಕ್ಕಾಗಿ 3,000 ರೂಪಾಯಿಯಿಂದ 50,000 ರೂಪಾಯಿವರೆಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಅತ್ತಿಬೆಲೆ ಪೆಟ್ರೋಲ್ ಬಂಕ್ಗೆ ನುಗ್ಗಿದ ಜಾಗ್ವಾರ್ ಕಾರು: ಹೊತ್ತಿ ಉರಿದ ಪೆಟ್ರೋಲ್ ಬಂಕ್
ಅರಣ್ಯ ಇಲಾಖೆ ಅಧಿಕಾರಿಯೊಬ್ಬರಿಗೆ ಇಂತಹ ದೂರು ತಲುಪಿದ ಬಳಿಕ, ಅವರು ಲೋಕಾಯುಕ್ತ ಕಚೇರಿಯಲ್ಲಿ ದೂರುದ ವಿವರಗಳನ್ನು ಪರಿಶೀಲಿಸಿದ್ದರು. ಈ ವೇಳೆ ಲೋಕಾಯುಕ್ತ ದಾಖಲೆಗಳಲ್ಲಿ ಅಂತಹ ಯಾವುದೇ ದೂರು ದಾಖಲಾಗಿಲ್ಲ ಎಂಬುದು ಪರಿಶೀಲನೆ ವೇಳೆ ದೃಢಪಟ್ಟ ಕಾರಣ ವಂಚನೆ ಬೆಳಕಿಗೆ ಬಂದಿದೆ.
ಹಣ ವಸೂಲಿಗೆ ಆರೋಪಿ ಬಳಸಿದ್ದ ಬ್ಯಾಂಕ್ ಖಾತೆಗಳ ವಹಿವಾಟಿನ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಖಾತೆಗಳು ಮೂರನೇ ವ್ಯಕ್ತಿಯ ಹೆಸರಿನಲ್ಲಿ ನೋಂದಣಿಯಾಗಿರುವುದು ಕಂಡುಬಂದಿದೆ. ಖಾತೆದಾರನಿಗೆ ಪೊಲೀಸರು ನೋಟಿಸ್ ಜಾರಿ ಮಾಡಿ, ಮುರಳಿಯೊಂದಿಗಿನ ಸಂಬಂಧ ಹಾಗೂ ಹಣದ ವಹಿವಾಟಿನಲ್ಲಿ ಅವರ ಪಾತ್ರದ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ಇದೇ ರೀತಿಯ ಕಾರ್ಯವಿಧಾನವನ್ನು ಬಳಸಿಕೊಂಡು ಮುರಳಿ ಇತರ ಸರ್ಕಾರಿ ಅಧಿಕಾರಿಗಳಿಂದಲೂ ವಸೂಲಿ ಮಾಡಿದ್ದಾನೆಯೇ ಎಂಬ ಆಯಾಮದಲ್ಲಿಯೂ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:54 pm, Thu, 8 October 26