ಕರ್ನಾಟಕದ ವಿಧಾನಸಭಾ ಚುನಾವಣೆ (Karnataka Assembly Election) ಯಾವಾಗ ಎನ್ನುವ ಪ್ರಶ್ನೆಗೆ ಇಂದು ತೆರೆ ಬಿದ್ದಿದೆ, ಕೇಂದ್ರ ಚುನಾವಣಾ ಆಯೋಗವು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ಮೇ 10ರ ಬುಧವಾರದಂದು 224 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು ಮೇ 13ರ ಶನಿವಾರದಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಇದೀಗ ಎಲ್ಲರ ಚಿತ್ತ ಚುನಾವಣಾ ಆಯೋಗದ ಮೇಲೆ ನೆಟ್ಟಿದೆ. ಇನ್ನು ಚುನಾವಣಾ ದಿನಾಂಕ (Election Date) ಘೋಷಣೆಗೂ ಮೊದಲೇ ಕಾಂಗ್ರೆಸ್ (Congress) 124 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನು ಚುನಾವಣಾ ಆಯೋಗದ ಸುದ್ದಿಗೋಷ್ಠಿಯ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಕನ್ನಡ ಡಿಜಿಟಲ್ ಲೈವ್ನಲ್ಲಿ ಪಡೆಯಿರಿ.
ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಕುಮಾರಣ್ಣನ ಸರ್ಕಾರ ಅನ್ನೋ ಫೋಸ್ಟರ್ ವೈರಲ್ ಆಗಿದೆ. ಮೇ 18 ಕ್ಕೆ ಕುಮಾರಸ್ವಾಮಿ ಸರ್ಕಾರ ಅನ್ನೋ ಫೋಸ್ಟರನ್ನು ಕುಮಾರಸ್ವಾಮಿ ಅಭಿಮಾನಿಗಳು ವೈರಲ್ ಮಾಡಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಜೆಡಿಎಸ್ ಪಂಚರತ್ನ ಯಾತ್ರೆ ರದ್ದಾಗಲಿದೆ. ಇಂದು ಯಶವಂತಪುರ ಕ್ಷೇತ್ರದಲ್ಲಿ ನಡೆಯಬೇಕಾಗಿದ್ದ ಪಂಚರತ್ನ ರಥಯಾತ್ರೆ ರದ್ದಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಸಂಸದ ಹಾಗೂ ಶಾಸಕರು ಸರ್ಕಾರಿ ವಾಹನ ಬಿಟ್ಟು ಖಾಸಗಿ ವಾಹನದಲ್ಲಿ ತೆರಳಿದ್ದಾರೆ. ಸಂಸದ ರಾಘವೇಂದ್ರ ಹಾಗೂ ವಿಧಾನಪರಿಷತ್ ಸದಸ್ಯ ರುದ್ರೇಗೌಡ ಬಿಜೆಪಿ ಕಚೇರಿಯಿಂದ ಖಾಸಗಿ ವಾಹನದಲ್ಲಿ ತೆರಳಿದರು. ಖಾಸಗಿ ಕಾರಿನ ಎದುರು ವಿಧಾನ ಪರಿಷತ್ ಸದಸ್ಯರು ಎಂದು ಹಾಕಿಕೊಂಡಿದ್ದ ಬೋರ್ಡ್ ಗೂ ಬಟ್ಟೆ ಮುಚ್ಚಿದ್ದಾರೆ.
ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಮೇ 10 ರಂದು ಚುನಾವಣೆ, 13 ಕ್ಕೆ ಮತ ಎಣಿಕೆ ನಡೆಯಲಿದೆ. ಪ್ರಜಾಪ್ರಭುತ್ವದ ಹಬ್ಬಕ್ಕೆ ನಮ್ಮ ಪಕ್ಷ ಸಂಪೂರ್ಣವಾಗಿ ಸಿದ್ಧವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ಮುಟ್ಟಿಸುವ ಕೆಲಸವಾಗಿದೆ. ನಾವು ಯುದ್ಧ ಬಂದಾಗ ಶಸ್ತ್ರಾಭ್ಯಾಸ ನಡೆಸಲ್ಲ. ಈಗಾಗಲೇ ನಮ್ಮ ಕಾರ್ಯಕರ್ತರು ಸಿದ್ಧರಾಗಿದ್ದಾರೆ. ಈ ಬಾರಿ ಬಿಜೆಪಿ ಸರ್ಕಾರ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ಸ್ಥಾನಗಳಲ್ಲಿ ಕಳೆದ ಬಾರಿ ಏಳು ಸ್ಥಾನ ಗೆದ್ದಿದ್ದೆವು. ಈ ಬಾರಿ ಎಂಟು ಸ್ಥಾನಗಳನ್ನೂ ಗೆಲ್ಲಲಿದ್ದೇವೆ ಎಂದರು.
ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲಿ ತೆರಳಿದ್ದಾರೆ. ಸಿದ್ದರಾಮಯ್ಯ ಬಳಿಯಿದ್ದ ಸರ್ಕಾರಿ ಕಾರನ್ನು ಅಧಿಕಾರಿಗಳು ಹಿಂಪಡೆದಿದ್ದಾರೆ.
ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೆ ಸಿಎಂ ಭೇಟಿಗೆ ಸಚಿವರು ಆಗಮಿಸುತ್ತಿದ್ದಾರೆ. ಸಚಿವ ಆರ್ ಅಶೋಕ್, ಸಿಎಂ ಬೊಮ್ಮಾಯಿ ಭೇಟಿ ಮಾಡಿದ್ದಾರೆ. ನೀತಿ ಸಂಹಿತೆ ಜಾರಿಯಿಂದ ಈಗಾಗಲೇ ತಮ್ಮ ಪ್ರವಾಸ ರದ್ದು ಮಾಡಿಕೊಂಡು ಸರ್ಕಾರಿ ನಿವಾಸದಲ್ಲೇ ಸಿಎಂ ಬೊಮ್ಮಾಯಿ ಉಳಿದಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿದ್ದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಕರ್ನಾಟಕ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದಾರೆ. ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲೇ ಮತದಾನ ನಡೆಯಲಿದೆ. ಏಪ್ರಿಲ್ 13ರಂದು ಅಧಿಸೂಚನೆ ಪ್ರಕಟಗೊಳ್ಳಲಿದೆ. ಏಪ್ರಿಲ್ 20ರಂದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ. ಏಪ್ರಿಲ್ 21ರಂದು ನಾಮಪತ್ರಗಳ ಪರಿಶೀಲನೆ ನಡೆಯುತ್ತೆ. ಏಪ್ರಿಲ್ 24ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ. ಮೇ 10ರ ಬುಧವಾರದಂದು 224 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು ಮೇ 13ರ ಶನಿವಾರದಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ.
ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿ ನಡೆಸಿದ್ದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ರಾಜ್ಯದಲ್ಲಿ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿ ಮಾಡಿದ್ದಾರೆ. ಚುನಾವಣಾ ಅಕ್ರಮ ತಡೆಯಲು 2,400 ವಿಚಕ್ಷಣ ತಂಡ ನಿಯೋಜನೆ ಮಾಡಲಾಗಿದೆ. ಅಕ್ರಮಗಳ ಮೇಲೆ ನಿಗಾವಹಿಸಲು 2016 ಫ್ಲೈಯಿಂಗ್ ಸ್ಕ್ವಾಡ್ ನಿಯೋಜಿಸಲಾಗಿದ್ದು ಎಲ್ಲಾ ವಿಮಾನ ನಿಲ್ದಾಣ, ಬಂದರು, ಹೆದ್ದಾರಿಗಳಲ್ಲಿ ಹದ್ದಿನಕಣ್ಣು ಇಡಲಿದೆ. ಎಲ್ಲಾ ನಗರ, ಜಿಲ್ಲಾ ಕೇಂದ್ರಗಳ ಗೋದಾಮುಗಳ ಮೇಲೆ ನಿಗಾ ಇಡಲಾಗುತ್ತೆ. ಬ್ಯಾಂಕ್ ವಹಿವಾಟಿನ ಮೇಲೆ ಚುನಾವಣಾ ಆಯೋಗ ನಿಗಾ ಇಡಲಿದೆ. ಹಣದ ವ್ಯವಹಾರ, ಮದ್ಯ ಸಾಗಣೆ ಮೇಲೆ ನಿಗಾ ವಹಿಸಲಾಗುವುದು. ಮತದಾರರಿಗೆ ಗಿಫ್ಟ್ ಹಂಚಿಕೆ, ಹಣ ಹಂಚುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತೆ. ಮತದಾರರಿಗೆ ಆಮಿಷವೊಡ್ಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಲಾಗುತ್ತೆ ಎಂದು ತಿಳಿಸಿದರು.
ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ನೀಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಮಾಹಿತಿ ನೀಡಿದರು. ಇದೇ ಮೊದಲ ಬಾರಿಗೆ ಮತದಾನ ಮಾಡುವ 18-19 ವಯಸ್ಸಿನ ಮತದಾರರ ಸಂಖ್ಯೆ 9,17,241. ಕರ್ನಾಟಕದಲ್ಲಿ 5.55 ಲಕ್ಷ ವಿಕಲಚೇತನ ಮತದಾರರರು ಇದ್ದಾರೆ. ಜೇನುಕುರುಬ, ಕಾಡುಕುರುಬ ಮತದಾರರಿಗೆ ಪ್ರತ್ಯೇಕ ಬೂತ್ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ 58,282 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ನಗರ ಪ್ರದೇಶದಲ್ಲಿ 24,063 ಮತಗಟ್ಟೆಗಳ ಸ್ಥಾಪನೆ, ಗ್ರಾಮಾಂತರ ಪ್ರದೇಶದಲ್ಲಿ 34,219 ಮತಗಟ್ಟೆ, ಮಹಿಳಾ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಗಳ ಸಂಖ್ಯೆ 1,320, 224 ಕ್ಷೇತ್ರಗಳಲ್ಲಿ ತಲಾ ಒಂದು ಯುವ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ.
ಈಶಾನ್ಯದ ಮೂರು ರಾಜ್ಯಗಳ ಚುನಾವಣೆ ಸಕ್ಸಸ್ ಆಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ನಮ್ಮ ಪ್ರಯತ್ನ. ಕರ್ನಾಟಕದಲ್ಲಿ ಪುರುಷ ಮತದಾರರು 2,62,42,561 ಇದ್ದು, 2,59,26,319 ಮಹಿಳಾ ಮತದಾರರು ಇದ್ದಾರೆ. ಇನ್ನು ಕರ್ನಾಟಕದಲ್ಲಿ 4,699 ತೃತೀಯ ಲಿಂಗಿಗಳು ಮತದಾರರು ಇದ್ದು, 12.15 ಲಕ್ಷ ಯುವ ಮತದಾರರು ಇದ್ದಾರೆ.
ಏಪ್ರಿಲ್ ಮೊದಲ ವಾರ ಅಮಿತ್ ಶಾ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಾ.31ರೊಳಗೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಅಂತ್ಯವಾಗಲಿದ್ದು ಏ.10ರ ಬಳಿಕ BJP ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಮಿತ್ ಶಾ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಪರಿಶೀಲನೆ ಮಾಡುವ ಸಾಧ್ಯತೆ ಇದೆ. ನಂತರ ರಾಜ್ಯ ಚುನಾವಣಾ ಸಮಿತಿಗೆ ಅಭ್ಯರ್ಥಿಗಳ ಪಟ್ಟಿ ರವಾನೆಯಾಗಲಿದೆ. ರಾಜ್ಯ ಚುನಾವಣಾ ಸಮಿತಿಯಲ್ಲಿ ಸಂಭಾವ್ಯರ ಪಟ್ಟಿ ಚರ್ಚೆಸಿದ ಬಳಿಕ ಕೇಂದ್ರ ಚುನಾವಣಾ ಸಮಿತಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಚರ್ಚೆಯಾಗುತ್ತೆ.
ಕೊಪ್ಪಳ ಏತನೀರಾವರಿ ಚಾಲನೆ ನೀಡಲು ಸಿಎಂ ಆಗಮಿಸಬೇಕಿತ್ತು. ಕೊನೆ ಕ್ಷಣದಲ್ಲಿ ಸಿಎಂ ಕಾರ್ಯಕ್ರಮ ರದ್ದಾದ ಹಿನ್ನಲೆ. ತಾವೇ ಖುದ್ದು ಚಾಲನೆ ನೀಡಲು ಹಾಲಪ್ಪ ಆಚಾರ್ ಮುಂದಾಗಿದ್ದಾರೆ. ನೀರವಾರಿ ಸಚಿವ ಗೋವಿಂದ ಕಾರಜೋಳ ಕೂಡಾ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.
ನೀತಿ ಸಂಹಿತೆ ಜಾರಿ ಬಳಿಕವೂ ಸಿಎಂಗೆ ಕೆಲ ಸವಲತ್ತುಗಳು ಸಿಗಲಿವೆ. ಸಿಎಂ ಸರ್ಕಾರಿ ಕಾರನ್ನು ಕಚೇರಿ, ವಿಧಾನಸೌಧಕ್ಕೆ ಬಳಸಬಹುದು. ಆದ್ರೆ ಜಿಲ್ಲಾ ಪ್ರವಾಸ, ಪ್ರಚಾರಗಳಿಗೆ ಸರ್ಕಾರಿ ವಾಹನ ಬಳಕೆ ನಿರ್ಬಂಧವಿರುತ್ತೆ. ಸಿಎಂಗೆ ಇರುವ ಭದ್ರತೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದೇಶ ಮಾಡುವ, ಸಹಿ ಹಾಕುವ, ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಧಿಕಾರ ಇರಲ್ಲ. ಪಕ್ಷದ ಕಾರ್ಯಕ್ರಮ, ಱಲಿ, ಸಮಾವೇಶದಲ್ಲಿ ಭಾಗವಹಿಸಬಹುದು.
ಇಂದು ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಲಿದೆ. ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಿದ್ಧವಾಗಿದೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಚುನಾವಣೆ ಮುಕ್ತ, ಪಾರದರ್ಶಕವಾಗಿ ನಡೆಯಬೇಕು. ಚುನಾವಣೆ ವೇಳೆ ನಡೆಯುವ ಅಕ್ರಮಗಳನ್ನು ತಡೆಯಬೇಕು. ಆಡಳಿತ ಪಕ್ಷ ಸೇರಿ ಯಾರೇ ಅಕ್ರಮ ನಡೆಸಿದ್ರೂ ಕ್ರಮಕೈಗೊಳ್ಳಬೇಕು. ಆಡಳಿತ ಪಕ್ಷದವರು ಪ್ರಭಾವ ಬೀರುವ ಅವಕಾಶ ಇರುತ್ತೆ. ಅಕ್ರಮಗಳನ್ನು ತಡೆಯುವ ಕೆಲಸ ಆಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಂಗವಿಕಲರು, 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದರು. ರಾಜ್ಯದಲ್ಲಿ 80 ವರ್ಷ ಮೇಲ್ಪಟ್ಟ 12.15 ಲಕ್ಷ ಮತದಾರರಿದ್ದಾರೆ. ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ, 5.55 ಲಕ್ಷ ಪಿಡಬ್ಲ್ಯುಡಿ ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗುತ್ತಿದೆ.
ಚುನಾವಣೆ ಘೋಷಣೆಗೂ ಮುನ್ನವೇ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಗದಗಕ್ಕೆ ಖಾಸಗಿ ಕಾರಿನಲ್ಲಿ ಬಂದಿಳಿದಿದ್ದಾರೆ. ಖಾಸಗಿ ಕಾರಿನಲ್ಲಿ ಬಂದು ನಗರದ ಚೇತನಾ ಕ್ಯಾಂಟೀನ್ ಸರ್ಕಲ್ನಲ್ಲಿರುವ ಗಣಪತಿ ದೇವಸ್ಥಾನದ ಮಹಾದ್ವಾರ ಉದ್ಘಾಟಿಸಿದ್ದಾರೆ.
ಅಭ್ಯರ್ಥಿಗಳು ಸುವಿಧಾ ಮೂಲಕವೂ ನಾಮಪತ್ರ ಸಲ್ಲಿಸಬಹುದು. ಅಫಿಡವಿಟ್ ಕೂಡ ಸಲ್ಲಿಕೆ ಮಾಡಬಹುದು. ಅಪರಾಧ ಪ್ರಕರಣಗಳು ಇದ್ದರೆ ಮೂರು ಬೇರೆ ಬೇರೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿರಬೇಕು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪೇಪರ್ ಕಟ್ಟಿಂಗ್ ಕೂಡ ಅಪ್ಲೋಡ್ ಮಾಡಬೇಕು. ಸಭೆ, ಸಮಾರಂಭ ಮಾಡುವುದಕ್ಕೂ ಆನ್ಲೈನ್ ಮೂಲಕವೇ ಮನವಿ ಸಲ್ಲಿಸಬಹುದು ಎಂದು ಇತ್ತೀಚೆಗೆ ರಾಜೀವ್ ಕುಮಾರ್ ಹೇಳಿದ್ದರು.
ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆಗಳು ಇರಲಿವೆ. ಒಂದು ಮತಗಟ್ಟೆಯಲ್ಲಿ 883 ಜನ ಮತ ಹಾಕಬಹುದಾಗಿದೆ. ನಗರ ಪ್ರದೇಶಗಳಲ್ಲಿ 24,063 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 34,219 ಮತಗಟ್ಟೆಗಳು ಇರಲಿವೆ. ಹಾಗೇ ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳು ಇರುವಂತೆ ನೋಡಿಕೊಳ್ಳಲಾಗುವುದು. ಅಂಗವಿಕಲರಿಗೆ ವ್ಹೀಲ್ಚೇರ್ ವ್ಯವಸ್ಥೆ ಇರಲಿದೆ.
ರಾಜ್ಯದಲ್ಲಿ 5,21,73,579 ಜನ ಮತದಾರರಿದ್ದಾರೆ. 2,62,42,561 ಜನ ಪುರುಷ ಮತದಾರರು ಹಾಗೂ 2,59,26,319 ಮಹಿಳಾ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟವರು 12,15,763 ಜನ ಇದ್ದಾರೆ. 100 ವರ್ಷ ಮೇಲ್ಪಟ್ಟ 16,976 ಮತದಾರರಿದ್ದಾರೆ. 9,17,241 ಮಂದಿ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 4,699 ತೃತೀಯ ಲಿಂಗಿ ಮತದಾರರಿದ್ದಾರೆ. 17 ವರ್ಷ ಮೇಲ್ಪಟ್ಟವರು 1,25,406 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಇತ್ತೀಚೆಗೆ ರಾಜ್ಯ ವಿಧಾನಸಭೆ ಚುನಾವಣೆಯ ಸಿದ್ಧತೆ ಪರಿಶೀಲನೆಗಾಗಿ ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮಾಹಿತಿ ನೀಡಿದ್ದರು
ಚುನಾವಣಾ ದಿನಾಂಕ ಘೋಷಣೆ ಬಳಿಕ ಬಿಜೆಪಿ ಪಟ್ಟಿ ಬಿಡುಗಡೆ ಮಾಡುವುದಾಗಿ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ನಮ್ಮದು ಯಾವಾಗಲೂ ಚುನಾವಣಾ ದಿನಾಂಕ ಘೋಷಣೆ ಬಳಿಕವೇ ಆಗೋದು. ನಮ್ಮ ಬಳಿ ಸರ್ವೇ ರಿಪೋರ್ಟ್ ಇದೆ. ಅದು ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ಮಾಡ್ತಾರೆ. ಟಿಕೆಟ್ ಫೈನಲ್ ವಿಚಾರದ ದಿನಾಂಕ ಹೇಳಲು ಆಗೋದಿಲ್ಲ ಎಂದರು.
ಇಂದಿನಿಂದಲೇ ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಗಳಿದ್ದು ಸಿಎಂ ಸೇರಿದಂತೆ ಸಚಿವರು ಸರ್ಕಾರಿ ಸೌಲಭ್ಯವನ್ನು ಬಳಸುವಂತಿಲ್ಲ. ಸರ್ಕಾರಿ ವಾಹನ ಸೇರಿದಂತೆ ಇತರೆ ಸವಲತ್ತುಗಳನ್ನು ಬಳಸುವಂತಿಲ್ಲ. ಸರ್ಕಾರ ಯಾವುದೇ ಹೊಸ ಯೋಜನೆ ಘೋಷಣೆ ಮಾಡುವಂತಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತಿಲ್ಲ. ಆದ್ರೆ ಸಿಎಂ ಸೇರಿ ಸಚಿವರು, ಶಾಸಕರಿಗೆ ಎಂದಿನಂತೆ ಭದ್ರತೆ ಇರುತ್ತೆ. ಎಸ್ಕಾರ್ಟ್ ಸೇರಿದಂತೆ ಎಲ್ಲಾ ರೀತಿಯ ಭದ್ರತೆ ಮುಂದುವರಿಯಲಿದೆ.
ಸಿದ್ದರಾಮಯ್ಯ ಕಾರ್ಯಕ್ರಮಕ್ಕೂ ನೀತಿ ಸಂಹಿತಿ ಬಿಸಿ ತಟ್ಟುವ ಸಾಧ್ಯತೆ ಇದೆ. ಮಧ್ಯಾಹ್ನ 1 ಗಂಟೆಗೆ ವರುಣ ಕ್ಷೇತ್ರಕ್ಕೆ ಸಿದ್ದರಾಮಯ್ಯ ಆಗಮಿಸಲಿದ್ದು ವರುಣಾ ಕ್ಷೇತ್ರದ ಬಿಳಿಗುಲಿಯಲ್ಲಿ ಸೇತುವೆ ಉದ್ಘಾಟನೆ ಮಾಡಲಿದ್ದರು. ಆದ್ರೆ ಚುನಾವಣೆ ಘೋಷಣೆಯಾಗುವ ಹಿನ್ನೆಲೆ ಈ ಕಾರ್ಯಕ್ರಮ ರದ್ದಾಗುವ ಸಾಧ್ಯತೆ ಇದೆ.
ಇಂದು ರಾಜ್ಯ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ನಿರೀಕ್ಷೆಯಂತೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು. ಇಂದಿನ ನನ್ನ ಎಲ್ಲಾ ಜಿಲ್ಲಾ ಪ್ರವಾಸಗಳು ರದ್ದುಗೊಳಿಸಿದ್ದೇನೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ಕೊಪ್ಪಳ ಜಿಲ್ಲಾ ಪ್ರವಾಸವನ್ನು ರದ್ದು ಮಾಡಿದ್ದೇನೆ. ನೀತಿ ಸಂಹಿತೆ ಜಾರಿ ಹಿನ್ನೆಲೆ ಜಿಲ್ಲಾ ಪ್ರವಾಸ ರದ್ದು ಮಾಡಿದ್ದೇನೆ. ನಾನು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇನೆ. ಪಕ್ಷ ನಡೆಸುವ ಱಲಿಗಳು, ಪ್ರಚಾರಗಳಲ್ಲಿ ಭಾಗವಹಿಸುತ್ತೇನೆ ಎಂದರು.
Published On - 10:10 am, Wed, 29 March 23