ಕೆಪಿಎಸ್‌ಸಿ ನೇಮಕಾತಿ ಹಗರಣದಲ್ಲಿ ಇಡಿ ತನಿಖೆಯ ಸ್ಫೋಟಕ ಅಂಶ ಬಯಲು: ಅಭ್ಯರ್ಥಿಗಳ ಸಂದರ್ಶನ ಹೇಗೆ ನಡೆಯುತ್ತಿತ್ತು ಗೊತ್ತಾ?

ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮ ಪ್ರಕರಣದಲ್ಲಿ, ED ತನಿಖೆ ಸ್ಫೋಟಕ ಸಂಗತಿಗಳನ್ನು ಬಯಲುಮಾಡಿದೆ. ಅಭ್ಯರ್ಥಿಗಳ ಆಯ್ಕೆ ಅಕ್ರಮಕ್ಕೆ ಸಿಸಿಟಿವಿ ಇಲ್ಲದ ಸ್ಥಳದಲ್ಲಿ ಸಂದರ್ಶನ ನಡೆಸಿರುವುದಾಗಿ ಮಾಜಿ ಸದಸ್ಯ ಗ್ಯಾನೇಂದ್ರ ಕುಮಾರ್ ಒಪ್ಪಿಕೊಂಡಿದ್ದಾರೆ. ಅವರ ಕುಟುಂಬದ ಖಾತೆಗಳಲ್ಲಿ ಭಾರಿ ನಗದು ಠೇವಣಿ ಪತ್ತೆಯಾಗಿದ್ದು, 15 ಕೋಟಿ ರೂ. ಹಣ ಸಂಗ್ರಹದ ಆರೋಪವೂ ತನಿಖೆಯಲ್ಲಿದೆ.

ಕೆಪಿಎಸ್‌ಸಿ ನೇಮಕಾತಿ ಹಗರಣದಲ್ಲಿ ಇಡಿ ತನಿಖೆಯ ಸ್ಫೋಟಕ ಅಂಶ ಬಯಲು: ಅಭ್ಯರ್ಥಿಗಳ ಸಂದರ್ಶನ ಹೇಗೆ ನಡೆಯುತ್ತಿತ್ತು ಗೊತ್ತಾ?
ಸಾಂದರ್ಭಿಕ ಚಿತ್ರ
Edited By:

Updated on: Nov 19, 2026 | 8:19 AM

ಬೆಂಗಳೂರು, ನ.19: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ಹಾಗೂ ಆಘಾತಕಾರಿ ಸಂಗತಿಗಳು ಬಯಲಾಗಿವೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಅಕ್ರಮ ಎಸಗುವ ಉದ್ದೇಶದಿಂದಲೇ ಸಿಸಿಟಿವಿ ಕ್ಯಾಮೆರಾ ಇಲ್ಲದ ಸ್ಥಳದಲ್ಲಿ ಅಭ್ಯರ್ಥಿಗಳ ಸಂದರ್ಶನ ನಡೆಸಲಾಗುತ್ತಿತ್ತು ಎಂಬ ಸತ್ಯವನ್ನು ಕೆಪಿಎಸ್‌ಸಿ ಮಾಜಿ ಸದಸ್ಯ ಗ್ಯಾನೇಂದ್ರ ಕುಮಾರ್ ಇಡಿ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆ. ಇಡಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಈ ಮಹತ್ವದ ಅಂಶಗಳನ್ನು ಉಲ್ಲೇಖಿಸಲಾಗಿದೆ.

ಪಶುವೈದ್ಯಾಧಿಕಾರಿ, ಕಿರಿಯ ಎಂಜಿನಿಯರ್ ಸೇರಿದಂತೆ ಹಲವು ಪ್ರಮುಖ ಹುದ್ದೆಗಳ ಪರೀಕ್ಷೆಯಲ್ಲಿ ಮೆರಿಟ್ ಆಧಾರದ ಮೇಲೆ ಉತ್ತೀರ್ಣರಾದ ಅಭ್ಯರ್ಥಿಗಳ ಖುದ್ದು ಸಂದರ್ಶನದ ವೇಳೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿರಲಿಲ್ಲ. ಅಕ್ರಮ ನಡೆಸುವ ಸಲುವಾಗಿಯೇ ಸಿಸಿಟಿವಿ ಇಲ್ಲದ ಕಡೆ ಸಂದರ್ಶನ ನಡೆಸಲಾಗಿದೆ ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ.

Loading...

ಸಿಸಿಟಿವಿ ಇಲ್ಲದ ಜಾಗದಲ್ಲಿ ಸಂದರ್ಶನ ನಡೆಸಿದ ಬಗ್ಗೆ ಇಡಿ ಅಧಿಕಾರಿಗಳು ಪ್ರಶ್ನಿಸಿದಾಗ ಗ್ಯಾನೇಂದ್ರ ಕುಮಾರ್ ತಪ್ಪೊಪ್ಪಿಕೊಂಡಿದ್ದು, “ಸಿಸಿಟಿವಿ ವ್ಯವಸ್ಥೆ ಬಗ್ಗೆ ನನಗೇನೂ ಗೊತ್ತಿಲ್ಲ, ಈ ಬಗ್ಗೆ ಕೆಪಿಎಸ್‌ಸಿ ಚೇರ್‌ಮ್ಯಾನ್ ಮತ್ತು ಸೆಕ್ರೆಟರಿ ಅವರನ್ನೇ ಕೇಳಿ” ಎಂದು ಹೇಳಿಕೆ ನೀಡಿದ್ದಾರೆ.

15 ಕೋಟಿ ರೂ. ಹಣದ ಆರೋಪ ಹಾಗೂ ಕುಟುಂಬಸ್ಥರ ಖಾತೆಗೆ ನಗದು ಡೆಪಾಸಿಟ್

ಪ್ರಕರಣದ ಮತ್ತೊಬ್ಬ ಆರೋಪಿ ಬಸವರಾಜ್ ಕನ್ನಾಳೆ, ಅಭ್ಯರ್ಥಿಗಳಿಂದ ಸಂಗ್ರಹಿಸಿದ ಸುಮಾರು 15 ಕೋಟಿ ರೂಪಾಯಿ ಹಣವನ್ನು ಜಯಮಹಲ್‌ನಲ್ಲಿರುವ ಗ್ಯಾನೇಂದ್ರ ಕುಮಾರ್ ನಿವಾಸದಲ್ಲೇ ತಲುಪಿಸಿರುವುದಾಗಿ ಇಡಿ ಮುಂದೆ ಹೇಳಿಕೆ ನೀಡಿದ್ದರು. ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ಗ್ಯಾನೇಂದ್ರ ಕುಮಾರ್, ತಾನು ಕನ್ನಾಳೆ ಬಳಿ ಯಾವುದೇ ಹಣ ಪಡೆದಿಲ್ಲ ಎಂದು ವಾದಿಸಿದ್ದಾರೆ. ಗ್ಯಾನೇಂದ್ರ ಕುಮಾರ್ ಹಣ ಪಡೆದಿಲ್ಲ ಎಂದು ವಾದಿಸಿದರೂ, ಇಡಿ ತನಿಖೆಯಲ್ಲಿ ಅವರ ಕುಟುಂಬಸ್ಥರ ಬ್ಯಾಂಕ್ ಖಾತೆಗಳಿಗೆ ಭಾರಿ ಪ್ರಮಾಣದ ನಗದು ಜಮೆಯಾಗಿರುವುದು ಪತ್ತೆಯಾಗಿದೆ. 15,39,500 ರೂಪಾಯಿ ನಗದು ಡೆಪಾಸಿಟ್ ಆಗಿದೆ.

10,94,000 ರೂಪಾಯಿ (10 ಲಕ್ಷದ 94 ಸಾವಿರ ರೂ.) ನಗದು ಡೆಪಾಸಿಟ್ ಆಗಿದೆ. ಈ ಹಣದ ಮೂಲದ ಬಗ್ಗೆ ಇಡಿ ಅಧಿಕಾರಿಗಳು ಪ್ರಶ್ನಿಸಿದಾಗ ಉತ್ತರ ನೀಡಲು ನಿರಾಕರಿಸಿದ ಗ್ಯಾನೇಂದ್ರ ಕುಮಾರ್ ಮೌನಕ್ಕೆ ಶರಣಾಗಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಎದೆ ಝಲ್ ಎನಿಸುವ ಹಿಟ್ ಆ್ಯಂಡ್ ರನ್: ಕಾರ್ ಡಿಕ್ಕಿಯಾಗಿ ಬಿಎಂಟಿಸಿ ಬಸ್ ಮುಂದೆಯೇ ಬಿದ್ದ ಬೈಕ್ ಸವಾರ

ಪ್ರಕರಣದ ಹಿನ್ನೆಲೆ:

ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಪಶುವೈದ್ಯಾಧಿಕಾರಿ, ಕಿರಿಯ ಎಂಜಿನಿಯರ್ ಹಾಗೂ ಇತರ ಗೆಜೆಟೆಡ್ ಮತ್ತು ತಾಂತ್ರಿಕ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ಹಾಗೂ ಅಕ್ರಮ ನಡೆದಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿ, ಕೋಟ್ಯಂತರ ರೂಪಾಯಿ ಲಂಚ ಪಡೆದು ಹುದ್ದೆಗಳನ್ನು ಮಾರಾಟ ಮಾಡಲಾಗಿದೆ ಎಂಬ ದೂರಿನನ್ವಯ ತನಿಖೆ ಆರಂಭವಾಗಿತ್ತು. ಈ ಹಗರಣದಲ್ಲಿ ದೊಡ್ಡ ಮಟ್ಟದ ಅಕ್ರಮ ಹಣ ವರ್ಗಾವಣೆ ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿತ್ತು. ತನಿಖೆಯ ವೇಳೆ ಮಧ್ಯವರ್ತಿ ಬಸವರಾಜ್ ಕನ್ನಾಳೆ ಹಾಗೂ ಕೆಪಿಎಸ್‌ಸಿ ಸದಸ್ಯ ಗ್ಯಾನೇಂದ್ರ ಕುಮಾರ್ ನಡುವಿನ ಹಣಕಾಸಿನ ವ್ಯವಹಾರಗಳು ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿನ ಲೋಪಗಳು ಒಂದೊಂದಾಗಿ ಬಯಲಾಗುತ್ತಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us