ಬೆಂಗಳೂರು, ಜುಲೈ 21: ಹೆಬ್ಬಾಳದಿಂದ ಸಿಸಿಬಿ ಪೊಲೀಸರು (CCB Police) ಬಂಧಿಸಿರುವ ಐವರು ಶಂಕಿತ ಉಗ್ರರಿಗೆ 2008ರ ಸರಣಿ ಸ್ಫೋಟದ ಪ್ರಮುಖ ಆರೋಪಿ ಟಿ ನಜೀರ್ (T Nazir) ಕಾರಾಗೃಹದಲ್ಲೇ ಭಯೋತ್ಪಾದನೆ ತರಬೇತಿ ನೀಡಿದ್ದು ಹೇಗೆ? ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿತ ಉಗ್ರ ನಜೀರ್, ಪರಪ್ಪನ ಅಗ್ರಹಾರ ಜೈಲಿನಲ್ಲೇ ಭಯೋತ್ಪಾದನೆಗೆ ಸೆಳೆದದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸುವಂತೆ ಎಡಿಜಿಪಿ (ಕಾರಾಗೃಹ) ಮಾಲಿನಿ ಕೃಷ್ಣಮೂರ್ತಿ ಶುಕ್ರವಾರ ಆದೇಶಿಸಿದ್ದಾರೆ. ಬಂಧಿತ ವ್ಯಕ್ತಿಗಳು ಲಷ್ಕರ್-ಎ-ತೊಯ್ಬಾ (LeT) ಉಗ್ರನ ಸಂಪರ್ಕಕ್ಕೆ ಬಂದಿದ್ದು ಹೇಗೆ? ಅವರಿಗೆ ಹೇಗೆ ಭಯೋತ್ಪಾದನೆ ತರಬೇತಿ ನೀಡಲಾಯಿತು ಎಂಬುದನ್ನು ಆಮೂಲಾಗ್ರ ತನಿಖೆ ನಡೆಸುವಂತೆ ಅವರು ಸೂಚಿಸಿದ್ದಾರೆ.
2017 ರಲ್ಲಿ ನಡೆದ ಕೊಲೆ ಪ್ರಕರಣದ ಆರು ಆರೋಪಿಗಳನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿತ್ತು. ಅವರನ್ನು ಜೈಲಿನಲ್ಲೇ ನಜೀರ್ ಅವರನ್ನು ಉಗ್ರ ಕೃತ್ಯಗಳಲ್ಲಿ ಶಾಮೀಲಾಗುವಂತ ಪ್ರಚೋದನೆ ನೀಡಿದ್ದ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಬುಧವಾರ ಹೇಳಿದ್ದರು.
ನಜೀರ್‌ನನ್ನು ಹೆಚ್ಚಿನ ಭದ್ರತೆಯ ಜೈಲಿನಲ್ಲಿ ಇರಿಸಲಾಗಿತ್ತು. ಆದಾಗ್ಯೂ ಇತರ ವಿಚಾರಣಾಧೀನ ಕೈದಿಗಳೊಂದಿಗೆ ಸಂವಹನ ನಡೆಸಲು ಅವನಿಗೆ ಹೇಗೆ ಅವಕಾಶ ನೀಡಲಾಯಿತು ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಬಂಧಿತ ಶಂಕಿತ ಉಗ್ರರ ಬಳಿ ಸಿಕ್ಕಿದ್ದು ವಾಕಿಟಾಕಿ ಅಲ್ಲವೇ ಅಲ್ಲಾ! ಇಲ್ಲಿದೆ ಅಸಲಿ ಕಹಾನಿ
ಪೊಲೀಸರ ಪ್ರಕಾರ, 2017 ರ ಕೊಲೆ ಪ್ರಕರಣದ ಪ್ರಮುಖ ಶಂಕಿತನಾಗಿದ್ದ ಜುನೈದ್, ನಜೀರ್ ಜೊತೆ ನಿಕಟ ಸಂಪರ್ಕ ಹೊಂದಿದ್ದ. ನಂತರ, ಜಾವೇದ್ ಉಗ್ರ ಚಟುವಟಿಕೆಯನ್ನು ಸಕ್ರಿಯಗೊಳಿಸಿದ.
ಈ ಮಧ್ಯೆ, ನಜೀರ್ ಅನ್ನು ಇತರ ಕೈದಿಗಳು ತರಾಟೆಗೆ ತೆಗೆದುಕೊಂಡ ಘಟನೆಯೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶುಕ್ರವಾರ ನಡೆದಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹೊರಟಿದ್ದ ನಜೀರ್‌ನನ್ನು ತಡೆದ ಇತರ ಕೈದಿಗಳು, ‘ನೀನು ದೇಶದ್ರೋಹಿ, ನಿನ್ನಿಂದಲೇ ಜೈಲಿನ ವಾತಾವರಣ ಹದಗೆಟ್ಟಿದೆ’ ಎಂದು ಹಿಗ್ಗಾಮುಗ್ಗ ಬೈದಿದ್ದಲ್ಲೆ, ಹಲ್ಲೆಗೂ ಮುಂದಾಗಿದ್ದರು ಎನ್ನಲಾಗಿದೆ. ನಂತರ ಜೈಲು ಸಿಬ್ಬಂದಿ ಆತನನ್ನು ರಕ್ಷಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:02 pm, Fri, 21 July 23