Anti-Conversion bill: ವಿಧಾನಮಂಡಲ ಅಧಿವೇಶನ ಆರಂಭ: ಮತಾಂತರ ನಿಷೇಧ ಸೇರಿ 10 ಪ್ರಮುಖ ಮಸೂದೆಗಳ ಮಂಡನೆ ಸಾಧ್ಯತೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 12, 2022 | 1:48 PM

ಇದೇ ಅಧಿವೇಶನದಲ್ಲಿಯೇ ಸರ್ಕಾರವು ಮತಾಂತರ ನಿಷೇಧ ಮಸೂದೆಯನ್ನು ವಿಧಾನ ಪರಿಷತ್​ನಲ್ಲಿ ಮಂಡಿಸುವ ಸಾಧ್ಯತೆಯಿದೆ.

Anti-Conversion bill: ವಿಧಾನಮಂಡಲ ಅಧಿವೇಶನ ಆರಂಭ: ಮತಾಂತರ ನಿಷೇಧ ಸೇರಿ 10 ಪ್ರಮುಖ ಮಸೂದೆಗಳ ಮಂಡನೆ ಸಾಧ್ಯತೆ
ಅಧಿವೇಶ ಮತ್ತು ವಿಧಾನಸೌಧ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕಾಂಗ್ರೆಸ್ ಪಕ್ಷವು ಸಿದ್ದರಾಮೋತ್ಸವ ಮತ್ತು ಬಿಜೆಪಿಯು ಜನೋತ್ಸವಗಳ (ನಂತರ ಎರಡೂ ಹೆಸರು ಬದಲಾಯಿತು) ಮೂಲಕ ಚುನಾವಣೆಗೆ ರಣಕಹಳೆ ಮೊಳಗಿಸಿವೆ. ಚುನಾವಣೆಯ ಹೊಸಿಲಲ್ಲಿ (Karnataka Legislative Assembly Elections) ಇಂದಿನಿಂದ (ಸೆ 12) ಆರಂಭವಾಗಿರುವ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನ ಹಲವು ಕಾರಣಗಳಿಗೆ ಮುಖ್ಯವಾಗಿದೆ. ಪ್ರಸ್ತುತ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ. ವಿಧಾನಸಭೆ ಮತ್ತು ಪರಿಷತ್ ಕಲಾಪಗಳಲ್ಲಿಯೂ ಇದೇ ಪ್ರವೃತ್ತಿ ಮುಂದುವರಿಯಬಹುದು ಎಂದು ವಿಶ್ಲೇಷಿಸಲಾಗಿದೆ. ಈ ಬಾರಿಯ ಅಧಿವೇಶನದಲ್ಲಿ ಸರ್ಕಾರವು 10 ಮಸೂದೆಗಳನ್ನು ಮಂಡಿಸುವ ಸಾಧ್ಯತೆಯಿದೆ. ಈ ಪೈಕಿ ಮತಾಂತರ ನಿಷೇಧ ಕಾಯ್ದೆ (Anti Conversion Bill) ಹಾಗೂ ಬೆಂಗಳೂರು ಟ್ರಾಫಿಕ್ ನಿರ್ವಹಣೆಗೆ (Bengaluru Traffic) ಸಂಬಂಧಿಸಿದ ಕಾಯ್ದೆಯ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ.

ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿ ನೇತೃದಲ್ಲಿ ನಡೆಯಲಿರುವ ಸಂಸದೀಯ ವ್ಯವಹಾರಗಳ ಸಮಿತಿ ಸಭೆಯು ಕಲಾಪಗಳ ಬಗ್ಗೆ ಸ್ಥೂಲ ಚಿತ್ರಣವನ್ನು ಅಂತಿಮಗೊಳಿಸುತ್ತದೆ. ಈ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಪಾಲ್ಗೊಳ್ಳುತ್ತಾರೆ. ಆಡಳಿತಾರೂಢ ಬಿಜೆಪಿ ವಿರುದ್ಧ ಭ್ರಷ್ಟಾಚಾರ, ವಿವಿಧ ಇಲಾಖೆಗಳಲ್ಲಿ ನಡೆದಿರುವ ನೇಮಕಾತಿ ಹಗರಣ, ಬೆಂಗಳೂರು ಪ್ರವಾಹ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಸಿ.ಟಿ.ರವಿ ಮತ್ತು ಸಿದ್ದರಾಮಯ್ಯ ನಡುವೆ ಆರಂಭವಾಗಿರುವ ವಾಗ್ವಾದ ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ಟ್ರಾಫಿಕ್ ನಿರ್ವಹಣೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಬಿಬಿಎಂಪಿ, ಬಿಡಿಎ, ಬಿಎಂಆರ್​ಡಿಎ, ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳು ಇರುವ ಪ್ರತ್ಯೇಕ ಸಂಸ್ಥೆಯನ್ನು ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈವರೆಗೆ ಈ ಸಂಸ್ಥೆಗಳು ಪ್ರತ್ಯೇಕವಾಗಿ ಯೋಜನೆಗಳನ್ನು ರೂಪಿಸುತ್ತಿದ್ದ ಕಾರಣ ಹಲವು ಸಮಸ್ಯೆಗಳು ಹಾಗೆಯೇ ಉಳಿದಿದ್ದವು.

ಇದೇ ಅಧಿವೇಶನದಲ್ಲಿಯೇ ಸರ್ಕಾರವು ಮತಾಂತರ ನಿಷೇಧ ಮಸೂದೆಯನ್ನು ವಿಧಾನ ಪರಿಷತ್​ನಲ್ಲಿ ಮಂಡಿಸುವ ಸಾಧ್ಯತೆಯಿದೆ. ಈ ಮಸೂದೆಗೆ ಈಗಾಗಲೇ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ. ಆದರೆ ವಿಧಾನ ಪರಿಷತ್​ನಲ್ಲಿ ಈವರೆಗೆ ಮಸೂದೆಯನ್ನು ಸರ್ಕಾರ ಮಂಡಿಸಿಲ್ಲ. ಮಸೂದೆ ಮಂಡಿಸುವ ತಡವಾದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಯ ಮೂಲಕ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿತ್ತು. ಪ್ರಸ್ತುತ ವಿಧಾನ ಪರಿಷತ್​ನಲ್ಲಿ ಬಿಜೆಪಿಯ 41 ಸದಸ್ಯರಿದ್ದಾರೆ. ಕಾಂಗ್ರೆಸ್​ನ 26 ಮತ್ತು ಜೆಡಿಎಸ್​ನ 8 ಸದಸ್ಯರಿದ್ದಾರೆ. ಸಂಖ್ಯಾಬಲದಲ್ಲಿ ಮೇಲುಗೈ ಸಾಧಿಸಿರುವುದರಿಂದ ಮಸೂದೆಗೆ ಅಂಗೀಕಾರ ಪಡೆದುಕೊಳ್ಳುವ ಉತ್ಸಾಹ ಬಿಜೆಪಿಗೆ ಬಂದಿದೆ.

ಅಗಲಿದ ಗಣ್ಯರಿಗೆ ಸಂತಾಪ

ವಿಧಾನಸಭೆ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಿಲುವಳಿಯನ್ನು ಮಂಡಿಸಲಾಯಿತು. ಇತ್ತೀಚೆಗೆ ನಿಧನರಾದ ಉಮೇಶ್ ಕತ್ತಿ, ಮಾಜಿ ಸಚಿವರಾಗಿದ್ದ ಎಂ.ರಘುಪತಿ, ಪ್ರಭಾಕರ್ ರಾಣೆ, ಮಾಜಿ ಶಾಸಕ ಯಾದವ್ ರಾವ್, ಕೆ.ಕೆಂಪೇಗೌಡ, ಜಿ.ವಿ.ಶ್ರೀರಾಮರೆಡ್ಡಿ, ಈಶಣ್ಣ ಗುಳಗಣ್ಣನವರ್, ಹಿನ್ನೆಲೆ ಗಾಯಕರಾಗಿದ್ದ ಶಿವಮೊಗ್ಗ ಸುಬ್ಬಣ್ಣ, ಮಾಜಿ ಶಾಸಕ ಸಿ.ಎಂ.ದೇಸಾಯಿ, ಎ.ಜಿ.ಕೊಡ್ಗಿ ಹಾಗೂ ಬ್ರಿಟನ್ ರಾಣಿಯಾಗಿದ್ದ 2ನೇ ಎಲಿಜಬೆತ್ ಅವರಿಗೆ ಸಂತಾಪ ಸೂಚಿಸಲಾಯಿತು.

ಕತ್ತಿ ಒಡನಾಟ ನೆನಪಿಸಿಕೊಂಡ ಬೊಮ್ಮಾಯಿ, ಸಿದ್ದರಾಮಯ್ಯ

ಉಮೇಶ್ ಕತ್ತಿ ಅವರ ಕಾರ್ಯವೈಖರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆನಪಿಸಿಕೊಂಡರು. ಕತ್ತಿ ಹಿಡಿದ ಕೆಲಸ ಮುಗಿಸದೇ ಬಿಡುತ್ತಿರಲಿಲ್ಲ. ಬಹಳ ಹಾಸ್ಯ ಪ್ರವೃತ್ತಿ ಇತ್ತು. ಬಹಳ ಸಲ ಪಕ್ಷ ಬದಲಾಯಿಸಿದ್ದರೂ ಜನರು ಅವರ ಕೈಬಿಟ್ಟಿರಲಿಲ್ಲ. ಶ್ರೀಮಂತಿಕೆ ಇದ್ರೂ ಜನಸಾಮಾನ್ಯರ ನೆಂಟಸ್ತಿಕೆ ಬಿಡುತ್ತಿರಲಿಲ್ಲ. ದೇವೇಗೌಡರು ಸಿಎಂ ಆಗಿದ್ದಾಗ ಕತ್ತಿಯವರಿಗೆ ಸಚಿವ ಸ್ಥಾನ ಕೊಟ್ಟಿದ್ದರು. ಕತ್ತಿ ಬೆಳಗಾವಿ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬಗ್ಗೆ ಕತ್ತಿ ಮಾತನಾಡಿದ್ದರಾದರೂ, ಅವರಿಗೆ ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು ಎನ್ನುವ ಕಾಳಜಿಯಿತ್ತು.

ಅವರು ತೀಕ್ಷ್ಣವಾದ ಸಾಮಾನ್ಯ ಜ್ಞಾನ, ಬುದ್ದಿವಂತಿಕೆ ಹೊಂದಿದ್ದರು. ಶಾಸಕರಾದ ಮೇಲೆ ಸಣ್ಣ ವಯಸ್ಸಿನಲ್ಲಿ ರಾಮಕೃಷ್ಣ ಹೆಗಡೆ ಹಾಗೂ ಎಸ್.ಆರ್. ಬೊಮ್ಮಾಯಿಗೆ ಹತ್ತಿರವಾಗಿದ್ದರು. ಎಲ್ಲ ಪಾರ್ಟಿ ಬಿ ಫಾರಂ ನನ್ನ ಜೇಬಿನಲ್ಲಿ ಇದೆ ಎಂದು ತಮಾಷೆಗೆ ಹೇಳುತ್ತಿದ್ದರು. ಒಮ್ಮೆ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರ ಕೊಡಲು ಹೋಗಿದ್ದರು. ಆದರೆ ಆಗ ಎಸ್.ಆರ್. ಬೊಮ್ಮಾಯಿ ಅವರು ಸಮಾಧಾನ ಮಾಡಿದ್ದರು. ನಂತರ ಅವರಿಗೆ ಲೋಕೋಪಯೋಗಿ ಇಲಾಖೆ ಸಿಕ್ಕಿತ್ತು ಎಂದು ಬೊಮ್ಮಾಯಿ ನೆನಪಿಸಿಕೊಂಡರು.

ಉಮೇಶ್ ಕತ್ತಿ ಅವರ ಒಡನಾಟ ನೆನಪಿಸಿಕೊಂಡ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಉಮೇಶ್ ಕತ್ತಿ ಅವರು 1985ರಲ್ಲಿ ನಮ್ಮ ಜೊತೆ ಇದ್ದರು. ಜನರ ಪ್ರೀತಿ ಗಳಿಸದಿದ್ದರೆ ಅಷ್ಟು ಬಾರಿ ಗೆಲ್ಲಲು ಆಗುತ್ತಿರಲಿಲ್ಲ. ಚುನಾವಣೆ ವೇಳೆ ಬೆಳಗಾವಿಗೆ ಹೋದಾಗ ಊಟಕ್ಕೆ ಆಹ್ವಾನಿಸಿದ್ದರು. ಊಟಕ್ಕೆ ಹೋದಾಗ ರಾಜಕಾರಣ ಬಗ್ಗೆಯೂ ಚರ್ಚೆ ಮಾಡಿದ್ದರು. ಉಮೇಶ್ ಕತ್ತಿ ಬೆಳಗಾವಿ ರಾಜಕಾರಣದಲ್ಲಿ ಮುಂಚೂಣಿಯಲ್ಲಿದ್ದರು. ಉತ್ತರ ಕರ್ನಾಟಕದ ಅಭಿವೃದ್ಧಿ ಆಗಬೇಕು ಎಂದು ಬಯಸಿದ್ದರು. ಈ ವೇಳೆ ‘ಹೋರಾಟ ಮಾಡಿ, ಪ್ರತ್ಯೇಕ ರಾಜ್ಯ ಕೇಳಬೇಡಿ’ ಎಂದು ಎಂದು ತಿಳಿಸಿದ್ದೆ ಎಂದು ಹೇಳಿದರು.

ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಮಾತನಾಡಿ, ಉಮೇಶ್ ಕತ್ತಿ ಅವರು ಮನೋರಂಜಿತ ವ್ಯಕ್ತಿಯಾಗಿದ್ದರು. ಯಾವ ವಿಷಯದ ಬಗ್ಗೆ ಕೂಡ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿರಲಿಲ್ಲ. ಆನೆ ಬಂದ ವಿಚಾರದಲ್ಲಿ ಲಘುವಾಗಿ ಮಾತನಾಡಿದ್ದರು. ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಬೇಕು ಎನ್ನುತ್ತಿದ್ದರು. ಅವರು ಆರೋಗ್ಯದ ಬಗ್ಗೆ ಗಮನ ಹರಿಸದೇ ಉದಾಸೀನ ಮಾಡಿದ್ರಾ ಅನ್ನಿಸುತ್ತದೆ. ಏಳು ಬಾರಿ ಒಂದೇ ಕ್ಷೇತ್ರದಲ್ಲಿ ಗೆಲ್ಲೋದು ಅಂದ್ರೆ ಸುಲಭವಲ್ಲ ಎಂದು ಹೇಳಿದರು.

ಪಿಎಸ್​ಐ ಅಕ್ರಮ ನೇಮಕಾತಿ ಹಗರಣದ ಆರೋಪ ಹೊತ್ತಿರುವ ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಸಹ ಕಲಾಪಕ್ಕೆ ಹಾಜರಾಗಿದ್ದರು.

ಮೊದಲ ದಿನವೇ ಪ್ರತಿಭಟನೆ ಬಿಸಿ

ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸಲು ರೈತ ಸಂಘಟನೆಗಳು ಮುಂದಾಗಿವೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತಸಂಘಟನೆಗಳು ನಿರ್ಧರಿಸಿವೆ. ರೈತ ವಿರೋಧಿ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕು. ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ವಿಧಾನಸೌಧದವರೆಗೂ ರೈತರು ಜಾಥಾ ನಡೆಸಲಿದ್ದಾರೆ.

ಸಿಟಿ ರವಿ ಹೇಳಿಕೆಗೆ ಶಿವಲಿಂಗೇಗೌಡ ಆಕ್ಷೇಪ

ಸಿದ್ದರಾಮಯ್ಯ ಕಚ್ಚೆ ಹರುಕ ಎಂಬ ಸಿ.ಟಿ.ರವಿ ಹೇಳಿಕೆಯನ್ನು ವಿಧಾನಸೌಧದಲ್ಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಖಂಡಿಸಿದರು. ಸಿದ್ದರಾಮಯ್ಯ ವಯಸ್ಸಿಗೂ ಸಿ.ಟಿ.ರವಿ ವಯಸ್ಸಿಗೂ ಅಂತರವಿದೆ. ಮಾಜಿ ಸಿಎಂ ಬಗ್ಗೆ ವೈಯಕ್ತಿಕ ವಿಚಾರ ಮಾತಾಡಿದ್ದು ಸರಿಯಲ್ಲ. ಈ ಬಗ್ಗೆ ಸಿಟಿ ರವಿ ಸ್ಪಷ್ಟನೆ ಕೊಡಬೇಕು. ಬಾಯ್ತಪ್ಪಿನಿಂದ ಹಾಗೆ ಹೇಳಿದ್ದಾಗಿ ತಿಳಿಸಬೇಕು ಎಂದು ಒತ್ತಾಯಿಸಿದರು.