ಸರ್ಕಲ್​ ಇನ್​ಸ್ಪೆಕ್ಟರ್​ ಮೇಲೆ ಹಲ್ಲೆ ಮಾಡಿ 8 ಮಂದಿಯ ಬಂಧನ: ಗೃಹ ಸಚಿವ ಆರಗ ಜ್ಞಾನೇಂದ್ರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 27, 2022 | 11:00 AM

ದುಷ್ಕರ್ಮಿಗಳು ಕಸಿದುಕೊಂಡಿದ್ದ ಶ್ರೀಮಂತ್ ಇಲ್ಲಾಳ್ ಅವರ ಸರ್ವೀಸ್ ರಿವಾಲ್ವರ್ ವಶಪಡಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸರ್ಕಲ್​ ಇನ್​ಸ್ಪೆಕ್ಟರ್​ ಮೇಲೆ ಹಲ್ಲೆ ಮಾಡಿ 8 ಮಂದಿಯ ಬಂಧನ: ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
Follow us on

ಬೆಂಗಳೂರು: ಗಾಂಜಾ ದಂದೆಕೋರರ ಮೇಲೆ ಕಾರ್ಯಾಚರಣೆ ನಡೆಸಲು ತೆರಳಿದ್ದ ಕಲಬುರ್ಗಿ ಗ್ರಾಮಾಂತರ ಇನ್​ಸ್ಪೆಕ್ಟರ್​ ಶ್ರೀಮಂತ್ ಇಲ್ಲಾಳ್ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದುಷ್ಕರ್ಮಿಗಳು ಕಸಿದುಕೊಂಡಿದ್ದ ಶ್ರೀಮಂತ್ ಇಲ್ಲಾಳ್ ಅವರ ಸರ್ವೀಸ್ ರಿವಾಲ್ವರ್ ವಶಪಡಿಸಿಕೊಳ್ಳಲಾಗಿದೆ. ಗಾಯಾಳು ಸಿಪಿಐಗೆ ಚಿಕಿತ್ಸೆ ಮುಂದುವರಿದಿದೆ. ಅವರಿಗೆ ಇನ್ನೂ ಪ್ರಜ್ಞೆ ಬಂದಿಲ್ಲ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಪೊಲೀಸರ ಬಂಧನದಲ್ಲಿರುವ 8 ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಸೆ 23ರಂದು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ಠಾಣಾ ವ್ಯಾಪ್ತಿಯಲ್ಲಿ ಸುಮಾರು 50 ಮಂದಿ ಗಾಂಜಾ ದಂಧೆಕೋರರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ತುರೂರಿ ಸಮೀಪದ ವಾಡಿ ಹಾಗೂ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಬಸವಕಲ್ಯಾಣ ತಾಲ್ಲೂಕಿನ ಹೊನ್ನಳಿಯ ಜಮೀನಿನಲ್ಲಿ ಪೊಲೀಸರು ಕಾರ್ಯಾಚರಣೆಗೆ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿತ್ತು.

ಗಾಂಜಾ ಮಾರಾಟಗಾರ ಸಂತೋಷ್ ಎಂಬಾತನನ್ನು ಬಂಧಿಸಿದ್ದ ಪೊಲೀಸರಿಗೆ ವಿಚಾರಣೆ ವೇಳೆ ಮಹಾರಾಷ್ಟ್ರದ ಉಮ್ಮರ್ಗಾ ತಾಲೂಕಿನ ತರೂರಿ ಬಳಿ ಗಾಂಜಾ ಬೆಳೆಯುವ ಗ್ಯಾಂಗ್ ಇರುವುದು ತಿಳಿದುಬಂದಿತ್ತು. ಗಾಂಜಾ ಪತ್ತೆ ಮಾಡಲು ಶ್ರೀಮಂತ ಇಲ್ಲಾಳ್ ಮತ್ತು ಸಿಬ್ಬಂದಿ ಹೋಗಿದ್ದರು. ಈ ವೇಳೆ ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ದಿಢೀರನೆ ನಲವತ್ತು ಜನರ ತಂಡ ಸಿಪಿಐ ಶ್ರೀಮಂತ ಇಲ್ಲಾಳ ಮೇಲೆ ದಾಳಿ ಮಾಡಿತ್ತು. ತೀವ್ರವಾಗಿ ಗಾಯಗೊಂಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆರೋಗ್ಯ ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಗಾಯಾಳು ಸಿಪಿಐ ಶ್ರೀಮಂತ್ ಇಲ್ಲಾಳ್ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಏರ್​ಲಿಫ್ಟ್ ಮಾಡಲಾಯಿತು.

ಸುಮಾರು 40 ಜನರ ತಂಡ ಏಕಾಏಕಿ ದಾಳಿ ನಡೆಸಿದ್ದರಿಂದ ಶ್ರೀಮಂತ್ ಇಲ್ಲಾಳ್ ಅವರ ಮುಖ, ಎದೆ ಮತ್ತು ಬೆನ್ನಿನ ಮೇಲೆ ಗಂಭೀರ ಗಾಯಗಳಾಗಿವೆ. ಮಹಾರಾಷ್ಟ್ರ ಪೊಲೀಸರು ಹಾಗೂ ಬಸವಕಲ್ಯಾಣ ತಾಲೂಕಿನ ಮಂಠಾಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಶ್ರೀಮಂತ ಇಲ್ಲಾಳರನ್ನು ರಕ್ಷಿಸಿದ್ದರು.

Published On - 11:00 am, Tue, 27 September 22