ಬೆಂಗಳೂರು, ಅ.6: ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸಲು 190 ಕಿ.ಮೀ. ಸುರಂಗ (Tunnel) ಮಾರ್ಗವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಬೆಂಗಳೂರು (Bangalore) ನಗರ ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (D.K.Shivakumar) ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು 45 ದಿನಗಳಲ್ಲಿ ಸಾರ್ವಜನಿಕ ಟೆಂಡರ್‌ಗಳನ್ನು ಆಹ್ವಾನಿಸಲಿದೆ ಎಂದು ತಿಳಿಸಿದರು.
ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ 190 ಕಿ.ಮೀ ಉದ್ದದ ಸುರಂಗ ಮಾರ್ಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಎಂಟು ಕಂಪನಿಗಳು ಅರ್ಹತೆ ಪಡೆದಿವೆ. 45 ದಿನಗಳಲ್ಲಿ ಸಾರ್ವಜನಿಕ ಟೆಂಡರ್‌ಗಳು ನಡೆಯಲಿವೆ ಎಂದರು.
ಸುರಂಗ ರಸ್ತೆ ಹೇಗಿರಬೇಕು, ನಾಲ್ಕು ಅಥವಾ ಆರು ಪಥಗಳಾಗಬೇಕೆ? ಎಲ್ಲಿಂದ ಆರಂಭಿಸಬೇಕು ಮತ್ತು ಎಲ್ಲಿ ಕೊನೆಗೊಳಿಸಬೇಕು ಎಂಬ ಬಗ್ಗೆ ಈ ಕಂಪನಿಗಳು ಅಧ್ಯಯನ ನಡೆಸಿ ವರದಿ ನೀಡಲಿದ್ದು, ನಗರದಾದ್ಯಂತ ವಿಸ್ತರಣೆ ಮಾಡಬೇಕೆ ಎಂಬ ಬಗ್ಗೆಯೂ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.
ಇದನ್ನೂ ಓದಿ: ಬೆಂಗಳೂರು: ಮಹಿಳೆಯ ಉಳಿತಾಯ ಖಾತೆಗೆ ಕನ್ನಾ, ಬಡ್ಡಿಯೊಂದಿಗೆ 3 ಲಕ್ಷ ಮರುಪಾವತಿಸುವಂತೆ ಎಸ್ಬಿಐಗೆ ಆದೇಶಿಸಿದ ಗ್ರಾಹಕರ ಕೋರ್ಟ್
ಯೋಜನೆಯು ಬಹಳ ದೊಡ್ಡ ಪ್ರಮಾಣದಲ್ಲಿರುವುದರಿಂದ ಮತ್ತು ದೊಡ್ಡ ಪ್ರಮಾಣದ ಅನುದಾದ ಅಗತ್ಯವಿರುವುದರಿಂದ ಇದನ್ನು ಹಲವಾರು ಹಂತಗಳಲ್ಲಿ ಮಾಡಬೇಕಾಗಿದೆ ಎಂದು ಹೇಳಿದ ಡಿಕೆ ಶಿವಕುಮಾರ್, ಸದ್ಯಕ್ಕೆ 190 ಕಿ.ಮೀ.ಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.
ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ, ಎಸ್ಟೀಮ್ ಮಾಲ್ ಜಂಕ್ಷನ್ ನಿಂದ ಮೇಖ್ರಿ ವೃತ್ತ, ಮಿಲ್ಲರ್ ರಸ್ತೆ, ಚಾಲುಕ್ಯ ವೃತ್ತ, ಟ್ರಿನಿಟಿ ವೃತ್ತ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆಯಿಂದ ಕೃಷ್ಣರಾವ್ ಪಾರ್ಕ್, ಮೈಸೂರು ರಸ್ತೆಯಿಂದ ಶಿರಸಿ ವೃತ್ತ, ಮಾಗಡಿ ರಸ್ತೆ, ತುಮಕೂರು ರಸ್ತೆಯಿಂದ ಯಶವಂತಪುರ ಜಂಕ್ಷನ್, ಹೊರ ವರ್ತುಲ ರಸ್ತೆ, ಗೊರಗುಂಟೆಪಾಳ್ಯ, ಕೆ.ಆರ್. ಪುರಂ, ಸಿಲ್ಕ್ ಬೋರ್ಡ್ ಪ್ರದೇಶಗಳನ್ನು ಸುರಂಗ ಮಾರ್ಗಕ್ಕಾಗಿ ಗುರುತಿಸಲಾಗಿದೆ ಎಂದರು.
ನಾವು ಆದ್ಯತೆಯ ಆಧಾರದ ಮೇಲೆ ಈ ಪ್ರದೇಶಗಳನ್ನು ಆಯ್ಕೆ ಮಾಡಿದ್ದೇವೆ. ಈ ಸುರಂಗ ಮಾರ್ಗವನ್ನು ಎಲ್ಲಿ ಮತ್ತು ಹೇಗೆ ಮಾಡಬಹುದು ಎಂದು ಕಂಪನಿಗಳು ಅಧ್ಯಯನ ಮಾಡಲಿವೆ. ಬೆಂಗಳೂರಿಗೆ ಕನಿಷ್ಠ ನಾಲ್ಕು ಪಥದ ಸುರಂಗ ಮಾರ್ಗದ ಅಗತ್ಯವಿದೆ ಎಂದರು.
ಮುಂಗಾರು ಹಂಗಾಮು ಮುಗಿದಿದ್ದು, ಮಳೆ ನೀರು ಹರಿಯಲು ಚರಂಡಿ ಸೇರಿದಂತೆ ಪ್ರಮುಖ ಆದ್ಯತೆಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಗುತ್ತಿಗೆದಾರರ ಮೇಲೆ ಒತ್ತಡ ಹೇರುವ ಜವಾಬ್ದಾರಿಯನ್ನು ಮುಖ್ಯ ಎಂಜಿನಿಯರ್‌ಗಳಿಗೆ ನೀಡಲಾಗಿದೆ.
ಕಳೆದ ವಾರ ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆಯನ್ನು ಉಲ್ಲೇಖಿಸಿದ ಶಿವಕುಮಾರ್, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಂಚಾರ ಪೊಲೀಸರೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂಜಿನಿಯರ್‌ಗಳು ರಸ್ತೆ ಗುಂಡಿಗಳ ಸಮಸ್ಯೆ ನಿವಾರಣೆಗೆ ಟ್ರಾಫಿಕ್ ಪೊಲೀಸರ ಸಹಕಾರದೊಂದಿಗೆ ಕೆಲಸ ಮಾಡಬೇಕು. ಟ್ರಾಫಿಕ್ ಪೊಲೀಸರು ಸೂಚಿಸಿದ ಸ್ಥಳಗಳಲ್ಲಿ, ಬಿಬಿಎಂಪಿ ತ್ವರಿತವಾಗಿ ಗುಂಡಿಗಳನ್ನು ತುಂಬಬೇಕು, ಇದರಿಂದ ಯಾವುದೇ ಅಪಘಾತಗಳು ಸಂಭವಿಸುವುದಿಲ್ಲ ಎಂದರು.
ಸಾರ್ವಜನಿಕರು ಕೂಡ ಗುಂಡಿಗಳ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ ಮಾಹಿತಿ ನೀಡಬಹುದು ಎಂದ ಅವರು, ಮಳೆ ಬಂದಾಗ ಗುಂಡಿಗಳು ಬೀಳುವುದು ಸಹಜ. ನಗರದ ಪ್ರಮುಖ ಪ್ರದೇಶಗಳಲ್ಲಿ ಇಂತಹ ರಸ್ತೆ ಗುಂಡಿಗಳನ್ನು ಕೂಡಲೇ ಸರಿಪಡಿಸಲಾಗುವುದು ಎಂದರು.
ಬೆಂಗಳೂರಿನ ರಸ್ತೆ ದಟ್ಟಣೆಯನ್ನು ನಿವಾರಿಸಲು ರಾಜ್ಯವು ಕೇಂದ್ರದ ಸಹಾಯವನ್ನು ಕೇಳುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಖಂಡಿತವಾಗಿಯೂ ನಾವು ಕೇಂದ್ರದ ಸಹಾಯವನ್ನು ಕೋರುತ್ತೇವೆ. ಈ ಪ್ರಸ್ತಾವನೆಗಳು ಸಲ್ಲಿಕೆಯಾದ ನಂತರ ನಾವು ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುತ್ತೇವೆ ಎಂದರು.
ನಾನು ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರಿಗೆ ವಾಹನಗಳು ಆಗಮಿಸಿ ಸಂಚಾರ ದಟ್ಟಣೆ ಉಂಟು ಮಾಡುತ್ತವೆ. ಈ ಬಗ್ಗೆ ನಾನು ಅವರೊಂದಿಗೆ ಚರ್ಚಿಸಿದ್ದೇನೆ. ಅವರು ನನಗೆ ಸಲಹೆ ನೀಡಿದರು ಮತ್ತು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:35 am, Fri, 6 October 23