ಬಿಲ್ಡರ್ ಸಂತೋಷ್​ ನಿವಾಸದಲ್ಲಿ ಐಟಿ ದಾಳಿ ಮುಕ್ತಾಯ, ನೋಟಿಸ್ ನೀಡಿ ದಾಖಲೆಗಳ ಸಮೇತ ತೆರಳಿದ ಅಧಿಕಾರಿಗಳು

ಪಂಚ ರಾಜ್ಯ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಆಕ್ಟಿವ್ ಆಗಿರುವ ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಭರ್ಜರಿ ಬೇಟೆಗಿಳಿದಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಅವರಿಗೆ ಸೇರಿದ ಮನೆಗಳ ಮೇಲೆ ದಾಳಿ ನಡೆಸಿ 42 ಕೋಟಿ ಜಪ್ತಿ ಮಾಡಿದ್ದ ಅಧಿಕಾರಿಗಳು ನಿನ್ನೆ ತಡರಾತ್ರಿ ಬಿಲ್ಡರ್​​ ಸಂತೋಷ್ ಮನೆಗೆ ದಾಳಿ ನಡೆಸಿದ್ದರು. ಈ ದಾಳಿ ಇದೀಗ ಮುಕ್ತಾಯಗೊಂಡಿದೆ.

ಬಿಲ್ಡರ್ ಸಂತೋಷ್​ ನಿವಾಸದಲ್ಲಿ ಐಟಿ ದಾಳಿ ಮುಕ್ತಾಯ, ನೋಟಿಸ್ ನೀಡಿ ದಾಖಲೆಗಳ ಸಮೇತ ತೆರಳಿದ ಅಧಿಕಾರಿಗಳು
ಬಿಲ್ಡರ್ ಸಂತೋಷ್​ ನಿವಾಸದ ಮೇಲಿನ ಐಟಿ ದಾಳಿ ಮುಕ್ತಾಯ
Edited By: Rakesh Nayak Manchi

Updated on: Oct 15, 2023 | 11:42 AM

ಬೆಂಗಳೂರು, ಅ.15: ಬಿಲ್ಡರ್ ಸಂತೋಷ್ ಮನೆ ಮೇಲೆ ನಡೆದ ಐಟಿ ದಾಳಿ (IT Raid) ಮುಕ್ತಾಯಗೊಂಡಿದ್ದು, ಕೆಲವು ಮಹತ್ವದ ದಾಖಲೆಗಳೊಂದಿಗೆ ಅಧಿಕಾರಿಗಳು ತೆರಳಿದ್ದಾರೆ. ಈ ವೇಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಮೂಲಕ ಸೂಚನೆ ನೀಡಿದ್ದಾರೆ.

ನಿನ್ನೆ ಮುಂಜಾನೆ ಮನೆ ದಾಳಿ ನಡೆಸುವ ಮೂಲಕ ಬಿಲ್ಡರ್ ಸಂತೋಷ್​ಗೆ​ ಐಟಿ ಅಧಿಕಾರಿಗಳು ಶಾಕ್ ನೀಡಿದ್ದರು. ದಾಳಿ ವೇಳೆ ಕೋಟ್ಯಂತ ರೂಪಾಯಿ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಅಲ್ಲದೆ, ಶೋಧ ಕಾರ್ಯದ ವೇಳೆ ಹಲವು ದಾಖಲೆಗಳು ಪತ್ತೆಯಾಗಿದ್ದು, ಇವುಗಳ ಪರಿಶೀಲನೆ ನಡೆಸಲಾಗುತ್ತಿತ್ತು. ರಾತ್ರಿ ಇಡೀ ಸಂತೋಷ್ ಮನೆಯಲ್ಲೇ ಇದ್ದ ಅಧಿಕಾರಿಗಳು ಇಂದು ಮುಂಜಾನೆಯಿಂದ ಪರಿಶೀಲನೆ ಮುಂದುವರಿಸಿದ್ದರು. ಸದ್ಯ ಐಟಿ ಅಧಿಕಾರಿಗಳು ದಾಳಿ ಮುಕ್ತಾಯಗೊಳಿಸಿ 3 ಟ್ರಂಕ್, 3 ಬ್ಯಾಗ್, 1 ಸೂಟ್ಕೇಸ್​ನ​ಷ್ಟು ವಸ್ತು​ ವಶಕ್ಕೆ ಪಡೆದು ಸಂತೋಷ್​ಗೆ ನೋಟಿಸ್ ನೀಡಿ 2 ಕಾರುಗಳಲ್ಲಿ ತೆರಳಿದ್ದಾರೆ.

ತಳುಕು ಹಾಕಿದ ಕಾಂಗ್ರೆಸ್ ಮುಖಂಡನ ಹೆಸರು

ಮನೆಯಲ್ಲಿ ಕೋಟ್ಯಂತರ ರೂಪಾಯಿ ಪತ್ತೆಯಾಗಿರುವ ಬಗ್ಗೆ ಸಂತೋಷ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಾಜಿ ಎಂಎಲ್​ಸಿ, ಕಾಂಗ್ರೆಸ್ ಮುಖಂಡ ಬೆಮೆಲ್ ಕಾಂತರಾಜು ಹೆಸರು ಬಾಯಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಅದರಂತೆ, ಮಾಜಿ ಎಂಎಲ್​ಸಿ ಸಹೋದರರನ್ನು ಫ್ಲ್ಯಾಟ್​ಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಸತತ 42 ಗಂಟೆಗಳ ಬಳಿಕ ಗುತ್ತಿಗೆದಾರ ಅಂಬಿಕಾಪತಿ ನಿವಾಸದಲ್ಲಿ ಐಟಿ ದಾಳಿ ಅಂತ್ಯ: ವಿಚಾರಣೆಗೆ ಹಾಜರಾಗುವಂತೆ ನೋಟಿಸ್​​

ಈ ಬಗ್ಗೆ ನೆಲಮಂಗಲದಲ್ಲಿ ಬೆಮೆಲ್ ಕಾಂತರಾಜು ಅವರನ್ನು ಟಿವಿ9 ಪ್ರಶ್ನಿಸಿದಾಗ, ಕೇತಮಾರನಹಳ್ಳಿಯಲ್ಲಿ ಐಟಿ ದಾಳಿ ಬಗ್ಗೆ ನನಗೆ ಏನೂ ಮಾಹಿತಿ ಇಲ್ಲ. ಬಿಲ್ಡರ್ ಸಂತೋಷ್‌ರನ್ನು ನಾನು ನೋಡೇ ಇಲ್ಲ. ಆತನ ಮನೆಯಲ್ಲಿ ಪತ್ತೆಯಾದ ಹಣಕ್ಕೂ ನನಗೂ ಸಂಬಂಧವಿಲ್ಲ. ನನ್ನ ಹೆಸರು ಯಾಕೆ ತಳುಕು ಹಾಕುತ್ತಿದ್ದಾರೆ ಗೊತ್ತಿಲ್ಲ. ನಾನು ನೆಲಮಂಗಲದಲ್ಲಿ ಅರಮಾಗಿ ಓಡಾಟ ಮಾಡಿಕೊಂಡು ಇದ್ದೇನೆ. ದಯವಿಟ್ಟು ಮಾಧ್ಯಮದವರು ನನ್ನ ಹೆಸರು ಹಾಗೂ ಪೋಟೋ ಬಳಸದಂತೆ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಅಶ್ವತ್ತಮ್ಮ ಪತಿ ಅಂಬಿಕಾಪತಿ ಮತ್ತು ಸಹೋದರ ಪ್ರದೀಪ್​ಗೆ ಸೇರಿದ ಮನೆಗಳ ಮೇಲೆ ಐಟಿ ದಾಳಿ ನಡೆದಿತ್ತು. ಈ ವೇಳೆ ಫ್ಲ್ಯಾಟ್​ನ ರೂಮ್​ನಲ್ಲಿದ್ದ ಮಂಚದಡಿ 42 ಕೋಟಿ ರೂ. ಪತ್ತೆಯಾಗಿತ್ತು. ಈ ಹಣವನ್ನು ತೆಲಂಗಾಣ ಚುನಾವಣೆಗೆ ಸಾಗಿಸಲು ಇಟ್ಟಿರುವ ಆರೋಪ ಕೇಳಿಬಂದಿದೆ. ಇದೀಗ ಬಿಲ್ಡರ್ ಸಂತೋಷ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ 40 ಕೋಟಿ ರೂ. ಪತ್ತೆಯಾಗಿದೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us