
ಬೆಂಗಳೂರು, ಜನವರಿ 19: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ/ಎಸ್‌ಟಿ) ಮೇಲಿನ ದೌರ್ಜನ್ಯಗಳನ್ನು (Crimes against SC/STs) ತಡೆಗಟ್ಟಲು ಕಠಿಣ ಕಾನೂನುಗಳಿದ್ದರೂ, ರಾಜ್ಯದಲ್ಲಿ ಈ ಸಮುದಾಯಗಳ ವಿರುದ್ಧದ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. 2021ರಲ್ಲಿ 1,751 ಪ್ರಕರಣಗಳು ದಾಖಲಾಗಿದ್ದರೆ, 2025ರಲ್ಲಿ ಈ ಸಂಖ್ಯೆ 2,412ಕ್ಕೆ ಏರಿಕೆಯಾಗಿದ್ದು, ಐದು ವರ್ಷಗಳಲ್ಲಿ ಶೇ 37.74ರಷ್ಟು ಹೆಚ್ಚಳ ಕಂಡುಬಂದಿದೆ.
ಕಳೆದ ಐದು ವರ್ಷಗಳಲ್ಲಿ ರಾಜ್ಯದಾದ್ಯಂತ ಒಟ್ಟು 10,573 ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ. ಇವುಗಳಲ್ಲಿ 1,598 ಪ್ರಕರಣಗಳು ಹುಸಿಯಾಗಿದ್ದು, ಕೇವಲ 47 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ವಿಧಿಸಲಾಗಿದೆ. 1,050 ಪ್ರಕರಣಗಳು ವಜಾಗೊಂಡಿವೆ. 2025ರಲ್ಲಿ ದಾಖಲಾಗಿದ ಪ್ರಕರಣಗಳಲ್ಲಿ ಇಡೀ ದೇಶಕ್ಕೆ ಐಟಿ ಕ್ಯಾಪಿಟಲ್ ಎನಿಸಿರುವ ಬೆಂಗಳೂರು ಅಗ್ರಸ್ಥಾನದಲ್ಲಿದ್ದು , 261 ಪ್ರಕರಣಗಳು ದಾಖಲಾಗಿವೆ. ತುಮಕೂರು ಜಿಲ್ಲೆಯಲ್ಲಿ 139, ಬೆಳಗಾವಿಯಲ್ಲಿ 128 ಹಾಗೂ ರಾಯಚೂರಿನಲ್ಲಿ 121 ಪ್ರಕರಣಗಳು ದಾಖಲಾಗಿವೆ. ಗೃಹ ಸಚಿವ ಜಿ.ಪರಮೇಶ್ವರ ಅವರ ಸ್ವಗ್ರಾಮವಾದ ತುಮಕೂರು ಜಿಲ್ಲೆ ಎರಡನೇ ಸ್ಥಾನದಲ್ಲಿರುವುದು ವಿಪರ್ಯಾಸವಾಗಿದೆ.
ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣಗಳ ತನಿಖೆಯನ್ನು ಬಲಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಏಪ್ರಿಲ್ 2025ರಲ್ಲಿ 33 ನಾಗರಿಕ ಹಕ್ಕುಗಳ ಜಾರಿಗೆ ನಿರ್ದೇಶನಾಲಯ (DCRE) ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ವಕೀಲೆ ರಾಜಲಕ್ಷ್ಮಿ ಅಂಕಲಗಿ, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಜಾತಿ ಆಧಾರಿತ ಭೇದಭಾವ ನಿರ್ಮೂಲನೆಗಾಗಿ ಜಾರಿಯಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂತರ್ಜಾತಿ ಪ್ರೀತಿ ಮತ್ತು ವಿವಾಹ ಪ್ರಕರಣಗಳನ್ನು ಸಹ ಕೆಲವೊಮ್ಮೆ ಈ ಕಾಯ್ದೆಯ ಅಡಿಯಲ್ಲಿ ದಾಖಲಿಸಲಾಗುತ್ತಿದೆ. ಸಂವಿಧಾನವು ಅಂತರ್ಜಾತಿ ವಿವಾಹಗಳನ್ನು ನಿರ್ಬಂಧಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಭಾವಶಾಲಿಗಳ ವಿರುದ್ಧ ದಲಿತರು ನೀಡುವ ದೂರುಗಳನ್ನು ಕೆಲವೊಮ್ಮೆ ಪೊಲೀಸರು ನಿರ್ಲಕ್ಷಿಸುವುದು ಅಥವಾ ಹತೋಟಿಗೆ ತರಲು ಯತ್ನಿಸುವುದು ಕಂಡುಬರುತ್ತದೆ. ಇದರಿಂದ ಕಾಯ್ದೆಯ ಮೂಲ ಉದ್ದೇಶವೇ ಹಾನಿಗೊಳಗಾಗುತ್ತಿದೆ ಎಂದು ಹಿರಿಯ ವಕೀಲರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಗೃಹ ಸಚಿವ ಜಿ.ಪರಮೇಶ್ವರ ಅವರು ಪ್ರತಿಕರಿಯಿಸಿ, ಎಸ್‌ಸಿ/ಎಸ್‌ಟಿ ಸಮುದಾಯಗಳ ರಕ್ಷಣೆಗೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ DCRE (Directorate of Civil Rights Enforcement) ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ವಾರ್ಷಿಕ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಾತಿ ಆಧಾರಿತ ದ್ವೇಷ ಮತ್ತು ಗೌರವ ಹತ್ಯೆಗಳಿಗೆ ಶೂನ್ಯ ಸಹಿಷ್ಣುತೆ ಅಗತ್ಯವಿದೆ ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.