ಬೆಂಗಳೂರು, ಜೂನ್ 07: ಈ ಹಿಂದೆ ಪ್ರಯಾಣಿಕರು ರೈಲು ನಿಲ್ದಾಣದಲ್ಲಿ (Railway Station) ಸರತಿ ಸಾಲಲ್ಲಿ ನಿಂತು ಟಿಕೆಟ್ ಖರೀದಿ ಮಾಡಬೇಕಿತ್ತು. ಆದರೆ ಇದೀಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ (Karntiveer Sangolli Rayanna Railway Station) ಹೊಸದಾಗಿ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆ, ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಿದೆ. ರೈಲ್ವೆ ಇಲಾಖೆ ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿ ಮಾಡಲು ಅವಕಾಶ ನೀಡಿದೆ. ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿ ವಿಧಾನವನ್ನು ಮೊದಲಿಗೆ ಬೆಂಗಳೂರಿನ (Bengaluru) ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ (KSR) ಆರಂಭಿಸಲಾಗಿದೆ.
ಸದ್ಯ 30 ರೈಲು ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ಗಳನ್ನು ಅಳವಡಿಸಲಾಗಿದೆ. ಸ್ಮಾರ್ಟ್ ಪೋನ್ ಬಳಸುವ ಪ್ರಯಾಣಿಕರು ಟಿಕೆಟ್ ಕೌಂಟರ್ಗಳಿಗೆ ತೆರಳದೆ, ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಖರೀದಿಸಬಹುದು. ಸದ್ಯ ಬೆಂಗಳೂರು ರೈಲು ನಿಲ್ದಾಣದಲ್ಲಿ ಪ್ರತಿದಿನ 750 ಪ್ರಯಾಣಿಕರು ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಖರೀದಿ ಮಾಡುತ್ತಿದ್ದಾರೆ.
ಇದನ್ನೂ ಓದಿ: ಶೀಘ್ರವೇ ಹಳಿಗಿಳಿಯಲಿದೆ ಚಾಲಕ ರಹಿತ ಮೆಟ್ರೋ ರೈಲು: ಸಿಗ್ನಲಿಂಗ್ ಟೆಸ್ಟ್ ಜೂನ್ 7ರಿಂದ ಶುರು
ಟಿಕೆಟ್ ಬುಕ್ ಮಾಡಲು ರೈಲ್ವೆ ಇಲಾಖೆ ಹೊಸ ಆ್ಯಪ್ ಪರಿಚಯಿಸಿದೆ. ಇಲಾಖೆ ಯುಟಿಎಸ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ. ಈ ಆ್ಯಪ್ ಮೂಲಕ ಎಲ್ಲಿಂದ ಎಲ್ಲಿಗೆ ಬೇಕಾದರೂ ಯಾರು ಬೇಕಾದರೂ ಟಿಕೆಟ್ ಬುಕ್ ಮಾಡಿ ಪ್ರಯಾಣ ಮಾಡಬಹುದು. ಮಾರ್ಚ್ ತಿಂಗಳಿನಲ್ಲಿ 16 ಸಾವಿರ ಪ್ರಯಾಣಿಕರು ಡೌನ್‌ಲೋಡ್ ಮಾಡಿಕೊಂಡಿದ್ದರೇ, ಏಪ್ರಿಲ್ನಲ್ಲಿ 19 ಸಾವಿರ ಮತ್ತು ಮೇ ತಿಂಗಳಿನಲ್ಲಿ 24 ಸಾವಿರ ಪ್ರಯಾಣಿಕರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ ತುಂಬಾ ಸಹಾಯ ಆಗುತ್ತಿದೆ ಎಂದು ಪ್ರಯಾಣಿಕ ಸುನಿಲ್ ಹೇಳಿದರು.
ಒಟ್ಟಿನಲ್ಲಿ ಇಷ್ಟು ದಿನ ರೈಲ್ವೆ ಪ್ರಯಾಣಿಕರು ಟಿಕೆಟ್ಗಾಗಿ ಸರತಿ ಸಾಲಿನಲ್ಲಿ ನಿಂತು, ಚಿಲ್ಲರೆಗಾಗಿ ಕಿರಿಕ್ ಮಾಡಿಕೊಳ್ಳುತ್ತಿದ್ದರು. ಇದನ್ನು ತಪ್ಪಿಸಲು ಕ್ಯೂಆರ್ ಕೋಡ್ ಮತ್ತು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದು, ಇದು ಪ್ರಯಾಣಿಕರಿಗೆ ಸಾಕಷ್ಟು ಸಹಕಾರಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:03 am, Fri, 7 June 24