ಬೆಂಗಳೂರು: ಪತ್ನಿಯನ್ನು ಕೊಂದ ಆರೋಪಿ ಪತಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು 7 ವರ್ಷಗಳ ಕಠಿಣ ಶಿಕ್ಷೆಗೆ ಮಾರ್ಪಾಡು ಮಾಡಿ ಕರ್ನಾಟಕ ಹೈಕೋರ್ಟ್ (Karnataka High Court) ಆದೇಶ ಹೊರಡಿಸಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವೆಂಗಲ ಹೋಬಳಿಯ ಬೊಮ್ಮನಹಳ್ಳಿಯ ರಾಜೇಶ್ ಬಿನ್ ವೆಂಕಟರಮಣಪ್ಪ (39) ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ, ಆರೋಪಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಮಾರ್ಪಡಿದ್ದಿ, ಆರೋಪಿಯು ತನ್ನ ಹೆಣ್ಣು ಮಕ್ಕಳ ಹೆಸರಿಗೆ 3 ಲಕ್ಷ ಮೊತ್ತವನ್ನು ಠೇವಣಿಯಾಗಿ ಇರಿಸಬೇಕು ಎಂದು ನಿರ್ದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ಸಿ.ಎಚ್.ಹನುಮಂತರಾಯ ಅವರು, ’ಆರೋಪಿಯು ತನ್ನ ಹೆಂಡತಿಯನ್ನು ಬೆಳಗಿನ ಜಾವದ 4 ಗಂಟೆಯಲ್ಲಿ, ಗ್ರಾಮದ ಹೊರ ವಲಯದ ಹೊಲದಲ್ಲಿ ಪರಪುರುಷನ ಜೊತೆ ಇದ್ದುದ್ದನ್ನು ನೋಡಿದ್ದ. ಈ ವೇಳೆ ಉಂಟಾದ ಗಂಭೀರ ಮತ್ತು ಹಠಾತ್ ಪ್ರಚೋದನೆಯಿಂದ ಸ್ವಯಂ ನಿಯಂತ್ರಣ ಹಾಗೂ ಮಾನಸಿಕ ಸಮತೋಲನ ಕಳೆದುಕೊಂಡು ಈ ಹತ್ಯೆ ನಡೆಸಿದ್ದಾನೆ. ಅಂತೆಯೇ, ಆತ ಘಟನಾ ಸ್ಥಳಕ್ಕೆ ನಿರಾಯುಧನಾಗಿ ಹೋಗಿದ್ದ. ಹೆಂಡತಿಯನ್ನು ಕೊಲೆ ಮಾಡುವ ಯಾವುದೇ ಉದ್ದೇಶ ಹೊಂದಿರಲಿಲ್ಲ. ಹೀಗಾಗಿ, ಇದನ್ನು ಕೊಲೆಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದರು. ಈ ವಾದಾಂಶವನ್ನು ಮಾನ್ಯ ಮಾಡಿರುವ ನ್ಯಾಯಪೀಠ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದೆ.
ಇದನ್ನೂ ಓದಿ: ಮೈಸೂರು ಕೇಂದ್ರ ಕಾರಾಗೃಹದ ಕೈದಿಗಳಿಗೆ ಬಿಡುಗಡೆ ಭಾಗ್ಯ; ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 24 ಮಂದಿ ರಿಲೀಸ್
ದೊಡ್ಡಬೆಳವೆಂಗಲ ಹೋಬಳಿಯ ಬೊಮ್ಮನಹಳ್ಳಿ ನಿವಾಸಿ ರಾಜೇಶ್ ತಪಸೀಹಳ್ಳಿಯ ಲಕ್ಷ್ಮಿ ಎನ್ನುವವರ ಜೊತೆ 2010ರ ಅಕ್ಟೋಬರ್ 22ರಂದು ನೆರವೇರಿತ್ತು. ತನಗೆ ಈ ವಿವಾಹ ಇಷ್ಟವಿಲ್ಲವೆಂದು, ತಾನು ರಾಜೇಶನ ಜೊತೆ ಬಾಳ್ವೆ ಮಾಡುವುದಿಲ್ಲ ಎಂದು ಲಕ್ಷ್ಮಿ 2010ರ ಸೆಪ್ಟೆಂಬರ್‌ನಲ್ಲಿ ಹಿರಿಯರ ಸಮ್ಮುಖದಲ್ಲಿ ನಡೆದಿದ್ದ ಪಂಚಾಯಿತಿಯಲ್ಲಿ ತಿಳಿಸಿದ್ದರು.
ಈ ಸಮಯದಲ್ಲಿ ಆಕೆ, ’ರಾಜೇಶ್ ಎರಡನೆ ಮದುವೆಯಾಗಲು ನನಗೆ ಯಾವುದೇ ಅಭ್ಯಂತರವಿಲ್ಲ’ ಎಂದು ಒಪ್ಪಿಗೆ ಪತ್ರ ಬರೆದುಕೊಟ್ಟಿದ್ದರು. ಅದರಂತೆ ರಾಜೇಶ್ ಎರಡನೆ ಮದುವೆಯಾಗಿದ್ದ. ಲಕ್ಷ್ಮಿಗೆ ಒಂದು ಹೆಣ್ಣು ಮಗು ಜನಿಸಿತ್ತು. ನಂತರ ಉಂಟಾದ ಕೌಟುಂಬಿಕ ವ್ಯಾಜ್ಯದಲ್ಲಿ ರಾಜೇಶ್ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ ಸೆಕ್ಷನ್ 498ಎ ಅನುಸಾರ 2015ರಲ್ಲಿ ಲಕ್ಷ್ಮಿ ಪ್ರಕರಣ ದಾಖಲಿಸಿದ್ದರು. ಜೀವನ ನಿರ್ವಹಣೆಗಾಗಿ ಲಕ್ಷ್ಮಿ ಸಲ್ಲಿಸಿದ್ದ ಅರ್ಜಿಗೆ ಅನುಗುಣವಾಗಿ ನ್ಯಾಯಾಲಯ ಪ್ರತಿ ತಿಂಗಳೂ 2 ಸಾವಿರ ರೂ. ನೀಡುವಂತೆ ಆದೇಶಿಸಿತ್ತು.
ಈ ಮಧ್ಯೆ ಗ್ರಾಮದ ಹಿರಿಯರು ಹಾಗೂ ಲಕ್ಷ್ಮಿ ಮನೆಯವರು ನಡೆಸಿದ್ದ ರಾಜಿ ಪಂಚಾಯಿತಿಯಲ್ಲಿ ಲಕ್ಷ್ಮಿಗೆ ಬೇರೆ ಮನೆ ಕಟ್ಟಿಸಿಕೊಡುವಂತೆ ಹೇಳಿದ್ದನ್ನು ರಾಜೇಶ ಒಪ್ಪಿದ್ದ. ಇದಕ್ಕನುಗುಣವಾಗಿ ಲಕ್ಷ್ಮಿಗೆ ಹೊಸ ಮನೆ ಕಟ್ಟಿಸಿಕೊಟ್ಟಿದ್ದಲ್ಲದೆ, ಇಬ್ಬರ ಜೊತೆಗೂ ಸಂಸಾರ ನಡೆಸುತ್ತಿದ್ದ. ಲಕ್ಷ್ಮಿ 2018ರ ಫೆಬ್ರುವರಿ 8ರಂದು ತವರು ಮನೆಯಿಂದ ರಾಜೇಶ್ ಮನೆಗೆ ಬಂದಿದ್ದ. ಅಂದು ಬೆಳಗಿನ ಜಾವ 4 ಗಂಟೆಯಲ್ಲಿ ಲಕ್ಷ್ಮಿ ಪಕ್ಕದಲ್ಲಿ ಇಲ್ಲದೇ ಇದ್ದುದನ್ನು ಗಮನಿಸಿದ್ದ ರಾಜೇಶ್ ಹೆಂಡತಿಯನ್ನು ಹುಡುಕಿಕೊಂಡು ಹೊರಟಿದ್ದ.
ಈ ವೇಳೆ ವಾಣಿಗರಹಳ್ಳಿ ಬಳಿ ಹೊಲದಲ್ಲಿ ಯಾರೋ ಮಾತನಾಡುವುದು ಕೇಳಿಸಿ ಒಳ ಹೋಗಿ ನೋಡಿದಾಗ, ಲಕ್ಷ್ಮಿ ಪರಪುರುಷನ ಜೊತೆಯಲ್ಲಿ ಇರುವುದನ್ನು ಕಂಡು ಕುಪಿತರಾಗಿದ್ದ. ಅವಳು ತೊಟ್ಟಿದ್ದ ವೇಲ್‌ನಿಂದಲೇ ಅವಳ ಕುತ್ತಿಗೆಯನ್ನು ಬಿಗಿದು ಅವಳನ್ನು ಕೊಲೆ ಮಾಡಿದ್ದ. ಈ ವೇಳೆ ಆಕೆಯ ಜೊತೆಗಿದ್ದ ಪರಪುರುಷ ಸ್ಥಳದಿಂದ ಪರಾರಿಯಾಗಿದ್ದ.
ಮೃತ ಲಕ್ಷ್ಮಿಯ ದೇಹವನ್ನು ರಾಜೇಶ್ ಅಲ್ಲೇ ಮರದ ಬುಡದಲ್ಲಿ ಎಲೆಗಳನ್ನು ಮುಚ್ಚಿ ಮನೆಗೆ ಬಂದಿದ್ದ. ಮರುದಿನ ಬೆಳಿಗ್ಗೆ ತನ್ನ ಬಾಲ್ಯದ ಗೆಳೆಯನ ಬಳಿ ಹೋಗಿ ನನ್ನ ಹೆಂಡತಿ ಕಾಣಿಸುತ್ತಿಲ್ಲ ಎಂದು ಹೇಳಿ, ಹೆಂಡತಿ ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದ. ವಿಷಯ ತಿಳಿದ ಲಕ್ಷ್ಮಿಯ ಮನೆಯವರು ಆಕೆಗಾಗಿ ಹುಡುಕಾಡುತ್ತಾ, ’ಅವಳಿಗೇನಾದರೂ ಆಗಿದ್ದರೆ ನಿನ್ನನ್ನು ಕತ್ತರಿಸಿಬಿಡುತ್ತೇವೆ‘ ಎಂದು ಆರೋಪಿ ರಾಜೇಶ್‌ನನ್ನು ಎಚ್ಚರಿಸಿದ್ದರು.
ಇದನ್ನೂ ಓದಿ: ಅತ್ಯಾಚಾರಿ ಆರೋಪಿಗೆ 20 ವರ್ಷ ಜೈಲು, ಮೃತಳ ಕುಟುಂಬಕ್ಕೆ 9 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಸೂಚನೆ
ಇದರಿಂದ ಭಯಗೊಂಡ ರಾಜೇಶ್, ಹೆಣ ಏನಾದರೂ ಇವರಿಗೆ ದೊರೆತರೆ, ನನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆಣವನ್ನು ಬಚ್ಚಿಟ್ಟಿದ್ದ ಸ್ಥಳಕ್ಕೆ ಹೋಗಿ ಅಡಿಕೆ ಸುಲಿಯುವ ಕತ್ತಿಯಿಂದ ಹೆಣವನ್ನು ನಾಲ್ಕು ಭಾಗಗಳಾಗಿ ತುಂಡರಿಸಿದ್ದ. ನಂತರ ಅಲ್ಲೇ ಇದ್ದ ಗುಂಡಸಂದ್ರ ಕೆರೆ ಪೈಪ್‌ಲೈನ್ ಜಾಗದಲ್ಲಿ ನೆಲ ಅಗೆದು ಮಣ್ಣಿನಲ್ಲಿ ಹೂತು ಹಾಕಿದ್ದ.
ಆದರೆ, ತಾನು ಮಾಡಿದ ಅಪರಾಧವನ್ನು ಮುಚ್ಚಿಡಲು ಮನಸಿಲ್ಲದೆ, ಪುನಃ ತನ್ನ ಗೆಳೆಯ ರಾಜಣ್ಣನ ಬಳಿ ಹೋಗಿ ನಡೆದ ಸಂಗತಿಯನ್ನೆಲ್ಲ ವಿವರಿಸಿ, ಇದನ್ನು ಪೊಲೀಸರಿಗೆ ತಿಳಿಸುವಂತೆ ಹೇಳಿದ್ದ. ರಾಜಣ್ಣ ದಾಖಲಿಸಿದ ದೂರಿನ ಮೇರೆಗೆ ದೊಡ್ಡಬೆಳವಂಗಲ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಆರೋಪಿ ರಾಜೇಶನನ್ನು ಬಂಧಿಸಿದ್ದರು.
ನಂತರ ಮ್ಯಾಜಿಸ್ಟ್ರೇಟ್ ಸಮಕ್ಷಮದಲ್ಲಿ ಆರೋಪಿ ತುಂಡರಿಸಿ ಹೂತು ಹಾಕಿದ್ದ ದೇಹದ ಭಾಗಗಳನ್ನು ಹೊರ ತೆಗೆದು ತನಿಖೆ ಕೈಗೊಳ್ಳಲಾಗಿತ್ತು. ತನಿಖೆ ಪೂರ್ಣಗೊಂಡ ನಂತರ ಆರೋಪಿಯ ವಿರುದ್ಧ ಐಪಿಸಿ ಕಲಂ 302, 201 ಮತ್ತು 203ರ ಅಡಿಯಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.
ವಿಚಾರಣೆ ನಡೆಸಿದ್ದ ದೊಡ್ಡಬಳ್ಳಾಪುರ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಐಪಿಸಿ ಸೆಕ್ಷನ್ 302, 201 ಹಾಗೂ 203 ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ 45 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದರು. ಈ ಕುರಿತಂತೆ ರಾಜೇಶ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:48 am, Fri, 26 May 23