
ಬೆಂಗಳೂರು, ಅಕ್ಟೋಬರ್ 23: ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಸಂಬಂಧಿಸಿದ ದೂರುಗಳ ಆಧಾರದ ಮೇಲೆ ಯಾವುದೇ ಪೂರ್ವಪರ ಪರಿಶೀಲನೆಯಿಲ್ಲದೆ ಏಕಾಏಕಿ ಬಂಧಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದೆ. ಅಪರಾಧಗಳ ನೋಂದಣಿ, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ಹಾಗೂ ಅನಗತ್ಯ ಬಂಧನ ತಡೆಯುವ ಕಾನೂನು ಸುರಕ್ಷತಾ ಕ್ರಮಗಳ ಕುರಿತು ರಾಜ್ಯದ ಎಲ್ಲಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಆಡಳಿತಾತ್ಮಕ ಸೂಚನೆಗಳನ್ನು ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಿಗೆ (ಡಿಜಿ ಮತ್ತು ಐಜಿಪಿ) ನ್ಯಾಯಾಲಯ ನಿರ್ದೇಶನ ನೀಡಿದೆ.
ಅಪರಾಧ ಪ್ರಕರಣ ದಾಖಲಾದ ಮಾತ್ರಕ್ಕೆ ಆರೋಪಿಯನ್ನು ಏಕಾಏಕಿ ಬಂಧಿಸಬಾರದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಆಯಾ ವ್ಯಾಪ್ತಿಯ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 35ರ ಅಡಿಯಲ್ಲಿ ಆರೋಪಿಗೆ ನೋಟಿಸ್ ನೀಡುವ ನಿಯಮಗಳನ್ನು ಹಾಗೂ ಸುಪ್ರೀಂ ಕೋರ್ಟ್‌ನ ಸತೇಂದರ್ ಕುಮಾರ್, ಜೋಗಿಂದರ್ ಕುಮಾರ್ ಮತ್ತು ಅರ್ನೇಶ್ ಕುಮಾರ್ ಪ್ರಕರಣಗಳಲ್ಲಿ ನೀಡಿರುವ ತೀರ್ಪುಗಳಲ್ಲಿನ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬಂಧನಕ್ಕೆ ಸಂಬಂಧಿಸಿದ ಕಾನೂನುಬದ್ಧ ಷರತ್ತುಗಳು ಪೂರೈಸದಿದ್ದಲ್ಲಿ, ಬಿಎನ್‌ಎಸ್‌ಎಸ್‌ನ ಸೆಕ್ಷನ್ 35(3)ರ ಅಡಿಯಲ್ಲಿ ನಿಗದಿಪಡಿಸಿರುವ ಪ್ರಕ್ರಿಯೆಯನ್ನು ಅನುಸರಿಸಬೇಕು ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹೇಳಿದ್ದಾರೆ.
ಇದನ್ನೂ ಓದಿ: SIR ಫಾರಂ 7 ವಿವಾದ: ಬಿಜೆಪಿ ಮುಖಂಡರ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ಹೈಕೋರ್ಟ್ ತಡೆ
ಒಂದೇ ಘಟನೆ, ವ್ಯವಹಾರ ಅಥವಾ ಬಹುತೇಕ ಒಂದೇ ರೀತಿಯ ಸಾಮಾಜಿಕ ಜಾಲತಾಣದ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ದೂರುಗಳು ಬಂದಾಗ, ಆ ಕುರಿತು ಈಗಾಗಲೇ ಪ್ರಕರಣ ದಾಖಲಾಗಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಒಂದೇ ಘಟನೆಗೆ ಸಂಬಂಧಿಸಿದಂತೆ ಹಲವು ದೂರುಗಳು ಬಂದರೆ, ಸರಣಿ ಎಫ್‌ಐಆರ್‌ಗಳಿಗೆ ಸಂಬಂಧಿಸಿದ ಕಾನೂನು ತತ್ವಗಳ ಪ್ರಕಾರ ಅವುಗಳನ್ನು ನಿರ್ವಹಿಸಬೇಕು. ದೂರುದಾರರು ಬೇರೆಬೇರೆಯಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಹೊಸ ಅಪರಾಧ ಪ್ರಕರಣ ದಾಖಲಿಸಬಾರದು. ಆದರೆ, ಆರೋಪಗಳು ಕಾನೂನುಬದ್ಧವಾಗಿ ಪ್ರತ್ಯೇಕ ಘಟನೆಯನ್ನು ಅಥವಾ ಸ್ವತಂತ್ರವಾಗಿ ಪ್ರಕರಣ ದಾಖಲಿಸಬಹುದಾದ ಅಪರಾಧವನ್ನು ಬಹಿರಂಗಪಡಿಸಿದರೆ ಹೊಸ ಪ್ರಕರಣ ದಾಖಲಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದ ಪೋಸ್ಟ್ ಆಧರಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದ ಪ್ರಕರಣವನ್ನು ರದ್ದುಗೊಳಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಈ ಮಾರ್ಗಸೂಚಿಗಳನ್ನು ನೀಡಿದ್ದಾರೆ. ಬೆಂಗಳೂರಿನ ನಿವಾಸಿ ಸಂದೀಪ್ ಕುಮಾರ್ ಎಂಬವರು ಪ್ರಕರಣ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಜೀಪ್‌ನಲ್ಲಿ ಬಂದಿದ್ದ ಆರು ಮಂದಿ ಪುರುಷರು ಮಹಿಳೆಯೊಬ್ಬರನ್ನು ಹಿಂಬಾಲಿಸಿದ ಘಟನೆಗೆ ಸಂಬಂಧಿಸಿದ ಪೋಸ್ಟ್ ಅನ್ನು ತಾವು ಕೇವಲ ಸಾಮಾಜಿಕ ಜಾಲತಾಣದಲ್ಲಿ ಮರುಹಂಚಿಕೊಂಡಿದ್ದಾಗಿ ಅವರು ವಾದಿಸಿದ್ದರು. ಇದೇ ಘಟನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 353ರ ಅಡಿಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲೇ ಸುಮಾರು ಏಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.