
ಬೆಂಗಳೂರು, ಮೇ.15 : ಆನ್‌ಲೈನ್ ರಮ್ಮಿ ಗೇಮಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಬೆಂಗಳೂರು ಮೂಲದ ‘ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸ್’ (Gameskraft Technologies) ಕಂಪನಿಯ ಕರಾಳ ಮುಖ ಅನಾವರಣಗೊಂಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಇಡಿ ನಡೆಸಿದ ಸರಣಿ ದಾಳಿಗಳಲ್ಲಿ ಭಾರಿ ಪ್ರಮಾಣದ ಆಸ್ತಿ ಪಾಸ್ತಿಗಳನ್ನು ಜಪ್ತಿ ಮಾಡಲಾಗಿದ್ದು, ಕಂಪನಿಯ ಮೂವರು ನಿರ್ದೇಶಕರನ್ನು ಬಂಧಿಸಲಾಗಿದೆ.
ಮೇ 7 ರಿಂದ 13 ರವರೆಗೆ ಬೆಂಗಳೂರು ಮತ್ತು ದೆಹಲಿ ಎನ್‌ಸಿಆರ್‌ನಲ್ಲಿ ನಡೆದ ದಾಳಿಯಲ್ಲಿ ಸುಮಾರು 526.49 ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ಬ್ಯಾಲೆನ್ಸ್, ಮ್ಯೂಚುವಲ್ ಫಂಡ್ ಮತ್ತು ಸ್ಥಿರ ಠೇವಣಿಗಳನ್ನು ಫ್ರೀಜ್ ಮಾಡಲಾಗಿದೆ. ಜೊತೆಗೆ 3.50 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು 11 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಕಂಪನಿಯ ನಿರ್ದೇಶಕರಾದ ಪೃಥ್ವಿ ರಾಜ್ ಸಿಂಗ್, ವಿಕಾಸ್ ತನೇಜಾ ಮತ್ತು ದೀಪಕ್ ಸಿಂಗ್ ಅಹ್ಲಾವತ್ ಅವರನ್ನು ಇಡಿ ಬಂಧಿಸಿದೆ.RummyCulture, RummyPrime, Playship ಮತ್ತು RummyTime ನಂತಹ ಜನಪ್ರಿಯ ಅಪ್ಲಿಕೇಶನ್‌ಗಳ ಮೂಲಕ ಈ ಕಂಪನಿ ವ್ಯವಹಾರ ನಡೆಸುತ್ತಿತ್ತು. ಕಂಪನಿಯು ತನ್ನ ವೇದಿಕೆಯಲ್ಲಿ ಯಾವುದೇ ಬಾಟ್‌ಗಳಿಲ್ಲ, ಇದು ಪಾರದರ್ಶಕವಾಗಿದೆ ಎಂದು ಭರವಸೆ ನೀಡಿತ್ತು. ಆದರೆ, ಇಡಿ ತನಿಖೆಯ ಪ್ರಕಾರ, ಬಳಕೆದಾರರಿಗೆ ತಿಳಿಯದಂತೆ ಅವರ ವಿರುದ್ಧ ಕಂಪನಿಯೇ ಬಾಟ್‌ಗಳನ್ನು (ಕಂಪ್ಯೂಟರ್ ಪ್ರೋಗ್ರಾಂ) ಬಳಸುತ್ತಿತ್ತು. ಇದರಿಂದಾಗಿ ಸಾವಿರಾರು ಆಟಗಾರರು ಹಣ ಕಳೆದುಕೊಂಡು ಮಾನಸಿಕ ಯಾತನೆ ಅನುಭವಿಸಿದ್ದಾರೆ.
ಇದನ್ನೂ ಓದಿ: CNG Price Hike: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಸಿಎನ್ಜಿ ಕೆಜಿಗೆ 2 ರೂಪಾಯಿ ಹೆಚ್ಚಳ
ಆನ್‌ಲೈನ್ ಗೇಮಿಂಗ್ ನಿಷೇಧವಿರುವ ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಂತಹ ರಾಜ್ಯಗಳ ಬಳಕೆದಾರರಿಗೂ ಆಡಲು ಅವಕಾಶ ನೀಡಲು ಕಂಪನಿಯು ಅವರ ಜಿಯೋ ಲೊಕೇಶನ್ ಅನ್ನು ಟ್ಯಾಂಪರ್ (ತಿದ್ದುಪಡಿ) ಮಾಡಿತ್ತು. ಆಟಗಾರರಿಂದ ಕಮಿಷನ್ ರೂಪದಲ್ಲಿ ಪಡೆದ ಕೋಟ್ಯಂತರ ರೂಪಾಯಿ ಲಾಭವನ್ನು ವಿದೇಶಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಹಣ ವರ್ಗಾವಣೆ ಮಾಡಲಾಗಿತ್ತು ಎಂದು ತನಿಖೆ ಬಹಿರಂಗಪಡಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ