
ಬೆಂಗಳೂರು, ನವೆಂಬರ್ 19: ನೀಟ್ ಪರೀಕ್ಷಾ ಕೇಂದ್ರದ ಆವರಣಕ್ಕೆ ಮೊಬೈಲ್ ಕೊಂಡೊಯ್ದ ಆರೋಪ ಹಿನ್ನೆಲೆ ವಿದ್ಯಾರ್ಥಿನಿಯ ಅಂಕಪಟ್ಟಿ ತಡೆಹಿಡಿದಿದ್ದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿದೆ. ರಾಣೆಬೆನ್ನೂರಿನ ಅನುಷ್ಕಾ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ಪೀಠ ತೀರ್ಪು ನೀಡಿದೆ.
ಮೇ 3ರಂದು ನಡೆದ ನೀಟ್ ಪರೀಕ್ಷೆಯ ಸಂದರ್ಭದಲ್ಲಿ ರಾಣೆಬೆನ್ನೂರಿನ ಅನುಷ್ಕಾ ಅವರು ಮೊಬೈಲ್ ಫೋನ್ ಅನ್ನು ಪರೀಕ್ಷಾ ಕೇಂದ್ರದ ಆವರಣಕ್ಕೆ ಕೊಂಡೊಯ್ದಿದ್ದರು. ಆದರೆ ಪರೀಕ್ಷಾ ಕೊಠಡಿ ಪ್ರವೇಶಿಸುವ ಮೊದಲೇ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ನೀಟ್ ಪರೀಕ್ಷೆ ರದ್ದುಗೊಂಡ ಹಿನ್ನೆಲೆಯಲ್ಲಿ ಜೂನ್ 21ರಂದು ಮರುಪರೀಕ್ಷೆ ನಡೆಸಲಾಗಿತ್ತು. ಮರುಪರೀಕ್ಷೆಯಲ್ಲಿ ವಿದ್ಯಾರ್ಥಿನಿ 570 ಅಂಕಗಳನ್ನು ಪಡೆದಿದ್ದರು.
ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಮನಸ್ಸಿಗೆ ಬಂದಿದ್ದನ್ನೆಲ್ಲ ಪೋಸ್ಟ್ ಮಾಡುವಂತಿಲ್ಲ, ಅದು ಮುಕ್ತ ಪರವಾನಗಿ ಅಲ್ಲ: ಕರ್ನಾಟಕ ಹೈಕೋರ್ಟ್
570 ಅಂಕ ಗಳಿಸಿದ್ದ ಅನುಷ್ಕಾಗೆ ಬೆಳಗಾವಿಯ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ದೊರೆತಿತ್ತು. ಆದರೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅವರ ಅಂಕಪಟ್ಟಿಯನ್ನು ತಡೆಹಿಡಿದಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಮಧ್ಯಂತರ ಆದೇಶದ ಮೇರೆಗೆ ಅವರಿಗೆ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ದೊರೆತಿತ್ತು.
ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿನಿ ಮೊಬೈಲ್ ಬಳಸಿಲ್ಲ. ಹೀಗಿದ್ದರೂ ಅಂಕಪಟ್ಟಿಯನ್ನು ತಡೆಹಿಡಿದ ಎನ್ಟಿಎ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ವಿದ್ಯಾರ್ಥಿಯೊಬ್ಬಳು ಗಳಿಸಿದ ಅಂಕಗಳ ಹಿಂದೆ ಸಾಕಷ್ಟು ದಿನಗಳ ನಿದ್ದೆಯಿಲ್ಲದ ರಾತ್ರಿಗಳ ಪರಿಶ್ರಮ, ಹಲವು ವರ್ಷಗಳ ತ್ಯಾಗ ಮತ್ತು ವೈದ್ಯೆಯಾಗಬೇಕೆಂಬ ಕನಸು ಇರುತ್ತದೆ. ತಾಂತ್ರಿಕ ಕಾರಣಗಳಿಂದ ಅರ್ಹ ವಿದ್ಯಾರ್ಥಿನಿಗೆ ಅನ್ಯಾಯವಾಗಬಾರದು ಎಂದು ಅಭಿಪ್ರಾಯಪಟ್ಟಿರುವ ವಿಭಾಗೀಯ ಪೀಠ, ವಿದ್ಯಾರ್ಥಿನಿಯ ಅರ್ಜಿಯನ್ನು ಪುರಸ್ಕರಿಸಿ ಎನ್ಟಿಎ ಕ್ರಮವನ್ನು ರದ್ದುಗೊಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.