ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬಿಗ್ ಶಾಕ್: 362 KAS ಅಧಿಕಾರಿಗಳ ಆಯ್ಕೆ ಪಟ್ಟಿ ಊರ್ಜಿತಗೊಳಿಸಿದ್ದ ಕಾಯ್ದೆ ರದ್ದು

2011ರ KAS ನೇಮಕಾತಿ ಹಗರಣದ ವಿವಾದಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 362 KAS ಅಧಿಕಾರಿಗಳ ಆಯ್ಕೆಯನ್ನು ಊರ್ಜಿತಗೊಳಿಸಲು ಕರ್ನಾಟಕ ಸರ್ಕಾರ ತಂದಿದ್ದ 'ನೇಮಕಾತಿ ಊರ್ಜಿತಗೊಳಿಸುವಿಕೆ ಕಾಯ್ದೆ-2022' ಅನ್ನು ಸುಪ್ರೀಂ ರದ್ದುಗೊಳಿಸಿದೆ. ಇದರಿಂದ ದಶಕಗಳಿಂದ ಸೇವೆಯಲ್ಲಿದ್ದ 362 KAS ಅಧಿಕಾರಿಗಳ ಭವಿಷ್ಯ ಅತಂತ್ರವಾಗಿದೆ. ಇದು ಸರ್ಕಾರಕ್ಕೆ ಮುಖಭಂಗ ತಂದಿದೆ.

ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬಿಗ್ ಶಾಕ್: 362 KAS ಅಧಿಕಾರಿಗಳ ಆಯ್ಕೆ ಪಟ್ಟಿ ಊರ್ಜಿತಗೊಳಿಸಿದ್ದ ಕಾಯ್ದೆ ರದ್ದು
ಸಾಂದರ್ಭಿಕ ಚಿತ್ರ

Updated on: Oct 29, 2026 | 1:34 PM

ಬೆಂಗಳೂರು, ಅ.29: ದಶಕಕ್ಕೂ ಹೆಚ್ಚು ಕಾಲದಿಂದ ನ್ಯಾಯಾಲಯದ ಅಂಗಳದಲ್ಲಿ ಕಾವೇರಿದ್ದ 2011ರ ಸಾಲಿನ 362 ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಅತ್ಯಂತ ಮಹತ್ವದ ತೀರ್ಪು ನೀಡಿದೆ. ಆಯ್ಕೆ ಪಟ್ಟಿಯನ್ನು ಬಲವಂತವಾಗಿ ಊರ್ಜಿತಗೊಳಿಸಲು 2022ರಲ್ಲಿ ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನು  ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ರದ್ದುಗೊಳಿಸಿದೆ. ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ನೇತೃತ್ವದ ಪೀಠವು ಈ ಪ್ರಮುಖ ತೀರ್ಪನ್ನು ಪ್ರಕಟಿಸಿದ್ದು, ಪ್ರಸ್ತುತ ಸೇವೆಯಲ್ಲಿರುವ ಹಾಗೂ ನೇಮಕಾತಿ ಆದೇಶದ ನಿರೀಕ್ಷೆಯಲ್ಲಿದ್ದ 362 ಕೆಎಎಸ್ ಅಧಿಕಾರಿಗಳ ಭವಿಷ್ಯ ಮತ್ತೆ ಭಾರಿ ಅತಂತ್ರಕ್ಕೆ ಸಿಲುಕಿದೆ.

ಸರ್ಕಾರಕ್ಕೆ ಮುಖಭಂಗ , ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್:

ಹೈಕೋರ್ಟ್ ಈಗಾಗಲೇ ಅಕ್ರಮಗಳ ಹಿನ್ನೆಲೆಯಲ್ಲಿ ರದ್ದುಗೊಳಿಸಿದ್ದ 362 ಹುದ್ದೆಗಳ ಆಯ್ಕೆ ಪಟ್ಟಿಗೆ ಜೀವ ತುಂಬಲು ರಾಜ್ಯ ಸರ್ಕಾರವು ವಿಧಾನಮಂಡಲದಲ್ಲಿ ‘ಕರ್ನಾಟಕ ನಾಗರಿಕ ಸೇವೆಗಳು (ಆಯ್ಕೆಯ ಊರ್ಜಿತಗೊಳಿಸುವಿಕೆ ಮತ್ತು 2011ರ ಗೆಜೆಟೆಡ್‌ ಪ್ರೊಬೇಷನರಿಗಳ ನೇಮಕಾತಿ) ವಿಧೇಯಕ- 2022’ ಅನ್ನು ತಂದು ಶಾಸನ ರೂಪಿಸಿತ್ತು. ನ್ಯಾಯಾಲಯದ ರದ್ದತಿಯನ್ನು ಮೀರಿ ಕಾಯ್ದೆ ರೂಪಿಸಿ ಆಯ್ಕೆ ಪಟ್ಟಿಯನ್ನು ಊರ್ಜಿತಗೊಳಿಸಲು ಹೊರಟ ಸರ್ಕಾರದ ಈ ಕ್ರಮ ಶಾಸನಬದ್ಧವಲ್ಲ ಮತ್ತು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ತೀರ್ಪಿನಿಂದಾಗಿ 2011ರ ಬ್ಯಾಚ್‌ನ 362 ಕೆಎಎಸ್ ಅಧಿಕಾರಿಗಳ ಹುದ್ದೆ ಮತ್ತು ಉದ್ಯೋಗ ಅತ್ಯಂತ ಅಪಾಯದಲ್ಲಿದೆ.

ದಶಕಗಳ ಈ ಹಗರಣದ ಹಿನ್ನಲೆ:

ನವೆಂಬರ್ 3 2011ರಂದು ಕರ್ನಾಟಕ ಲೋಕಸೇವಾ ಆಯೋಗವು (KPSC) 362 ಗೆಜೆಟೆಡ್‌ ಪ್ರೊಬೆಷನರಿ (KAS) ಹುದ್ದೆಗಳ ಭರ್ತಿಗೆ ಅಧಿಕೃತ ಅರ್ಜಿ ಆಹ್ವಾನಿಸಿತು. 2014 ಮಾರ್ಚ್ – ಜೂನ್​​ನಲ್ಲಿ ಡಾ. ಎಚ್‌.ಪಿ.ಎಸ್‌. ಮೈತ್ರಿಯಾ ಅವರಿಂದ ನೇಮಕಾತಿಯಲ್ಲಿ ಕೋಟಿ ಕೋಟಿ ರೂಪಾಯಿ ಲಂಚ ಮತ್ತು ಅವ್ಯವಹಾರ ನಡೆದಿದೆ ಎಂದು ದೂರು ನೀಡಲಾಗಿತ್ತು. 2014ರ ಜೂನ್ 27ರಂದು ಸರ್ಕಾರದಿಂದ ಸಿಐಡಿ (CID) ತನಿಖೆಗೆ ಆದೇಶ ನೀಡಲಾಯಿತು. 2014 ಆಗಸ್ಟ್ 8ರಂದು ಸಿಐಡಿ ವರದಿ ಆಧಾರದ ಮೇಲೆ ಕಲುಷಿತಗೊಂಡಿದ್ದ ಇಡೀ 362 ಹುದ್ದೆಗಳ ಆಯ್ಕೆ ಪಟ್ಟಿಯನ್ನು ಹಿಂಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿತು.

2016ರಲ್ಲಿ ಕೆಎಟಿ (KAT) ನೇಮಕಾತಿಗೆ ಆದೇಶಿಸಲಾಗಿತ್ತು, ಅದರೂ 2017 ಹಾಗೂ 2018ರ ಜುಲೈ 13ರಂದು ಹೈಕೋರ್ಟ್ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದಲ್ಲಾದ ಅಕ್ರಮವನ್ನು ಎತ್ತಿಹಿಡಿದು 362 ಹುದ್ದೆಗಳ ನೇಮಕಾತಿಯನ್ನು ರದ್ದುಗೊಳಿಸಿ ತೀರ್ಪು ನೀಡಿತು. ಹೈಕೋರ್ಟ್ ಆದೇಶವನ್ನು ಬದಿಗೊತ್ತಿ, 362 KAS ಅಭ್ಯರ್ಥಿಗಳ ಆಯ್ಕೆಯನ್ನು ಬಲವಂತವಾಗಿ ಸಕ್ರಮಗೊಳಿಸಲು ‘ನೇಮಕಾತಿ ಊರ್ಜಿತಗೊಳಿಸುವಿಕೆ ಕಾಯ್ದೆ-2022’ ಅನ್ನು ಸರ್ಕಾರ ಜಾರಿಗೆ ತಂದಿತು. ಇದೀಗ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಪೀಠವು ಸರ್ಕಾರದ 2022ರ ಕಾಯ್ದೆಯನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿ, ದಶಕದ ಸುದೀರ್ಘ ಕಾನೂನು ಸಮರಕ್ಕೆ ಮುಕ್ತಾಯ ಹಾಡಿದೆ.

ಇದನ್ನೂ ಓದಿ: ಧಾರವಾಡ ಎಸ್​​ಡಿಎ ಸಾವು ಪ್ರಕರಣಕ್ಕೆ ಸ್ಫೋಟಕ ತಿರುವು: 4 ಕೋಟಿ ರೂ. ನೌಕರಿ ಹಗರಣ; ಬ್ಯಾಗ್‌ನಲ್ಲಿ ಪತ್ತೆಯಾಯ್ತು 70 ಚೆಕ್, ಡೆತ್‌ನೋಟ್

ಆಡಳಿತದ ಮೇಲಾಗುವ ಪರಿಣಾಮ:

2011ರ ಬ್ಯಾಚ್‌ನ ಈ ಅಧಿಕಾರಿಗಳು ಈಗಾಗಲೇ ಹಲವು ಪ್ರಮುಖ ಇಲಾಖೆಗಳಲ್ಲಿ ತಹಸೀಲ್ದಾರ್, ಅಸಿಸ್ಟೆಂಟ್ ಕಮಿಷನರ್, ವಾಣಿಜ್ಯ ತೆರಿಗೆ ಅಧಿಕಾರಿ ಸೇರಿದಂತೆ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ ಈ ಅಧಿಕಾರಿಗಳು ಸೇವೆಯಿಂದ ವಜಾಗೊಳ್ಳುವ ಭೀತಿಗೆ ಸಿಲುಕಿದ್ದು, ರಾಜ್ಯ ಕಂದಾಯ ಮತ್ತು ಸಿಬ್ಬಂದಿ ಆಡಳಿತ ಶ್ರೇಣಿಯಲ್ಲಿ (DPAR) ಭಾರಿ ತಲಾಶ್ ಸೃಷ್ಟಿಯಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:32 pm, Thu, 29 October 26

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us