
ಬೆಂಗಳೂರು, ಅಕ್ಟೋಬರ್ 24: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬೇರೆ ದೇಶಗಳಿಂದ ಬಂದ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚಿಗಷ್ಟೆ ನೂರಾರು ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಲಾಗಿತ್ತು. ಇದರ ಬೆನ್ನಲ್ಲೇ ಕರ್ನಾಟಕ ಹೈಕೋರ್ಟ್ ದೇಶದ ಭದ್ರತೆಯ ಹಿತದೃಷ್ಟಿಯಿಂದ ಒಂದು ಮಹತ್ವದ ಆದೇಶವನ್ನು ಹೊರಡಿಸಿದ್ದು, ರಾಜ್ಯದಲ್ಲಿ ಅಕ್ರಮ ವಲಸಿಗರ ಪತ್ತೆ ಹಾಗೂ ನಿಯಂತ್ರಣಕ್ಕಾಗಿ ಮೂರು ತಿಂಗಳ ಒಳಗೆ ಜಿಲ್ಲಾಮಟ್ಟದ ವಿಶೇಷ ಸಮಿತಿಗಳನ್ನು ರಚಿಸಿ ಕಾರ್ಯಾರಂಭ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ನೀಡಿದ್ದು, ಅಕ್ರಮ ವಲಸೆಯ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದು ರಾಷ್ಟ್ರೀಯ ಭದ್ರತೆಗೆ ಅಪಾಯ ತರಬಹುದು ಎಂದು ಎಚ್ಚರಿಸಿದೆ. ಜೊತೆಗೆ, ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಪ್ರಮಾಣಿತ ಕಾರ್ಯವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.
ಬೆಂಗಳೂರಿನ ವೈದ್ಯ ಡಾ. ಟಿ. ನಾಗೇಂದ್ರಪ್ಪ ಎಂಬುವವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆ ನಡೆಸುವಾಗ ಹೈಕೋರ್ಟ್ ಈ ಕಠಿಣ ಆದೇಶ ನೀಡಿದೆ. ಡಾ. ನಾಗೇಂದ್ರಪ್ಪ ಅವರು ಶಂಕಿತ ಬಾಂಗ್ಲಾದೇಶಿ ಅಕ್ರಮ ವಲಸಿಗರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಕುರಿತು ವರದಿ ಮತ್ತು ಕಾಲಾನುಕ್ರಮದ ಘಟನೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅಕ್ರಮ ವಲಸಿಗರ ಗಡಿಪಾರು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ವೈದ್ಯರ ವಿರುದ್ಧ ಪ್ರತೀಕಾರದ ರೀತಿಯಲ್ಲಿ ದೂರು ದಾಖಲಿಸಿರುವುದನ್ನು ಗಮನಿಸಿತು. ಹೀಗಾಗಿ ವೈದ್ಯರ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸಿದ ಹೈಕೋರ್ಟ್, ಅಕ್ರಮಗಳ ಬಗ್ಗೆ ಮಾಹಿತಿ ನೀಡುವವರ ವಿರುದ್ಧ ಕಾನೂನನ್ನು ಅಸ್ತ್ರವಾಗಿ ಬಳಸಬಾರದು ಎಂದು ಸ್ಪಷ್ಟಪಡಿಸಿತು.
ಇದನ್ನೂ ಓದಿ ವ್ಯಕ್ತಿ ಮೇಲೆ ರೌಡಿಶೀಟ್ ಕೇಸ್ ಓಪನ್ ಮಾಡುವ ಬಗ್ಗೆ ಪೊಲೀಸರಿಗೆ ಮಹತ್ವದ ಸಲಹೆ ನೀಡಿದ ಹೈಕೋರ್ಟ್
ವ್ಯವಸ್ಥಿತ ಹೊಣೆಗಾರಿಕೆಗೆ ಒತ್ತು ನೀಡಿದ ನ್ಯಾಯಾಲಯವು, ಯಾವುದೇ ಅಕ್ರಮ ವಲಸಿಗ ಪತ್ತೆಯಾದ ತಕ್ಷಣ, ನಿಯಮಿತ ಗಡಿಪಾರು ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಮೊದಲು ಅವರ ಬಯೋಮೆಟ್ರಿಕ್ ಮತ್ತು ಜನಸಂಖ್ಯಾಶಾಸ್ತ್ರದ ವಿವರಗಳನ್ನು ನಿಖರವಾಗಿ ದಾಖಲಿಸಿಕೊಳ್ಳಬೇಕು ಎಂದು ಕಡ್ಡಾಯಗೊಳಿಸಿದೆ. ನಿಗದಿತ ಮೂರು ತಿಂಗಳ ಗಡುವು ಮುಗಿದ ನಂತರ, ಈ ಆದೇಶದ ಜಾರಿಯ ಕುರಿತು ಜಿಲ್ಲಾವಾರು ಸಮಗ್ರ ಅನುಸರಣಾ ವರದಿಯನ್ನು ಹೈಕೋರ್ಟ್ ರಿಜಿಸ್ಟ್ರಿಗೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ