ವಿಧಾನ ಪರಿಷತ್​​ ಶಿಕ್ಷಕರು, ಪದವೀಧರರ ಕ್ಷೇತ್ರದ ಚುನಾವಣೆ: ಇಲ್ಲಿ ಮತ ಚಲಾಯಿಸೋದ್ಯಾರು? ಪ್ರಕ್ರಿಯೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಒಟ್ಟು 4 ಕ್ಷೇತ್ರಗಳಿಗೆ ನಡೆದಿದ್ದ ಕರ್ನಾಟಕ ವಿಧಾನ ಪರಿಷತ್ತಿನ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಎನ್​​ಡಿಎ ಮೈತ್ರಿಕೂಡ ಎಲ್ಲ ಕ್ಷೇತ್ರಗಳನ್ನೂ ಕ್ಲೀನ್​​ ಸ್ವೀಪ್​​ ಮಾಡಿದೆ. ಆಡಳಿತಾರೂಢ ಕಾಂಗ್ರೆಸ್​​ಗೆ ಹೀನಾಯ ಸೋಲಾಗಿದೆ. ಅಷ್ಟಕ್ಕೂ ಈ ಚುನಾವಣೆಯ ಪ್ರಕ್ರಿಯೆ, ಅರ್ಹತೆಗಳು ಹಾಗೂ ಯಾರೆಲ್ಲ ಮತ ಚಲಾಯಿಸಬಹುದು ಎಂಬುದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಧಾನ ಪರಿಷತ್​​ ಶಿಕ್ಷಕರು, ಪದವೀಧರರ ಕ್ಷೇತ್ರದ ಚುನಾವಣೆ: ಇಲ್ಲಿ ಮತ ಚಲಾಯಿಸೋದ್ಯಾರು? ಪ್ರಕ್ರಿಯೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಸಾಂದರ್ಭಿಕ ಚಿತ್ರ
Image Credit source: PTI

Updated on: Oct 28, 2026 | 11:43 AM

ಮುಖ್ಯಾಂಶಗಳು

  • ವಿಧಾನ ಪರಿಷತ್​​ ಶಿಕ್ಷಕರು, ಪದವೀಧರರ ಕ್ಷೇತ್ರದ ಚುನಾವಣೆ
  • ಮತದಾರರು ಯಾರು? ಅರ್ಹತೆ ಏನು? ಎಲೆಕ್ಷನ್​ ಪ್ರಕ್ರಿಯೆ ಹೇಗೆ?
  • ಪರಿಷತ್​​ನಲ್ಲಿ ಶಿಕ್ಷಕರ, ಪದವೀಧರ ಕ್ಷೇತ್ರದಿಂದ ಚುನಾಯಿತರೆಷ್ಟು?

ಬೆಂಗಳೂರು, ಅಕ್ಟೋಬರ್​​ 28: ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್​​ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ್ದು, ಆಡಳಿತಾರೂಢ ಕಾಂಗ್ರೆಸ್​​ಗೆ ತೀವ್ರ ಮುಖಭಂಗವಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್​​ಡಿಎಯ ಎ.ಪಿ. ರಂಗನಾಥ್, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶಶೀಲ್ ಜಿ. ನಮೋಶಿ, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಎಸ್.ವಿ. ಸಂಕನೂರು, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕೆ.ಎಂ. ಸುರೇಶ್ ಗೆಲುವು ಸಾಧಿಸಿದ್ದಾರೆ. ಅದರಲ್ಲೂ ಸತತ ಐದುಬಾರಿ ಗೆಲುವಿನ ಗೋಲ್​​ ಬಾರಿಸಿದ್ದ ಕಾಂಗ್ರೆಸ್​ ಅಭ್ಯರ್ಥಿ ಪುಟ್ಟಣ್ಣರನ್ನು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎ.ಪಿ. ರಂಗನಾಥ್ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 908 ಮತಗಳ ಅಂತರದಿಂದ ಸೋಲಿಸಿರೋದು ಕಾಂಗ್ರೆಸ್​​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಷ್ಟಕ್ಕೂ ವಿಧಾನ ಪರಿಷತ್​​ನ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆ ಎಂದರೇನು? ಇಲ್ಲಿ ಮತದಾರರು ಯಾರು? ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಚುನಾವಣೆ

ವಿಧಾನ ಪರಿಷತ್ತಿಗೆ ಶಿಕ್ಷಕರ ಪ್ರತಿನಿಧಿಯನ್ನು ಆಯ್ಕೆ ಮಾಡಲು ನಡೆಯುವ ಚುನಾವಣೆ ಇದಾಗಿದ್ದು, ಭಾರತ ಸಂವಿಧಾನದ 171ನೇ ವಿಧಿಯ ಪ್ರಕಾರ, ರಾಜ್ಯದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ ಮೂರು ವರ್ಷಗಳಿಂದ ಬೋಧನಾ ವೃತ್ತಿಯಲ್ಲಿರುವವರು ಮಾತ್ರ ಮತದಾರರಾಗಿರಲು ಅರ್ಹರಾಗಿರುತ್ತಾರೆ. ಸಾಮಾನ್ಯ ಜನರು ಅಥವಾ ಎಲ್ಲ ಮತದಾರರು ಇದರಲ್ಲಿ ಮತ ಚಲಾಯಿಸಲು ಅವಕಾಶ ಇರುವುದಿಲ್ಲ. ಶಿಕ್ಷಕರು ಈ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪ್ರತ್ಯೇಕವಾಗಿ ನೋಂದಾಯಿಸಿಕೊಂಡಿರಬೇಕಾಗುತ್ತದೆ.

ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆಯಲ್ಲಿ ಎನ್‌ಡಿಎಗೆ ಜಯಭೇರಿ: ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಗೆಲುವು

ವಿಧಾನ ಪರಿಷತ್‌ನ ಪದವೀಧರ ಕ್ಷೇತ್ರದ ಚುನಾವಣೆ

ವಿಧಾನ ಪರಿಷತ್ತಿಗೆ ಪದವೀಧರರ ಪರವಾಗಿ ಪ್ರತಿನಿಧಿಯನ್ನು ಆರಿಸುವ ಪ್ರಕ್ರಿಯೆ ಇದಾಗಿದೆ. ವಿದ್ಯಾವಂತರ ಮತ್ತು ಬುದ್ಧಿಜೀವಿಗಳ ಧ್ವನಿ ಸದನದಲ್ಲಿ ಪ್ರತಿಧ್ವನಿಸಬೇಕು ಎನ್ನುವ ಉದ್ದೇಶದಿಂದ ಈ ಕ್ಷೇತ್ರವನ್ನು ಸೃಷ್ಟಿಸಲಾಗಿದೆ. ಈ ಚುನಾವಣೆಯಲ್ಲಿ ಸಾಮಾನ್ಯ ಸಾರ್ವಜನಿಕರು ಮತ ಚಲಾಯಿಸಲು ಅವಕಾಶವಿರುವುದಿಲ್ಲ. ಕೇವಲ ಅರ್ಹತೆ ಹೊಂದಿರುವ ಪದವೀಧರರು ಮಾತ್ರ ಮತದಾರರಾಗಿರುತ್ತಾರೆ.

ಮತದಾರರಾಗಲು ಅರ್ಹತೆ

  • ಭಾರತದಲ್ಲಿ ಕಾನೂನುಬದ್ಧವಾಗಿ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಅಥವಾ ಅದಕ್ಕೆ ತತ್ಸಮಾನವಾದ ವಿದ್ಯಾರ್ಹತೆಯನ್ನು ಹೊಂದಿರಬೇಕು.
  • ಮತದಾರರ ಪಟ್ಟಿ ಸಿದ್ಧಪಡಿಸುವ ನಿಗದಿತ ದಿನಾಂಕಕ್ಕೆ ಕನಿಷ್ಠ 3 ವರ್ಷಗಳ ಮುಂಚಿತವಾಗಿಯೇ ಪದವಿ ಪಡೆದಿರಬೇಕು.
  • ಅಭ್ಯರ್ಥಿ ಸ್ಪರ್ಧಿಸುತ್ತಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರು ವಾಸವಾಗಿರಬೇಕು.

ಪರಿಷತ್​​ನಲ್ಲಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದಿಂದ ಚುನಾಯಿತ ಎಷ್ಟು ಮಂದಿ ಇರಲಿದ್ದಾರೆ?

ಒಟ್ಟು 75 ಸದಸ್ಯರ ಬಲವನ್ನು ಹೊಂದಿರುವ ಕರ್ನಾಟಕ ವಿಧಾನ ಪರಿಷತ್​​ನಲ್ಲಿ ಪದವೀಧರ ಕ್ಷೇತ್ರದಿಂದ 7 ಮತ್ತು ಶಿಕ್ಷಕರ ಕ್ಷೇತ್ರದಿಂದ 7 ಮಂದಿ ಪ್ರತಿನಿಧಿಗಳಿರಲಿದ್ದಾರೆ. ಉಳಿದಂತೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ 25, ವಿಧಾನಸಭೆ ಸದಸ್ಯರು ಆಯ್ಕೆ ಮಾಡುವ 25 ಮತ್ತು ರಾಜ್ಯಪಾಲರಿಂದ ನಾಮನಿರ್ದೇಶನಗೊಳ್ಳುವ 11 ಮಂದಿ ಪರಿಷತ್​​ ಸದಸ್ಯರಾಗಿರಲಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us