Petrol, Diesel Price Hike: ಪೆಟ್ರೋಲ್, ಡೀಸೆಲ್ ದರ ಭರ್ಜರಿ ಏರಿಕೆ; ಜನಸಾಮಾನ್ಯರಿಗೆ ಬೆಲೆ ಏರಿಕೆಯ ಆಘಾತ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಜನಸಾಮಾನ್ಯರಿಗೆ ಬೆಲೆ ಏರಿಕೆ ಹೊಡೆತ ಎದುರಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ತಲಾ 3 ರೂಪಾಯಿಯಷ್ಟು ಏರಿಕೆಯಾಗಿದೆ. ಶುಕ್ರವಾರ ಬೆಳಗ್ಗೆಯಿಂದಲೇ ಈ ಪರಿಷ್ಕೃತ ದರ ಅಸ್ತಿತ್ವಕ್ಕೆ ಬಂದಿದೆ. ಇಂಧನ ಮಿತ ವ್ಯಯಕ್ಕೆ ಕರೆ ನೀಡುವ ಮೂಲಕ ಪ್ರಧಾನಿಯವರು ಕೆಲವು ದಿನಗಳ ಹಿಂದಷ್ಟೇ ಬೆಲೆ ಏರಿಕೆ ಸುಳಿವು ನೀಡಿದ್ದರು.

ನವದೆಹಲಿ, ಮೇ 15: ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿ ಲೀಟರ್‌ಗೆ 3 ರೂ. ಏರಿಕೆಯಾಗಿದೆ. ಇಂಧನ ದರ ಏರಿಕೆ ಬಗ್ಗೆ ತೈಲ ಕಂಪನಿಗಳು ಶುಕ್ರವಾರ ಬೆಳಗ್ಗೆ ಘೋಷಣೆ ಮಾಡಿದ್ದು, ತಕ್ಷಣದಿಂದಲೇ ಜಾರಿಗೆ ಬರಲಿದೆ. ಸದ್ಯ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ (Petrol Price) ಈಗ ಲೀಟರ್‌ಗೆ 97.77 ರೂ.ಗಳಿಂದ 94.77 ರೂ.ಗಳಿಗೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ (Diesel Price) 87.67 ರೂ.ಗಳಿಂದ 90.67 ರೂ.ಗಳಿಗೆ ಏರಿಕೆಯಾಗಿದೆ. ಆಯಾ ರಾಜ್ಯಗಳಲ್ಲಿ ಸ್ಥಳೀಯ ತೆರಿಗೆಗಳಿಗೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಲ್ಲಿ ತುಸು ವ್ಯತ್ಯಾಸವಾಗಬಹುದು.
ಮುಖ್ಯಾಂಶಗಳು
- ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸುಮಾರು 3 ರೂ. ಏರಿಕೆ, ತಕ್ಷಣದಿಂದಲೇ ಪರಿಷ್ಕೃತ ದರ ಅಸ್ತಿತ್ವಕ್ಕೆ.
- ಬೆಂಗಳೂರಿನಲ್ಲಿ 106 ರೂ. ದಾಟಿದ ಪೆಟ್ರೋಲ್ ಬೆಲೆ
- ಇಂಧನ ಬಳಕೆಗೆ ಮಿತಿ ಹೇರಲು ಪ್ರಧಾನಿ ಕರೆ ನೀಡಿದ ಕೆಲವೇ ದಿನಗಳಲ್ಲಿ ಬೆಲೆ ಏರಿಕೆ
ಬೆಂಗಳೂರಿನಲ್ಲಿ ಎಷ್ಟಾಯ್ತು ಪೆಟ್ರೋಲ್ ದರ?
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 3.27 ರೂಪಾಯಿ ಏರಿಕೆಯಾಗಿದ್ದು, ಡಿಸೇಲ್ ಬೆಲೆ ಲೀಟರ್‌ಗೆ 3.12 ರೂಪಾಯಿ ಏರಿಕೆಯಾಗಿದೆ. ಈ ಹಿಂದೆ ಪೆಟ್ರೋಲ್ ಬೆಲೆ 102.90 ರೂ. ಇತ್ತು. ಈಗ 106.17 ರೂ. ಆಗಿದೆ. ಡಿಸೇಲ್ ಬೆಲೆ 90.98 ರೂ. ಇತ್ತು. ಈಗ 94.10 ರೂ. ಆಗಿದೆ.
ಪೆಟ್ರೋಲ್, ಡೀಸೆಲ್ ದರ: ಯಾವ ನಗರದಲ್ಲಿ ಎಷ್ಟಿದೆ?
ಕೋಲ್ಕತ್ತಾದಲ್ಲಿ ಪೆಟ್ರೋಲ್ ಈಗ ಲೀಟರ್‌ಗೆ 3.29 ರೂ. ಹೆಚ್ಚಳವಾಗಿ 108.74 ರೂ.ಗೆ ಮಾರಾಟವಾಗುತ್ತಿದೆ. ಡೀಸೆಲ್ ಲೀಟರ್‌ಗೆ 3.11 ರೂ.ಗಳಷ್ಟು ಏರಿಕೆಯಾಗಿ 95.13 ರೂ.ಗೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 3.14 ರೂ. ಏರಿಕೆಯಾಗಿ 106.68 ರೂ.ಗೆ ತಲುಪಿದೆ, ಡೀಸೆಲ್ ಬೆಲೆ ಈಗ ಲೀಟರ್‌ಗೆ 3.11 ರೂ. ಏರಿಕೆಯಾಗಿ 93.14 ರೂ.ಗೆ ತಲುಪಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 2.83 ರೂ. ಏರಿಕೆಯಾಗಿ 103.67 ರೂ.ಗೆ ತಲುಪಿದೆ ಮತ್ತು ಡೀಸೆಲ್ ದರ ಲೀಟರ್‌ಗೆ 2.86 ರೂ. ಏರಿಕೆಯಾಗಿ 95.25 ರೂ.ಗೆ ತಲುಪಿದೆ.
Hike in fuel prices; Petrol prices rise from Rs 94.77 to Rs 97.77 per litre, while diesel prices increase from Rs 87.67 to Rs 90.67 per litre pic.twitter.com/sLk3rf6E42
— ANI (@ANI) May 15, 2026
ಇಂಧನ ಬೆಲೆ ಏರಿಕೆ ತಪ್ಪಿಸಿದ್ದ ತೈಲ ಕಂಪನಿಗಳು
ಮಧ್ಯಪ್ರಾಚ್ಯ ಸಂಘರ್ಷ, ಯುದ್ಧದ ಸನ್ನಿವೇಶ, ಕಚ್ಚಾ ತೈಲ ಬೆಲೆ ಭಾರೀ ಏರಿಕೆ ಇತ್ಯಾದಿಗಳ ಹೊರತಾಗಿಯೂ ಭಾರತ ಈವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ತಪ್ಪಿಸಿತ್ತು. ಬದಲಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳುತೆರಿಗೆ ಹೊಂದಾಣಿಕೆಗಳು ಮತ್ತು ಪೂರೈಕೆ ನಿರ್ವಹಣಾ ಕ್ರಮಗಳ ಮೂಲಕ ಒತ್ತಡವನ್ನು ನಿಭಾಯಿಸಿದ್ದವು.
ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಮಾಡಿದ್ದ ಕೇಂದ್ರ ಸರ್ಕಾರ
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರವು 2026 ರ ಮಾರ್ಚ್ 27 ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂಪಾಯಿಗಳಷ್ಟು ಕಡಿತಗೊಳಿಸಿತ್ತು. ಇದರಿಂದಾಗಿ ಪ್ರತಿ ಲೀಟರ್ ಪೆಟ್ರೋಲ್‌ಗೆ ಅಬಕಾರಿ ಸುಂಕ 3 ರೂಪಾಯಿಗೆ ಮತ್ತು ಡೀಸೆಲ್‌ಗೆ ಶೂನ್ಯಕ್ಕೆ ಇಳಿದಿತ್ತು. ಆದರೆ, ಇದರ ಪರಿಣಾಮವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗಿರಲಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಿಂದ ತೈಲ ಕಂಪನಿಗಳಿಗೆ ಆಗಬಹುದಾದ ನಷ್ಟವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಹಾಗೂ ಬೆಲೆ ಏರಿಕೆ ತಡೆಯುವುದಕ್ಕಾಗಿ ಸುಂಕ ಇಳಿಕೆ ನಿರ್ಧಾರ ಕೈಗೊಳ್ಳಲಾಗಿತ್ತು.
ಬೆಲೆ ಏರಿಕೆ ಸುಳಿವು ನೀಡಿದ್ದ ಕೇಂದ್ರ
ಜಾಗತಿಕ ಇಂಧನ ವ್ಯಾಪಾರ ಮಾರ್ಗಗಳಲ್ಲಿನ ಅಡಚಣೆಗಳ ಹೊರತಾಗಿಯೂ, ತಕ್ಷಣದ ಪೂರೈಕೆ ಅಡಚಣೆಯನ್ನು ತಪ್ಪಿಸಲು ಭಾರತವು ಪ್ರಸ್ತುತ ಸಾಕಷ್ಟು ಇಂಧನ ದಾಸ್ತಾನು ಹೊಂದಿದೆ ಎಂದು ಈ ವಾರದ ಆರಂಭದಲ್ಲಿ ತೈಲ ಇಲಾಖೆ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದರು. ಆದರೂ ಕಚ್ಚಾ ತೈಲ ಬೆಲೆಗಳು ಇನ್ನಷ್ಟು ಹೆಚ್ಚುತ್ತಲೇ ಇದ್ದರೆ ಮತ್ತು ಚಿಲ್ಲರೆ ಇಂಧನ ಬೆಲೆಗಳನ್ನು ಪರಿಷ್ಕರಿಸದಿದ್ದರೆ, ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು ಒಂದೇ ತ್ರೈಮಾಸಿಕದೊಳಗೆ ಸುಮಾರು 1 ಲಕ್ಷ ಕೋಟಿ ರೂ. ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದರು.
ಇದನ್ನೂ ಓದಿ: ಇನ್ನು ಡೀಸೆಲ್ಗಿಲ್ಲ ಅಬಕಾರಿ ಸುಂಕ! ಪೆಟ್ರೋಲ್ ಸುಂಕ ಭಾರಿ ಕಡಿತ: ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ
ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಸಹ ಇಂಧನ ಮಿತ ಬಳಕೆ ಹಾಗೂ ಚಿನ್ನ ಖರೀದಿ ನಿಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದ್ದರು ಎಂಬುದು ಗಮನಾರ್ಹ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:04 am, Fri, 15 May 26




