
ಬೆಂಗಳೂರು, ಡಿಸೆಂಬರ್ 09: ಕಬ್ಬಿಗೆ ಸರ್ಕಾರದ ದರ ನಿಗದಿ ಪ್ರಶ್ನಿಸಿ ವಿವಿಧ ಸಕ್ಕರೆ ಕಾರ್ಖಾನೆಗಳಿಂದ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ಏಕಸದಸ್ಯ ಪೀಠ, ಈ ಹಂತದಲ್ಲಿ ಮಧ್ಯಂತರ ತಡೆಯಾಜ್ಞೆ ಸಾಧ್ಯವಿಲ್ಲವೆಂದು ತಿಳಿಸಿದೆ. ಜೊತೆಗೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 17ಕ್ಕೆ ನಿಗದಿಪಡಿಸಿದೆ.
ರಾಜ್ಯ ಸರ್ಕಾರ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 3250 ರೂ. ದರ ನಿಗದಿ ಮಾಡಿದೆ. ಕಟಾವು, ಸಾಗಾಣಿಕೆ ಸೇರಿದರೆ ಕಾರ್ಖಾನೆಗಳಿಗೆ 4,150 ರೂ. ವೆಚ್ಚವಾಗಲಿದ್ದು, ಕಾನೂನು ಪಾಲಿಸದೇ ರಾಜ್ಯ ಸರ್ಕಾರ ಏಕಪಕ್ಷೀಯ ಆದೇಶ ನೀಡಿದೆ. ಹೀಗಾಗಿ ಸಕ್ಕರೆ ಕಾರ್ಖಾನೆಗಳಿಗೆ ಭರಿಸಲಾಗದ ನಷ್ಟ ಉಂಟಾಗಲಿದೆ ಎಂದು ಹಲವು ಸಕ್ಕರೆ ಕಾರ್ಖಾನೆಗಳು ಆರೋಪಿಸಿದ್ದವು. ರೇಣುಕಾ ಶುಗರ್ಸ್, ನಿರಾಣಿ ಶುಗರ್ಸ್, ಜೆಮ್ ಶುಗರ್ಸ್, ಕೆಪಿಆರ್ ಶುಗರ್ಸ್, ಗೋದಾವರಿ ಬಯೋ ರಿಪೈನರೀಸ್ ಈ ಬಗ್ಗೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು. ಸೌತ್ ಇಂಡಿಯಾ ಶುಗರ್ ಮಿಲ್ಸ್ ಅಸೋಸಿಯೇಷನ್ ಪರ ಹಿರಿಯ ವಕೀಲ ಹೆಚ್.ಎನ್. ಶಶಿಧರ್ ವಾದ ಮಂಡಿಸಿದ್ದರು. ಈ ವೇಳೆ ರೈತರು ಇಲ್ಲದೆ ನೀವ್ಯಾರೂ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಎಥೆನಾಲ್ ಸೇರಿ ಎಲ್ಲದರಲ್ಲೂ ಸಂಪಾದಿಸಿದರೂ ರೈತರಿಗೆ ಕೊಡಲು ಬಯಸಲ್ಲ ಎಂದು ನ್ಯಾ.ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ.
ಇದನ್ನೂ ಓದಿ: ಕಬ್ಬು ಬೆಳೆಗಾರರ ನಿರಂತರ ಹೋರಾಟಕ್ಕೆ ಕೊನೆಗೂ ಫಲ, ಪ್ರತಿ ಟನ್ ಕಬ್ಬಿಗೆ 3,300 ರೂ ನಿಗದಿ
ಕಬ್ಬಿಗೆ ಬೆಲೆ ನಿಗದಿಗೆ ಆಗ್ರಹಿಸಿ ರಾಜ್ಯದ ವಿವಿಧೆಡೆ ರೈತರು ಬೀದಿಗಿಳಿದಿದ್ದರು. ಅನ್ನದಾತರ ಹೋರಾಟ ತೀವ್ರವಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ್ದ ರಾಜ್ಯ ಸರ್ಕಾರ ಈ ಬಗ್ಗೆ ಮಹತ್ವದ ಸಭೆ ನಡೆಸಿತ್ತು. ಟನ್ ಕಬ್ಬಿಗೆ 3,500 ರೂ. ಬೆಂಬಲ ಬೆಲೆ ಕೊಡಬೇಕೆಂಬ ರೈತರ ಪಟ್ಟಿನ ನಡುವೆ, ಪ್ರತಿ ಟನ್ ಕಬ್ಬಿಗೆ 3,300 ರೂ. ದರವನ್ನು ಸರ್ಕಾರ ನಿಗದಿಪಡಿಸಿತ್ತು. ಸಭೆ ಬಳಿಕ ಮಾತನಾಡಿದ್ದ ಸಿಎಂ, ಪ್ರತಿ ಟನ್ ಕಬ್ಬಿಗೆ 3,200 ರೂ. ದರ ನಿಗದಿ ಮಾಡಲಾಗಿದ್ದು, ಜೊತೆಗೆ 100 ರೂ. ಸೇರಿಸಿ ಕೊಡುತ್ತೇವೆ. ಅಂದರೆ ಸರ್ಕಾರದಿಂದ 50 ರೂ., ಕಾರ್ಖಾನೆಯಿಂದ 50 ರೂ. ನೀಡಲಾಗುತ್ತೆ ಎಂದಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:15 pm, Tue, 9 December 25