ವಿದ್ಯಾರ್ಥಿಗಳ ನಡುವೆ ಹಿಜಾಬ್-ಕೇಸರಿ ಶಾಲು ಸಮವಸ್ತ್ರ ಸಮರ ತಾರಕಕ್ಕೇರಿದೆ. ವಿದ್ಯಾರ್ಥಿಗಳು ಹೋರಾಟ, ಪ್ರತಿಭಟನೆಗೆ ಇಳಿದಿದ್ದಾರೆ. ಸಮವಸ್ತ್ರ ಸಮರ ದಿನಕ್ಕೊಂದು ಸ್ವರೂಪ ಪಡೀತಿದೆ. ಪರಸ್ಪರ ಸ್ನೇಹದಿಂದ ಬದುಕಬೇಕಿದ್ದ ವಿದ್ಯಾರ್ಥಿಗಳು ಧರ್ಮ ಸಂಘರ್ಷಕ್ಕಿಳಿದಿದ್ದಾರೆ. ಕರಾವಳಿ ಜಿಲ್ಲೆ ಉಡುಪಿಯಲ್ಲಿ ಹೊತ್ತಿಕೊಂಡ ಹಿಜಾಬ್ ಕಿಡಿ ರಾಜ್ಯಾದ್ಯಂತ ಧಗ ಧಗಿಸ್ತಿದೆ. ಈ ನಡುವೆ ಹಿಜಾಬ್ ವಿವಾದದ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ಮುಂದುವರಿದಿದೆ. ಸರ್ಕಾರದ ಪರ ವಾದ ಮಂಡಿಸಿರೋ ಎಜಿ, ಹಿಜಾಬ್ ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಅಂತಾ ವಾದಿಸಿದ್ದಾರೆ. ಇಂದು ನಡೆದ ವಾದ ವಿವಾದದ ಬಳಿಕ ಪ್ರಕರಣದ ವಿಚಾರಣೆಯನ್ನು ಮತ್ತೆ ನಾಳೆಗೆ (ಫೆಬ್ರವರಿ 23) ಮುಂದೂಡಿ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ನಾಳೆ ಮಧ್ಯಾಹ್ನ 2.30 ರಿಂದ ವಿಚಾರಣೆ ನಡೆಯಲಿದೆ.
ಇಂದಿನ ಬಿಜಿ ಯುಗದಲ್ಲಿ ಇದನ್ನು ಎಲ್ಲರೂ ಮಾಡುವುದಿಲ್ಲ. ಸಂಧ್ಯಾವಂದನೆ ಮಾಡುವುದು ಕಡ್ಡಾಯ ಆದರೆ ಮಾಡಲು ಸಾಧ್ಯವಿಲ್ಲ. ಸ್ಕೂಟರ್ ನಲ್ಲಿ ಹೋಗುವಾಗ ಅಜಾನ್ ಕೂಗಿದರೆ, ಸ್ಕೂಟರ್ ನಿಲ್ಲಿಸಿ ನಮಾಜ್ ಮಾಡಲು ಸಾಧ್ಯವಿಲ್ಲ. ಪೊಲೀಸರಿಗೆ ನಾನು ನಮಾಜ್ ಮಾಡಬೇಕು ಬಿಡಿ ಎಂದು ಹೇಳಲು ಸಾಧ್ಯವಿಲ್ಲ. ಧರ್ಮದಲ್ಲಿ ಕೆಲ ಆಚರಣೆಗಳು ಮಾತ್ರ ಕಡ್ಡಾಯ. ಪಿತೃಕಾರ್ಯ ಮಾಡದಿದ್ದರೆ ದಂಡನೆ ಇರುತ್ತದೆ. ಉಪನಯನ ಮಾಡುವಾಗ ಗಾಯತ್ರಿ ಜಪ ಮಾಡಬೇಕು ಎಂಬಿತ್ಯಾದಿ ವಿಚಾರಗಳನ್ನು ತಿಳಿಸಿ ವಾದಿಸಿದ್ದಾರೆ. ಬಳಿಕ, ವಿಚಾರಣೆ ನಾಳೆಗೆ ಮುಂದೂಡಲಾಗಿದೆ. ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿ ಆದೇಶ ನೀಡಲಾಗಿದೆ.
ಕರ್ನಾಟಕದ ಕೆಲವು ಸಂಪ್ರದಾಯಗಳಲ್ಲಿ ತಾಳಿ ಹಾಕುವುದಿಲ್ಲ. ಮುಸ್ಲಿಮರಲ್ಲಿ ಕೆಲವರಲ್ಲಿ ಕಾಲುಂಗುರ ತೊಡುವ ಸಂಪ್ರದಾಯವಿದೆ. ಸಪ್ತಪದಿ ಸಂಪ್ರದಾಯ ಬಂಟ್ಸ್ ಸಮುದಾಯದಲ್ಲಿಲ್ಲ. ಧರ್ಮ ಮತ್ತು ಸಂಸ್ಕೃತಿಯ ನಡುವಿನ ವ್ಯತ್ಯಾಸವನ್ನು ಅವರು ಅರಿಯಬೇಕು. ರಿಟ್ ಅರ್ಜಿಯಲ್ಲಿ ಹಲವು ಅಂಶಗಳ ಮಾಹಿತಿ ನೀಡಿಲ್ಲ. ಕಾಲೇಜಿಗೆ ಸೇರಿದಾಗ ಹಿಜಾಬ್ ಧರಿಸುತ್ತಿದ್ದರೇ ಇಲ್ಲವೇ ತಿಳಿಸಿಲ್ಲ. ಕಾಲೇಜಿನಲ್ಲಿ ಪೋಷಕರು ಹಿಜಾಬ್ ಬಗ್ಗೆ ವಿಚಾರಿಸಿದ್ದಾರೆ. ತಮ್ಮ ಮಕ್ಕಳು ಸಮಾರಂಭದಲ್ಲಿ ಹಾಡಬೇಕೇ ಎಂದು ಪ್ರಶ್ನಿಸಿದ್ದಾರೆ. ಮುಸ್ಲಿಂ ಯುವತಿಯರು ಹಾಡು ಹಾಡಬಾರದೇ. ರಾಷ್ಟ್ರಗೀತೆ ಹಾಡಬಾರದೇ. ಅವರು ಏನನ್ನು ಹೇಳಲು ಬಯಸುತ್ತಿದ್ದಾರೆ. ಧರ್ಮ ಮತ್ತು ಸಂಸ್ಕೃತಿಗೂ ನಡುವಿನ ವ್ಯತ್ಯಾಸ ಅರಿಯಬೇಕು ಎಂದು ವಾದ ಮಂಡಿಸಿದ್ದಾರೆ.
ಸದುದ್ದೇಶದಿಂದ ಜಾರಿಗೆ ತರುವ ಸಾರ್ವಜನಿಕ ಸುವ್ಯವಸ್ಥೆ ವಿಚಾರದಲ್ಲಿ ಕೋರ್ಟ್ ಮಧ್ಯಪ್ರವೇಶಿಸಬಾರದು. ಖುರಾನ್ ನಲ್ಲಿರುವ ಅಂಶಗಳ ಬಗ್ಗೆ ನನ್ನ ತಕರಾರಿಲ್ಲ. ಜನರು ಖುರಾನ್ ನಲ್ಲಿನ ಅಂಶ ಅನುಸರಿಸಲು ಸ್ವತಂತ್ರರು. ಆದರೆ ಶಾಲೆಯಲ್ಲಿ ಧರ್ಮದ ಆಚರಣೆಗೆ ಅವಕಾಶವಿಲ್ಲ. ಸಣ್ಣ ಪುಟ್ಟ ಗಲಭೆಗಳಿಗೂ ಸಾರ್ವಜನಿಕ ಸುವ್ಯವಸ್ಥೆ ವಿಚಾರ ಅನ್ವಯವಾಗಲಿದೆ. ತಮಿಳುನಾಡಿನಲ್ಲೂ ಈ ವಿಚಾರದ ಬಗ್ಗೆ ಪ್ರತಿಭಟನೆಗಳು ನಡೆದಿವೆ. ದಕ್ಷಿಣ ಆಫ್ರಿಕಾದ ಮೂಗುತಿ ತೀರ್ಪು ಇಲ್ಲಿಗೆ ಅನ್ವಯವಾಗುವುದಿಲ್ಲ. ಸಾರ್ವಜನಿಕ ಸುವ್ಯವಸ್ಥೆ ವಿಚಾರ ಅಲ್ಲಿ ಪ್ರಸ್ತಾಪವಾಗಿರಲಿಲ್ಲ. ನಾನು ಪಾಂಡಿಚೆರಿಯಲ್ಲಿ ಹುಟ್ಟಿ ಬೆಳೆದಿದ್ದೇನೆ. ನಾನು ಧರ್ಮದ ವಿಚಾರದಲ್ಲಿ ಹೋರಾಟ ನೋಡಿರಲಿಲ್ಲ ಎಂದು ಹೇಳಿದ್ದಾರೆ.
ಆಡಳಿತ ಎಂಬುದು ಬಹಳ ದೊಡ್ಡ ವಿಚಾರ. ಆಡಳಿತ ಹೇಗೆ ನಡೆಸಬೇಕೆಂದು ಕೋರ್ಟ್ ಹೇಳಲಾಗುವುದಿಲ್ಲ, ಯಾವುದೇ ಹಕ್ಕು ಉಲ್ಲಂಘನೆಯಾದರೆ ಮಧ್ಯಪ್ರವೇಶಿಸಬಹುದು. ಸಾರ್ವಜನಿಕ ಸುವ್ಯವಸ್ಥೆ ಆಯಾಮದಲ್ಲಿ ಅರ್ಜಿದಾರರು ತೀರ್ಪುಗಳನ್ನು ಹಾಜರುಪಡಿಸಿಲ್ಲ. ಧಾರ್ಮಿಕ ವಿಚಾರಗಳು ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಪಡಿಸಿದರೆ ಸರ್ಕಾರ ಮಧ್ಯಪ್ರವೇಶಿಸಬಹುದು. ಯಾವುದೇ ಆಚರಣೆಗಳಿರಬಹುದು, ಯಾವುದೇ ನಂಬಿಕೆಗಳಿರಬಹುದು, ಅದು ಸುವ್ಯವಸ್ಥೆ, ಆರೋಗ್ಯ, ನೈತಿಕತೆಗೆ ವಿರುದ್ಧವಾಗಿದ್ದರೆ ಮಧ್ಯಪ್ರವೇಶಿಸಬಹುದು ಎಂದು ತಿಳಿಸಿದ್ದಾರೆ.
ಶಿಕ್ಷಕರ ಪರ ಆರ್.ವೆಂಕಟರಮಣಿ ವಾದ ಆರಂಭ ಮಾಡಿದ್ದಾರೆ. ಉಡುಪಿ ಪಿಯು ಕಾಲೇಜು ಶಿಕ್ಷಕರ ಪರ ಹಿರಿಯ ವಕೀಲ ವಾದ ಮಂಡಿಸಿದ್ದಾರೆ. ಶಿಕ್ಷಕನಾಗಿ ಯಾವುದೇ ಧರ್ಮ ದೊಡ್ಡದು, ಚಿಕ್ಕದು ಎನ್ನುವುದಿಲ್ಲ, ಶಾಲೆಯಲ್ಲಿ ಮಕ್ಕಳಿಗೆ ಸ್ವತಂತ್ರ ಪ್ರಜ್ಞೆ ಇರಬೇಕೆಂದು ಬಯಸುತ್ತೇನೆ. ಸಾರ್ವಜನಿಕ ಸ್ಥಳಕ್ಕಿಂತ ಶಾಲಾ ಕೊಠಡಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಎಲ್ಲ ವಿದ್ಯಾರ್ಥಿಗಳ ಮನಸ್ಸೂ ಶಿಕ್ಷಣಕ್ಕಾಗಿ ಒಂದಾಗಿರಬೇಕು. ನಮ್ಮ ದೇಶ ಬಹಳ ದೊಡ್ಡ ಇತಿಹಾಸ ಹೊಂದಿದೆ. ಸಾಂಸ್ಕೃತಿಕ ಹಿನ್ನೆಲೆ ಹೊಂದಿದ ರಾಷ್ಟ್ರವಾಗಿದೆ. ಶಾಲೆಯ ಶಿಸ್ತು, ಸುವ್ಯವಸ್ಥೆ ಕಾಪಾಡಬೇಕು. ಶಿಸ್ತು, ಸುವ್ಯವಸ್ಥೆಗಾಗಿ ಸರ್ಕಾರ ಕ್ರಮ ಕೈಗೊಂಡರೆ ಕೋರ್ಟ್ ಗಳು ಅದನ್ನು ಕಠಿಣವಾಗಿ ಪರಿಗಣಿಸಬಾರದು ಎಂದು ಹೇಳಿದ್ದಾರೆ.
ಶಬರಿಮಲೆ ಪ್ರಕರಣದಲ್ಲಿ ನ್ಯಾ.ಚಂದ್ರಚೂಡ್ ತೀರ್ಪು ನೀಡಿದ್ದಾರೆ, ವೈಯಕ್ತಿಕ ಘನತೆ ಕೂಡಾ ಮೂಲಭೂತ ಹಕ್ಕು, ಮಹಿಳೆಯ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವಂತಹ ಆಚರಣೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಧರ್ಮದ ಆಧಾರದಲ್ಲಿ ಸರ್ಕಾರ ತಾರತಮ್ಯ ಮಾಡಿಲ್ಲ. ನಾವು ಹಿಜಾಬ್ ಅನ್ನು ನಿರ್ಬಂಧಿಸಿಲ್ಲ. ಆದರೆ ಹಿಜಾಬ್ ಅನ್ನು ಕಡ್ಡಾಯಪಡಿಸಬಾರದು. ಅದನ್ನು ಮಹಿಳೆಯ ಆಯ್ಕೆಗೆ ಬಿಡಬೇಕು ಎಂದು ಎಜಿ ಹೇಳಿದ್ದಾರೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಯಾವುದೇ ಆದೇಶ ನೀಡಿಲ್ಲ. ಸಮವಸ್ತ್ರ ಕುರಿತಂತೆ ಈ ಸಂಸ್ಥೆಗಳಿಗೆ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಎಜಿ ಹೇಳಿದ್ದಾರೆ. ಮಹಿಳೆಯ ಘನತೆ, ಗೌರವವನ್ನು ಎತ್ತಿ ಹಿಡಿಯಬೇಕು. ನಾನು ಇಂದು ಕೋರ್ಟ್ ಗೆ ಬರುವಾಗ ಹಿಂದಿ ಹಾಡು ಕೇಳಿದೆ. ನ ಮೂ ಚುಪಾಕೆ ಜಿಯೋ, ನ ಸರ್ ಜುಕಾಕೆ ಜಿಯೋ, ಗಮೋ ಕಿ ದೌರ್ ಬಿ ಆಯೆ, ಮುಸ್ಕುರಾಕೆ ಜಿಯೋ ಈ ಹಾಡನ್ನು ಪ್ರಸ್ತಾಪಿಸಿ ನನ್ನ ವಾದ ಮುಗಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಹಿಜಾಬ್ ಪರ ಕೋರ್ಟ್ ಆದೇಶ ನೀಡಿದರೆ ಸಮಸ್ಯೆ ಎನ್ನುವಿರಾ, ಹಿಜಾಬ್ ಧರಿಸದಿದ್ದರೆ ಗೌರವ ಘನತೆಗೆ ಧಕ್ಕೆ ಎಂದು ಭಾವಿಸುತ್ತಾರೆ ಎನ್ನುವಿರಾ ಎಂದು ಸಿಜೆ ಪ್ರಶ್ನೆ ಮಾಡಿದ್ದಾರೆ. ತಾಳಿ ಎಂಬುದು ಹಿಂದೂ ವಿವಾಹದ ಅತ್ಯಗತ್ಯ ಅಂಶ ಎಂದು ಘೋಷಿಸಬಹುದು. ಹಾಗೆಂದು ತಾಳಿ ಹಾಕದಿದ್ದರೆ ಉಲ್ಲಂಘನೆ ಎಂದಾಗುವುದೇ ಎಂದು ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ.
ಶಬರಿ ಮಲೆ ತೀರ್ಪಿನ ನಂತರ ಹಿಜಾಬ್ ಒಪ್ಪಲು ಸಾಧ್ಯವೇ ಎಂದು ಎಜಿ ಉತ್ತರಿಸಿದ್ದಾರೆ ಸ್ವಇಚ್ಚೆಯಿಂದ ಹಾಕಲು ಬಯಸಿದರೆ ಅಭಿವ್ಯಕ್ತಿ ಸ್ವಾತಂತ್ರ್ಯ, ಆದರೆ ಕೋರ್ಟ್ನಿಂದಲೇ ಹಿಜಾಬ್ ಕಡ್ಡಾಯವೆಂದು ಆದೇಶ ಕೇಳುತ್ತಿದ್ದಾರೆ. ಕಡ್ಡಾಯವೆಂದು ಕೋರ್ಟ್ ಘೋಷಿಸಿದರೆ ಹಿಜಾಬ್ ಹಾಕಬಯಸದ ಮಹಿಳೆಯರಿಗೆ ಸಮಸ್ಯೆಯಾಗಬಹುದು. ಹೀಗಾಗಿ ಕೋರ್ಟ್ ಹಿಜಾಬ್ ಕಡ್ಡಾಯವೆಂದು ಘೋಷಿಸಬಾರದು ಎಂದು ಎಜಿ ವಾದ ಮಾಡಿದ್ದಾರೆ.
ಶಬರಿ ಮಲೆ, ಸರಾಯ ಬಾನು ಪ್ರಕರಣಕ್ಕೂ ಮುನ್ನ ಈ ತೀರ್ಪು ನೀಡಲಾಗಿದೆ. ನ್ಯಾ. ಮುಹಮ್ಮದ್ ಮುಷ್ತಾಕ್ ತೀರ್ಪಿನಲ್ಲಿ ಕೆಲ ವ್ಯತಿರಿಕ್ತ ಅಂಶಗಳಿವೆ. ಶಬರಿ ಮಲೆ, ಸರಾಯ ಬಾನು ತೀರ್ಪುಗಳ ನಂತರ ಬದಲಾವಣೆಯಾಗಿದೆ. ಧಾರ್ಮಿಕ ಆಚರಣೆಗಳ ವಿಶ್ಲೇಷಣೆಯಲ್ಲಿ ಬದಲಾವಣೆಯಾಗಿದೆ. ಅರ್ಜಿದಾರರು ಖುರಾನ್.ಕಾಮ್ ಎಂಬ ವೆಬ್ ಸೈಟ್ ಉಲ್ಲೇಖಿಸಿದ್ದಾರೆ. ಇವು ಅಧಿಕೃತ ಎಂದು ಹೇಳಲು ಸಾಧ್ಯವಿಲ್ಲ ಎಂದು ಎಜಿ ತಿಳಿಸಿದ್ದಾರೆ.
ಉದ್ದನೆಯ ಗೌನ್ ಅನ್ನು ಉಲ್ಲೇಖಿಸಲಾಗಿದೆ, ಹಿಜಾಬ್ ಇಲ್ಲ ಎಂಬ ಎಜಿ ಮಾತಿಗೆ ನ್ಯಾ.ಕೃಷ್ಣ ದೀಕ್ಷಿತ್ ಉತ್ತರ ನೀಡಿದ್ದು, ಕೇರಳ ಹೈಕೋರ್ಟ್ ಹಿಜಾಬ್ ಉಲ್ಲೇಖಿಸಿದೆಯಲ್ಲಾ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಜಿ ಕೇರಳ ಹೈಕೋರ್ಟ್ ತೀರ್ಪಿನಲ್ಲಿ ಕುಮ್ಮಾ ಪ್ರಸ್ತಾಪಿಸಿ ಹದಿತ್ ಉಲ್ಲೇಖಿಸಲಾಗಿದೆ ಎಂದಿದ್ದಾರೆ.
ಸುರಾ 24 ವಚನ 31 ಅನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ. ಮುಸ್ಲಿಂ ಮಹಿಳೆಯರು ಮುಖ ಹೊರತುಪಡಿಸಿ ದೇಹವನ್ನು ಅಪರಿಚಿತರಿಗೆ ತೋರುವಂತಿಲ್ಲ. ಆದರೆ ಯೂಸುಫ್ ಅಲಿ ತರ್ಜುಮೆಯಲ್ಲಿ ಹಿಜಾಬ್ ಅನ್ನು ಉಲ್ಲೇಖಿಸಿಲ್ಲ ಎಂದು ಎಜಿ ವಾದ ಮಂಡನೆ ಮಾಡಿದ್ದಾರೆ.
ಧಾರ್ಮಿಕ ಆಚರಣೆಗಳೆಲ್ಲವೂ ಅತ್ಯಗತ್ಯ ಭಾಗವಾಗಿರಬೇಕೆಂದೇನೂ ಇಲ್ಲ. ತಾವು ಸುರಾ ನಂಬರ್ 2 ರಲ್ಲಿ ವಚನ 144, 145, 187, ಸುರಾ 17 ವಚನ 2, 17 ಪರಿಶೀಲಿಸಬೇಕು. ನಾನು ಖುರಾನ್ನ ತಜ್ಞನಲ್ಲ, ಇಂಗ್ಲಿಷ್ ತರ್ಜುಮೆ ಆಧರಿಸಿ ವಾದಮಂಡಿಸುತ್ತಿದ್ದೇನೆ ಎಂದು ಎಜಿ ತಿಳಿಸಿದ್ದಾರೆ.
ಎಲ್ಲಾ ಧರ್ಮದವರಿಗೂ ಈ ನ್ಯಾಯಬದ್ಧ ನಿರ್ಬಂಧ ವಿಧಿಸಲಾಗಿದೆ. ಸಮವಸ್ತ್ರ ಹೊರತುಪಡಿಸಿ ಇತರೆ ಧಾರ್ಮಿಕ ಗುರುತು ಧರಿಸಬಾರದು. ತರಗತಿ ಅವಧಿ ನಂತರ ಹಿಜಾಬ್ ಧರಿಸಲು ಅಡ್ಡಿಯಿಲ್ಲ. ಫ್ರಾನ್ಸ್ನಲ್ಲಿ ಸಂಪೂರ್ಣ ಹಿಜಾಬ್ ನಿರ್ಬಂಧವಿದೆ. ಹಾಗೆಂದ ಮಾತ್ರಕ್ಕೆ ಫ್ರಾನ್ಸ್ನಲ್ಲಿ ಇಸ್ಲಾಂ ಆಚರಣೆಯಲಿಲ್ಲ ಎಂದಲ್ಲ ಎಂದು ಎಜಿ ತಿಳಸಿದ್ದಾರೆ.
ಸೀಮಿತವಾದ ನಿರ್ಬಂಧ ವಿಧಿಸಿದರೆ 19(1)ಎ ಉಲ್ಲಂಘನೆಯಾಗುವುದಿಲ್ಲ. ನ್ಯಾಯಬದ್ಧವಾದ ನಿರ್ಬಂಧ, ನಿಯಂತ್ರಣ ವಿಧಿಸಬಹುದು. ಸಂವಿಧಾನದ 19(2) ನೇ ವಿಧಿಯಡಿ ಇದಕ್ಕೆ ಅವಕಾಶವಿದೆ ಎಂದು ಎಜಿ ತಿಳಿಸಿದ್ದಾರೆ.
ಸೀಮಿತವಾದ ನಿರ್ಬಂಧ ವಿಧಿಸಿದರೆ 19(1)ಎ ಉಲ್ಲಂಘನೆಯಾಗುವುದಿಲ್ಲ. ನ್ಯಾಯಬದ್ಧವಾದ ನಿರ್ಬಂಧ, ನಿಯಂತ್ರಣ ವಿಧಿಸಬಹುದು. ಸಂವಿಧಾನದ 19(2) ನೇ ವಿಧಿಯಡಿ ಇದಕ್ಕೆ ಅವಕಾಶವಿದೆ ಎಂದು ಎಜಿ ತಿಳಿಸಿದ್ದಾರೆ.
ಯಾರಾದರೂ ಹಿಜಾಬ್ ಧರಿಸಲು ಬಯಸಿದರೆ 19(1)ಎ ಅಡಿ ಅನುಮತಿ ನೀಡುತ್ತೀರಾ. ಅಭಿವ್ಯಕ್ತಿ ಸ್ವಾತಂತ್ರ್ಯದಡಿ ಅವರಿಗೆ ಈ ಸ್ವಾತಂತ್ರ್ಯವಿದೆಯೇ ಎಂದು ಸಿಜೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿದ ಎಜಿ, ನಮ್ಮ ದೇಶದಲ್ಲಿ ಹಿಜಾಬ್ ಧರಿಸಲು ನಿರ್ಬಂಧವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸರ್ಕಾರ ನಿರ್ಬಂಧ ವಿಧಿಸಬಹುದು
ಧರ್ಮದ ಮೂಲಭೂತ ಅಂಶವಾಗಿದ್ದರೆ ಮಾತ್ರ ಆಚರಣೆ ಕಡ್ಡಾಯ, ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯೂ ವಾದಿಸಲಾಗಿದೆ. ಅವರ ವಾದ ಒಪ್ಪಿದರೆ ಹಿಜಾಬ್ ಹಾಕದಿರುವುದೂ ಹಕ್ಕಾಗಲಿದೆ. ಮುಸ್ಲಿಂ ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯವಾಗಲಿದೆ. ಹಾಗಾದರೆ ಹಿಜಾಬ್ ಕಡ್ಡಾಯವಲ್ಲ ಆಯ್ಕೆ ಎಂದಾಗಲಿದೆ. ಹೀಗಾಗಿ ಅವರು ತಮ್ಮ ವಾದಕ್ಕೇ ವಿರುದ್ಧ ವಾದ ಮಂಡಿಸಿದ್ದಾರೆ ಎಂದು ಎಜಿ ತಿಳಿಸಿದ್ದಾರೆ.
ಸಮವಸ್ತ್ರದ ಜೊತೆ ಹಿಜಾಬ್ಗೆ ಅನುಮತಿ ಕೋರಿದ್ದ ಅರ್ಜಿ ವಿಚಾರಣೆ ಆರಂಭವಾಗಿದೆ. ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ಆರಂಭ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರ ಪೂರ್ಣ ಪೀಠ, ಹೈಕೋರ್ಟ್ ಹಾಲ್ ನಂಬರ್ 1ಕ್ಕೆ ಎಜಿ ನಾವದಗಿ ಹಾಜರಾಗಿದ್ದಾರೆ.
ಹೈಕೋರ್ಟ್ ಹಾಲ್ ನಂಬರ್ 1ಕ್ಕೆ ಎಜಿ ಪ್ರಭುಲಿಂಗ್ ನಾವದಗಿ ಹಾಜರ್ ವಿಚಾರಣೆ ಇನ್ನು ಕೆಲವೇ ನಿಮಿಷಗಳಲ್ಲಿ ಆರಂಭವಾಗಲಿದೆ. ಮೊಹಮ್ಮದ್ ತಾಹೀರ್ ಮೆಮೋ ಸಲ್ಲಿಸಿದ್ದಾರೆ. ಹೈಕೋರ್ಟ್ ಮಧ್ಯಂತರ ಆದೇಶದ ಸ್ಪಷ್ಟನೆ ಕೋರಿ ಅರ್ಜಿ ಸಲ್ಲಿಸಿದ್ದ ಕೆಲ ಡಿಗ್ರಿ ವಿದ್ಯಾರ್ಥಿಗಳು, ಖಾಸಗಿ ಕಾಲೇಜು ವಿದ್ಯಾರ್ಥಿಗಳ ಅರ್ಜಿ ವಿಚಾರಣೆ ನಡೆಯಲಿದೆ.
ಧರ್ಮದ ಮೂಲಭೂತ ಅಂಶವಾಗಿದ್ದರೆ ಮಾತ್ರ ಆಚರಣೆ ಕಡ್ಡಾಯ, ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯೂ ವಾದಿಸಲಾಗಿದೆ. ಅವರ ವಾದ ಒಪ್ಪಿದರೆ ಹಿಜಾಬ್ ಹಾಕದಿರುವುದೂ ಹಕ್ಕಾಗಲಿದೆ. ಮುಸ್ಲಿಂ ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯವಾಗಲಿದೆ. ಹಾಗಾದರೆ ಹಿಜಾಬ್ ಕಡ್ಡಾಯವಲ್ಲ ಆಯ್ಕೆ ಎಂದಾಗಲಿದೆ. ಹೀಗಾಗಿ ಅವರು ತಮ್ಮ ವಾದಕ್ಕೇ ವಿರುದ್ಧ ವಾದ ಮಂಡಿಸಿದ್ದಾರೆ ಎಂದು ಎಜಿ ತಿಳಿಸಿದ್ದಾರೆ.
ಚಿತ್ರದುರ್ಗದ ಬಾಲಕಿಯರ ಪಿಯು ಕಾಲೇಜಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ಕಾಲೇಜು ಸಿಬ್ಬಂದಿ, ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುವುದಾಗಿ ಪಟ್ಟು ಹಿಡಿದಿದ್ದಾರೆ.
ಕೊಪ್ಪಳದಲ್ಲಿ ಹಿಜಾಬ್ ಕಿಚ್ಚು ನಿಧಾನವಾಗಿ ತಣ್ಣಗಾಗುತ್ತಿದೆ. ಹಿಜಾಬ್ ಬಿಚ್ಚಿ ವಿದ್ಯಾರ್ಥಿನಿಯರು ತರಗತಿಗಳಿಗೆ ತೆರಳುತ್ತಿದ್ದಾರೆ. ಕೊಪ್ಪಳದ ಸರಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಹಿಜಾಬ್ ಬಿಚ್ಚಿ ಕ್ಲಾಸ್ ರೂಂ ಗೆ ವಿದ್ಯಾರ್ಥಿನಿಯರು ತೆರಳುತ್ತಿದ್ದಾರೆ. ಹಿಜಾಬ್ ಬಿಚ್ಚಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ನಿಷೇಧಾಜ್ಞೆ ಹಿನ್ನಲೆಯಲ್ಲಿ ಶಾಲಾ,ಕಾಲೇಜಿನ ಮುಂದೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.
ಚಿತ್ರದುರ್ಗದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ, ಪಿಯು ಕಾಲೇಜಿಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತ್ತಿದ್ದು ಕೋರ್ಟ್ ಮಧ್ಯಂತರ ಆದೇಶ ಪಾಲನೆಗೆ ಸಿಬ್ಬಂದಿ ಸೂಚಿಸಿದ್ದಾರೆ. ಸದ್ಯ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತೆಗೆದು ವಿದ್ಯಾರ್ಥಿನಿಯರು ತರಗತಿಗೆ ತೆರಳಿದ್ದಾರೆ. ಹಿಜಾಬ್ಗೆ ಪಟ್ಟು ಹಿಡಿದ ಕೆಲ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯದೆ ಮನೆಗೆ ಹಿಂದಿರುಗಿದ್ದಾರೆ.
ಹಿಜಾಬ್ ಕೇಸರಿ ಶಾಲು ವಿವಾದ ವಿಚಾರಕ್ಕೆ ಸಂಬಂಧಿಸಿ ವಿಜಯಪುರ ಸರ್ಕಾರಿ ಪಿಯು ಹಾಗೂ ಡಿಗ್ರಿ ಕಾಲೇಜು ಎದುರು ಪೊಲೀಸ್ ಬಂದೋಬಸ್ತ್ ಮುಂದುವರೆದಿದೆ. ಕಾಲೇಜು ಎದುರು ಐಆರ್ಬಿ ತುಕಡಿ ನಿಯೋಜನೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರನ್ನೂ ನಿಯೋಜಿಸಲಾಗಿದೆ. ಎಂದಿನಂತೆ ಕಾಲೇಜಿಗೆ ವಿದ್ಯಾರ್ಥಿನಿಯರು ಆಗಮಿಸುತ್ತಿದ್ದು ಬುರ್ಕಾ, ಹಿಜಾಬ್ ಧರಿಸಿ ಬರುವವರಿಗೆ ಅವುಗಳನ್ನ ತೆಗೆದಿಡಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿ ನಿಷೇದಾಜ್ಞೆ ಮಾಡಲಾಗಿದೆ. ಫೆಬ್ರವರಿ 26 ರವರೆಗೂ ನಿಷೇದಾಜ್ಞೆ ಜಾರಿಯಲ್ಲಿರಲಿದೆ.
ಬೆಳಗಾವಿಯಲ್ಲಿ ಮುಂದುವರಿದ ಹಿಜಾಬ್ ಸಂಘರ್ಷ. ಇಂದೂ ಸಹ ಬೆಳಗಾವಿಯ ಲಿಂಗರಾಜ ಕಾಲೇಜು ವಾಣಿಜ್ಯ ವಿಭಾಗದ ಪದವಿ ವಿದ್ಯಾರ್ಥಿನಿಯರು ಪ್ರತಿಭಟನೆ ಮುಂದುವರಸಲಿದ್ದಾರೆ. ಹಿಜಾಬ್‌ಗೆ ಅವಕಾಶ ನೀಡುವಂತೆ 40ಕ್ಕೂ ಹೆಚ್ಚು ಪದವಿ ವಿದ್ಯಾರ್ಥಿನಿಯರು ಪಟ್ಟು ಹಿಡಿಯಲಿದ್ದಾರೆ. ಹಿಜಾಬ್‌ಗೆ ಅನುಮತಿ ನೀಡಿಲ್ಲ ಅಂತಾ ನಿನ್ನೆ ಆಂತರಿಕ ಪರೀಕ್ಷೆ ಬಹಿಷ್ಕರಿಸಿದ್ದ ವಿದ್ಯಾರ್ಥಿನಿಯರು ನಿನ್ನೆ ಬೆಳಗಾವಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಇಂದು ಕೂಡ ಪ್ರತಿಭಟನೆ ಮುಂದುವರೆಸಲಿದ್ದಾರೆ. ವಿದ್ಯಾರ್ಥಿನಿಯರಿಗೆ ಎಐಎಂಐಎಂ ಕಾರ್ಪೊರೇಟರ್ ಶಾಹೀದ್ ಖಾನ್ ಪಠಾಣ್ ಸೇರಿ ಕೆಲ ಸಂಘಟನೆಗಳು ಸಾಥ್ ನೀಡಿವೆ ಎನ್ನಲಾಗಿದೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಪದವಿ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸುವ ಸಾಧ್ಯತೆ ಇದ್ದು ಅವಕಾಶ ನೀಡದಿದ್ರೆ ಮತ್ತೆ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಹಿಜಾಬ್ ಸಂಘರ್ಷ ತಾರಕಕ್ಕೇರಿದ ಹಿನ್ನಲೆ ಹಿಜಾಬ್ ಸಂಘರ್ಷ ಶುರುಮಾಡುತ್ತಿರುವವರ ಅಂಕಿ-ಸಂಖ್ಯೆಯನ್ನು ಶಿಕ್ಷಣ ಇಲಾಖೆ ಕಲೆ ಹಾಕಿದೆ. ಎಷ್ಟು ವಿದ್ಯಾರ್ಥಿನಿಯರು ಸಂಘರ್ಷದಲ್ಲಿ ಭಾಗಿಯಾಗಿದ್ದಾರೆ ಅನ್ನೋ ಮಾಹಿತಿಯನ್ನು ಶಿಕ್ಷಣ ಇಲಾಖೆ ಕಲೆ ಹಾಕಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 82 ಸಾವಿರ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಯನ ಮಾಡ್ತಿದ್ದಾರೆ. 82 ಸಾವಿರ ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ 300-400 ವಿದ್ಯಾರ್ಥಿನಿಯರು ಹಿಜಾಬ್ಗಾಗಿ ಫೈಟ್ ಮಾಡುತ್ತಿದ್ದಾರೆ. ಶೇ 1% ಕ್ಕಿಂತ ಕಡಿಮೆ ಪ್ರತಿಶತ ವಿದ್ಯಾರ್ಥಿನಿಯರು ಹಿಜಾಬ್ಗಾಗಿ ಜಟಾಪಟಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. 82 ಸಾವಿರ ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 81500 ವಿದ್ಯಾರ್ಥಿಗಳಿಂದ ಹಿಜಾಬ್ ಕಿರಿಕ್ ಇಲ್ಲ. ಪದವಿ ಪೂರ್ವ ಕಾಲೇಜಿನ 81500 ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ತಗೆದು ತರಗತಿಗೆ ಬರ್ತಿದ್ದಾರೆ. ಕೇವಲ 300-400 ವಿದ್ಯಾರ್ಥಿನಿಯರದ್ದೆ ಹಿಜಾಬ್ ಹಠ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಹಿತಿ ನೀಡಿದ್ದಾರೆ.
ಉಡುಪಿಯಲ್ಲಿ ಹಿಜಾಬ್ ಹಕ್ಕಿಗಾಗಿ ಹೋರಾಟ ನಡೆಯುತ್ತಿದ್ದು ಆರು ಮಂದಿ ವಿದ್ಯಾರ್ಥಿನಿಯರು ಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ ಹೈಕೋರ್ಟ್ ದೂರುದಾರೆ ಹಜ್ರಾ ಶಿಫಾ ಸಹೋದರನ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ. ಶಿಫಾ ತಂದೆಯ ಹೋಟೆಲ್ಗೆ ನುಗ್ಗಿ ಕೆಲ ಯುವಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಯುವಕರು ಹೋಟೆಲ್ ಗಾಜು ಪುಡಿ ಮಾಡಿದ್ದಾರಂತೆ. ಉಡುಪಿಯ ಖಾಸಗಿ ಆಸ್ಪತ್ರೆಗೆ ಹೈದರಾಲಿ ಮಗ ಸೈಫ್ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಘಪರಿವಾರದ ಯುವಕರಿಂದ ಹಲ್ಲೆ ಎಂದು ಆರೋಪ ಮಾಡಿದ್ದು ಈ ಬಗ್ಗೆ ಟ್ವೀಟ್ ಮಾಡಿ ಹಿಜಾಬ್ ದೂರುದಾರೆ ಶಿಫಾ ಆರೋಪಿಸಿದ್ದಾರೆ.
ಸಮವಸ್ತ್ರದ ಜತೆ ಹಿಜಾಬ್ಗೆ ಅನುಮತಿ ಕೋರಿ ಅರ್ಜಿ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದುವರಿಯಲಿದೆ. ಹೈಕೋರ್ಟ್ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಲಿದೆ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರ ಪೂರ್ಣ ಪೀಠ ಅರ್ಜಿ ವಿಚಾರಣೆ ನಡೆಸಲಿದೆ.
Published On - 8:14 am, Tue, 22 February 22