ಟ್ರಾಫಿಕ್ ಫೈನ್ ರಿಯಾಯಿತಿ: ಬೆಂಗಳೂರಿನಲ್ಲಿ 12 ವಿಶೇಷ ಕೌಂಟರ್ ತೆರೆಯಲಿದೆ ಆರ್​ಟಿಒ! ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ

ಕರ್ನಾಟಕದಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ಸವಾರರಿಗೆ ಸರ್ಕಾರ ಪದೇ ಪದೇ ಶೇಕಡಾ 50 ರಷ್ಟು ದಂಡ ರಿಯಾಯಿತಿ ಯೋಜನೆ ಪ್ರಕಟಿಸುತ್ತಿದ್ದರೂ, ಬಾಕಿ ವಸೂಲಾತಿ ಮಾತ್ರ ಸುಧಾರಿಸಿಲ್ಲ. ರಾಜ್ಯದಲ್ಲಿ ಸದ್ಯ ಬರೋಬ್ಬರಿ 5 ಕೋಟಿಗೂ ಅಧಿಕ ಟ್ರಾಫಿಕ್ ಇ-ಚಲನ್ ಪ್ರಕರಣಗಳು ಬಾಕಿ ಉಳಿದಿದ್ದು, ಮತ್ತೆ ಜೂನ್ 21 ರಿಂದ ರಿಯಾಯಿತಿಯೊಂದಿಗೆ ದಂಡ ಪಾವತಿಗೆ ಅವಕಾಶ ನೀಡಲಾಗಿದೆ. ಇದಕ್ಕಾಗಿ 12 ಕಡೆ ವಿಶೇಷ ಕೌಂಟರ್​ಗಳನ್ನೂ ತೆರೆಯಲಾಗುತ್ತಿದೆ.

ಟ್ರಾಫಿಕ್ ಫೈನ್ ರಿಯಾಯಿತಿ: ಬೆಂಗಳೂರಿನಲ್ಲಿ 12 ವಿಶೇಷ ಕೌಂಟರ್ ತೆರೆಯಲಿದೆ ಆರ್​ಟಿಒ! ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ (ಕೃಪೆ: ಹೆಚ್​ಎಎಲ್ ಏರ್ಪೋರ್ಟ್ ಟ್ರಾಫಿಕ್ ಪೊಲೀಸ್)
Image Credit source: @halairporttrfps

Updated on: Jun 19, 2026 | 11:05 AM

ಬೆಂಗಳೂರು, ಜೂನ್ 19: ಕರ್ನಾಟಕದಲ್ಲಿ (Karnataka) ವಾಹನ ಸವಾರರು ಸಂಚಾರಿ ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಒಂದೆಡೆಯಾದರೆ, ನಿಯಮ ಉಲ್ಲಂಘನೆಗೆ ವಿಧಿಸಲಾದ ದಂಡದ (Traffic Fine) ಹಣವನ್ನು ಪಾವತಿಸದೆ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ಇತ್ಯರ್ಥಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ ಐದು ಬಾರಿ ಶೇಕಡಾ 50 ರಷ್ಟು ದಂಡ ರಿಯಾಯಿತಿ ಯೋಜನೆಯನ್ನು ಪ್ರಕಟಿಸಿದ್ದರೂ ಸಹ, ಕೋಟ್ಯಂತರ ಪ್ರಕರಣಗಳು ಇನ್ನೂ ಇತ್ಯರ್ಥವಾಗದೇ ಬಾಕಿ ಇವೆ. ಪ್ರಸ್ತುತ ರಾಜ್ಯಾದ್ಯಂತ 5 ಕೋಟಿಗೂ ಅಧಿಕ ಇ-ಚಲನ್ ಪ್ರಕರಣಗಳು ಬಾಕಿ ಇದ್ದು, ಸವಾರರಿಂದ ಬರೋಬ್ಬರಿ 2,727.38 ಕೋಟಿ ರೂಪಾಯಿ ದಂಡದ ಬಾಕಿ ಹಣ ವಸೂಲಾಗಬೇಕಿದೆ.

ಮುಖ್ಯಾಂಶಗಳು

  • 5 ಕೋಟಿಗೂ ಅಧಿಕ ಟ್ರಾಫಿಕ್ ಇ-ಚಲನ್ ಬಾಕಿ.
  • 2,727 ಕೋಟಿ ರೂ. ದಂಡ ಕಟ್ಟದ ಸವಾರರು.
  • ಬೆಂಗಳೂರಿನಲ್ಲಿ ಜೂನ್ 21 ರಿಂದ 12 ವಿಶೇಷ ಕೌಂಟರ್.

ದಂಡ ರಿಯಾಯಿತಿ ಯೋಜನೆಗೆ ತಜ್ಞರ, ಐಪಿಎಸ್ ಅಧಿಕಾರಿಗಳ ತೀವ್ರ ವಿರೋಧ

ಸರ್ಕಾರ ಪದೇ ಪದೇ ದಂಡದಲ್ಲಿ ರಿಯಾಯಿತಿ ನೀಡುತ್ತಿರುವುದಕ್ಕೆ ಹಿರಿಯ ಐಪಿಎಸ್ ಅಧಿಕಾರಿಗಳು ಹಾಗೂ ಸಾರಿಗೆ ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಯಮ ಉಲ್ಲಂಘಿಸಿ ದಂಡ ಕಟ್ಟದೆ ವಿಳಂಬ ಮಾಡುವವರಿಗೆ ಹೆಚ್ಚುವರಿ ದಂಡ ವಿಧಿಸುವ ಬದಲು, ಪದೇ ಪದೇ ರಿಯಾಯಿತಿ ನೀಡುವುದು ತಪ್ಪು. ಇದು ತಪ್ಪು ಮಾಡಿದವರಿಗೆ ಬಹುಮಾನ ನೀಡಿದಂತಾಗುತ್ತದೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಆಕ್ರೋಶ ಹೊರಹಾಕಿರುವುದಾಗಿ ‘ದಿ ನ್ಯೂ ಇಂಡಿಯನ್​ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ಇಂತಹ ರಿಯಾಯಿತಿ ಯೋಜನೆಗಳು ಸಾರ್ವಜನಿಕರಲ್ಲಿ ದಂಡ ಮತ್ತು ಕಾನೂನಿನ ಮೇಲಿರುವ ಭಯವನ್ನು ಕಡಿಮೆ ಮಾಡುತ್ತವೆ. ಇದು ಪರೋಕ್ಷವಾಗಿ ನಿಯಮ ಉಲ್ಲಂಘನೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಸಾರಿಗೆ ತಜ್ಞ ಹಾಗೂ ಐಐಎಸ್‌ಸಿ (IISc) ಪ್ರೊಫೆಸರ್ ಆಶಿಶ್ ವರ್ಮಾ ಅಭಿಪ್ರಾಯಪಟ್ಟಿರುವುದನ್ನೂ ‘ದಿ ನ್ಯೂ ಇಂಡಿಯನ್​ ಎಕ್ಸ್​​ಪ್ರೆಸ್’ ವರದಿ ಉಲ್ಲೇಖಿಸಿದೆ. ಕಳೆದ 8 ವರ್ಷಗಳಲ್ಲಿ ರಾಜ್ಯದಲ್ಲಿ ರಸ್ತೆ ಅಪಘಾತಗಳಿಗೆ 83,000 ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂಬ ಕಠೋರ ವಾಸ್ತವದ ನಡುವೆಯೂ ಈ ಉದಾಸೀನತೆ ಮುಂದುವರಿದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ದಂಡ ಪಾವತಿ ಬಾಕಿಯಲ್ಲಿ ಬೆಂಗಳೂರೇ ನಂಬರ್ 1

ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, 2019 ರಿಂದ 2026 ರ ಏಪ್ರಿಲ್ ಅವಧಿಯಲ್ಲಿ ಕರ್ನಾಟಕದಲ್ಲಿ ಒಟ್ಟು 7.46 ಕೋಟಿಗೂ ಅಧಿಕ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, 3,605.93 ಕೋಟಿ ರೂ. ದಂಡ ವಿಧಿಸಲಾಗಿತ್ತು. ಇದರಲ್ಲಿ ಕೇವಲ 878.55 ಕೋಟಿ ರೂ. ಮಾತ್ರ ವಸೂಲಾಗಿದೆ. ಇನ್ನುಳಿದ 5,05,74,348 ಪ್ರಕರಣಗಳ ದಂಡದ ಹಣ ಇನ್ನೂ ಬಾಕಿ ಉಳಿದಿದೆ. ಈ ಪೈಕಿ ರಾಜಧಾನಿ ಬೆಂಗಳೂರು ನಗರವೊಂದರಲ್ಲೇ ಅತ್ಯಧಿಕ ಅಂದರೆ 3,37,79,608 ಪ್ರಕರಣಗಳು ಬಾಕಿ ಇದ್ದು, 1,843 ಕೋಟಿ ರೂಪಾಯಿ ದಂಡ ವಸೂಲಾಗಬೇಕಿದೆ. ಬೆಂಗಳೂರಿನ ನಂತರ ಮೈಸೂರು ಹಾಗೂ ಬೆಳಗಾವಿ ನಗರಗಳು ಅತಿ ಹೆಚ್ಚು ಬಾಕಿ ಹೊಂದಿರುವ ಪಟ್ಟಿಯಲ್ಲಿ ಮುಂದಿವೆ. ಜಿಲ್ಲಾವಾರು ಪಟ್ಟಿಯಲ್ಲಿ ಮೈಸೂರು, ಬೆಂಗಳೂರು ಗ್ರಾಮಾಂತರ (ಹಳೆಯ ರಾಮನಗರ) ಹಾಗೂ ಮಂಡ್ಯ ಜಿಲ್ಲೆಗಳು ಮುಂಚೂಣಿಯಲ್ಲಿವೆ.

ಜೂನ್ 21 ರಿಂದ ಮತ್ತೆ ರಿಯಾಯಿತಿ: ಬೆಂಗಳೂರಲ್ಲಿ 12 ವಿಶೇಷ ಕೌಂಟರ್

ರಾಜ್ಯ ಸರ್ಕಾರವು ಜೂನ್ 21 ರಿಂದ ಜುಲೈ 10, 2026 ರವರೆಗೆ ಆರನೇ ಬಾರಿಗೆ ಶೇಕಡಾ 50 ರಷ್ಟು ದಂಡ ರಿಯಾಯಿತಿ ಯೋಜನೆಯನ್ನು ಜಾರಿಗೆ ತರುತ್ತಿದೆ. ಬೆಂಗಳೂರು ಸಂಚಾರಿ ಪೊಲೀಸರು (BTP) ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಪ್ರಮುಖ 12 ಜಂಕ್ಷನ್‌ಗಳಲ್ಲಿ ವಿಶೇಷ ಕೌಂಟರ್‌ಗಳನ್ನು ಸ್ಥಾಪಿಸುತ್ತಿದ್ದಾರೆ. ಅವುಗಳ ವಿವರ ಇಲ್ಲಿದೆ;

  1. ಹೆಣ್ಣೂರು ಜಂಕ್ಷನ್, ರಿಂಗ್ ರೋಡ್
  2. ದೇವಸಂದ್ರ ಜಂಕ್ಷನ್, ಹಳೇ ಮದ್ರಾಸ್ ರಸ್ತೆ
  3. ಕುಂದಲಹಳ್ಳಿ ಜಂಕ್ಷನ್, ಹಳೇ ವಿಮಾನ ನಿಲ್ದಾಣ ರಸ್ತೆ
  4. ಮೈಸೂರು ಬ್ಯಾಂಕ್ ಜಂಕ್ಷನ್, ಕೆ.ಜಿ. ರಸ್ತೆ
  5. ಸುಮ್ಮನಹಳ್ಳಿ ಜಂಕ್ಷನ್, ಮಾಗಡಿ ರಸ್ತೆ
  6. ಮೆಟ್ರೋ (BHEL), ಮೈಸೂರು ರಸ್ತೆ
  7. ಆರ್‌ಟಿಒ ಕಚೇರಿ ಹತ್ತಿರ, 12ನೇ ಮುಖ್ಯ ರಸ್ತೆ (ರಾಜಾಜಿನಗರ)
  8. ಜಾಲಹಳ್ಳಿ ಕ್ರಾಸ್ ಜಂಕ್ಷನ್, ತುಮಕೂರು ರಸ್ತೆ
  9. ಹೆಬ್ಬಾಳ ಜಂಕ್ಷನ್, ಬಳ್ಳಾರಿ ರಸ್ತೆ
  10. ಸಾಗರ್ ಜಂಕ್ಷನ್, ಕೆ.ಜಿ. ರಸ್ತೆ
  11. ಹೊಸ ರಸ್ತೆ ಜಂಕ್ಷನ್, ಎಲೆಕ್ಟ್ರಾನಿಕ್ಸ್ ಸಿಟಿ ರಸ್ತೆ
  12. ಗೊಟ್ಟಿಗೆರೆ ಜಂಕ್ಷನ್, ಬನ್ನೇರುಘಟ್ಟ ರಸ್ತೆ

ಸವಾರರು ಈ ಕೌಂಟರ್‌ಗಳಲ್ಲದೆ, ಕರ್ನಾಟಕ ರಾಜ್ಯ ಪೊಲೀಸ್ (KSP) ಆ್ಯಪ್, ಬಿಟಿಪಿ ಆಸ್ಟ್ರಾಂ (BTP ASTraM) ಆ್ಯಪ್, ಹತ್ತಿರದ ಸಂಚಾರಿ ಪೊಲೀಸ್ ಠಾಣೆ, ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್ ಹಾಗೂ ಕರ್ನಾಟಕ ಒನ್ ವೆಬ್‌ಸೈಟ್ ಮತ್ತು ಕೇಂದ್ರಗಳ ಮೂಲಕ ಅರ್ಧದಷ್ಟು ದಂಡ ಪಾವತಿಸಿ ಪ್ರಕರಣಗಳನ್ನು ಖುಲಾಸೆಗೊಳಿಸಿಕೊಳ್ಳಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:01 am, Fri, 19 June 26

Follow Us