
ಬೆಂಗಳೂರು, ಮೇ 04: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅದ್ಭುತ ಲೋಕ ತೆರೆದುಕೊಳ್ಳಲಿದೆ. ನಗರದ ಪ್ರತಿಷ್ಠಿತ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS), ಸುಮಾರು 35 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದ ಮೊದಲ ನರವಿಜ್ಞಾನ ಆಧಾರಿತ ಇಮ್ಮರ್ಸಿವ್ (Immersive) ಮ್ಯೂಸಿಯಂ ಅನ್ನು ಅಭಿವೃದ್ಧಿಪಡಿಸುತ್ತಿದೆ.
‘ಮ್ಯೂಸಿಯಂ ಆಫ್ ಬ್ರೈನ್ ಅಂಡ್ ಮೈಂಡ್’ (Museum of Brain and Mind) ಎಂಬ ಹೆಸರಿನ ಈ ವಸ್ತುಸಂಗ್ರಹಾಲಯವು “ನೀವು ಹೇಗಿದ್ದೀರೋ, ಹಾಗೆ ಇರಲು ಕಾರಣವೇನು ತಿಳಿಯಿರಿ” ಎಂಬ ಸರಳ ಉದ್ದೇಶದೊಂದಿಗೆ ನಿರ್ಮಾಣವಾಗುತ್ತಿದೆ. ದೈಹಿಕ ಅಂಗವಾದ ಮೆದುಳು ಮತ್ತು ಭಾವನೆಗಳ ಕೇಂದ್ರವಾದ ಮನಸ್ಸಿನ ನಡುವಿನ ಅಂತರವನ್ನು ಹೋಗಲಾಡಿಸುವುದು ಇದರ ಮುಖ್ಯ ಗುರಿಯಾಗಿದೆ.
ಟ್ಯಾಗ್‌ಬಿನ್ (Tagbin) ಎಂಬ ಖಾಸಗಿ ಸಂಸ್ಥೆಯು ಇದರ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದು, ಮಾನಸಿಕ ಆರೋಗ್ಯದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಮತ್ತು ಸಾಮಾಜಿಕ ಕಳಂಕವನ್ನು ಹೋಗಲಾಡಿಸುವುದು ಈ ಯೋಜನೆಯ ಪ್ರಮುಖ ಆಶಯವಾಗಿದೆ. ಜನರಲ್ಲಿ ಮಾನಸಿಕ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ರೋಗಿಗಳ ಬಗ್ಗೆ ಸಹಾನುಭೂತಿ ಬೆಳೆಸುವ ನಿಟ್ಟಿನಲ್ಲಿ ಇದು ಕೆಲಸ ಮಾಡಲಿದೆ. ಬೆಂಗಳೂರಿನ ನಿಮ್ಹಾನ್ಸ್ ಆವರಣದಲ್ಲಿ ಸಿದ್ಧಗೊಳ್ಳುತ್ತಿರುವ ಈ ಅತ್ಯಾಧುನಿಕ ಮ್ಯೂಸಿಯಂ ಇನ್ನೆರಡು ತಿಂಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವ ನಿರೀಕ್ಷೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:52 am, Mon, 4 May 26