Karnataka News live Updates: ಕಾಂಗ್ರೆಸ್ ನುಡಿದಂತೆ ಉಚಿತ ಯೋಜನೆಗಳನ್ನು ಒಂದೊಂದಾಗಿ ಜಾರಿ ಮಾಡುತ್ತಿದೆ. ಆದ್ರೆ ಗೂಗಲ್ ಪ್ಲೈ ಸ್ಟೋರ್ನಲ್ಲಿ ನಕಲಿ ಆ್ಯಪ್ಗಳ ಹಾವಳಿ ಜೋರಾಗಿದೆ. ಇನ್ನು ಅನ್ನಭಾಗ್ಯದ ಯೋಜನೆಯಲ್ಲಿ ಐದು ಕೆಜಿ ಅಕ್ಕಿ ಜತೆ ಐದು ಕೆಜಿ ಅಕ್ಕಿಗೆ ಹಣ ನೀಡಲಾಗ್ತಿದೆ. ನಿನ್ನೆ ಮೈಸೂರು, ಕೋಲಾರ, ಬಾಗಲಕೋಟೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಫಲಾನುಭವಿಗಳಿಗೆ ಹಣ ರಿಲೀಸ್ ಆಗಿದೆ. 2 ದಿನದಲ್ಲೇ 20 ಲಕ್ಷದ 4 ಸಾವಿರದ ಪಡಿತರದಾರರಿಗೆ ಹಣ ಜಮೆ ಮಾಡಲಾಗಿದೆ. ಮತ್ತೊಂದೆಡೆ ನಿನ್ನೆ ಸಂಜೆ ಬಳಿಕ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಸಾವರ್ಕರ್ ವಿಚಾರವಾಗಿ ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿ ನಡೆಯಿತು. ಇನ್ನು ಹೆಚ್ಡಿ ಕುಮಾರಸ್ವಾಮಿ ಸದನದಲ್ಲಿ ವರ್ಗಾವಣೆ ರೇಟ್ ಕಾರ್ಡ್ ಚಲಾಯಿಸಿದ್ದು ಇದು ಇಂದು ಕೂಡ ಸದ್ದು ಮಾಡಲಿದೆ. ಇಂದಿನ ಲೇಟೆಸ್ಟ್ ಅಪ್ಡೇಟ್ಸ್ಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ವಿಧಾನಸೌಧದ ಸಚಿವ ಸಂಪುಟದ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದೆ.
ರೇಟ್ ಕಾರ್ಡ್ ಬಗ್ಗೆ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿ, ಕುಮಾರಸ್ವಾಮಿ ಯಾವುದೋ ಪತ್ರ ತೋರಿಸಿದರು, ಅದನ್ನು ಅವರೇ ತಗೊಂಡು ಹೋದರು. ಬಳಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಬಂದಿದೆ. ಇದನ್ನು ನಮಗೆ ತೋರಿಸಿಯೇ ಇಲ್ಲ. ಮಾಧ್ಯಮಗಳು ವರದಿ ಮಾಡಿದರೆ ಅದಕ್ಕೆ ನಾನು ಜವಾಬ್ದಾರನಲ್ಲ ಎಂದರು. ಈ ವೇಳೆ, ನೀವು ಕೇಳಿಲ್ಲ, ಹೀಗಾಗಿ ನಾನು ಕೊಟ್ಟಿಲ್ಲವೆಂದು ಕುಮಾರಸ್ವಾಮಿ ಹೇಳಿದರು.
ವಿಧಾನ ಪರಿಷತ್: ರಾಜ್ಯಪಾಲರ ಭಾಷಣದ ವೇಳೆ ಜೆಡಿಎಸ್ ಸದಸ್ಯ ಮರಿತೀಬ್ಬೆಗೌಡ ಅವರು ಪ್ರಧಾನಿ ಮೋದಿ ಹೆಸರನ್ನು ಪದೇ ಪದೇ ಪ್ರಸ್ತಾಪ ಮಾಡುತ್ತಿದ್ದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಮರಿತೀಬ್ಬೆಗೌಡ ದೇಶ ದ್ರೋಹಿ ಹೇಳಿಕೆ ಎಂದು ಘೋಷಣೆ ಕೂಗಿದ್ದು, ಈ ವೇಳೆ ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಬಿಜೆಪಿ ಕಾಂಗ್ರೆಸ್ ಸದಸ್ಯರ ನಡೆಗೆ ಸಭಾಪತಿ ಗರಂ ಆಗಿದ್ದು, ಮಾನ ಮರ್ಯಾದೆ ಇದ್ದರೆ ನಮ್ಮ ಮಾತು ಹೇಳಿ. ಪ್ರಧಾನಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದರೆ ಅದನ್ನು ಕಡತದಿಂದ ತಗೆದು ಹಾಕುತ್ತೆನೆ ಎಂದು ಸಭಾಪತಿ ಹೇಳಿದರು. ಸಭಾಪತಿ ಮಾತುಗಳ ಬಳಿಕ ಬಿಜೆಪಿ ಸದಸ್ಯರು ಪ್ರತಿಭಟನೆ ನಿಲ್ಲಿಸಿದರು. ಮಾತು ಮುಂದುವರಿಸಿದ ಮರಿತಿಪ್ಪೇಗೌಡ, ಬಡವರ ಪರ ಸರ್ಕಾರ ರಾಜ್ಯದಲ್ಲಿ ಬಂದಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸರ್ಕಾರ ರಾಜ್ಯದಲ್ಲಿ ಬಂದಿದೆ. ಐದು ಗ್ಯಾರಂಟಿ ಬಗ್ಗೆ ಜನರ ಪರವಾಗಿದೆ ಎಂದು ಕಾಂಗ್ರೆಸ್ ಬಗ್ಗೆ ಹಾಡಿ ಹೊಗಳಿದರು. ನಂತರ ಪರಿಷತ್ ಕಲಾಪವನ್ನು ನಾಳೆ ಬೆಳಗ್ಗೆ10 ಗಂಟೆಗೆ ಮುಂದೂಡಿಕೆ ಮಾಡಲಾಯಿತು.
ವಿಧಾನಸಭೆ: ನಾನು ಮೊದಲ ಬಾರಿಗೆ ಕೊರತೆ ಬಜೆಟ್ ಮಂಡಿಸಿರುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬಜೆಟ್ನಲ್ಲಿ ತೆರಿಗೆ ಹಾಕಿದ್ದೇವೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ಅನ್ನ ಭಾಗ್ಯ ಯೋಜನೆಗೆ ಕೇಂದ್ರ ಅಕ್ಕಿ ಕೊಡಲಿಲ್ಲ. ಬಿಜೆಪಿಯವರಿಗೆ ರಾಜಕೀಯ ಬದ್ಧತೆ ಇಲ್ಲ ಎಂದರು. ಈ ವೇಳೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್ಗೆ ರಾಜಕೀಯ ಬದ್ಧತೆ ಇಲ್ಲದಿರುವುದು, ನಮಗಲ್ಲ. ಅಕ್ಕಿ ಇಲ್ಲಾಂದರೆ ಕೇಂದ್ರಕ್ಕೆ ಆರೋಪ ಮಾಡುತ್ತೀರಿ, ಹ್ಯಾಕ್ ಆಗಿದೆ ಅಂತೀರಿ. ಎಲ್ಲಕ್ಕೂ ಮೋದಿ ಕಾರಣ ಅಂತಿದೀರಿ ಅಂತ ಮುಗಿಬಿದ್ದರು. ಇದಕ್ಕೆ ಟಾಂಗ್ ಕೊಟ್ಟ ಸಿಎಂ, ನಾನು ಮೋದಿ ಹೆಸರೇ ಬಳಸಿಲ್ಲ. ನೀವು ಗಾಬರಿಯಾಗಿರಬೇಕು, ನಾನು ಮೋದಿ ಹೆಸರು ಹೇಳುತ್ತೇನೆ ಅಂತ. ಅದಕ್ಕೇ ಮುಂಚೆನೇ ಮಾತಾಡುತ್ತಿದ್ದೀರಾ ಎಂದರು.
ಹಿಂದೆ ನೀವು ಎಲ್ಲ ಭಾಗ್ಯಗಳನ್ನು ಕೊಟ್ಟು ಅಧಿಕಾರಕ್ಕೆ ಬಂದಿರಲಿಲ್ಲ. 2013ರಲ್ಲಿ ನಮ್ಮಲ್ಲಿನ ಒಡುಕುಗಳಿಂದ ನೀವು ಅಧಿಕಾರಕ್ಕೆ ಬಂದಿದ್ದೀರಿ. ನಿಮ್ಮ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಇವಾಗ ನೀವು ಗೆದ್ದಿದ್ದೀರಿ ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆಪರೇಷನ್ ಕಮಲ ಅಂತೀರಲ್ಲ ಈ ಹಿಂದೆ ಕೆಲವರು ರಾಜೀನಾಮೆ ಕೊಟ್ಟಿದ್ದರು. ಇದರಲ್ಲಿ ಯಾವ ಆಪರೇಷನ್ ಬಂತು? ಆ ರೀತಿ ನೋಡುವುದಾದರೆ ಮೊದಲ ಬಾರಿಗೆ ಆಪರೇಷನ್ ಮಾಡಿದ್ದೇ ಕಾಂಗ್ರೆಸ್ ಎಂದು ತಿರುಗೇಟು ನೀಡಿದರು. ನಿಮಗೆ ಸಮ್ಮಿಶ್ರ ಸರ್ಕಾರ ಇದ್ದಾಗ ಜನರು ಆಶೀರ್ವಾದ ಮಾಡಿದ್ದರೇ? 80 ಸೀಟು ತಗೊಂಡು ನೀವು ದೇವೇಗೌಡರ ಮನೆ ಬಳಿ ಹೋಗಿ ಕಾದಿಲ್ಲವೇ ಎಂದು ಸಿಎಂಗೆ ಬೊಮ್ಮಾಯಿ ಮತ್ತು ಅಶೋಕ್ ತಿರುಗೇಟು ನೀಡಿದರು.
ವಿಧಾನಸಭೆ: ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ವಿರುದ್ಧದ ವರ್ಗಾವಣೆ ದಂಧೆ ಆರೋಪವನ್ನು ಅಲ್ಲಗಳೆಯುತ್ತಿದ್ದಾಗ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವರ್ಗಾವಣೆ, ಹಿಂದಿನ ಸರ್ಕಾರ ಅಕ್ರಮ ತನಿಖೆ ಬಗ್ಗೆ ಮಾತಾಡುತ್ತಿದ್ದಾರೆ. ನಾವು ಮುಖ್ಯಮಂತ್ರಿಗಳು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹೇಳಿಲ್ಲ. ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ನಾವು ಹೇಳಿದ್ದು. ನಾನು ಸಿಎಂ ಆಗಿದ್ದಾಗ ಎಸ್ಐಟಿ ರಚಿಸಿ ತನಿಖೆ ಮಾಡಿಸಿದ್ದೇವೆ. ನಿಮ್ಮ ಸರ್ಕಾರ ವಿರುದ್ಧದ ಎಲ್ಲವನ್ನೂ ಲೋಕಾಯುಕ್ತಕ್ಕೆ ಕೊಟ್ಟಿದ್ದೇವೆ. ನಾವು ತನಿಖೆಯನ್ನೇ ಮಾಡಿಸಿಲ್ಲ ಎಂದು ಹೇಳಬೇಡಿ. ನೀವು ಆಧಾರರಹಿತ ಆರೋಪ ಮಾಡಿದ ಬಗ್ಗೆ ತನಿಖೆ ಮಾಡಿಸಿ.
ಸತ್ಯಾಸತ್ಯತೆ ಇದ್ದರೆ ಯಾಕೆ ಭಯ ಗೊತ್ತಾಗಲಿ, ತನಿಖೆ ಮಾಡಿಸಿ. ಯಾವ ಸರ್ಕಾರದಲ್ಲಿ ಭ್ರಷ್ಟಾಚಾರ ಆಗಿದೆ ಅನ್ನೋದು ಗೊತ್ತಾಗಲಿ ಎಂದರು.
ಹಿಂದಿನ ಸರ್ಕಾರದ ಆರೋಪ ಬಗ್ಗೆಯೂ ತನಿಖೆ ಮಾಡಿಸುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 2013ರಿಂದಲೂ ತನಿಖೆ ಮಾಡಿಸಿ ಎಂದು ಬೊಮ್ಮಾಯಿ ಹೇಳಿದ್ದಾರೆ. ನೀವು ಅಧಿಕಾರದಲ್ಲಿ ಇದ್ದಾಗ ತನಿಖೆ ಮಾಡಿಸಬಹುದಿತ್ತಲ್ಲಾ? ನಾವೇನು ಅಡ್ಡ ಬರುತ್ತಾ ಇರಲಿಲ್ಲ, ನೀವು ಯಾಕೆ ತನಿಖೆ ಮಾಡಿಸಲಿಲ್ಲ? ನೀವು ಅಧಿಕಾರಲ್ಲಿದ್ದಾಗ ತನಿಖೆ ಮಾಡಿಸಲಿಲ್ಲ ಅಂದರೆ ನಮ್ಮ ವಿರುದ್ಧ ಯಾವುದೇ ದಾಖಲಾತಿಗಳೂ ಇರಲಿಲ್ಲ ಎಂದರ್ಥ ಎಂದರು.
ವಿಧಾನಸಭೆ: ವರ್ಗಾವಣೆಯಲ್ಲಿ ವ್ಯಾಪಾರ ನಡೆದಿದೆ ಅನ್ನೋದು ಹಾಸ್ಯಾಸ್ಪದ ಎಂದು ವರ್ಗಾವಣೆ ದಂಧೆ ಆರೋಪಕ್ಕೆ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ಅವರ ಕಾಲದಲ್ಲೂ ವರ್ಗಾವಣೆ ಆಗಿದೆ, ಆಗಲೂ ದಂಧೆ ನಡೆದಿತ್ತಾ? ಎಂದು ಪ್ರಶ್ನಿಸಿದ ಅವರು, 1983ರಲ್ಲಿ ನಾನು ಶಾಸಕನಾದೆ, 1984ರಲ್ಲಿ ನಾನು ಮಂತ್ರಿ ಆದೆ. ಆಮೇಲೆ ಡಿಸಿಎಂ, ವಿರೋಧ ಪಕ್ಷದ ನಾಯಕ, ಸಿಎಂ ಆಗಿದ್ದೇನೆ. ಇದೇ ಮೊದಲಲ್ಲ ಸಿಎಂ ಆಗಿರುವುದು, 2ನೇ ಬಾರಿ ಸಿಎಂ ಆಗಿದ್ದೇನೆ. ದೇವರಾಜ ಅರಸು ಬಿಟ್ಟರೆ ಪೂರ್ಣಾವಧಿ ಸಿಕ್ಕಿರುವುದು ನನಗೇನೆ. ಸುದೀರ್ಘ ರಾಜಕಾರಣದಲ್ಲಿ ಕಳಂಕವೂ ಇಲ್ಲ, ಹಗರಣವೂ ಇಲ್ಲ ಎಂದರು.
ನನ್ನ ಇಲಾಖೆಯಲ್ಲಿ ಈವರೆಗೂ ಒಂದೇ ಒಂದು ವರ್ಗಾವಣೆ ಆಗಿಲ್ಲ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ಕುಮಾರಸ್ವಾಮಿ, ಬೊಮ್ಮಾಯಿ ಸೇರಿದಂತೆ ಹಲವರು ವರ್ಗಾವಣೆ ದಂಧೆ ಎಂದು ಹೇಳುತ್ತಿದ್ದಾರೆ. ಅವರ ಮಾತನ್ನು ನಾನು ವಿರೋಧಿಸುತ್ತೇನೆ. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯಲು ಸಾಧ್ಯವೇ ಇಲ್ಲ. ನನಗೆ ಗೊತ್ತಿಲ್ಲದೆ ಯಾರಾದರು ಭ್ರಷ್ಟಾಚಾರ ಮಾಡಿದ್ದರೋ ಅದು ಗೊತ್ತಿಲ್ಲ. ಸಂಪೂರ್ಣವಾಗಿ ಭ್ರಷ್ಟಾಚಾರವೇ ಇಲ್ಲ ಅಂತಾ ನಾನೂ ಹೇಳುವುದಿಲ್ಲ. ಗೊತ್ತಿದ್ದೂ ಕೂಡ ಭ್ರಷ್ಟಾಚಾರ ಆಗಲು ಸಾಧ್ಯವೇ ಇಲ್ಲ ಎಂದರು. ನಮ್ಮ ಸರ್ಕಾರ ಇನ್ನೂ ಎರಡು ತಿಂಗಳನ್ನೂ ಪೂರ್ಣಗೊಳಿಸಿಲ್ಲ. ಆರೋಪ ಮಾಡಿದವರದ್ದು ಕಪೋಲಕಲ್ಪಿತ ಅಂದುಕೊಂಡಿದ್ದೇನೆ ಎಂದರು.
ಬಿರುಗಾಳಿ ಮಳೆಗೆ ಮರದ ಕೊಂಬೆ ಮನೆ ಮೇಲೆ ಮುರಿದುಬಿದ್ದ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ತಿಪ್ಪನಾಳ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರ ತೆರವು ಮಾಡಲು ಬಾರದ ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ. ಮರದ ಇನ್ನರ್ಧ ಭಾಗ ಧರೆಗುರುಳಲು ಬಾಕಿ ಇದ್ದು, ಯಾವಾಗ ಬೇಕಾದರೂ ಬೀಳಬಹುದು ಎಂಬ ಆಂತಕದಲ್ಲಿ ಜನರಿದ್ದಾರೆ.
ಬೆಂಗಳೂರು: ಲವ್ ಜಿಹಾದ್ ಆರೋಪದ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಆರ್ ಅಶೋಕ, ಕಾಂಗ್ರೆಸ್ ಬಂದ ಮೇಲೆ ಲವ್ ಜಿಹಾದ್, ಪಾಕಿಸ್ತಾನ ಜಿಂದಾಬಾದ್ ಎನ್ನುವುದಲ್ಲೆ ಹರದಾರಿಯಾಗಿದೆ. ಕಾಂಗ್ರೆಸ್ನವರು ಒಂದು ರೀತಿ ಅನುಮತಿ ಕೊಟ್ಟಿದ್ದಾರೆ, ದೇಶ ವಿರೋಧಿ ಚಟುವಟಿಕೆ ಮಾಡುವ ಪಿಎಫ್ಐ ಕೇಸ್ ಗಳನ್ನು ವಾಪಸ್ ಪಡೆದರು, ಮುಂದೆನು ಅದೇ ರೀತಿ ಆಗುತ್ತದೆ. ಟಿಪ್ಪು ಸಿದ್ದಾಂತ ಇಟ್ಟುಕೊಂಡು ಬಂದವರು ಕಾಂಗ್ರೆಸ್ನವರು. ಬಜೆಟ್ನಲ್ಲಿ ಹಿಂದೂ ಮಠಗಳಿಗೆ ಹಣ ಕೊಟ್ಟಿಲ್ಲ, ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ಹಿಂದೂ ವಿರೋಧಿ ಸರ್ಕಾರವಿದು ಎಂದರು.
ಪೆನ್ಡ್ರೈವ್ ಖಾಲಿ ಇಲ್ಲ, ಈ ಪೆನ್ಡ್ರೈವ್ ಬೇರೆಯದ್ದು ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ದಾಖಲೆ ಕೊಡಿ ಅಂದರೆ ದುಡ್ಡು ಕೊಡಲು ಸಾಧ್ಯವಾ? ಈ ಪೆನ್ಡ್ರೈವ್ ಆಪರೇಷನ್ ಮಾಡಿದ ಸಿಡಿ ರೀತಿ ಅಲ್ಲ. ಪೆನ್ಡ್ರೈವ್ ಬಿಡುಗಡೆಗೆ ಕಾಂಗ್ರೆಸ್ನವರಿಗೆ ಯಾಕೆ ಇಷ್ಟು ಆತುರ? ಇವರ ಸಮಸ್ಯೆ ಬಗ್ಗೆ ಎಲ್ಲವನ್ನೂ ಬಿಚ್ಚಿಟ್ಟಿದ್ದೇನೆ, ಸಲಹೆ ನೀಡಿದ್ದೇನೆ. ಸರಿಪಡಿಸಿಕೊಳ್ಳುವುದಾದರೆ ಸರಿಪಡಿಸಿಕೊಳ್ಳಲಿ ಎಂದರು. ಕಾಂಗ್ರೆಸ್ಸಿಗರು ಇನ್ನೂ ಕೆಲ ವಿಕೆಟ್ ಬೀಳಲಿ ಅಂತಾ ಹೇಳುತ್ತಿದ್ದಾರೆ. ನಾನು ಪ್ರಚೋದನೆಗೆ ಒಳಗಾಗಲ್ಲ ಎಂದರು.
ಜೈನಮುನಿ ಕಾಮಕುಮಾರನಂದಿ ಮಹಾರಾಜರ ಹತ್ಯೆ ನಂತರ ಆರೋಪಿಗಳು ಮೃತದೇಹ ಸಾಗಿಸಲು ಬಳಸಿದ ಬೈಕ್ ಅನ್ನು ಚಿಕ್ಕೋಡಿ ಪೊಲೀಸರು ಜಪ್ತಿ ಮಾಡಿದ್ದಾರೆ. ಚಿಕ್ಕೋಡಿಯಲ್ಲಿ ಬೈಕ್‌ಗೆ ಪೆಟ್ರೋಲ್ ಹಾಕಿಸಿಕೊಂಡು ಆಶ್ರಮದತ್ತ ಪ್ರಯಾಣ ಕೈಗೊಂಡ ಆರೋಪಿಗಳು ಆಶ್ರಮದಲ್ಲಿ ಮೊದಲು ಜೈನಮುನಿಗೆ ಕರೆಂಟ್ ಶಾಕ್ ನೀಡಿ ಕೊಲ್ಲಲು ಯತ್ನಿಸಿದ್ದರು. ಬಳಿಕ ಟವೆಲ್‌ನಿಂದ ಕುತ್ತಿಗೆ ಬಿಗಿದು ಕಾಮಕುಮಾರನಂದಿ ಮಹಾರಾಜರ ಹತ್ಯೆ ಮಾಡಿದ್ದಾರೆ. ಹತ್ಯೆಗೈದು ಚೀಲದಲ್ಲಿ ಮೃತದೇಹ ಕಟ್ಟಿ ಬೈಕ್‌ನಲ್ಲಿ ಹೊತ್ತೊಯ್ದಿದ್ದರು. ಜೈನಮುನಿ ಬಳಸುತ್ತಿದ್ದ ಎರಡು ಮೊಬೈಲ್ ಅಲ್ಲೇ ಬಿಟ್ಟು ಅವರ ಡೈರಿ ತೆಗೆದುಕೊಂಡಿದ್ದರು.
ಹಾವೇರಿ: ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಹುಣಸೆಮರ ಧರೆಗುರುಳಿದ್ದು, ಧಾರವಾಡ ಕೃಷಿ ವಿಶ್ವವಿದ್ಯಾಲಯ ವಿಜ್ಞಾನಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಮತ್ತೆ ನೆಡುತ್ತಿದ್ದಾರೆ. ಸವಣೂರು ಪಟ್ಟಣದ ಕಲ್ಮಟದ ಆವರಣದಲ್ಲಿರುವ ಹುಣಸೆಮರ ಗೆದ್ದಲು ಹತ್ತಿ ಕಳೆದವಾರ ಗಾಳಿಗೆ ನೆಲಕ್ಕುರುಳಿತ್ತು. ಇದನ್ನು ನೋಡಲು ಪ್ರವಾಸಿಗರು ಕೂಡ ಆಗಮಿಸುತ್ತಿದ್ದಾರೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಬಿಡುಬಿಟ್ಟಿದ್ದಾರೆ.
ವಿಧಾನಸಭೆ: ಇಂದಿನ ರಾಜಕೀಯ ಸ್ಥಿತಿಗತಿ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಶಾಸಕರಾದ ಮೇಲೆ ಶಾಸಕಗಿರಿ ಉಳಿಸಿಕೊಳ್ಳಲು ಮುಂದಾಗುತ್ತಾರೆ. ನಾವು 5, 10 ಸಾವಿರ ಕೊಟ್ಟರೆ ಹೋಗಿ ಚುನಾವಣೆ ಮಾಡುತ್ತಿದ್ದರು. ಈಗ ಆ ರೀತಿ ಪರಿಸ್ಥಿತಿ ಇಲ್ಲ. ಈ ಬಾರಿ ಚುನಾವಣೆ ಹೇಗೆ ನಡೆಯಿತು ಅಂತಾ ನನಗೆ ಗೊತ್ತಿದೆ. ಚುನಾವಣೆ ಘೋಷಣೆಗೂ ಮೊದಲೇ ಕುಕ್ಕರ್ ಎಲ್ಲಾ ಹಂಚಿದರು. ಇಲ್ಲೇ ಶಾಸಕ ಟಿ.ಬಿ.ಜಯಚಂದ್ರ ಇದ್ದಾರೆ, ನಗುತ್ತಾ ಇದ್ದಾರೆ. ಟಿ.ಬಿ.ಜಯಚಂದ್ರ ಮೊದಲು ಚುನಾವಣೆ ಹೇಗೆ ನಡೆಸಿದರು ಈ ಬಾರಿ ಚುನಾವಣೆ ಹೇಗೆ ಮಾಡಿದ್ದಾರೆ ಅಂತಾ ನನಗೆ ಗೊತ್ತಿದೆ. ಚುನಾವಣೆ ವೇಳೆ ಜನ ಮೂರು ಪಕ್ಷಗಳಿಂದ ಹಣ ಪಡೆಯುತ್ತಾರೆ. ಯಾರಿಗೆ ಮತ ಹಾಕಿದ್ದಾರೆ ಎಂದು ಡಬ್ಬ ಒಡೆದಾಗಲೇ ತಿಳಿಯೋದು. ಬಿ.ಆರ್.ಪಾಟೀಲ್ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಇದು ಯಾರಿಗೆ ಬೇಕಾಗಿದೆ ಸಭಾಧ್ಯಕ್ಷರೇ, ಹಣ ಮಾಡೋದು ಹೇಗೆ ಅನ್ನೋದರ ಬಗ್ಗೆ ಎಲ್ಲರ ಗಮನ ಇದೆ ಎಂದರು.
ಹಾಲಿನ ದರ ಏರಿಸುವಂತೆ ಸಾಕಷ್ಟು ಒತ್ತಾಯ ಬರುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ವೆಂಕಟೇಶ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಟಿವಿ9ಗೆ ಮಾಹಿತಿ ನೀಡಿದ ಅವರು, ಹಾಲಿನ ದರ ಏರಿಸುವಂತೆ ರೈತರು, ಒಕ್ಕೂಟದಿಂದ ಒತ್ತಾಯವಿದೆ. ಹಾಲಿನ ದರ 5 ರೂ.ಗೆ ಹೆಚ್ಚಿಸುವಂತೆ ರೈತರ ಭೇಡಿಕೆ ಇದೆ. ಈ ಸಂಬಂಧ ಸಿಎಂ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿದೆ ಎಂದರು.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬಸವನತ್ತೂರು ಗ್ರಾಮದ ಅಂಗನವಾಡಿಗೆ ಕೊಳೆತ ಮೊಟ್ಟೆ ಪೂರೈಕೆ ಮಾಡಲಾಗುತ್ತಿದೆ. ಮಹಿಳಾ&ಮಕ್ಕಳ ಕಲ್ಯಾಣ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿದೆ. ಸರಣಿ ಟ್ವಿಟ್ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ. ರಾಜ್ಯದ ಜನ ಇಷ್ಟು ದಿನ ಟೊಮ್ಯಾಟೋ, ತರಕಾರಿ,ಆಹಾರ ಧಾನ್ಯ, ಗ್ಯಾಸ್ ಇತ್ಯಾದಿಗಳ ಬೆಲೆ ಏರಿಕೆಯಿಂದ ಚಕಿತರಾಗಿ ಬಸವಳಿದು ಹೋಗಿದ್ದಾರೆ. ಈಗ ವರ್ಗಾವಣೆ ದರಪಟ್ಟಿಯಿಂದ ಅಧಿಕಾರಿ, ನೌಕರರೂ ಹೌಹಾರಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ. ಒಂದು ಕಡೆ ಉಚಿತ ಕೊಡುಗೆ! ಇನ್ನೊಂದು ಕಡೆ ಖಚಿತ ಸುಲಿಗೆ!!
ರಾಜ್ಯದ ಜನ ಇಷ್ಟು ದಿನ ಟೊಮ್ಯಾಟೋ, ತರಕಾರಿ,ಆಹಾರ ಧಾನ್ಯ, ಗ್ಯಾಸ್ ಇತ್ಯಾದಿಗಳ ಬೆಲೆ ಏರಿಕೆಯಿಂದ ಚಕಿತರಾಗಿ ಬಸವಳಿದು ಹೋಗಿದ್ದಾರೆ.ಈಗ ವರ್ಗಾವಣೆ ದರಪಟ್ಟಿಯಿಂದ ಅಧಿಕಾರಿ, ನೌಕರರೂ ಹೌಹಾರಿದ್ದಾರೆ.ಇದು @INCKarnataka ಸರಕಾರದ 6ನೇ ಗ್ಯಾರಂಟಿ.
ಒಂದು ಕಡೆ ಉಚಿತ ಕೊಡುಗೆ! ಇನ್ನೊಂದು ಕಡೆ ಖಚಿತ ಸುಲಿಗೆ!! 1/5#YstTax #CashForPosting pic.twitter.com/HvXXsYdp0n— Janata Dal Secular (@JanataDal_S) July 13, 2023
ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹನುಮ ಜಯಂತಿ ಆಚರಣೆ ಮಾಡಿದ ಕಾರಣಕ್ಕಾಗಿಯೇ ಕೊಲೆ ಆಗಿದೆ ಎಂದು ಪ್ರಕರಣದ ದೂರುದಾರ, ಪ್ರತ್ಯಕ್ಷದರ್ಶಿ ರಾಮಾನುಜಂ ಹೇಳಿಕೆ ನೀಡಿದ್ದಾರೆ. ಬೈಕ್ ಒಳಗೆ ಬಿಡುವ ವಿಚಾರಕ್ಕೆ ಮಣಿಕಂಠ, ಸಂದೇಶ್ ಗಲಾಟೆ ಮಾಡಿಕೊಂಡಿದರು. ವೇಣುಗೋಪಾಲ್ ಜತೆ ಇಬ್ಬರೂ ಗಲಾಟೆ ಮಾಡಿದ್ದರು. ನಿನ್ನನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಶಾಮಿಯಾನ ವಾಪಸ್ ವೇಳೆ ಗಲಾಟೆಯಾಗಿದೆ. ವೇಣುಗೋಪಾಲ್ ಮೇಲೆ ಇಬ್ಬರೂ ಹಲ್ಲೆ ನಡೆಸಿದ್ದಾರೆ. ಅಂದು ರಾತ್ರಿ ಮತ್ತೆ ಮೊಬೈಲ್ಗೆ ಕರೆ ಮಾಡಿ ಬರಲು ಹೇಳಿದ್ದಾರೆ. ಬರದಿದ್ದರೆ ಮನೆಗೆ ಬಂದು ಹೊಡೆಯುವುದಾಗಿ ಬೆದರಿಸಿದ್ದಾರೆ. ಹೀಗಾಗಿ ಮನೆಯಿಂದ ಹೊರಹೋಗಿದ್ದ ವೇಣುಗೋಪಾಲ್ ಜತೆ ನಾನು ಕೂಡ ಹೋಗಿದ್ದೆ. ಸರ್ವಿಸ್ ಸೆಂಟರ್ ಬಳಿ ಹೋಗುತ್ತಿದ್ದಂತೆ ಜಾತಿ ಉಲ್ಲೇಖಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ವೇಣುಗೋಪಾಲ್ ಮೇಲೆ ಹಲ್ಲೆ ಮಾಡುದ್ರು. ಆರು ಜನ ಸೇರಿಕೊಂಡು ಆಯುಧಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ರು ಎಂದು ಪ್ರತ್ಯಕ್ಷದರ್ಶಿ ರಾಮಾನುಜಂ ತಿಳಿಸಿದರು.
ಎಸ್ಎಂಎಸ್ ಬ್ರಹ್ಮಾವರ ಶಿಕ್ಷಣ ಸಂಸ್ಥೆಯ ಪ್ರಶ್ನೆ ಪತ್ರಿಕೆ ವೈರಲ್ ಆಗಿದೆ. ಶಾಲೆಯಲ್ಲಿ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಕ್ರೋಶ ವ್ಯಕ್ತವಾಗಿದೆ. ಮೊದಲ ಕಿರುಪರೀಕ್ಷೆಯ ಸಮಾಜಶಾಸ್ತ್ರ ಪ್ರಶ್ನೆ ಪತ್ರಿಕೆ ವೈರಲ್ ಆಗಿದೆ. ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿ ಬಗೆಗೆ ಮಾತ್ರ ಕೇಳಲಾಗಿರುವ ಪ್ರಶ್ನೆಗೆ ಆಕ್ಷೇಪ ವ್ಯಕ್ತವಾಗಿದ್ದು ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ ಎಂದು ಸಾರ್ವಜನಿಕರು ಟೀಕಿಸುತ್ತಿದ್ದಾರೆ.
ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿ ಅಕ್ಕಿ ಕೊಡುವುದರಲ್ಲೂ ನೀವು ರಾಜಕಾರಣ ಮಾಡುತ್ತಿದ್ದೀರಲ್ಲಾ? ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸ್ತಾರೆ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ K.M.ಶಿವಲಿಂಗೇಗೌಡ ವಾಗ್ದಾಳಿ ನಡೆಸಿದರು. ಕೇಜ್ರಿವಾಲ್ ಏನು ಪ್ರಧಾನಿ ಕೇಳಿ ಉಚಿತ ಘೋಷಣೆ ಮಾಡಿದ್ರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಎಂದಿದ್ದರು ಕೊಟ್ರಾ? ರಾಜ್ಯ ಸಂಕಷ್ಟಕ್ಕೆ ಸಿಲುಕಿದಾಗ ಕೇಂದ್ರ ಸರ್ಕಾರ ನೆರವಿಗೆ ಬರಬೇಕು. ಕಳೆದ ಬಾರಿ ಕೇಂದ್ರದಿಂದ ನೆರೆ ಹಣ ಬಂತಾ? ಎಂದು ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಶಿವಲಿಂಗೇಗೌಡ ಮಾತಿಗೆ ಶಾಸಕ R.ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಆಡಳಿತ, ವಿಪಕ್ಷ ಸದಸ್ಯರ ನಡುವೆ ಗದ್ದಲ ಶುರುವಾಯಿತು.
ಜಾಹಿರಾತು ವೆಚ್ಚದ ಬಗ್ಗೆ ಸದಸ್ಯ ಹರೀಶ್ ಕುಮಾರ್ ಪ್ರಶ್ನೆ ಮಾಡಿದ್ದು ಸಚಿವ ಎನ್ ಎಸ್ ಬೋಸರಾಜು ಉತ್ತರಿಸಿದ್ದಾರೆ. ಏಪ್ರಿಲ್ 1, 2022 ರಿಂದ ಮಾರ್ಚ್ 31, 2023 ರವರೆಗೆ ಮುದ್ರಣ ಮಾದ್ಯಮಕ್ಕೆ 69 ಕೋಟಿ, ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ 61.98 ಕೋಟಿ, ಬಸ್ ಬ್ರ್ಯಾಂಡಿಂಗ್ ಗೆ 31.18 ಕೋಟಿ, ಆಟೋ ಬ್ರ್ಯಾಂಡಿಂಗ್ ಗೆ 0.25 ಕೋಟಿ, ಹೋರ್ಡಿಂಗ್ಸ್ ಪ್ರಚಾರ 09.37 ಕೋಟಿ, ಬಸ್ ಶೆಲ್ಟರ್ 01.88 ಕೋಟಿ, ವಿಶೇಷಾಂಕಗಳಿಗೆ 01.88 ಕೋಟಿ. ಒಟ್ಟು 201.66 ಕೊಟಿ ವೆಚ್ಚ ಮಾಡಲಾಗಿದೆ ಎಂದು ಸಭಾನಾಯಕ ಬೋಸ್ ರಾಜು ಉತ್ತರ ನೀಡಿದ್ರು. ಜಾಹಿರಾತು ಹಣವನ್ನ ಬಿಡುಗಡೆ ಮಾಡಲು ಏಜೆನ್ಸಿಗಳು ತಡ ಮಾಡುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದು ಪರಿಶೀಲನೆ ಮಾಡುವುದಾಗಿ ಸಚಿವ ಬೋಸ್ ರಾಜ್ ಭರವಸೆ ನೀಡಿದ್ರು.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ರೊಳ್ಳಿ ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ಭರತ್ ಲಮಾಣಿ (23) ಎಂಬ ಮೀನುಗಾರ ನಾಪತ್ತೆಯಾಗಿದ್ದಾನೆ. ಭರತ್ ನಿನ್ನೆ ಸಂಜೆ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ. ಆದ್ರೆ ಇನ್ನೂ ಕೂಡ ಹಿಂದಿರುಗಿಲ್ಲ. ಹೀಗಾಗಿ ನದಿಯಲ್ಲೇ ಮುಳುಗಿರುವ ಶಂಕೆ ವ್ಯಕ್ತವಾಗಿದ್ದು ನದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧಕಾರ್ಯ ನಡೆಯುತ್ತಿದೆ.
ಹಾವೇರಿ ಜಿಲ್ಲೆಯ ಹಲವೆಡೆ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆಗಳ ಪೂರೈಕೆಯಾಗುತ್ತಿದೆ. ಕೊಳೆತ, ವಾಸನೆ ಭರಿತ ಮೊಟ್ಟೆಗಳ ಪೂರೈಕೆಯಾಗುತ್ತಿದೆ. ಕೊಳೆತ ಮೊಟ್ಟೆ ಪೂರೈಸಿದರೂ ಅಧಿಕಾರಿಗಳು ಕಣ್ಣು ಮುಚ್ಚಿಕುಳಿತಿದ್ದಾರೆ.
ಅನುಮತಿ ಪಡೆಯದೆ ಅಕ್ರಮವಾಗಿ ಜಿಲೆಟಿನ್ ಸ್ಫೋಟಿಸಿದ ಆರೋಪಕ್ಕೆ ಸಂಬಂಧಿಸಿ ಆರ್.ಆರ್.ನಗರ ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಗಣಿಗಾರಿಕೆ ಮಾಡುವ ವೃತ್ತಿ ನನ್ನದಲ್ಲ. ಗಣಿಗಾರಿಕೆ ಮಾಡಿದರೆ ಸರ್ಕಾರದಿಂದ ಲೈಸೆನ್ಸ್ ಪಡೆಯಬೇಕು. ಮನೆ ಕಟ್ಟುವುದಕ್ಕೆ ಹಿಟಾಚಿ ಮೂಲಕ ಪಾಯ ತೆಗೆಯುತ್ತಿದ್ದೇನೆ. ಜಿಲೆಟಿನ್ ಸ್ಫೋಟಿಸಲು ಲೈಸೆನ್ಸ್ ಇದೆ, ಅದು ಗಣಿಗಾರಿಕೆ ಅಲ್ಲ. ಅದು ಖರೀದಿಸಿದ ಭೂಮಿ, ಸ್ವಂತ ಭೂಮಿ ಅಲ್ಲ ಎಂದು ವಿಧಾನಸೌಧದಲ್ಲಿ R.R.ನಗರ ಬಿಜೆಪಿ ಶಾಸಕ ಮುನಿರತ್ನ ಸ್ಪಷ್ಟನೆ ನೀಡಿದರು.
ತುಮಕೂರು ಜಿಲ್ಲೆ ಶಿರಾದಲ್ಲಿ ಗ್ಯಾರೇಜ್ ಮೇಲೆ ದಿಢೀರ್ ದಾಳಿ ನಡೆದಿದೆ. ಪ್ರಭಾರಿ ತಹಶೀಲ್ದಾರ್ ನಾಗಮಣಿ ನೇತೃತ್ವದಲ್ಲಿ ದಾಳಿ ನಡೆದಿದ್ದು 7 ಬಾಲ ಕಾರ್ಮಿಕರನ್ನು ಅಧಿಕಾರಿಗಳು ರಕ್ಷಿಸಿದ್ದಾರೆ. 7 ಮಕ್ಕಳನ್ನ ರಕ್ಷಿಸಿ ಬಾಲಭವನಕ್ಕೆ ಸ್ಥಳಾಂತರಿಸಲಾಗಿದೆ. ಬಾಲಭವನದಲ್ಲಿ ಮಕ್ಕಳಿಗೆ ಪುನರ್ವಸತಿ ಮತ್ತು ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ಧ ಮಾಲೀಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ.
ಗ್ಯಾರಂಟಿ ಬದಲಿಗೆ ದೋಖಾ ನಡೆದಿದೆ ಎಂದು ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ. 3 ಕೆಜಿ ಅಕ್ಕಿ, 2 ಕೆಜಿ ಜೋಳ ಅಥವಾ ರಾಗಿ ಕೊಡ್ತೀವಿ ಅಂತಿದ್ದಾರೆ. ಇದು ಅನ್ನಭಾಗ್ಯ ಅಲ್ಲ ಕನ್ನಭಾಗ್ಯ ಯೋಜನೆ. ಕೇಂದ್ರದ ಅಕ್ಕಿ ಹೊರತುಪಡಿಸಿ 10 ಕೆಜಿ ಅಕ್ಕಿ ಕೊಡ್ತೀವಿ ಎಂದಿದ್ರು. ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ಕೊಡಬೇಕಿದೆ ಎಂದು ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಮೋದಿ ಪ್ರತಿಯೊಬ್ಬರಿಗೂ 15 ಲಕ್ಷ ಹಾಕ್ತೀನಿ ಅಂತಾ ಹೇಳಿದ್ದರು. ಬ್ಯಾಂಕ್ ಖಾತೆ ಮಾಡಿಸಿದರು, ಎಲ್ಲಿ ಹಣ ಹಾಕಿದರು ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಎನ್.ಹೆಚ್.ಕೋನರೆಡ್ಡಿ ಪ್ರಶ್ನೆ ಮಾಡಿದರು. ಈ ವೇಳೆ ಕೋನರೆಡ್ಡಿ ಮಾತಿಗೆ ಶಾಸಕರಾದ ವಿಜಯೇಂದ್ರ, ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ರು. ಮೋದಿ ಹಾಗೆ ಹೇಳಿದ್ರೆ ದಾಖಲೆ ಕೊಡಿ ಎಂದು BJP ಸದಸ್ಯರು ಪಟ್ಟು ಹಿಡಿದ್ರು. ವಿಡಿಯೋ ಕ್ಲಿಪಿಂಗ್ ಕೊಡಿ ನಾವೇ ಪ್ರಧಾನಿಗೆ ಕೇಳ್ತೀವಿ ಎಂದು ಯತ್ನಾಳ್ ಗುಡುಗಿದರು. ಆಗ GST ದುಡ್ಡೇ ಕೇಳಿಲ್ಲ ಇದನ್ನೇನು ಕೇಳ್ತೀರಿ ಎಂದು ಪ್ರಸಾದ್ ಅಬ್ಬಯ್ಯ ಟಾಂಗ್ ಕೊಟ್ರು. ಈ ವೇಳೆ ಗ್ಯಾರಂಟಿ ವಿಚಾರ ಮುಂದಿಟ್ಟುಕೊಂಡು BJP ಸದಸ್ಯರ ಗದ್ದಲ ಶುರುವಾಯಿತು.
ನಾನು ಒಕ್ಕಲಿಗ ಎಂಬ ಕಾರಣಕ್ಕೆ ಹೆಚ್‌ಡಿಕೆ ಟಾರ್ಗೆಟ್ ಮಾಡ್ತಿದ್ದಾರೆ ಎಂದು ವಿಧಾನಸೌಧದಲ್ಲಿ ಹೆಚ್‌ಡಿಕೆ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು. ನಾನು H.D.ದೇವೇಗೌಡರು, ಅವರ ಕುಟುಂಬದ ಬಗ್ಗೆ ಮಾತಾಡಿಲ್ಲ. ಹೆಚ್.ಡಿ.ಕುಮಾರಸ್ವಾಮಿ ವಿಚಾರ ಎತ್ತಿದ್ರೆ ಸಾಕು ಕುಟುಂಬ ಅಂತಾರೆ. ಕುಮಾರಸ್ವಾಮಿ ಯಾವಾಗಲೂ ಕುಟುಂಬದ ಜಪ ಮಾಡಬಾರದು. HDK ಹತಾಶರಾಗಿದ್ದಾರೋ ಏನೋ ಗೊತ್ತಿಲ್ಲ. ಲೋಕಸಭೆ ಚುನಾವಣೆ ಇದೆ, ಹಾಗಾಗಿ ನನ್ನ ಮಂಡ್ಯ ಅಂತಿದ್ದಾರೆ ಎಂದು ವಿಧಾನಸೌಧದಲ್ಲಿ ಹೆಚ್‌ಡಿಕೆ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ಇಂದು ವಿಧಾನಸೌಧದ 72ನೇ ಸಂಸ್ಥಾಪನಾ ದಿನ. ನೆಹರು ಅವರನ್ನ ಕರೆಸಿ ಫೌಂಡೇಶನ್ ಹಾಕಿದ ದಿನ. ಎಲ್ಲರೂ ಕೂರಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಸದನದಲ್ಲಿ ಅವರ ಒಂದು ಫೋಟೋ ಇಲ್ಲ. ಎರಡನೇ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರದ್ದು ಮಾತ್ರ ಇದೆ. ಕೆ.ಸಿ ರೆಡ್ಡಿ ಅವರ ಸ್ಟ್ಯಾಚು ಹಾಕಲು ಹೇಳಿದ್ದೆ, ಅದು ನೆರವೇರಿದೆ. ಕೆ.ಸಿ ರೆಡ್ಡಿ ಅವರ ಒಂದು ಫೋಟೋ ಹಾಕಲು ಸಿಎಂ, ಸ್ಪೀಕರ್ ಎಲ್ಲರಿಗೂ ಮನವಿ ಮಾಡಿದ್ದೇನೆ. ದಯಮಾಡಿ ಮಾಡಿ ಕೊಡಿ ಅಂತ ಕೆ.ಸಿ ರೆಡ್ಡಿ ಕುಟುಂಬದ ಸದಸ್ಯೆ ವಸಂತ ಕವಿತಾ ಕಲಾಪದಲ್ಲಿ ಪ್ರಸ್ತಾಪಿಸಿದರು.
ವರ್ಗಾವಣೆ ದಂಧೆ ಬಗ್ಗೆ ಹೆಚ್‌ಡಿಕೆ ರೇಟ್ ಕಾರ್ಡ್ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಸಿಎಂ ಪ್ರತಿಕ್ರಿಯೆ ನೀಡ್ತಾರೆ ಎಂದು ವಿಧಾನಸೌಧದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ. H.D.ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನಾವು ತಪ್ಪಾಗಿ ಮಾತನಾಡಿಲ್ಲ. ಮಾಜಿ ಸಿಎಂ H.D.ಕುಮಾರಸ್ವಾಮಿ ಹತಾಶರಾಗಿ ಮಾತಾಡ್ತಿದ್ದಾರೆ ಎಂದರು.
ನಾಗಮಂಗಲ ಕೆಎಸ್ಆರ್ಟಿಸಿ ಚಾಲಕ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾಜಿ ಶಾಸಕನಿಂದ ಆಂಬುಲೆನ್ಸ್ ತಡೆದ ವಿಡಿಯೋ ವೈರಲ್ ಆಗಿದೆ. ಈ ವಿಚಾರ ಸಂಬಂಧ ಪೊಲೀಸರ ವಿರುದ್ದವೇ ಮಾಜಿ ಶಾಸಕ ಸುರೇಶ್ ಗೌಡ ದೂರು ನೀಡಿದ್ದಾರೆ. ನಾಗಮಂಗಲ ಟೌನ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ವಿರುದ್ದ ದಕ್ಷಿಣ ವಲಯ ಐಜಿಪಿ, ಮಂಡ್ಯ ಎಸ್ ಪಿ, ನಾಗಮಂಗಲ ಡಿವೈಎಸ್ ಪಿಗೆ ದೂರು ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಭರಮಗಿರಿ ಕ್ರಾಸ್ ಬಳಿ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ನಡೆದಿದೆ. ಬಾಗಲಕೋಟೆ ಮೂಲದ ಸೋಮಶೇಖರ್(25) ಮೃತ ವ್ಯಕ್ತಿ. ಬೆಂಗಳೂರಿನ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡ್ತಿದ್ದ ಸೋಮಶೇಖರ್ ಬೆಂಗಳೂರಿಂದ ಬಾಗಲಕೋಟೆಗೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಏಷ್ಯಾದ ಎರಡನೇ ಅತಿದೊಡ್ಡ ಟೊಮ್ಯಾಟೊ ಮಾರುಕಟ್ಟೆಯಾಗಿರುವ ಕೋಲಾರದ ಎಪಿಎಂಸಿ ಟೊಮ್ಯಾಟೊ ಮಾರುಕಟ್ಟೆಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. 24 ಗಂಟೆ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ ಎಂದು ಕೋಲಾರ ಎಸ್.ಪಿ. ನಾರಾಯಣ ಮಾಹಿತಿ ನೀಡಿದ್ದಾರೆ. ಬಿಗಿ ಪೊಲೀಸ್ ಭದ್ರತೆ ಜೊತೆಗೆ ಸಿಸಿಟಿವಿ ಕಣ್ಗಾವಲು.
ಹುಬ್ಬಳ್ಳಿ: ದೊಡ್ಮನಿ ಕಾಲೋನಿಯಲ್ಲಿ ಕಾನ್ಸ್ಟೇಬಲ್ ಮಲ್ಲಿಕಾರ್ಜುನ ರುದ್ರಾಪುರ(26) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣೆ ಕಾನ್ಸ್ಟೇಬಲ್ ಮಲ್ಲಿಕಾರ್ಜುನ ರುದ್ರಾಪುರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ರೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಶಕ್ತಿ ಯೋಜನೆ ಎಫೆಕ್ಟ್ ಬಸ್ ಗಾಜಿಗೆ ಕಲ್ಲು. ಬಸ್ ನಿಲ್ಲಿಸದೇ ಮುಂದೆ ಸಾಗಿದ್ದಕ್ಕೆ ರೊಚ್ಚಿಗೆದ್ದ ವಿದ್ಯಾರ್ಥಿಗಳು ಸಾರಿಗೆ ಬಸ್ ಗೆ ಕಲ್ಲೆಸೆದಿದ್ದಾರೆ. ಗಾಜು ಪುಡಿ ಪುಡಿಯಾಗಿದೆ. ಯಾದಗಿರಿ ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಶಾಲೆಗೆ ತೆರಳಲು ಬಸ್ ಗಾಗಿ ಕಾದು ಕುಳಿತಿದ್ದ ಹತ್ತಾರು ವಿದ್ಯಾರ್ಥಿಗಳು ಕಲಬುರಗಿಯಿಂದ ಯಾದಗಿರಿ ಕಡೆ ಬರ್ತಾಯಿದ್ದ ಬಸ್ ನಿಲ್ಲಿಸುವಂತೆ ಕೈ ಮಾಡಿದ್ದಾರೆ. ಆದ್ರೆ ಬಸ್ ಮುಂದಕ್ಕೆ ಸಾಗಿದ್ದಕ್ಕೆ ಕಲ್ಲೆಸೆದಿದ್ದಾರೆ.
ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ಯಲ್ಲಮ್ಮನ ಗುಡ್ಡದಲ್ಲಿರುವ ರೇಣುಕಾ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ಅಪಾರ ಕಾಣಿಕೆ ಸಂಗ್ರಹವಾಗಿದೆ. ಮೇ 17ರಿಂದ ಜೂನ್ 30ರ ಅವಧಿಯಲ್ಲಿ ಅಂದ್ರೆ 45 ದಿನಗಳಲ್ಲಿ ದೇವಸ್ಥಾನದಲ್ಲಿ 1.37 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. 1 ಕೋಟಿ 30 ಲಕ್ಷ 42 ಸಾವಿರ ನಗದು, 4.44 ಲಕ್ಷ ಮೌಲ್ಯದ ಚಿನ್ನ, 2.29 ಲಕ್ಷ ಮೌಲ್ಯದ ಬೆಳ್ಳಿ ಆಭರಣ ದೇಗುಲದ ಹುಂಡಿಯಲ್ಲಿ ಸಂಗ್ರಹವಾಗಿದೆ.
ಹಾಸನ: ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ 18ಎ ನಿವೇಶನವನ್ನು ಖಾಸಗೀ ವ್ಯಕ್ತಿಗೆ ಮಾಡಿಕೊಟ್ಟಿದ್ದಾರೆಂಬ ಆರೋಪ ಹಿನ್ನೆಲೆ ಮೂವರು ಪಿಡಿಓಗಳ ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಸಿಇಓ ಪೂರ್ಣಿಮಾ ಆದೇಶ ಹೊರಡಿಸಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನ ಬಳದರೆ ಗ್ರಾಮಪಂಚಾಯತ್ ನಲ್ಲಿ ಕೆಲಸ ಮಾಡಿದ್ದ ಮೂವರು ಪಿಡಿಓಗಳು ಅಮಾನತುಗೊಂಡಿದ್ದಾರೆ. ಹಾಲಿ ಡಿ.ಕಾಳೇನಹಳ್ಳಿ ಪಿಡಿಓ ಆಗಿರುವ ಸಿ.ಎನ್.ನವೀನ್, ಕೆಂಬಾಳು/ಬಾಗೂರು ಪಿಡಿಒ ಕೃಷ್ಣೇಗೌಡ, ಡಿ.ಬಳದರೆ ಹಾಗೂ ದಿಂಡಗೂರು ಪಿಡಿಓ ಆಗಿರುವ ರಾಮಸ್ವಾಮಿ ಅಮಾನತು.
ದಾವಣಗೆರೆ ನಗರದ ಹೊರವಲಯದ ಬಾತಿ ಕೆರೆ ಬಳಿ ಹಾಲಿನ ವಾಹನ ಡಿಕ್ಕಿಯಾಗಿ ಆಯುರ್ವೇದ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಆಯುರ್ವೇದ ವಿದ್ಯಾರ್ಥಿ ಮನೋಜ್ ಕುಮಾರ್(20) ಮೃತ ದುರ್ದೈವಿ. ಅಶ್ವಿನಿ ಆಯುರ್ವೇದ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ.
ಬೆಂಗಳೂರು ಗ್ರಾ.ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕೊಳೂರು ಗ್ರಾಮದಲ್ಲಿ ಮನೆಯಲ್ಲಿದ್ದ ಗೃಹಿಣಿ ಕೊಲೆ ಮಾಡಿ 5 ವರ್ಷದ ಮಗು ಕಿಡ್ನ್ಯಾಪ್ ಮಾಡಲಾಗಿದೆ. ಕೊಳೂರು ಗ್ರಾಮದ ನಿವಾಸಿ ಭಾರತಿ(27) ಕೊಲೆಯಾದ ಗೃಹಿಣಿ. ಪತಿ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿ ಭಾರತಿ ಕಂಡು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಂಪತಿಗೆ ಇದ್ದ 5 ವರ್ಷದ ಮಗು ಕೂಡ ನಾಪತ್ತೆ ಹಿನ್ನೆಲೆ ಕಳೆದ ರಾತ್ರಿ ಮನೆಗೆ ನುಗ್ಗಿ ಪ್ರಿಯಕರ ಹರೀಶ್ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ಬೇಟಿ, ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಬಾಲಕಿ ಕಿಡ್ನ್ಯಾಪ್ಗೆ ಯತ್ನಿಸಿದ್ದ ಆರೋಪಿ ಬಂಧನ. ಬೆಳಗಾವಿಯ ಮಾರುತಿ ನಗರದ ನಿವಾಸಿಯಾದ ಗಜಾನನ ಪಾಟೀಲ್(35) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸಿಪಿ ಅರುಣ್ ಕುಮಾರ್ ಕೋಳೂರ್ರಿಂದ ಆರೋಪಿ ವಿಚಾರಣೆ ನಡೆಯುತ್ತಿದ್ದು. ಘಟನೆ ಸಂಬಂಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಎತ್ತಿನಹಳ್ಳಿಯಲ್ಲಿ ಜಮೀನಿಗೆ ತೆರಳಿದ್ದ ರೈತ ಪ್ರತಾಪ್ ರೆಡ್ಡಿ ಮೇಲೆ ಕರಡಿ ದಾಳಿ ನಡೆಸಿದೆ. ಗಾಯಗೊಂಡ ಪ್ರತಾಪ್ ರೆಡ್ಡಿಗೆ ಪಾವಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಗಾಯಾಳು ಆರೋಗ್ಯ ವಿಚಾರಿಸಿದ್ದಾರೆ.
ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜಿ-ನೆಟ್ ಕಂಪನಿ ಮಾಲೀಕ, ಎಎಪಿ ಮುಖಂಡ ಅರುಣ್ ಕುಮಾರ್ನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಎಂಡಿ ಫಣೀಂದ್ರ, ಸಿಇಒ ವಿನುಕುಮಾರ್ ಕೊಲೆಗೆ ಅರುಣ್ ಸುಪಾರಿ ನೀಡಿದ್ದ. ಜೋಕರ್ ಫಿಲೆಕ್ಸ್ಗೆ ಸುಪಾರಿ ನೀಡಿದ್ದಾಗಿ ಅರುಣ್ ಕುಮಾರ್ ತಪ್ಪು ಒಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ ಪೊಲೀಸರ ಬಳಿ ಈ ವಿಚಾರ ಬಾಯ್ಬಿಟ್ಟಿದ್ದಾನೆ.
ದೇವನಹಳ್ಳಿ ತಾಲೂಕಿನ ಚಿಕ್ಕಜಾಲ ಠಾಣೆಯಲ್ಲಿ R.R.ನಗರ ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅನುಮತಿ ಪಡೆಯದೆ ಅಕ್ರಮವಾಗಿ ಜಿಲೆಟಿನ್ ಸ್ಫೋಟಿಸಿದ ಆರೋಪ ಹಿನ್ನೆಲೆ ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ಯಲಹಂಕ ತಹಶೀಲ್ದಾರ್ ಅನಿಲ್ ಅರಳೋಕರ್ ದೂರಿನ ಮೇರೆಗೆ FIR ದಾಖಲಾಗಿದೆ.
ವರ್ಗಾವಣೆ ರೇಟ್ ಕಾರ್ಡ್ ಸದನದಲ್ಲಿ ಸದ್ದು ಮಾಡಲಿದೆ. ಹೆಚ್ಡಿ ಕುಮಾರಸ್ವಾಮಿ ಅವರು ಒಂದು ಇಲಾಖೆಗೆಯ ಟ್ರಾನ್ಸ್ಫರ್ ರೇಟ್ ಕಾರ್ಡ್ ಬಿಡುಗಡೆ ಮಾಡಿದ್ದಾರೆ. ಇಂದು ಮತ್ತಷ್ಟು ರೇಟ್ ಕಾರ್ಡ್ ಗೆ ಪೂರಕ ದಾಖಲೆ ಬಿಡುಗಡೆ ಮಾಡಲಿದ್ದಾರೆ. ಸದನದಲ್ಲಿ ಕಾಂಗ್ರೆಸ್ ನಿಂದ ರೇಟ್ ಕಾರ್ಡ್ ವಿಚಾರವಾಗಿ ಆಕ್ಷೇಪ ಹೆಚ್ಚಾದರೆ ಹಣ ಪಡೆದು ವರ್ಗಾವಣೆ ಮಾಡಿದ ಇಲಾಖೆ ಮತ್ತು ಸಚಿವರ ಹೆಸರು ಬಹಿರಂಗಪಡಿಸುವ ಸಾಧ್ಯತೆ ಇದೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರಿಗೆ ರಾಂಪುರ, ಮೊಳಕಾಲ್ಮೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಸ್ವಸ್ಥರ ಪೈಕಿ ಚಾಮುಂಡಮ್ಮ, ಓಬಕ್ಕ ಎಂಬುವರ ಸ್ಥಿತಿ ಗಂಭೀರವಾಗಿದೆ. ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ಮಹಿಳೆಯರಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸರ್ಕಾರದ ಉಚಿತ ಯೋಜನೆಗಳಿಗೆ ಅಪ್ಲಿಕೇಶನ್ ಹಾಕುವಾಗ ಎಚ್ಚರ ವಹಿಸಿ. ಸರ್ಕಾರದಿಂದ ಹೊಸ ಆ್ಯಪ್ ಬಿಟ್ಟಿದ್ದಾರೆ ಅಂತ ಆ್ಯಪ್ ಮೊರೆ ಹೊದ್ರೆ ಸಂಕಷ್ಟಕ್ಕೆ ಸಿಲುಕುತ್ತೀರ.
ಸರ್ಕಾರದ ಫ್ರೀ ಸ್ಕೀಮ್ಗೆ ಅಪ್ಲಿಕೇಶನ್ ಹಾಕುವಾಗ ಎಚ್ಚರ; ಪ್ಲೇ ಸ್ಟೋರ್ನಲ್ಲಿ ತಲೆ ಎತ್ತಿವೆ ನಕಲಿ ಆ್ಯಪ್ಸ್#congressguarantee #googleplaystore #fakeapps #gruhajyothischeme #GruhalakshmiSchemehttps://t.co/HkxQl2BdSo
— TV9 Kannada (@tv9kannada) July 13, 2023
ಹಿಮಾಚಲಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಸುರಕ್ಷಿತವಾಗಿದ್ದಾರೆ. ನಾಪತ್ತೆಯಾಗಿದ್ದ ಪ್ರವಾಸಿಗರು ಕೊನೆಗೂ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಕುಲು-ಮನಾಲಿ ಪ್ರವಾಸಕ್ಕೆ ಹೋಗಿದ್ದ ಮೈಸೂರಿನ ನಿವಾಸಿಗಳು ಪತ್ತೆ. ನಾವು ಸುರಕ್ಷಿತವಾಗಿದ್ದೇವೆ ಎಂದು ವಿಡಿಯೋ ಮೂಲಕ ಮೂವರು ಪ್ರವಾಸಿಗರು ಮಾಹಿತಿ ನೀಡಿದ್ದಾರೆ. ಮಳೆಯಿಂದ ಸಂಪರ್ಕಕ್ಕೆ ಸಿಗದೆ ಕೆಲ ದಿನಗಳಿಂದ ಶ್ರೀನಿಧಿ, ನವ್ಯಾ, ವೀರ್ ಹಾಗೂ ಅವರ ಪತ್ನಿ ನಾಪತ್ತೆಯಾಗಿದ್ದರು. ಈಗ ಸುರಕ್ಷಿತವಾಗಿದ್ದೇವೆಂದು ವಿಡಿಯೋ ಕಳಿಸಿದ್ದಾರೆ.
Published On - 8:07 am, Thu, 13 July 23