
ಬೆಂಗಳೂರು, ನವೆಂಬರ್ 10: ಮದುವೆಯಾದ ಬಳಿಕ ಅಥವಾ ತಾಯಿಯಾದ ನಂತರ ಮಹಿಳೆಯ ವೃತ್ತಿಜೀವನಕ್ಕೆ ಪೂರ್ಣವಿರಾಮ ಬೀಳಬೇಕಿಲ್ಲ. ಕುಟುಂಬದ ಜವಾಬ್ದಾರಿಗಳ ಕಾರಣಕ್ಕೆ ಮಹಿಳೆಯರು ತಮ್ಮ ವೃತ್ತಿಪರ ಕನಸುಗಳನ್ನು ಕೈಬಿಡಬೇಕಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಮದುವೆ, ತಾಯ್ತನ ಮತ್ತು ಮಕ್ಕಳನ್ನು ಬೆಳೆಸುವ ಜವಾಬ್ದಾರಿಗಳು ಮಹಿಳೆಯನ್ನು ಒಂದೇ ಸ್ಥಳಕ್ಕೆ ಸೀಮಿತಗೊಳಿಸಬಾರದು ಎಂದು ನ್ಯಾಯಾಲಯ ಹೇಳಿದೆ. ವಿದೇಶದಲ್ಲಿ ಉದ್ಯೋಗಾವಕಾಶ ಪಡೆದ ನೇತ್ರ ತಜ್ಞೆಯೊಬ್ಬರು ತಮ್ಮ ಮಗನೊಂದಿಗೆ ಯುನೈಟೆಡ್ ಕಿಂಗ್ಡಮ್ಗೆ ತೆರಳಲು ಅನುಮತಿ ನೀಡಿರುವ ಪ್ರಕರಣದಲ್ಲಿ ಈ ಮಹತ್ವದ ಅಭಿಪ್ರಾಯ ಹೊರಬಿದ್ದಿದೆ.
ಅಕ್ಟೋಬರ್ 29ರಂದು ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರು ಈ ಪ್ರಕರಣದ ಅರ್ಜಿಯನ್ನು ಇತ್ಯರ್ಥಪಡಿಸಿದ್ದಾರೆ. ಮುಂಬೈನಲ್ಲಿ ವಾಸವಿರುವ ಮಹಿಳೆಯ ಪತಿ, ಬೆಂಗಳೂರಿನ ಕುಟುಂಬ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಪ್ರಾಪ್ತ ಮಗುವಿನ ಮೂಲ ಪಾಸ್ಪೋರ್ಟ್ ಪತ್ನಿಗೆ ನೀಡಬೇಕು ಹಾಗೂ ಮಗುವಿನ ವೀಸಾ ಪಡೆಯಲು ಒಪ್ಪಿಗೆ ನೀಡಬೇಕು ಎಂದು ಕುಟುಂಬ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಅರ್ಜಿ ಸಲ್ಲಿಸಿದ್ದರು.
ಆದರೆ ಪತ್ನಿ 2019ರಿಂದ ಮಗುವಿನ ಆರೈಕೆಯ ಜವಾಬ್ದಾರಿ ನಿರ್ವಹಿಸುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಯುಕೆಯಲ್ಲಿ ನೇತ್ರ ತಜ್ಞೆಯಾಗಿ ಉದ್ಯೋಗ ದೊರೆತಿದ್ದು, ಇದರಿಂದ ಮಗುವಿಗೆ ಉತ್ತಮ ವಸತಿ, ಶಿಕ್ಷಣ, ಆರೋಗ್ಯ ಸೇವೆ ಹಾಗೂ ಆರ್ಥಿಕ ಭದ್ರತೆ ಒದಗಿಸಲು ಸಾಧ್ಯವಾಗಲಿದೆ ಎಂದು ವಾದಿಸಿದ್ದರು.
ಮಹಿಳೆಯ ವೃತ್ತಿಜೀವನದ ಅವಕಾಶಗಳನ್ನು ನಿರಾಕರಿಸಬಾರದು ಎಂಬ ನಿಲುವಿನ ಜೊತೆಗೆ ತಂದೆ ಮತ್ತು ಮಗುವಿನ ಸಂಬಂಧಕ್ಕೂ ನ್ಯಾಯಾಲಯ ಮಹತ್ವ ನೀಡಿದೆ. ಪ್ರತಿದಿನ ಕನಿಷ್ಠ 20 ನಿಮಿಷಗಳ ಕಾಲ ತಂದೆ ಮಗುವಿನೊಂದಿಗೆ ಆಡಿಯೋ ಅಥವಾ ವಿಡಿಯೋ ಕರೆ ಮೂಲಕ ಮಾತನಾಡಲು ತಾಯಿ ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದೆ.
ಮಗುವಿನ ಶಾಲಾ ರಜೆಗಳಲ್ಲಿ ತಂದೆಗೆ ಭೇಟಿಯ ಅವಕಾಶ ನೀಡಬೇಕು. ವರ್ಷದಲ್ಲಿ ಎರಡು ಬಾರಿ ರಜೆಯ ಸಂದರ್ಭದಲ್ಲಿ ಮಗು ಭಾರತಕ್ಕೆ ಬಂದು ಶೇಕಡಾ 75ರಷ್ಟು ರಜೆಯನ್ನು ತಂದೆಯೊಂದಿಗೆ ಕಳೆಯಬೇಕು. ತಂದೆಯೂ ಯುಕೆಗೆ ತೆರಳಿ ರಜೆಯ ಶೇಕಡಾ 75ರಷ್ಟು ಅವಧಿಯಲ್ಲಿ ಮಗುವಿನೊಂದಿಗೆ ಸಮಯ ಕಳೆಯಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ