ಬೆಂಗಳೂರು: ಕೇರಳದಲ್ಲಿ ಮಕ್ಕಳಿಗೆ ಟೊಮೆಟೊ ಜ್ವರ (Tomato Flu) ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Dr K Sudhakar) ಕೇರಳ ಗಡಿಭಾಗದಲ್ಲಿ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ. ಟೊಮೆಟೊ ಜ್ವರಕ್ಕೂ ಕೊವಿಡ್‌ಗೂ ಯಾವುದೇ ಸಂಬಂಧವಿಲ್ಲ. ಕೇರಳದ ಗಡಿಭಾಗದಲ್ಲಿ ಎಚ್ಚರಿಕೆ ವಹಿಸಲು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೋಗದ ಲಕ್ಷಣ ಕಂಡುಬಂದರೆ ತಕ್ಷಣ ಟೆಸ್ಟ್ ಮಾಡಿಸಬೇಕು ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಇದು ಈ ಹಿಂದಿನಿಂದಲೂ ಇರುವ ವೈರಸ್. ಹೊಸದಾಗಿ ಕಾಣಿಸಿಕೊಂಡಿರುವುದಲ್ಲ. ಐದು ವರ್ಷದ ಒಳಗಿನ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಕಾಯಿಲೆ ಸಂಬಂಧ ನಾನು ಕೇರಳದ ಆರೋಗ್ಯ ಸಚಿವರ ಜೊತೆಗೂ ಮಾತನಾಡಿದ್ದೇನೆ. ಈ ಸೋಂಕು ಇಡೀ ದೇಶದಲ್ಲಿ ಕಾಣಿಸಿಕೊಂಡಿಲ್ಲ. ಕೇವಲ ಕೇರಳ ರಾಜ್ಯದಲ್ಲಿ ಮಾತ್ರ ಕಾಣಿಸಿಕೊಂಡಿದೆ. ಗಡಿಭಾಗದ ಜಿಲ್ಲೆಗಳಿಗೆ ಅನ್ವಯ ಆಗುವಂತೆ ಕಟ್ಟೆಚ್ಚರ ವಹಿಸಲು ಈಗಾಗಲೇ ಆದೇಶ ಮಾಡಿದ್ದೆ, ಮತ್ತೊಮ್ಮೆ ಸೂಚನೆ ನೀಡುತ್ತೇನೆ ಎಂದರು. ಮಕ್ಕಳಿಗೆ ಜ್ವರ ಕಾಣಿಸಿಕೊಂಡರೆ ಟೊಮೆಟೊ ಪ್ಲೂ ಚೆಕ್ ಮಾಡಿ ಎಂದು ಹೇಳಿದ್ದೇನೆ ಎಂದರು.
ಮಾಹಿತಿ ಸಂಗ್ರಹಕ್ಕೆ ಸೂಚನೆ
ಟೊಮೆಟೊ ಜ್ವರ ಆತಂಕದ ಹಿನ್ನೆಲೆಯಲ್ಲಿ ಕೇರಳ ಗಡಿಯಿಂದ ಬರುವ ಪ್ರಯಾಣಿಕರ ಬಗ್ಗೆ ಮಾಹಿತಿ ಸಂಗ್ರಹಿಸಲು ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್ ಅಗತ್ಯ ನಿರ್ದೇಶನಗಳನ್ನು ಕೇರಳ ಗಡಿಯ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. ಗಡಿ ಜಿಲ್ಲೆಗಳಲ್ಲಿ ಹೆಚ್ಚು ನಿಗಾವಹಿಸಬೇಕು. ಚರ್ಮದ ಮೇಲಿನ ತುರಿಕೆಯಂಥ ಲಕ್ಷಣಗಳು ಕಂಡು ಬಂದರೆ ಅದನ್ನು ದಾಖಲಿಸಿ, ಟೆಸ್ಟ್ ಮಾಡಿಸಬೇಕು ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಈವರೆಗೆ ಟೊಮೆಟೊ ಫ್ಲೂ ಪ್ರಕರಣ ಕಂಡುಬಂದಿಲ್ಲ. ಇದು ಸೆಲ್ಫ್ ಲಿಮಿಟಿಂಗ್ (ಸ್ವಯಂ ಸೋಂಕು ಇಳಿಯುವ) ಕಾಯಿಲೆ. ವ್ಯವಸ್ಥಿತ ತನಿಖೆಯಿಂದ ಗುಣವಾಗಲಿದೆ. ರೋಗ ಲಕ್ಷಣಗಳು ಕಂಡು ಬಂದರೆ ಹೇಗೆ ಟೆಸ್ಟ್ ಮಾಡಬೇಕು ಎನ್ನುವ ಬಗ್ಗೆ ಇಂದು ಮಾಹಿತಿ ಸಿಗುತ್ತದೆ. ಇದಕ್ಕೆ ನಿರ್ದಿಷ್ಟವಾಗಿ ಯಾವುದೇ ಚಿಕಿತ್ಸೆ ಇಲ್ಲ. ಈ ಕಾಯಿಲೆಯಿಂದ ಸಾವನ್ನಪ್ಪಿರುವ ಬಗ್ಗೆಯೂ ಯಾವುದೇ ವರದಿಯಿಲ್ಲ ಎಂದು ತಿಳಿಸಿದ್ದಾರೆ.
ಈ ಕಾಯಿಲೆ ಹರಡುವ ವಿಧಾನಗಳ ಬಗ್ಗೆ ನಮ್ಮ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ. ಕರ್ನಾಟಕದಲ್ಲಿ ಸೋಂಕು ಹರಡುವುದು ಪತ್ತೆಯಾದರೆ ಕೊವಿಡ್ಗೆ ತೆಗೆದುಕೊಳ್ಳುವಂತೆ ಪ್ರತ್ಯೇಕವಾಸದ (ಐಸೋಲೇಷನ್) ನಿಯಮಗಳನ್ನು ಅನುಸರಿಸಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಹೇಳಿದ್ದಾರೆ.
ಟೊಮೆಟೊ ಜ್ವರದ ಕೆಲವು ಪ್ರಮುಖ ಲಕ್ಷಣಗಳು
ವಿಪರೀತ ಜ್ವರ, ನಿರ್ಜಲೀಕರಣ, ದದ್ದುಗಳು, – ಚರ್ಮದ ತುರಿಕೆ, ಕೈ ಮತ್ತು ಕಾಲುಗಳ ಚರ್ಮದ ಬಣ್ಣವೂ ಬದಲು – ಗುಳ್ಳೆಗಳು, ಕಿಬ್ಬೊಟ್ಟೆಯ ಸೆಳೆತ, ವಾಕರಿಕೆ, ವಾಂತಿ – ಅತಿಸಾರ, ಸ್ರವಿಸುವ ಮೂಗು, ಕೆಮ್ಮು, ಸೀನು, – ಆಯಾಸ ಮತ್ತು ದೇಹದಲ್ಲಿ ನೋವು
ಮುನ್ನೆಚ್ಚರಿಕೆ ಮತ್ತು ಚಿಕಿತ್ಸೆ
ಟೊಮೆಟೊ ಫ್ಲೂ ಕುರಿತು ಮಾಹಿತಿ ನೀಡಿರುವ ಡಾ.ಅರುಣ, ‘ಇದು ತನ್ನಿಂತಾನೆ ಕಡಿಮೆಯಾಗುವ ಸೋಂಕು. ಯಾವುದೇ ನಿರ್ದಿಷ್ಟ ಔಷಧಿ ಇಲ್ಲ’ ಎಂದು ಹೇಳಿದ್ದಾರೆ. ‘ಇದು ವೇಗವಾಗಿ ಹರಡುವ ಸೋಂಕಾಗಿರುವ ಕಾರಣ ಟೊಮೆಟೊ ಫ್ಲೂ ಬಂದವರನ್ನು ಪ್ರತ್ಯೇಕವಾಗಿ ಇರಿಸಬೇಕಾಗುತ್ತದೆ. ಸೋಂಕಿನಿಂದ ಉಂಟಾಗುವ ದದ್ದುಗಳನ್ನು ಕೆರೆದುಕೊಳ್ಳಲು ಮಕ್ಕಳಿಗೆ ಬಿಡಬಾರದು. ಸೋಂಕಿತರ ಬಟ್ಟೆ ಮತ್ತು ಅವರು ಬಳಸುವ ಪಾತ್ರೆಗಳನ್ನು ಸರಿಯಾದ ರೀತಿ ಸ್ವಚ್ಛಗೊಳಿಸಬೇಕು. ದ್ರವಾಹಾರ ಸೇವನೆಯಿಂದ ನಿರ್ಜಲೀಕರಣದ ಸಮಸ್ಯೆ ಕಡಿಮೆಯಾಗುತ್ತದೆ. ಸೋಂಕಿನ ಲಕ್ಷಣ ಆಧರಿಸಿ ವೈದ್ಯರು ಚಿಕಿತ್ಸೆ ನಿರ್ಧರಿಸುತ್ತಾರೆ’ ಎಂದು ಹೇಳಿದ್ದಾರೆ.
ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:30 pm, Thu, 12 May 22