ಬೆಂಗಳೂರು, ಆ.13: ಆಗಸ್ಟ್ 15ರಂದು 76ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ(Independence Day) ಹಿನ್ನೆಲೆ ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ(Manik Shah Parade Ground) ಭರ್ಜರಿ ಸಿದ್ಧತೆಗಳು ಶುರುವಾಗಿವೆ. ಜೊತೆಗೆ ಭಾರಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಕೆಎಸ್ಆರ್ಪಿ, ಸಿಎಆರ್, ಹೋಮ್ಗಾರ್ಡ್, ಸಂಚಾರಿ ಪೊಲೀಸರು ಸೇರಿದಂತೆ 1350 ಪೊಲೀಸ್ ಸಿಬ್ಬಂದಿ, 38 ತುಕಡಿಗಳು ಭದ್ರತೆಗೆ ನಿಯೋಜನೆ ಮಾಡಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹಾಗೂ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ತಯಾರಿ ಬಗ್ಗೆ ಮಾಹಿತಿ ನೀಡಿದರು.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಕಾರ್ಯಕ್ರಮವಿರಲಿದ್ದು ಭದ್ರತಾ ದೃಷ್ಟಿಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಮಾಣಿಕ್ ಶಾ ಪರೇಡ್ ಮೈದಾನದಲ್ಲೇ ನಗರ ಪೊಲೀಸ್ ಆಯುಕ್ತರು ಹಾಗೂ ಬಿಬಿಎಂಪಿ ಆಯುಕ್ತರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಮಾಣಿಕ್ ಶಾ ಪರೇಡ್ ಮೈದಾನದ ಸುತ್ತ 100 ಸಿಸಿಟಿವಿ ಅಳವಡಿಸಲಾಗುತ್ತದೆ. 2 ಬ್ಯಾರೇಜ್ ಸ್ಕ್ಯಾನರ್ ಅಳವಡಿಕೆ, ಮುಂಜಾಗ್ರತಾ ಕ್ರಮವಾಗಿ ಆಂಬ್ಯುಲೆನ್ಸ್, ಅಗ್ನಿಶಾಮಕ ದಳ ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆ ನಿಯೋಜನೆ ಮಾಡಲಾಗುತ್ತೆ ಎಂದರು.
ಆಗಸ್ಟ್ 15 ರಂದು ಬೆಳಗ್ಗೆ 9 ಗಂಟೆಗೆ ಸಿಎಂ ಸಿದ್ದರಾಮಯ್ಯನವರು ಧ್ವಜಾರೋಹಣ ಮಾಡಲಿದ್ದಾರೆ. ಬಳಿಕ ತೆರೆದ ಜೀಪಿನಲ್ಲಿ ಪರೇಡ್ ವೀಕ್ಷಿಸಲಿದ್ದಾರೆ. ಸದ್ಯ ಈಗಾಗಲೇ ಪೆಂಡಾಲ್, ಪೀಠೋಪಕರಣ ಹಾಕಿ ಮೈದಾನದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 3 ದಿನಗಳ ಕಾಲ ಪರೇಡ್ ರಿಹರ್ಸಲ್ ನಡೆಯಲಿದೆ.
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ಡಿಪಿ ಬದಲಿಸಿದ ಪ್ರಧಾನಿ ಮೋದಿ
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ