ವಿಧಾನಸಭೆಯಲ್ಲಿ(Karnataka Assembly Session) ಸ್ಪೀಕರ್ ಪೀಠಕ್ಕೆ ಅಗೌರವ ತೋರಿಸಿದ ಕಾರಣಕ್ಕಾಗಿ ಬಿಜೆಪಿಯ 10 ಶಾಸಕರನ್ನು ವಿಧಾನಸಭೆ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಲಾಗಿದೆ(BJP MLAs Suspend). ಈ ವಿಚಾರ ಗಲಾಟೆ-ಗದ್ದಲಕ್ಕೆ ಕಾರಣವಾಗಿದೆ. ಇನ್ನು ಈ ಸಂಬಂಧ ಮಲ್ಲೇಶ್ವರಂನ ಬಿಜೆಪಿ(BJP) ರಾಜ್ಯ ಕಚೇರಿಯಲ್ಲಿ MLA, MLCಗಳ ಸಭೆ ಕರೆಯಲಾಗಿದೆ. ಪ್ರತಿಭಟನೆ ವಿಚಾರವಾಗಿ ಮುಂದಿನ ನಡೆ ಬಗ್ಗೆ ಚರ್ಚೆ ನಡೆಯಲಿದೆ. ಜೆಡಿಎಸ್(JDS) ಕೂಡ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ವಿಧಾನಸೌಧದ ಜೆಡಿಎಸ್ ಕಚೇರಿಯಲ್ಲಿ ಸಭೆ ನಡೆಯಲಿದೆ. ಮತ್ತೊಂದೆಡೆ ಸಿಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರನ್ನು ಅರೆಸ್ಟ್ ಮಾಡಿ ತನಿಖೆ ಶುರುಮಾಡಿವೆ. ತನಿಖೆ ವೇಳೆ ಸ್ಫೋಟಕ ಅಂಶಗಳು ಹೊರಬರುತ್ತಿದೆ. ರಾಜ್ಯದ ಪ್ರಮುಖ ಸುದ್ದಿಗಳ ಲೇಟೆಸ್ಟ್ ಅಪ್ಡೇಟ್ಸ್ಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಾದ್ಯಂತ ಭಾರಿ ಮಳೆ ಹಿನ್ನೆಲೆ ತೀರ್ಥಹಳ್ಳಿಯ ಪಟ್ಟಣದ ವಾಗ್ದೇವಿ, ಸೆಂಟ್ ಮೇರಿಸ್ ಹಾಗೂ
ಸಹ್ಯಾದ್ರಿ ಶಾಲೆಗಳಿಗೆ ನಾಳೆ ರಜೆ ನೀಡಿ ಬಿಇಒ ಗಣೇಶ್ ಆದೇಶ ಹೊರಡಿಸಿದ್ದಾರೆ. ಉಳಿದ ಶಾಲೆಗಳಿಗೆ ಪರಿಸ್ಥಿತಿ ನೋಡಿ ರಜೆ ನೀಡುವಂತೆ ಸೂಚನೆ ನೀಡಿದ್ದಾರೆ.
ಯಾದಗಿರಿ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದ್ದು, ಇಂದು ಸಂಜೆಯೂ ಭಾರೀ ಮಳೆಯಾಗಿದೆ. ಮಳೆಯ ರಭಸಕ್ಕೆ ಯಾದಗಿರಿ ನಗರದ ರೈಲ್ವೆ ಸ್ಟೇಷನ್ ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಪ್ರತಿ ಬಾರಿ ಮಳೆ ಬಂದಾಗ ಈ ರಸ್ತೆ ಜಲಾವೃತಗೊಳ್ಳುತ್ತದೆ.
ಕಲಬುರಗಿ: ಮುಂದಿನ 3 ಗಂಟೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೀದರ್, ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನಿಡಿದೆ.
ನೆಲಮಂಗಲ: ಕೆರೆಯಲ್ಲಿ ಈಜಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಚಿಕ್ಕಬಾಣಾವಾರ ಸಮೀಪದ ಗಾಣಿಗರಹಳ್ಳಿ ಕೆರೆಯಲ್ಲಿ ನಡೆದಿದೆ. ಅಬ್ಬಿಗೆರೆ ಗ್ರಾಮದ ಬಸವರಾಜು (35) ಮೃತ ವ್ಯಕ್ತಿ. ಪೀಣ್ಯಾ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶವ ಮೇಲೆತ್ತಲು ಕೆರೆಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಬಟ್ಟೆ, ಚಪ್ಪಲಿ, ಮೊಬೈಲ್ ಕೆರೆಯ ಪಕ್ಕದಲ್ಲಿ ಪತ್ತೆಯಾಗಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಜೆಡಿಎಸ್ ಶಾಸಕರ ಸಭೆ ಆರಂಭಗೊಂಡಿದೆ. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ನಡೆಯುತ್ತಿರುವ ಮಹತ್ವದ ಸಭೆ ಇದಾಗಿದೆ. ಜೆಡಿಎಸ್ ಶಾಸಕರು, ವಿಧಾನಪರಿಷತ್ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದು, ರಾಜ್ಯ ರಾಜಕೀಯ ಪರಿಸ್ಥಿತಿ, ಜೆಡಿಎಸ್ ನಿಲುವಿನ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. NDA ಮೈತ್ರಿಕೂಟಕ್ಕೆ ಬೆಂಬಲ ನೀಡುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಸ್ಪೀಕರ್ ಯು.ಟಿ.ಖಾದರ್ ಅವರು ವಿಧಾನಸಭೆ ಕಲಾಪ ನಾಳೆ ಬೆಳಗ್ಗೆ 10.30ಕ್ಕೆ ಮುಂದೂಡಿಕೆ ಮಾಡಿದ್ದಾರೆ.
ವಿಧಾನಸಭೆ: ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆ ನಿಷೇಧ) ತಿದ್ದುಪಡಿ ವಿಧೇಯಕ ಅಂಗೀಕಾರ ಪಡೆಯಿತು. ಎಸ್ಸಿ ಎಸ್ಟಿ ಸಮುದಾಯಗಳ ಜಮೀನು ಸರ್ಕಾರದ ಅನುಮತಿ ಪಡೆಯದೇ ಪರಭಾರೆ ಮಾಡಿದರೆ ಮೂಲ ಮಂಜೂರಾತಿದಾರರಿಗೆ ವಾಪಸ್ ಕೊಡಲು ಅವಕಾಶ ಇರುವ ವಿಧೇಯಕ ಇದಾಗಿದೆ. 2017 ರಲ್ಲಿ ಈ ಕಾಯಿದೆಗೆ ವಿರುದ್ಧವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಮೂಲ ಕಾಯಿದೆಯಲ್ಲಿ ಭೂಮಿ ವಾಪಸ್ ಪಡೆಯಲು ಕಾಲಮಿತಿ ನಿಗದಿ ಇಲ್ಲ ಅಂತ ಹೇಳಿತ್ತು. ಈ ತೀರ್ಪಿನ ಪ್ರಕಾರ ಹಳೆಯ ಭೂಮಿ ಪರಭಾರೆ ಪ್ರಕರಣಗಳು ಕೋರ್ಟ್ನಲ್ಲಿ ಪರಾಭವ ಆಗುತ್ತಿದ್ದವು. ಈ ತಿದ್ದುಪಡಿ ವಿಧೇಯಕ ಅಂಗೀಕಾರ ಹಿನ್ನೆಲೆಯಲ್ಲಿ ಕಾಲಮಿತಿ ರದ್ದಾಗಲಿದೆ. ಎಷ್ಟು ವರ್ಷಗಳ ಹಿಂದೆ ಪರಭಾರೆ ಆಗಿದ್ದರೂ ವಾಪಸ್ ಮೂಲ ದಲಿತ ಮಾಲೀಕರಿಗೆ ಭೂಮಿ ಸಿಗಲಿದೆ. 1978 ರಿಂದಲೂ ರಾಜ್ಯದಲ್ಲಿ ಜಾರಿಯಲ್ಲಿರುವ ಕಾಯ್ದೆಯ ನ್ಯೂನತೆ ಸರಿಪಡಿಸಿ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ.
ಬಿಜೆಪಿಯವರು ನರೇಂದ್ರ ಮೋದಿಯನ್ನು ವಿಶ್ವಗುರು ಅಂತಾರೆ. ಇವತ್ತು ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನೆ ಕೇಳುವುದಕ್ಕೂ ಬಿಜೆಪಿಯ ಯಾವೊಬ್ಬ ಶಾಸಕರಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಬಿಜೆಪಿಯರಿಗೆ ವಿಪಕ್ಷ ನಾಯಕರನ್ನೂ ನೇಮಕ ಮಾಡಲು ಆಗುತ್ತಿಲ್ಲ. ನರೇಂದ್ರ ಮೋದಿ ವಿಶ್ವಗುರು ಅಂತೆ, ಇದೇನಾ ವಿಶ್ವಗುರು? ನಮ್ಮ ನಾಯಕರೂ ಇದ್ದಾರೆ, ಆದರೆ ನಾವು ಆ ರೀತಿ ಹೊಗಳಲ್ಲ ಎಂದರು.
ವಿಧಾನಸೌಧದಲ್ಲಿ ನಾಳೆ ಮಧ್ಯಾಹ್ನ 1.30ಕ್ಕೆ ಸ್ಪೀಕರ್ ಯು.ಟಿ.ಖಾದರ್ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಬೆಂಗಳೂರು: ಗಂಗಾ ಕಲ್ಯಾಣ ಯೋಜನೆ ನೆರವು 3.5 ಲಕ್ಷ ರೂ. ಹೆಚ್ಚಳಕ್ಕೆ ಸಚಿವ ಶಿವರಾಜ ತಂಗಡಗಿ ಸೂಚನೆ ನೀಡಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳು ನೀಡುತ್ತಿರುವ ಘಟಕ ವೆಚ್ಚ ಹಾಗೂ ನೆರವಿನ ಮೊತ್ತದಲ್ಲಿ ವ್ಯತ್ಯಾಸವಿದ್ದು, ಇಲಾಖೆಗೊಂದು ನೀತಿ ಅನುಸರಿಸುವುದು ಸೂಕ್ತವಲ್ಲ. ಹಾಗಾಗಿ ಇನ್ನು ಮುಂದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ನೀಡುವ ನೆರವಿನ ಮೊತ್ತವನ್ನು ಸಮಾಜ ಕಲ್ಯಾಣ ಇಲಾಖೆಯಲ್ಲಿರುವಂತೆಯೇ 3.5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕು ಎಂದು ಸಚಿವ ಶಿವರಾಜ ತಂಗಡಗಿ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಐವರು ಶಂಕಿತ ಭಯೋತ್ಪಾದಕರ ಬಂಧನ ಪ್ರಕರಣದ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಶ್ವಾನದಳದಿಂದ ಪರಿಶೀಲನೆ ನಡೆಸಲಾಗಿದೆ. ಪ್ರಯಾಣಿಕರ ಬ್ಯಾಗ್ ಕೂಡ ಪರಿಶೀಲನೆ ನಡೆಸಲಾಗುತ್ತಿದೆ.
ಕುಮಾರಸ್ವಾಮಿ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾಗ ಅವತ್ತು ವಿರೋಧ ಪಕ್ಷದ ನಾಯಕರಿಗೆ ಆಹ್ವಾನ ನೀಡಿದ್ದರು. ಬಹಳ ಜನ ವಿರೋಧ ಪಕ್ಷದ ನಾಯಕರು ಅವತ್ತು ಬಂದಿದ್ದರು. ಇವರಿಗೆ ಕುಮಾರಸ್ವಾಮಿ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿದ್ದರು. ಡ್ಯಾನಿಶ್ ಅಲಿ ಎನ್ನುವ ಜೆಡಿಎಸ್ ಜನರಲ್ ಸೆಕ್ರೆಟರಿಗೆ ಐಎಎಸ್ ಅಧಿಕಾರಿ ನೇಮಕ ಮಾಡಿದ್ದರು. ಆದರೆ ನಿನ್ನೆ ಕುಮಾರಸ್ವಾಮಿ ಧರಣಿ ಮಾಡಿದ್ದಾರೆ ಎಂದರು.
ಡೆಪ್ಯುಟಿ ಸ್ಪೀಕರ್ ಮೇಲೆ ಬಿಜೆಪಿ ಶಾಸಕರು ಕಾಗದ ಹರಿದು ಎಸೆದ ಪ್ರಕರಣದ ಬಗ್ಗೆ ಸದನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಪ್ರಜಾಪ್ರಭುತ್ವದ ವಿರೋಧಿಗಳು. ಸದನದಲ್ಲಿ ನಿನ್ನೆ ಬಿಜೆಪಿಯವರ ನಡವಳಿಕೆ ಬಗ್ಗೆ ಏನಂತ ಕರೆಯಬೇಕು? ಬಿಜೆಪಿಯವರನ್ನು ಅನಾಗರಿಕರು ಅಂತಾ ಕರೆಯಬೇಕು ಎಂದರು. ನಾನು ಯಾವತ್ತಿಗೂ ಇಂತಹ ಅನಾಗರಿಕ ವರ್ತನೆಯನ್ನು ನೋಡಿಲ್ಲ. ಪಾಪ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಮುಖವೇ ಸಪ್ಪೆ ಆಗಿ ಹೋಗಿದೆ. ಯೋಚನೆ ಮಾಡಬೇಡಿ ನಾವು ನಿಮ್ಮ ಜೊತೆ ಇದ್ದೇವೆ. ಮಾರ್ಷಲ್ ಇಲ್ಲದಿದ್ರೆ ಡೆಪ್ಯುಟಿ ಸ್ಪೀಕರ್ ಮೇಲೆ ಹಲ್ಲೆ ಮಾಡುತ್ತಿದ್ದರೇನೋ ಎಂದರು. ಲೋಕಸಭೆ ಚುನಾವಣೆಯಲ್ಲಿ ನಾವು ಕನಿಷ್ಠ 20 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ನಾವು ಕೊಟ್ಟ ಗ್ಯಾರಂಟಿಗಳಿಂದ ಜನರು ತುಂಬಾ ಸಂತಸವಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಯಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ಇಂಡಿಯಾ ಹೆಸರಿನಲ್ಲಿ ಒಂದಾಗಿದ್ದನ್ನು ಕಂಡು ಸಹಿಸದೆ ಕ್ಯಾತೆ ತೆಗೆದಿದ್ದಾರೆ ಎಂದರು.
ಶಿವಮೊಗ್ಗ: ಸಾಗರ ನಗರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸಾಗರ ಉಪ ವಿಭಾಗಾಧಿಕಾರಿಗಳ ಕಛೇರಿಗೆ ಹೋಗಲು ಜನರು ಪರದಾಟ ನಡೆಸುತ್ತಿದ್ದಾರೆ. ಚರಂಡಿ ತುಂಬಿ ರಸ್ತೆ ಮೇಲೆ ಮಳೆ ನೀರು ಹರಿಯುತ್ತಿದೆ.
ವಿಧಾನಸಭೆ:ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ನಾನು 14 ಬಜೆಟ್ ಮಂಡಿಸಿದ್ದೇನೆ. ಇದೇ ಮೊದಲ ಸಲ ವಿಪಕ್ಷದವರು ಒಬ್ಬರೂ ಇಲ್ಲದ ಸಮಯದಲ್ಲಿ ಉತ್ತರ ಕೊಡುತ್ತಿದ್ದೇನೆ. ವಿಪಕ್ಷದವರ ಆಸನಗಳು ಖಾಲಿ ಇವೆ. ಈ ತರಹದ ಬಜೆಟ್ ಉತ್ತರ ಇದೇ ಮೊದಲು. ವಿಪಕ್ಷ ನಾಯಕ ಇಲ್ಲದೇ ಮೊದಲ ಸಲ ಬಜೆಟ್ ಅಧಿವೇಶನ ನಡೆದಿದೆ. ರಾಷ್ಟ್ರೀಯ ಪಕ್ಷ ಬಿಜೆಪಿಗೆ ಒಬ್ಬ ವಿಪಕ್ಷ ನಾಯಕನ ಆಯ್ಕೆ ಮಾಡಿಕೊಳ್ಳಲು ಆಗಿಲ್ಲ ಅಂದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕ. ಬಿಜೆಪಿಯವರಿಗೆ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವ ವ್ಯವಸ್ಥೆಗಳ ಮೇಲೆ ನಂಬಿಕೆ ಇಲ್ಲ ಎಂದರು.
ವಿಧಾನಸಭೆ: ಮಹದಾಯಿ ಯೋಜನೆ ಬಗ್ಗೆ ಶಾಸಕ ಎನ್.ಹೆಚ್.ಕೋನರೆಡ್ಡಿ ಪ್ರಸ್ತಾಪ ಮಾಡಿದ್ದು, ಬಜೆಟ್ನಲ್ಲಿ ಹೇಳಿದಂತೆ ಮಹದಾಯಿ ಯೋಜನೆ ಜಾರಿ ಮಾಡಬೇಕು. ಮಹದಾಯಿ ಯೋಜನೆ ವಿಚಾರವಾಗಿ ಸರ್ವಪಕ್ಷ ಸಭೆ ಕರೆಯಬೇಕು. ಸಿಎಂ ಮಹದಾಯಿ ಯೋಜನೆ ಜಾರಿ ಮಾಡುವ ಭರವಸೆ ಕೊಡಬೇಕು. ಬಸವರಾಜ ಬೊಮ್ಮಾಯಿ ಅವರು ಯೋಜನೆ ಜಾರಿ ಮಾಡುತ್ತಾರೆ ಎಂದು ಅಂದುಕೊಂಡಿದ್ದೆ. ಈ ಹಿಂದೆ ಯೋಜನೆ ಜಾರಿಗೆ ಆಗ್ರಹಿಸಿ ಅವರು ಪಾದಯಾತ್ರೆ ಮಾಡಿದ್ದರು. ನಾನೂ ಕೂಡ ಬಿಜೆಪಿಯವರ ಜೊತೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದೆ. ಆದರೆ ಬೊಮ್ಮಾಯಿ ಮಹದಾಯಿ ಯೋಜನೆ ಜಾರಿ ಮಾಡಲಿಲ್ಲ. ಉತ್ತರ ಕರ್ನಾಟಕ ಭಾಗದ ಜನ ಸಿದ್ದರಾಮಯ್ಯ ಮೇಲೆ ಭರವಸೆ ಇಟ್ಟಿದ್ದಾರೆ. ಈ ಯೋಜನೆ ಜಾರಿ ಮೂಲಕ ಸಿಎಂ ಒಂದು ಹೊಸ ಸಂದೇಶ ಕೊಡಬೇಕು. ಕಿತ್ತೂರು ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ನಾಗಮಂಗಲದ ಕೆಎಸ್‌ಆರ್‌ಟಿಸಿ ಚಾಲಕ ಆತ್ಮಹತ್ಯೆಗೆ ಯತ್ನ ಪ್ರಕರಣ ಸಂಬಂಧ ತನಿಖಾ ವರದಿ ಸದನದಲ್ಲಿ ಬಹಿರಂಗ ಬಳಿಕ ಕಾಂಗ್ರೆಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಮಾಡಿದ್ದ ಆರೋಪಗಳನ್ನು ಉಲ್ಲೇಖಿಸಿ ಅಸಮಾಧಾನ ಹೊರಹಾಕಿದ್ದಾರೆ. ಇನ್ನಷ್ಟು ವಿಸ್ತೃತ ತನಿಖೆ ನಡೆಸುವಂತೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಶಾಸಕರು ಆಗ್ರಹಿಸಿದ್ದಾರೆ.
ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿತ್ತಿರುವ ಹಿನ್ನೆಲೆ ಘಟಪ್ರಭಾ ನದಿಗೆ 20 ಸಾವಿರ ಕ್ಯೂಸೆಕ್‌ನಷ್ಟು ಒಳಹರಿವು ಆಗಿದೆ. ಪರಿಣಾಮ ಬೆಳಗಾವಿ ಜಿಲ್ಲೆಯ ಹುನ್ನೂರು ಹೊರವಲಯದ ವಿಠ್ಠಲ ದೇವಸ್ಥಾನದ ಒಳಗೆ ನೀರು ನುಗ್ಗಿದೆ. ಹಿಡಕಲ್ ಜಲಾಶಯದ ಮಧ್ಯ ಭಾಗದಲ್ಲಿರುವ ಪುರಾತನ ದೇಗುಲ ಇದಾಗಿದ್ದು, ಸದ್ಯ ದೇವಸ್ಥಾನ ಮುಳುಗಡೆ ಹಿನ್ನೆಲೆ ದೇವರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.
ಚಿಕ್ಕಮಗಳೂರು: ಶಂಕಿತ ಉಗ್ರರಿಗೂ ಚಿಕ್ಕಮಗಳೂರಿನಲ್ಲಿ ಬಂಧಿಸಿದವರಿಗೂ ಸಂಬಂಧವಿಲ್ಲ ಎಂದು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು, ಡಕಾಯಿತಿ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರಿಂದ ಇಬ್ಬರ ಬಂಧನವಾಗಿದೆ ಎಂದರು. ಜುಲೈ 16ರಂದು ಬೆಂಗಳೂರು ಪೊಲೀಸರು ಬೆಂಗಳೂರು ಮೂಲದ ಮಹಿಳೆ ಸೈಯದಾ, ಖಾಲಿದ್ ಎಂಬವರನ್ನು ಬಂಧಿಸಿದ್ದರು.
ವಿಧಾನಸಭೆ: ಭೋಜನ ವಿರಾಮದ ನಂತರ ವಿಧಾನಸಭೆ ಕಲಾಪ ಆರಂಭಗೊಂಡಿದೆ. ಶಾಸಕ ನರೇಂದ್ರಸ್ವಾಮಿ ಅವರು ಬಜೆಟ್ ಮೇಲೆ ಚರ್ಚೆ ಮುಂದುವರಿಸಿದ್ದಾರೆ.
ಪರಿಷತ್ನಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆ ವಿಧೇಯಕ ಅಂಗೀಕರಿಸಲಾಗಿದೆ. ಪರಿಷತ್ನಲ್ಲಿ ವಿಪಕ್ಷಗಳ ಗೈರು ಹಾಜರು ನಡುವೆ ಧ್ವನಿಮತದ ಮೂಲಕ ಸಿವಿಲ್ ಪ್ರಕ್ರಿಯಾ ಸಂಹಿತೆ ವಿಧೇಯಕ ಅಂಗೀಕಾರ ಮಾಡಲಾಗಿದೆ.
ರಾಜ್ಯಪಾಲರಿಗೆ ದೂರು ನೀಡಿ ಬಿಜೆಪಿ, JDS ನಾಯಕರು ಹೊರಬಂದಿದ್ದಾರೆ. ಸ್ಪೀಕರ್, ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲ ಗೆಹ್ಲೋಟ್ಗೆ ಮಾಜಿ ಸಿಎಂಗಳಾದ ಬೊಮ್ಮಾಯಿ, ಹೆಚ್ಡಿಕೆ ನೇತೃತ್ವದಲ್ಲಿ ದೂರು ನೀಡಲಾಗಿದೆ.
ಬೆಂಗಳೂರಿನಲ್ಲಿ ಐವರು ಶಂಕಿತ ಭಯೋತ್ಪಾದಕರ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಉಗ್ರ ಜಾಹಿದ್ ತಬ್ರೇಜ್ ನಿವಾಸದಲ್ಲಿ 4 ಗ್ರೆನೇಡ್ಗಳು ಪತ್ತೆಯಾಗಿವೆ. ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರುವ ನಿವಾಸದಲ್ಲಿ ಕೆಮಿಕಲ್ & ಮರಳು ತುಂಬಿದ್ದ ಚೀಲದಲ್ಲಿ ಗ್ರೆನೇಡ್ ಪತ್ತೆಯಾಗಿದೆ.
ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ವಿವಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿದೆ. ಶುಕ್ರವಾರ ಘಟಿಕೋತ್ಸವದಲ್ಲಿ ಬಿಎಸ್ವೈಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ವಿವಿ ಕುಲಪತಿ ಪ್ರೊ.ಜಗದೀಶ್ ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಸಾಥ್ ನೀಡುವಂತೆ ಮಾಜಿ ಸಿಎಂ ಕುಮಾರಸ್ವಾಮಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕರೆ ಮಾಡಿದ್ದಾರೆ. ಈ ವೇಳೆ ಜೆಡಿಎಸ್ ಶಾಸಕರ ಅಭಿಪ್ರಾಯ ಪಡೆದು ತಿಳಿಸುವೆ ಎಂದ ಹೆಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ನಂತರ ಶಾಸಕರ ಅಭಿಪ್ರಾಯ ಪಡೆದು ಬಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರಿನ ಕನ್ನಿಂಗ್ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಿಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಡಿಸ್ಚಾರ್ಜ್ ಆಗಿದ್ದಾರೆ. ಡಿಸ್ಚಾರ್ಜ್ ಆಗಿ ಕುಟುಂಬಸ್ಥರ ಜೊತೆ ವಿಜಯಪುರಕ್ಕೆ ತೆರಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ವೆಂಟಿಲೇಟರ್ ಅಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಸಿಗದ ಹಿನ್ನಲೆ ಮೂರು ತಿಂಗಳ ಗಂಡು ಮಗು ಮೃತಪಟ್ಟ ಘಟನೆ ನಡೆದಿದೆ. ಐದು ವರ್ಷದ ನಂತರ ದಂಪತಿಗೆ ಮಗು ಜನಿಸಿತ್ತು. ಕಫಾ ಹಿನ್ನಲೆಯಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಉಡುಪಿಯ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗಲು ತಿಳಿಸಲಾಗಿತ್ತು. ಆಸ್ಪತ್ರೆಗೆ ಸಾಗಿಸಲು ಮಕ್ಕಳ ವೆಂಟಿಲೇಟರ್ ಅಂಬ್ಯುಲೆನ್ಸ್ ಇಲ್ಲದ ಹಿನ್ನಲೆ ಉಡುಪಿಯಿಂದ ವೆಂಟಿಲೇಟರ್ ಆಸ್ಪತ್ರೆ ತರೆಸಲು ಪೋಷಕರು ಮುಂದಾಗಿದ್ದರು. ಆದ್ರೆ ಅಂಬ್ಯುಲೆನ್ಸ್ ಬರುವ ಮುನ್ನವೇ ಮಗು ಮೃತಪಟ್ಟಿದೆ.
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಕೆ. ಗ್ರಾಮದಲ್ಲಿನ ವಸತಿ ಶಾಲೆಯ ಪ್ರಿನ್ಸಿಪಾಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿ ಪ್ರಿನ್ಸಿಪಾಲ್ ನಾಗಶೆಟ್ಟಿ ವಿರುದ್ಧ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ದೂರು ಸಲ್ಲಿಸಿದ್ದಾರೆ. ಚಿಟಗುಪ್ಪಾ ಪೋಲೀಸ್ ಠಾಣೆಯಲ್ಲಿ ನಾಗಶೆಟ್ಟಿ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.
ವಿಧಾನಸೌಧದ ಪತ್ರಗಾರ ಇಲಾಖೆ ಕೊಠಡಿಯಲ್ಲಿ ಕೆರೆ ಹಾವು ಪತ್ತೆಯಾಗಿದೆ. ಕೆರೆ ಹಾವು ಕಂಡು ಪತ್ರಗಾರ ಇಲಾಖೆ ಸಿಬ್ಬಂದಿ ಆತಂಕಗೊಂಡಿದ್ದಾರೆ. ಸರ್ಕಾರದ ಮಹತ್ವದ ಹಳೆಯ ದಾಖಲೆಗಳು ಇರುವ ಕೊಠಡಿಯಲ್ಲಿ ಹಾವು ಪತ್ತೆಯಾಗಿದ್ದು ಉರಗ ರಕ್ಷಕರನ್ನು ಕರೆಸಿ ಹಾವು ರಕ್ಷಣೆ ಮಾಡಲಾಗಿದೆ.
ಇಂದ್ರ ಪದವಿಗೆ ಏರಿದ ನಹುಶ ಮಹಾರಾಜನಿಗೆ ಅಧಿಕಾರದ ಮದ ಏರಿತ್ತು. ನಹುಶ ಮಹಾರಾಜನಂತೆ ಸಿದ್ದರಾಮಯ್ಯ ಶಾಪಗ್ರಸ್ಥರಾಗಬೇಕಾಬಹುದು ಎಂದು ಬೆಂಗಳೂರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ನಹುಶ ಮಹಾರಾಜ ಅಧಿಕಾರದ ಮದದಿಂದ ಅಷ್ಟಮುನಿಗಳು ಪಲ್ಲಕ್ಕಿ ಹೊರಬೇಕು ಎಂದಿದ್ದ. ಪಲ್ಲಕ್ಕಿ ಹೊರುವಾಗಲೇ ಮುನಿಗಳನ್ನು ಒದ್ದ ಪರಿಣಾಮ ಶಾಪಗ್ರಸ್ಥನಾದ. ಧರ್ಮರಾಯ ಬರುವ ತನಕ ಶಾಪ ವಿಮೋಚನೆಗೆ ಕಾಯಬೇಕಾಯಿತು. ಹಾಗೆ ಅಧಿಕಾರದ ಮದ ಒಳ್ಳೆಯದಲ್ಲ. ಸಂವಿಧಾನ ಬಗ್ಗೆ ಮಾತಾಡುವವರು ವಿಧಾನಸಭೆ ಬಾಗಿಲಿಗೆ ಒದ್ದಿದ್ದರು? ಈ ಹಿಂದೆ ಧರ್ಮೇಗೌಡರನ್ನು ಸಭಾಪತಿ ಪೀಠದಿಂದ ಎಳೆದು ಹಾಕಿದ್ರು? ಯಾವ ಕಾಯ್ದೆಯಡಿ ನಾಯಕರ ಸ್ವಾಗತಕ್ಕೆ ಅಧಿಕಾರಿಗಳನ್ನು ನೇಮಿಸಿದ್ರು. ವಿಷಯ ಡೈವರ್ಟ್ ಮಾಡಲು 10 ಶಾಸಕರ ಅಮಾನತು ಮಾಡಿದ್ದಾರೆ ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ಕ್ಷುಲ್ಲಕ ಕಾರಣಕ್ಕೆ ಅಪ್ಪ-ಮಗಳ ನಡುವೆ ಗಲಾಟೆ ನಡೆದಿದ್ದು ಮಗಳು ತಂದೆಯನ್ನೇ ಕೊಲೆ ಮಾಡಿದ್ದಾಳೆ. ಚನ್ನಪಟ್ಟಣ ತಾಲೂಕಿನ ನಾಯಿದೊಳೆ ಗ್ರಾಮದಲ್ಲಿ ಗುದ್ದಲಿಯಿಂದ ಅಪ್ಪನ ತಲೆಗೆ ಹೊಡೆದು ಮಗಳು ಕೊಲೆ ಮಾಡಿದ್ದಾಳೆ. ಹುಚ್ಚೀರಯ್ಯ(68) ಕೊಲೆಯಾದ ವ್ಯಕ್ತಿ. ಪುಷ್ಪ (30) ತಂದೆಯನ್ನೇ ಹತ್ಯೆ ಮಾಡಿದ ಮಗಳು. ಗಂಡನ ಬಿಟ್ಟು ಬಂದು ಹಲವು ವರ್ಷಗಳಿಂದ ತಂದೆ ಮನೆಯಲ್ಲೇ ವಾಸವಿದ್ದ ಪುಷ್ಪ ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದಳು. ಮಂಗಳವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಅಪ್ಪ ಮಗಳ ನಡುವೆ ಮಾತಿನ ಚಕಮಕಿ ಆಗಿ ಘಟನೆ ನಡೆದಿದೆ.
ವಿಧಾನಸಭೆಯಿಂದ ಬಿಜೆಪಿಯ 10 ಶಾಸಕರ ಅಮಾನತು ಹಿನ್ನೆಲೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಸದನ ಬಹಿಷ್ಕಾರ ಮಾಡಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಸವರಾಜ ಬೊಮ್ಮಾಯಿ, ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಸುನೀಲ್ ಕುಮಾರ್, ಆರಗ ಜ್ಞಾನೇಂದ್ರ, ಮುನಿರತ್ನ, ಸುರೇಶ್ ಕುಮಾರ್, ಭೈರತಿ ಬಸವರಾಜ್ ಸೇರಿದಂತೆ ಹಲವರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸ್ಪೀಕರ್ ಪೀಠಕ್ಕೆ ಯು.ಟಿ.ಖಾದರ್ ಅಗೌರವ ತೋರಿದ್ದಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಆರ್.ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ. ಸ್ಪೀಕರ್ ಆದವರು ಒಂದು ಪಾರ್ಟಿ ಪರವಾಗಿ ಇರಬಾರದು. ಸೋನಿಯಾ, ರಾಹುಲ್ರನ್ನು ಸ್ಪೀಕರ್ ಭೇಟಿಯಾಗಿದ್ದಾರೆ. ಐಎಎಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡಿ ನ್ಯಾಯ ಕೇಳಿದ್ದೆವು. ಪ್ರಶ್ನೆ ಮಾಡಿದ್ದಕ್ಕೆ ನಮ್ಮನ್ನು ಅಮಾನತು ಮಾಡಿದ್ದಾರೆ. ಸ್ಪೀಕರ್ ಕ್ರಮ ಖಂಡಿಸಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ವಿಧಾನಸಭೆಯಿಂದ ಬಿಜೆಪಿಯ 10 ಶಾಸಕರ ಅಮಾನತು ಹಿನ್ನೆಲೆ ರಾಜ್ಯಪಾಲ ಗೆಹ್ಲೋಟ್ಗೆ ದೂರು ನೀಡಲು ಬಿಜೆಪಿ ಶಾಸಕರು ನಿರ್ಧರಿಸಿದ್ದಾರೆ. ವಿಧಾನಸೌಧದಿಂದ ರಾಜಭವನದವರೆಗೂ ಬಿಜೆಪಿ ನಾಯಕರು ಪಾದಯಾತ್ರೆ ಮೂಲಕ ತೆರಳಿ ದೂರು ನೀಡಲು ಮುಂದಾಗಿದ್ದಾರೆ.
ಸಿದ್ದರಾಮಯ್ಯ ಒಬ್ಬ ಗೋ ಮುಖ ವ್ಯಾಘ್ರ. ಬಿಜೆಪಿಯ ಹೋರಾಟ ನ್ಯಾಯಯುತ ಹೋರಾಟ ಇತ್ತು. ಡೆಪ್ಯುಟಿ ಸ್ಪೀಕರ್ ಅಂತಾ ದಲಿತರ ಮೇಲೆ ಪ್ರೀತಿ ತೋರಿಸುವ ಸಿದ್ದರಾಮಯ್ಯ ನವರೇ ದಲಿತರ ಸಮಾಧಿ ಮೇಲೆ ಕುಳಿತಿರೋದು ನೀವೇ ತಾನೇ? ನೀವು ಸಿಎಂ ಆಗಿ ಕುಳಿತಿರೋದು ನಿಮ್ಮ ಜಾಗದಲ್ಲಿ ಅಲ್ಲ, ದಲಿತರ ಸ್ಥಾನದಲ್ಲಿ. ನಿಮಗೆ ತಾಕತ್ ಇದ್ರೆ ಘೋಷಣೆ ಮಾಡಿ. ನೀವು ಅನುಭವಿಸಿರುವ ಎಲ್ಲಾ ಅಧಿಕಾರ ದಲಿತರಿಗೆ ಸೇರಬೇಕಿದ್ದದ್ದು ದಲಿತರಿಗೆ ಸಿಎಂ ಆಗಲು ಅವಕಾಶ ಬಂದಾಗ ನಾನು ದಲಿತ ಅಂದ್ರಲ್ಲಾ, ನಿಮಗೆ ನಾಚಿಕೆ ಆಗಲ್ವಾ? ನಿಮಗೆ ಸ್ವಲ್ಪ ದಲಿತ ಕಾಳಜಿ ಇದ್ರೆ ಇವತ್ತು ರಾಜೀನಾಮೆ ನೀಡಿ. ದಲಿತರಿಗೆ ಸಿಎಂ ಸ್ಥಾನ ಬಿಟ್ಟು ಕೊಡಿ. ಇಲ್ಲವಾದಲ್ಲಿ ನೀವು ಒಬ್ಬ ಗೋಮುಖ ವ್ಯಾಘ್ರ. ಸಿದ್ದರಾಮಯ್ಯ ಮೇಲೆ ಮಾತ್ರ ಬಸಪ್ಪ, ಆದರೆ ಒಳಗೆ ಮಾತ್ರ ವಿಷಪ್ಪ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆ ಬಳಿಕ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಯುಪಿ ಮಾಜಿ ಸಿಎಂ ಅಖಿಲೇಶ್ ಭೇಟಿ ನೀಡಿದ್ದಾರೆ. ಅಖಿಲೇಶ್ ಯಾದವ್ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದು ಅರಮನೆ, ಚಾಮುಂಡಿ ಬೆಟ್ಟಕ್ಕೂ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ.
ವಿಧಾನಸಭೆಯಿಂದ ಬಿಜೆಪಿಯ 10 ಶಾಸಕರ ಅಮಾನತು ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಶಾಸಕರು ಹತಾಶೆಯಿಂದ ಗೂಂಡಾವರ್ತನೆ ತೋರಿದ್ದಾರೆ ಎಂದು ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. ದಲಿತ ಡೆಪ್ಯುಟಿ ಸ್ಪೀಕರ್ ಮೇಲೆ ಪೇಪರ್ ಹರಿದು ಎಸೆದಿದ್ದಾರೆ. ಬಿಜೆಪಿಯವರು ಮಹಾಭಾರತ ನಾಟಕವನ್ನೇ ತೋರಿಸಿದ್ದಾರೆ ಎಂದರು. ಬಿಜೆಪಿ ಪ್ರತಿಭಟನೆಗೆ ಜೆಡಿಎಸ್ ನಾಯಕರ ಬೆಂಬಲ ವಿಚಾರಕ್ಕೆ ಸಂಬಂಧಿಸಿ ಜೆಡಿಎಸ್ ನಿಲುವೇನು ಅಂತಾ ಇನ್ನೂ ಸ್ಪಷ್ಟವಾಗಿಲ್ಲ. ಹೆಚ್.ಡಿ.ದೇವೇಗೌಡರು ತಮ್ಮ ನಿಲುವು ಏನು ಅಂತಾ ಹೇಳಲಿ. ಹೆಚ್.ಡಿ.ದೇವೇಗೌಡರು, ಇಬ್ರಾಹಿಂ ಅವರ ಅಭಿಪ್ರಾಯ ತಿಳಿಸಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಮಾತ್ರ ಮಾತಾಡಿದ್ದಾರೆ ಎಂದರು.
ನಿನ್ನೆಯ ಬೆಳವಣಿಗೆಗೆ ಆಡಳಿತ ಪಕ್ಷದ ನಡವಳಿಕೆಯೇ ಕಾರಣ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಐಎಎಸ್ ಅಧಿಕಾರಿಗಳ ದುರುಪಯೋಗ ಬಗ್ಗೆ ನಿನ್ನೆ ಸದನದಲ್ಲಿ ಬಿಜೆಪಿ ಸದಸ್ಯರು ಪ್ರಸ್ತಾಪ ಮಾಡಿದ್ದರು. ಆಡಳಿತ ಪಕ್ಷದವರು ತಪ್ಪೆ ಮಾಡಿಲ್ಲ ಅಂತಾ ಉದ್ಧಟತನ ತೋರಿದ್ರು ಎಂದು ಕಾಂಗ್ರೆಸ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಗೋಕಾಕ್-ಶಿಂಗಳಾಪೂರ ನಡುವಿನ ಸಂಪರ್ಕ ಸೇತುವೆ ಜಲಾವೃತಗೊಂಡಿದೆ. ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಮುಳುಗಡೆಯಾಗಿದೆ. ಎರಡು ಬದಿಯಲ್ಲಿ ಬ್ಯಾರಿಕೆಡ್ ಹಾಕಿ ಪೊಲೀಸರು ಸಂಚಾರ ಸ್ಥಗಿತಗೊಳಿಸಿದ್ದಾರೆ.
ಖಾಸಗಿ ಬಸ್, ಟ್ಯಾಕ್ಸಿ ಮತ್ತು ಆಟೋ ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಜುಲೈ 27 ರಂದು ಬಂದ್‌ಗೆ ಮುಂದಾಗಿವೆ.
ಜು.27ರಂದು ಬೆಂಗಳೂರಿನಲ್ಲಿ ಓಲಾ, ಉಬರ್, ಆಟೋ ಕ್ಯಾಬ್ ಹಾಗೂ ಖಾಸಗಿ ಬಸ್ ಇರಲ್ಲ#shaktiyoga #Auto #Bengaluru @CMofKarnataka https://t.co/XJPZGfRkKb
— TV9 Kannada (@tv9kannada) July 20, 2023
ಅಮಾನತಾಗಿರುವ 10 ಶಾಸಕರಿಗೆ ವಿಧಾನಸಭೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಸ್ಪೀಕರ್ ಖಾದರ್ 10 ಶಾಸಕರ ಪಟ್ಟಿಯನ್ನು ಮಾರ್ಷಲ್ಗಳಿಗೆ ನೀಡಿದ್ದಾರೆ.
ರಾಜಭವನಕ್ಕೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಭೇಟಿ ನೀಡಿದ್ದಾರೆ. ಸ್ಪೀಕರ್ ಖಾದರ್ ರಾಜ್ಯಪಾಲ ಗೆಹ್ಲೋಟ್ ಭೇಟಿ ಮಾಡಲಿದ್ದಾರೆ. ನಿನ್ನೆ ಸದನದಲ್ಲಿನ ಬೆಳವಣಿಗೆ, ಹಾಗೂ ಬಿಜೆಪಿ ಶಾಸಕರ ಅಮಾನತು ಸಂಬಂಧ ರಾಜ್ಯಪಾಲರಿಗೆ ಮಾಹಿತಿ ನೀಡಲಿದ್ದಾರೆ.
ಬೆಂಗಳೂರಿನ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಬಸನಗೌಡ ಯತ್ನಾಳ್ ಚಿಕಿತ್ಸೆ ಪಡೆಯುತ್ತಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಆರೋಗ್ಯ ವಿಚಾರಿಸಿದ್ದಾರೆ. ಶಾಸಕರಾದ ಸುರೇಶ್ ಕುಮಾರ್, ಮಹೇಶ್ ತೆಂಗಿನಕಾಯಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಉಪಸ್ಥಿತರಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಸರಿನ ಹಕ್ಲು ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಕಳೆದ 3 ದಿನದಿಂದ ಕಾಫಿ ತೋಟದಲ್ಲೇ ಕಾಡಾನೆ ಬೀಡುಬಿಟ್ಟಿವೆ. ಕಾಡಾನೆ ಪ್ರತ್ಯಕ್ಷದಿಂದ ಕಾಫಿ ತೋಟಕ್ಕೆ ಕೆಲಸಕ್ಕೆ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ಮಾಹಿತಿ ನೀಡಿದರೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ. ಆಲ್ದೂರು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಮೊಹರಂ ಹಬ್ಬ ನಿಷೇಧಿಸಿ ಕನಕಗಿರಿ ತಹಶೀಲ್ದಾರ್ ಸಂಜಯ್ ಕಾಂಬ್ಳೆ ಆದೇಶ ಹೊರಡಿಸಿದ್ದಾರೆ. ಜುಲೈ 29ರವರೆಗೆ ಹುಲಿಹೈದರ್ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕಳೆದ ವರ್ಷ 2 ಗುಂಪುಗಳ ನಡುವೆ ಗಲಾಟೆಯಾಗಿ ಇಬ್ಬರು ಮೃತಪಟ್ಟಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿ 84 ಜನರನ್ನು ಬಂಧಿಸಲಾಗಿತ್ತು.
ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ಹಿನ್ನೆಲೆ ಮೈಸೂರಿನಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಉದಯಗಿರಿ ಠಾಣಾ ಪೊಲೀಸರಿಂದ ನೈಟ್ ಬೀಟ್ ಮತ್ತಷ್ಟು ಚುರುಕುಗೊಂಡಿದೆ. ರಾತ್ರಿ ಗಸ್ತಿನ ಬಗ್ಗೆ ಉಪವಿಭಾಗದ ಎಸಿಪಿ ಶಾಂತಮಲ್ಲಪ್ಪ ಸೂಚನೆ ನೀಡಿದ್ದಾರೆ. ಮೈಸೂರಲ್ಲಿ ಕಿಡಿಗೇಡಿಗಳ ಚಟುವಟಿಕೆಗೆ ಬ್ರೇಕ್ ಹಾಕುವಂತೆ ಸೂಚಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ವಶಕ್ಕೆ ಪಡೆದು ವಿಚಾರಣೆ ನಡೆಸುವಂತೆ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು ಮಳೆಯಿಂದ ಹಾಲತ್ರಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಖಾನಾಪುರ ತಾಲೂಕಿನ ಅಶೋಕ ನಗರದ ಬಳಿ ಪ್ರವಾಹ ಭೀತಿ ಎದುರಾಗಿದೆ. ಅಶೋಕ ನಗರದ ಬಳಿಯಿರುವ ಸೇತುವೆ ಮುಳುಗುವ ಆತಂಕ ಎದುರಾಗಿದೆ. ಸೇತುವೆ ಮುಳುಗಿದರೆ 40 ಹಳ್ಳಿಗಳಿಗೆ ಸಂಪರ್ಕ ಕಡಿತ ಭೀತಿ ಇದೆ.
ಕಲುಷಿತ ಆಹಾರ ಸೇವಿಸಿ ವಸತಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥ ಕೇಸ್ಗೆ ಸಂಬಂಧಿಸಿ ಯಡವನಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಿನ್ಸಿಪಾಲ್ ಅಮಾನತುಗೊಳಿಸಲಾಗಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಿಇಒ ಡಾ.ನವೀನ್‌ಕುಮಾರ್ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ, ಶೃಂಗೇರಿ, ಮೂಡಿಗೆರೆ, ಕಳಸ, ಕೊಪ್ಪ, ಎನ್.ಆರ್.ಪುರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು ಹೇಮಾವತಿ, ತುಂಗಾಭದ್ರಾ ನದಿಗಳಲ್ಲಿ ಒಳಹರಿವು ಹೆಚ್ಚಳವಾಗಿದೆ. ಭಾರಿ ಮಳೆ ಹಿನ್ನೆಲೆ ಹೆಬ್ಬಾಳೆ ಸೇತುವೆ ಮುಳುಗಡೆ ಆತಂಕ ಎದುರಾಗಿದೆ. ಹೆಬ್ಬಾಳೆ ಸೇತುವೆ ಮುಳುಗಡೆಗೆ ಕೆಲವೇ ಅಡಿಗಳು ಬಾಕಿ ಇದೆ.
ಗೃಹಲಕ್ಷ್ಮಿ ಯೋಜನೆಗೆ ಇಂದಿನಿಂದ ಅರ್ಜಿಸಲ್ಲಿಕೆ ಅರಂಭವಾಗಿದೆ. ಅರ್ಜಿ ನೋಂದಣಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಮೊಬೈಲ್ ನಂಬರ್ ಅಗತ್ಯವಿದ್ದು, ಬೆಂಗಳೂರು ಇನ್, ಗ್ರಾಮ ಒನ್, ಕರ್ನಾಟಕ ಒನ್, ಬಾಪುಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇಂದಿನಿಂದ ಬೆಂಗಳೂರು ಒನ್ ಕೇಂದ್ರಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ. ಕೇಂದ್ರಗಳಲ್ಲಿ ನೂಕು ನುಗ್ಗಲಾಗುವ ಸಾಧ್ಯತೆ ಇದೆ. ಸಧ್ಯ 1.28 ಕೋಟಿಯಷ್ಟು ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು.
ಬಳ್ಳಾರಿ ನಗರ ಹೊರವಲಯದ ಗುಗ್ಗರಹಟ್ಟಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ ಮಾಡಲಾಗಿದೆ. ಮೆಹಬೂಬ್ ಬಾಷಾ(40) ಕೊಲೆಯಾದ ವ್ಯಕ್ತಿ. ದುಷ್ಕರ್ಮಿಗಳು ಬಾಷಾ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಬಾಷಾ ಮೃತಪಟ್ಟಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರದ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ನೆಚ್ಚಿನ ಶಿಕ್ಷಕನ ವರ್ಗಾವಣೆಗೆ ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದಾರೆ. ದೋಟಿಹಾಳ ಗ್ರಾಮದ ಪ್ರೌಢಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕರಾಗಿದ್ದ ವಿಜಯಕುಮಾರ ಮೈತ್ರಿಗಾಗಿ ವಿದ್ಯಾರ್ಥಿಗಳು ಕಣ್ಣೀರಿಟ್ಟರು. ಕಳೆದ 13 ವರ್ಷಗಳಿಂದ ದೋಟಿಹಾಳ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಕುಮಾರ್ ಇದೀಗ ಕಾಟಾಪೂರ ಪ್ರೌಢಶಾಲೆಗೆ ವರ್ಗಾವಣೆಯಾಗಿದ್ದಾರೆ. ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ನೂರಾರು ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಹೀಗಾಗಿ ಕೊಲ್ಹಾಪುರದ ಪಂಚಗಂಗಾ ನದಿ ತೀರದಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಕೃಷ್ಣಾ ನದಿಯ ಉಪನದಿ ಪಂಚಗಂಗಾದಲ್ಲಿ ಒಳಹರಿವು ದಿಢೀರ್ ಏರಿಕೆಯಾಗಿದೆ. ಕಳೆದ 2-3 ದಿನಗಳಿಂದ ಕೊಲ್ಹಾಪುರ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು ಪಂಚಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆಗಳು ಮುಳುಗಡೆಯಾಗಿವೆ. ಸುಮಾರು 25ಕ್ಕೂ ಹೆಚ್ಚು ಕೆಳಹಂತದ ಸೇತುವೆಗಳು ಜಲಾವೃತಗೊಂಡಿವೆ. ಮಳೆ ಮುಂದುವರಿದರೆ ಕೊಲ್ಹಾಪುರ ನಗರಕ್ಕೆ ನದಿ ನೀರು ನುಗ್ಗುವ ಭೀತಿ ಎದುರಾಗಿದೆ.
ವಿಧಾನಸೌಧದಲ್ಲಿ ಕುಸಿದು ಬಿದ್ದ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಆರೋಗ್ಯ ಸದ್ಯ ಸ್ಥಿರವಾಗಿದೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ವೈದ್ಯ ಮೂಲಗಳು ಮಾಹಿತಿ ನೀಡಿವೆ. ಸದ್ಯ ಬಿಪಿ ಕೂಡ ಕಂಟ್ರೋಲ್ ಗೆ ಬಂದಿದೆ. ಇಂದು ಮಧ್ಯಾಹ್ನದ ವೇಳೆಗೆ ಡಿಸ್ಚಾರ್ಜ್ ಆಗಿ ಮನೆಗೆ ತೆರಳಬಹುದೆಂದು ವೈದ್ಯರು ತಿಳಿಸಿದ್ದಾರೆ. ಎರಡು ಮೂರು ದಿನ ರೆಸ್ಟ್ ಮಾಡುವಂತೆ ಸೂಚಿಸಿದ್ದಾರೆ.
Published On - 8:07 am, Thu, 20 July 23