
ಬೆಂಗಳೂರು, ನವೆಂಬರ್ 18: ಬಿಐಇಸಿಯಲ್ಲಿ ನಿನ್ನೆಯಿಂದ (ನವೆಂಬರ್ 17) ಆರಂಭವಾಗಿರುವ 29ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಒಂದಕ್ಕಿಂತ ಒಂದು ವಿಭಿನ್ನ ತಂತ್ರಜ್ಞಾನಗಳ ರೋಬೋಟ್‌ಗಳು ನೋಡುಗರ ಕಣ್ಮನ ಸೆಳೆದಿವೆ. ಮನುಷ್ಯರು ಹೋಗಲಾಗದ ಸ್ಥಳಗಳಲ್ಲೂ ಸಂಚರಿಸಿ ಮಣ್ಣಿನ ಸ್ಯಾಂಪಲ್ ಸಂಗ್ರಹಿಸುವ ಮೈನಿಂಗ್ ರೋಬೋಟ್ ಇವುಗಳಲ್ಲಿ ವಿಶೇಷ ಆಕರ್ಷಣೆಯಾಗಿದೆ. ಚಿನ್ನ, ಕಬ್ಬಿಣದಂತಹ ಖನಿಜಗಳ ಗುಣಮಟ್ಟ ಪತ್ತೆಹಚ್ಚಲು ಈ ತಂತ್ರಜ್ಞಾನ ನೆರವಾಗಲಿದೆ ಎನ್ನಲಾಗಿದೆ.
ಇನ್ನು ಸೈನಿಕರಿಗೆ ಅಗತ್ಯ ವಸ್ತುಗಳನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿರುವ ನಾಲ್ಕು ಕಾಲಿನ ರೋಬೋಟ್‌ಗಳೂ ಪ್ರದರ್ಶನದ ವಿಶೇಷವಾಗಿತ್ತು. ಈ ರೋಬೋಟ್‌ಗಳು ಸೇನಾ ಕಾರ್ಯಾಚರಣೆಗಳಿಗೂ ನೆರವಾಗಬಲ್ಲವಾಗಿದ್ದು, ಬೆಟ್ಟ, ಗುಡ್ಡ, ಮರಳುಗಾಡಿನಂತಹ ಕಠಿಣ ಪ್ರದೇಶಗಳಲ್ಲೂ ಸಂಚರಿಸುವ ಜೀಪ್ ಮಾದರಿಯ ರೋಬೋಟ್ ಕೂಡ ಗಮನಸೆಳೆದಿದೆ. ಸುಮಾರು 20 ಕೆ.ಜಿ. ತೂಕದ ಈ ರೋಬೋಟ್ 15 ಕೆ.ಜಿ. ವರೆಗೂ ಭಾರ ಹೊರುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: 29ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್ಗೆ ಸಿಎಂ ಡಿಕೆ ಶಿವಕುಮಾರ್ ಚಾಲನೆ
ಮನುಷ್ಯನಿಗೆ ಬಾಡಿಗಾರ್ಡ್‌ನಂತೆ ರಕ್ಷಣೆ ನೀಡುವ ಹ್ಯೂಮನಾಯ್ಡ್ ರೋಬೋಟ್ ಕೂಡ ಎಲ್ಲರನ್ನೂ ಬೆರಗುಗೊಳಿಸಿದೆ. ಎದುರಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿರುವ ಈ ರೋಬೋಟ್, ಮನುಷ್ಯರಂತೆ ನಡೆಯುತ್ತೆ, ಕುಣಿಯುತ್ತೆ. ತರ್ಲೆ ಮಾಡಿದ್ರೆ ಹೊಡೆಯುತ್ತೆ! ಮತ್ತೊಂದೆಡೆ ಚಿಕ್ಕ ಗಾತ್ರದ ಮಾನವ ಸ್ನೇಹಿ ರೋಬೋಟ್ ತನ್ನ ಡ್ಯಾನ್ಸ್‌ನಿಂದ ಜನರನ್ನು ರಂಜಿಸುತ್ತಿದೆ. ಸ್ಪೀಕರ್, ಸಿಸಿ ಕ್ಯಾಮರಾ ಹೊಂದಿರುವ ಈ ರೋಬೋಟ್ ವಾಕಿಂಗ್‌ಗೂ ಸಾಥ್ ನೀಡಲಿದೆ.
ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಬೆಂಗಳೂರು ಟೆಕ್ ಸಮಿಟ್ ಆಯೋಜಿಸಲಾಗಿದೆ. ವಿಶ್ವದ 65ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 10 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು, 700ಕ್ಕೂ ಹೆಚ್ಚು ಭಾಷಣಕಾರರು, 1,500ಕ್ಕೂ ಹೆಚ್ಚು ಪ್ರದರ್ಶಕರು, 16 ವಿಷಯಾಧಾರಿತ ವಿಭಾಗಗಳು, 13 ವೇದಿಕೆಗಳಲ್ಲಿ 140ಕ್ಕೂ ಹೆಚ್ಚು ವಿಚಾರಗೋಷ್ಠಿಗಳು ಸಮಿಟ್ನ ಭಾಗವಾಗಿರಲಿವೆ. ದೇಶದ 100 ನಗರಗಳಿಂದ 1,000ಕ್ಕೂ ಹೆಚ್ಚು ನವೋದ್ಯಮಗಳು ಸೇರಿ ಸ್ವೀಡನ್ ಪಾಲುದಾರ ರಾಷ್ಟ್ರ, ಆಸ್ಟ್ರೇಲಿಯಾ, ಪೋಲೆಂಡ್ ಮತ್ತು ಇಟಲಿ ಬೆಂಬಲಿತ ರಾಷ್ಟ್ರಗಳು ಕೂಡ ಸಮಿಟ್‌ನಲ್ಲಿ ಪಾಲ್ಗೊಂಡಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.