
ಬೆಂಗಳೂರು, ಮಾರ್ಚ್ 29: ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣನ ಅಬ್ಬರದ ನಡುವೆಯೂ ಬಹುತೇಕ ಕಡೆ ತೀವ್ರ ಸೆಕೆಯ ವಾತಾವರಣ ಮುಂದುವರಿದಿದೆ. ವಿಪರೀತ ಉಷ್ಣತೆಯ ಪರಿಣಾಮ ಜನ ನಾನಾ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಈ ನಡುವೆ ವರದಿಯೊಂದು ಆಘಾತಕಾರಿ ಅಂಶಗಳನ್ನು ಬಿಚ್ಚುಟ್ಟಿದ್ದು, ಮೂರು ದಶಕಗಳ ಹಿಂದೆ ಇದ್ದುದಕ್ಕಿಂತ ಈಗ ಕನಿಷ್ಠ 9 ರಿಂದ 13 ಹೆಚ್ಚುವರಿ ಉಷ್ಣತೆ ಹೊಂದಿರುವ ರಾತ್ರಿಗಳನ್ನು ಕರ್ನಾಟಕ ಅನುಭವಿಸುತ್ತಿದೆ. ಇದರಿಂದ ಜನರ ಉತ್ಪಾದಕತೆ ಮೇಲೆ ಪರಿಣಾಮ ಉಂಟಾಗುತ್ತಿರುವುದಲ್ಲದೆ, ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ ಎಂದು ತಿಳಿಸಿದೆ.
ಕೌನ್ಸಿಲ್ ಆನ್ ಎನರ್ಜಿ, ಎನ್ವೈರ್ನ್ಮೆಂಟ್ ಆ್ಯಂಡ್ ವಾಟರ್ ಪ್ರಕಟಿಸಿರುವ ಹೌ ಎಕ್ಸ್ಟ್ರೀಮ್ ಹೀಟ್ ಇಸ್ ಇಂಪ್ಯಾಕ್ಟಿಂಗ್ ಇಂಡಿಯಾ: ಅಸೆಸಿಂಗ್ ಡಿಸ್ಟ್ರಿಕ್ಟ್ ಲೆವೆಲ್ ಹೀಟ್ ರಿಸ್ಕ್ ವರದಿಯ ಪ್ರಕಾರ ತೇವಾಂಶದ ಏರಿಕೆ ಸೇರಿದಂತೆ ಕನಿಷ್ಠ 35 ಕಾರಣಗಳು ರಾತ್ರಿ ವೇಳೆ ತಾಪಮಾನ ಹೆಚ್ಚಲು ಕಾರಣವಾಗಿವೆ. ಈ ವರದಿ ಪ್ರಕಾರ, ಕರ್ನಾಟಕದ ಶೇ.93ರಷ್ಟು ಜಿಲ್ಲೆಗಳು ಅತ್ಯಧಿಕ ಹಾಗೂ ಹೆಚ್ಚು ಉಷ್ಣ ಅಪಾಯ ವರ್ಗಗಳಲ್ಲಿ ಸೇರಿವೆ. ಕರಾವಳಿ ಜಿಲ್ಲೆಗಳು ಮತ್ತು ಮಲನಾಡಿನ ಮೂರು ಜಿಲ್ಲೆಗಳು ಅತ್ಯಧಿಕ ಅಪಾಯದ ವಿಭಾಗದಲ್ಲಿವೆ.
ಇದನ್ನೂ ಓದಿ: ಹಾಸನ ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಮಳೆ; 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
CEEW ಫೆಲೋ ವಿಶ್ವಾಸ್ ಚಿತಾಲೆ ಅವರ ಪ್ರಕಾರ, ದಟ್ಟ ಜನಸಂಖ್ಯೆಯ ಜಿಲ್ಲೆಗಳಲ್ಲಿ ಹೆಚ್ಚಿನ ಉಷ್ಣತೆ ಹೊಂದಿರುವ ರಾತ್ರಿಗಳ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರು ಮಾತ್ರವಲ್ಲದೆ ಮೈಸೂರು, ಮಂಗಳೂರು, ಶಿವಮೊಗ್ಗ ಮತ್ತು ಹುಬ್ಬಳ್ಳಿ-ಧಾರವಾಡಂತಹ ನಗರೀಕರಣಗೊಳ್ಳುತ್ತಿರುವ ನಗರಗಳಲ್ಲಿಯೂ ಇದೇ ಪ್ರವೃತ್ತಿ ಕಾಣಿಸಿದೆ. 1981ರಿಂದ 2022ರವರೆಗೆ ಭಾರತದಲ್ಲಿ ಉಷ್ಣತೆಯ ತೀವ್ರತೆ ನಿರಂತರವಾಗಿ ಏರಿಕೆಯಾಗಿದೆ. ಇದರ ಪರಿಣಾಮವಾಗಿ 2013, 2016, 2019, 2022 ಮತ್ತು 2024ರಲ್ಲಿ ಭಾರೀ ಹೀಟ್‌ವೇವ್‌ಗಳು ಸಂಭವಿಸಿವೆ. ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ವಿಜಯಪುರ, ಬೆಳಗಾವಿ, ಬೀದರ, ಕಲಬುರಗಿ, ಮೈಸೂರು, ಬಾಗಲಕೋಟೆ ಮತ್ತು ಶಿವಮೊಗ್ಗ ಜಿಲ್ಲೆಗಳು ಅತ್ಯಧಿಕ ಅಪಾಯದ ವರ್ಗದಲ್ಲಿದ್ದರೆ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಮಧ್ಯಮ ಅಪಾಯದ ವರ್ಗದಲ್ಲಿವೆ.
ಕಳೆದ ದಶಕದಲ್ಲಿ ಬಹಳ ಉಷ್ಣಾಂಶ ಹೊಂದಿರುವ ರಾತ್ರಿಗಳ ಸಂಖ್ಯೆ, ಹೆಚ್ಚಿನ ಹೀಟ್ ಹೊಂದಿರುವ ದಿನಗಳಿಗಿಂತ ವೇಗವಾಗಿ ಏರಿವೆ. ಭಾರತದಲ್ಲಿನ ಸುಮಾರು ಶೇ. 70ರಷ್ಟು ಜಿಲ್ಲೆಗಳು ಪ್ರತೀ ಬೇಸಿಗೆಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಈ ರೀತಿಯ ರಾತ್ರಿಗಳನ್ನು ಅನುಭವಿಸಿವೆ. ಅಧಿಕ ಉಷ್ಣಾಣ ವಾತಾವರಣದ ರಾತ್ರಿಗಳು ದೇಹಕ್ಕೆ ದಿನದ ಉಷ್ಣದಿಂದ ತಂಪಾಗಲು ಅವಕಾಶ ನೀಡದೇ, ಹೀಟ್ ಎಕ್ಸಾಸ್ಷನ್, ಹೀಟ್ ಸ್ಟ್ರೋಕ್, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಮೂತ್ರಪಿಂಡ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಚಿತಾಲೆ ಹೇಳಿರೋದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.