ಡಿಕೆ ಶಿವಕುಮಾರ್​ ಕೆಲಸಕ್ಕೆ ಅಧ್ಯಕ್ಷ ಫಿದಾ, ಅಚ್ಚು ಕಟ್ಟಾಗಿ ಕೆಲಸ ಮಾಡಿದ್ದಕ್ಕೆ ಖರ್ಗೆ ಪ್ರಶಂಸೆ

|

Updated on: Apr 17, 2023 | 7:34 AM

ಇಂದಿರಾಗಾಂಧಿ ಭವನ ಉದ್ಘಾಟಿಸಿ ಭಾಷಣ ಮಾಡಿದ ಖರ್ಗೆ ಅವರು ಡಿಕೆ ಶಿವಕುಮಾರ್​ ಅವರನ್ನು ಹಾಡಿ ಹೊಗಳಿದ್ದಾರೆ. ಡಿಕೆಶಿ ಸ್ವಲ್ಪ ಮುಂಗೋಪಿ ಅನ್ನೋದು ಬಿಟ್ರೆ ಒಳ್ಳೆಯ ಕೆಲಸಗಾರ. ಹಿಡಿದ ಕೆಲಸ ಬಿಡದೆ ಮಾಡಿ ಮುಗಿಸುತ್ತಾನೆ ಎಂದರು.

ಡಿಕೆ ಶಿವಕುಮಾರ್​ ಕೆಲಸಕ್ಕೆ ಅಧ್ಯಕ್ಷ ಫಿದಾ, ಅಚ್ಚು ಕಟ್ಟಾಗಿ ಕೆಲಸ ಮಾಡಿದ್ದಕ್ಕೆ ಖರ್ಗೆ ಪ್ರಶಂಸೆ
ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್
Follow us on

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ರನ್ನು(DK Shivakumar) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಪ್ರಶಂಸಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿ (ಕೆಪಿಸಿಸಿ) ಹಿಂಭಾಗದಲ್ಲಿರುವ ಕಾಂಗ್ರೆಸ್ ಪಕ್ಷದ ನೂತನ ಕಟ್ಟಡ ಇಂದಿರಾಗಾಂಧಿ ಭವನವನ್ನು ರಾಹುಲ್ ಗಾಂಧಿ(Rahul Gandhi) ಮತ್ತು ಮಲ್ಲಿಕಾರ್ಜುನ ಖರ್ಗೆ (ಏಪ್ರಿಲ್ 16) ಉದ್ಘಾಟಿಸಿದರು. ಇಂದಿರಾಗಾಂಧಿ ಭವನ ಉದ್ಘಾಟಿಸಿ ಭಾಷಣ ಮಾಡಿದ ಖರ್ಗೆ ಅವರು ಡಿಕೆ ಶಿವಕುಮಾರ್​ ಅವರನ್ನು ಹಾಡಿ ಹೊಗಳಿದ್ದಾರೆ.

ಇಡೀ ದೇಶದಲ್ಲಿ ಈ ರೀತಿಯ ಹೈಟೆಕ್ ಕಚೇರಿ ಕಾಂಗ್ರೆಸ್‌ಗೆ ಇಲ್ಲ. ಡಿಕೆ ಶಿವಕುಮಾರ್ ಬಹಳ ಲಕ್ಕಿ ಇದ್ದಾನೆ, ಹೈಟೆಕ್ ಆಗಿ ಕಟ್ಟಡ ನಿರ್ಮಿಸಿದ್ದಾರೆ. ಡಿಕೆಶಿ ಸ್ವಲ್ಪ ಮುಂಗೋಪಿ ಅನ್ನೋದು ಬಿಟ್ರೆ ಒಳ್ಳೆಯ ಕೆಲಸಗಾರ. ಹಿಡಿದ ಕೆಲಸ ಬಿಡದೆ ಮಾಡಿ ಮುಗಿಸುತ್ತಾನೆ. ಸಿದ್ದರಾಮಯ್ಯ ಸೇರಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡ್ತಾರೆ. ಹೀಗಾಗಿ ಸೋನಿಯಾ, ರಾಹುಲ್‌, ಪ್ರಿಯಾಂಕಾಗೆ ಡಿಕೆಶಿ ಇಷ್ಟ ಎಂದು ಮಲ್ಲಿಕಾರ್ಜುನ ಖರ್ಗೆ ಭಾಷಣದ ವೇಳೆ ಡಿಕೆ ಶಿವಕುಮಾರ್​ ಅವರನ್ನು ಹೊಗಳಿದ್ದಾರೆ. ಇನ್ನು ಕಟ್ಟಡಕ್ಕೆ ಇಂದಿರಾ ಗಾಂಧಿ ಹೆಸರಿಡಲು ನಾನೇ ಹೇಳಿದ್ದೆ. 150 ಸೀಟ್ ಗೆಲ್ಲಬೇಕು ಅಂತಾ ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಸುಮ್ಮನೆ ನಂಬರ್‌ಗಳನ್ನ ಹೇಳಲ್ಲ. ನಮ್ಮ ಗ್ಯಾರಂಟಿಗಳ ಮೂಲಕ 150ಕ್ಕೂ ಹೆಚ್ಚು ಸೀಟ್ ಗೆಲ್ಲಬೇಕು. ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿಗಳನ್ನ ಜಾರಿಗೆ ತರಬೇಕು. ಈ ಮೂಲಕ ಜನರ ವಿಶ್ವಾಸಗಳಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ಕೊಟ್ಟರು.

ಇದನ್ನೂ ಓದಿ: ರಾಹುಲ್ ಗಾಂಧಿ ಕಾರ್ಯಕ್ರಮಗಳಿಗೆ ಪರಮೇಶ್ವರ್‌ ಗೈರು; ಕಾಂಗ್ರೆಸ್ ಪಕ್ಷದ ವಿರುದ್ಧ ಪರಂ ಮುನಿಸಿಗೆ ಕಾರಣವೇನು?

ಕೋಲಾರ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಅವರು ಏಪ್ರಿಲ್ 16ರ ಸಂಜೆ ಬೆಂಗಳೂರಿಗೆ ಆಗಮಿಸಿ ಇಂದಿರಾಗಾಂಧಿ ಭವನವನ್ನು ಉದ್ಘಾಟಿಸಿದ್ದಾರೆ. ಈ ಕಟ್ಟಡ ನಿರ್ಮಾಣ ಕಾರ್ಯ ದಶಕಗಳ ಸುದೀರ್ಘ ಅವಧಿ ಪಡೆದಿದೆ. 2008 ರಲ್ಲಿ ಆರ್​.ವಿ.ದೇಶಪಾಂಡೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಈಗಿರುವ ಕೆಪಿಸಿಸಿ ಕಚೇರಿ ನಿರ್ವಹಣೆಗೆ ಚಿಕ್ಕದಾಗುತ್ತದೆ, ಇದರಿಂದ ಇನ್ನೊಂದು ಕಚೇರಿಯ ಅಗತ್ಯ ಇದೆ ಎಂದು ಪರಿಗಣಿಸಿ ಮತ್ತೊಂದು ಕಚೇರಿ ನಿರ್ಮಿಸಬೇಕೆಂಬ ನಿರ್ಧಾರ ಕೈಗೊಂಡರು. ಬಳಿಕ 2010ರಲ್ಲಿ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ವೇಳೆ 2014 ರಲ್ಲಿ ಶಂಕುಸ್ಥಾಪನೆ ನೆರವೇರಿತ್ತು. 2014ರಲ್ಲಿ ಕಟ್ಟಡಕ್ಕೆ 12 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು, ಆದರೆ ಕಟ್ಟಡ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೆ ಇರುವುದರಿಂದ ಯೋಜನಾ ವೆಚ್ಚ ಹೆಚ್ಚಾಗಿದೆ. 2020ರ ಮಾರ್ಚ್​ನಲ್ಲಿ ಡಿ.ಕೆ.ಶಿವಕುಮಾರ್​ ಅಧಿಕಾರ ವಹಿಸಿಕೊಳ್ಳುವ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 6 ರಿಂದ 7 ಕೋಟಿ ರೂ ಹಣ ಬೇಕು ಎಂದು ಹೇಳಲಾಗುತ್ತಿತ್ತು. ಇದನ್ನು ಭರಿಸಲು ಕ್ರಮ ಕೈಗೊಂಡ ಡಿಕೆಶಿ, ಕಾಮಗಾರಿ ಪೂರ್ಣಗೊಳಿಸಿದ್ದರು. ನಂತರ ಒಂದೆರಡು ಕಾರ್ಯಕ್ರಮಗಳೂ ಸಹ ಇಲ್ಲಿ ನೆರವೇರಿದ್ದು, ಇದೀಗ ಅಧಿಕೃತವಾಗಿ ಉದ್ಘಾಟನೆ ಭಾಗ್ಯ ಪಡೆಯುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:33 am, Mon, 17 April 23