ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಹೈಕೋರ್ಟ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿತು. ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹಾಜರಾಗಿದ್ದರು.
ಹೈಕೋರ್ಟ್ ಆದೇಶಗಳನ್ನು ಬಿಬಿಎಂಪಿ ಪಾಲಿಸುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು, ಹಲವು ಪ್ರಕರಣಗಳಲ್ಲಿ ಈ ಅಂಶ ನಮ್ಮ ಗಮನಕ್ಕೆ ಬಂದಿದೆ. ಈವರೆಗೆ ಎಷ್ಟು ಅಕ್ರಮ ಕಟ್ಟಡ ನೆಲಸಮ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಬಿಬಿಎಂಪಿ ಪರ ಹೈಕೋರ್ಟ್ನಲ್ಲಿ ಹಾಜರಿದ್ದ ವಕೀಲ ನಂಜುಂಡರೆಡ್ಡಿ ವಾದ ಮಂಡಿಸಿ, 2020ರ ನಂತರ ನಿರ್ಮಾಣವಾದ 5,905 ಕಟ್ಟಡಗಳ ಸಮೀಕ್ಷೆ ಮಾಡಲಾಗಿದೆ. ಈ ಪೈಕಿ 4,279 ಕಟ್ಟಡಗಳು ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗಿವೆ. ಈ ಕಟ್ಟಡಗಳಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ 2,591 ಕಟ್ಟಡಗಳ ಸರ್ವೆ ಬಾಕಿಯಿದೆ. ನಕ್ಷೆಯಿಲ್ಲದೆ ನಿರ್ಮಾಣವಾದ ಕಟ್ಟಡಗಳ ಸರ್ವೆ ಆರಂಭವಾಗಿಲ್ಲ. ಅಕ್ರಮ ಸಕ್ರಮ ಕಾಯ್ದೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿಯಿವೆ ಎಂದು ವಿವರಿಸಿದರು.
ಆದರೆ ಬಿಬಿಎಂಪಿ ನೀಡಿರುವ ಪ್ರಮಾಣಪತ್ರ ತೃಪ್ತಿಕರವಾಗಿಲ್ಲ ಎಂದ ಹೈಕೋರ್ಟ್, 2019ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾದ ಮೇಲೆಯೂ ಕ್ರಮ ಕೈಗೊಂಡಿಲ್ಲ. ನಕ್ಷೆಯಿಲ್ಲದ ಕಟ್ಟಡಗಳನ್ನು ಗಮನಿಸಿಲ್ಲ. ಅಕ್ರಮ ಕಟ್ಟಡ ನೆಲಸಮ ಮಾಡಲು ಹೆದರುತ್ತಿರುವುದೇಕೆ ಎಂದು ಪ್ರಶ್ನಿಸಿತು. ಇದು ತೀರಾ ಆಘಾತಕಾರಿ ವಿಚಾರ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳು, ಬೇಗ ಕ್ರಮ ಕೈಗೊಂಡರೆ ನಿಮಗೂ ಒಳ್ಳೆಯದು. ಸಾರ್ವಜನಿಕ ಪ್ರದೇಶಗಳಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಫೋಟೊ ಸಹಿತ ವರದಿ ಸಲ್ಲಿಸಿ ಎಂದು ಸೂಚಿಸಿದರು. ವರದಿ ಸಲ್ಲಿಕೆಗೆ ಡಿಸೆಂಬರ್ 9ರ ಗಡುವು ನೀಡಿದ ಹೈಕೋರ್ಟ್ ಈ ಹೊತ್ತಿಗೆ ಸಮೀಕ್ಷೆಯನ್ನೂ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿತು.
ಇದನ್ನೂ ಓದಿ: ತೆರಿಗೆ ವಿನಾಯ್ತಿ ಕೇಸ್ನಲ್ಲಿ ನ್ಯಾಯಾಲಯದ ಕಟು ಟೀಕೆಯಿಂದ ಮನನೊಂದ ವಿಜಯ್; ಹೈಕೋರ್ಟ್ ಮೊರೆ ಹೋದ ನಟ
ಇದನ್ನೂ ಓದಿ: Aryan Khan: ಆರ್ಯನ್ ಖಾನ್ ವಕೀಲರು ಮತ್ತೆ ಬದಲು; ಇಂದು ಮುಂಬೈ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿಯ ವಿಚಾರಣೆ