ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ (Bengaluru Suburban Rail project) ಮೊದಲ ಹಂತದ 2 ಕಾರಿಡಾರ್ಗಳ ಕಾಮಗಾರಿಯನ್ನು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (K-RIDE) ಆರಂಭಿಸಿದೆ. ಮೊದಲ ಹಂತದ 2 ಕಾರಿಡಾರ್ಗಳು ಬೈಯಪ್ಪನಹಳ್ಳಿ ಹಾಗೂ ಚಿಕ್ಕಬಾಣಾವರ ಮಧ್ಯೆ ನಿರ್ಮಾಣವಾಗಲಿವೆ. ಇದಕ್ಕಾಗಿ 1,500 ಮರಗಳನ್ನು ಕಡಿಯಲು ಅನುಮತಿ ಕೋರಿ ಬಿಬಿಎಂಪಿಗೆ ಕೆಆರ್ಐಡಿಇ ಮನವಿ ಸಲ್ಲಿಸಿತ್ತು. ಆದರೆ, ಸದ್ಯ ಬಿಬಿಎಂಪಿ 764 ಮರಗಳನ್ನು ಕಡಿಯಲು ಅನುಮತಿ ನೀಡಿದೆ. 56 ಮರಗಳನ್ನು ಸ್ಥಳಾಂತರಗೊಳಿಸುವಂತೆಯೂ ಕೆಆರ್ಐಡಿಇಗೆ ಬಿಬಿಎಂಪಿ ಸೂಚಿಸಿದೆ. ಪ್ರಸ್ತಾವನೆ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಈಗಲೂ ಪರಿಶೀಲನೆ ನಡೆಸುತ್ತಿದ್ದಾರೆ.
764 ಮರಗಳನ್ನು ಕಡಿಯಲು ಸದ್ಯ ಅನುಮತಿ ನೀಡಲಾಗಿದೆ. ಆದರೆ, ಈ ಸಂಖ್ಯೆಯನ್ನು ಇನ್ನಷ್ಟು ಕಡಿಮೆ ಮಾಡಲು ಸಾಧ್ಯವೇ ಎಂಬ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಕಡಿಯಲಾಗುವ ಮರಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಮರ ಕಡಿಯುವ ವಿಚಾರವಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಕ್ಕೆ ಯಾವುದೇ ರೀತಿಯ ವಿರೋಧ ವ್ಯಕ್ತವಾಗಿಲ್ಲ ಎನ್ನಲಾಗಿದೆ.
ಮೊದಲ ಹಂತದ ಎರಡು ಕಾರಿಡಾರ್ಗಳಿಗಾಗಿ ಶೇ 80ರಷ್ಟು ಭಾರತೀಯ ರೈಲ್ವೆಗೆ ಸೇರಿದ ಭೂಪ್ರದೇಶವನ್ನೇ ಬಳಸಲಾಗುವುದು. ಉಳಿದವುಗಳನ್ನು ಭೂಸ್ವಾಧೀನ ಪ್ರಕ್ರಿಯೆಯ ಮೂಲಕ ಪಡೆಯಲಾಗುವುದು ಎಂದು ಕೆಆರ್ಐಡಿಇ ತಿಳಿಸಿದೆ.
ಇದನ್ನೂ ಓದಿ: Suburban Railway: ಬೆಂಗಳೂರು ಉಪನಗರ ರೈಲು ಯೋಜನೆಗೆ ಕೊನೆಗೂ ಸಿಕ್ಕಿತು ವೇಗ; 4ನೇ ಕಾರಿಡಾರ್ ಕಾಮಗಾರಿಗೆ ಟೆಂಡರ್
ಹಳಿಗಳ ನಿರ್ಮಾಣಕ್ಕೆ, ನಿಲ್ದಾಣಗಳನ್ನು ನಿರ್ಮಿಸಲು ಮತ್ತು ಇತರ ಮೂಲಸೌಕರ್ಯಗಳಿಗಾಗಿ ಮರಗಳನ್ನು ಕಡಿಯಲಾಗುತ್ತದೆ. ಮೊದಲ ಹಂತದ ಎರಡು ಕಾರಿಡಾರ್ಗಳ ಒಟ್ಟು ವ್ಯಾಪ್ತಿ 25.01 ಕಿಲೋ ಮೀಟರ್ ಇರಲಿದೆ. ಈ ಮಾರ್ಗದಲ್ಲಿ 14 ನಿಲ್ದಾಣಗಳು ಬರಲಿವೆ. ಈ ನಿಲ್ದಾಣಗಳ ಪೈಕಿ ಆರು ನಿಲ್ದಾಣಗಳು ಎಲಿವೇಟೆಡ್ ಮತ್ತು ಉಳಿದ 8 ಸಾಮಾನ್ಯ ನಿಲ್ದಾಣಗಳಾಗಿರಲಿವೆ ಎಂದು ಕೆಆರ್ಐಡಿಇ ಮಾಹಿತಿ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ