ರಾಹುಲ್ ಗಾಂಧಿ ಕಾರ್ಯಕ್ರಮಗಳಿಗೆ ಪರಮೇಶ್ವರ್ ಗೈರು; ಕಾಂಗ್ರೆಸ್ ಪಕ್ಷದ ವಿರುದ್ಧ ಪರಂ ಮುನಿಸಿಗೆ ಕಾರಣವೇನು?
ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾಲ್ಗೊಂಡಿದ್ದರೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಕಾಂಗ್ರೆಸ್ ಸಮಾವೇಶಗಳಿಂದ ದೂರ ಉಳಿದಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಸಮಯದಲ್ಲೇ ಮಾಜಿ ಉಪಮುಖ್ಯಮಂತ್ರಿಯೂ ಆಗಿರುವ ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ. ಪರಮೇಶ್ವರ್ (Dr.G.Parameshwara) ಅವರು ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸುಗೊಂಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಕಾರಣ, ಇಂದು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಪಾಲ್ಗೊಂಡಿದ್ದರೂ ಪರಮೇಶ್ವರ್ ಅವರು ಮಾತ್ರ ಕಾಂಗ್ರೆಸ್ ಸಮಾವೇಶಗಳಿಂದ ದೂರ ಉಳಿದಿರುವುದು. ತಾನೇ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದರೂ ಉದ್ಘಾಟನಾ ಕಾರ್ಯಕ್ರಮಕ್ಕೆ ಜಿ.ಪರಮೇಶ್ವರ್ ಗೈರು ಆಗಿರುವುದು ಸಂಶಯಕ್ಕೆ ಕಾರಣವಾಗಿದೆ.
ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಖುದ್ದು ಆಸಕ್ತಿ ವಹಿಸಿ 2014ರಲ್ಲಿ ಕಟ್ಟಡ ನಿರ್ಮಾಣಕ್ಕೆ ಪರಮೇಶ್ವರ್ ಅವರು ಚಾಲನೆ ನೀಡಿದ್ದರು. ಆದರೆ, ಇಂದು ಕಟ್ಟಡ ಉದ್ಘಾಟನೆಯಾದರೂ ಪರಮೇಶ್ವರ್ ಅವರು ಕಾಣಿಸಿಕೊಂಡಿಲ್ಲ. ಸ್ವತಃ ರಾಹುಲ್ ಗಾಂಧಿ ಆಗಮಿಸಿ ಉದ್ಘಾಟಿಸಿದರೂ ಪರಂ ಗೈರು ಹಾಜರಾಗಿದ್ದಾರೆ. ಈ ಒಂದು ಕಾರ್ಯಕ್ರಮಕ್ಕೆ ಮಾತ್ರವಲ್ಲ, ಇಂದು ಕೋಲಾರದಲ್ಲಿ ನಡೆದ ಜೈ ಭಾರತ ಸಮಾವೇಶ ಸೇರಿದಂತೆ ಇಡೀ ದಿನ ನಡೆದ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ.
ನೂತನ ಕಟ್ಟಡ ನಿರ್ಮಾಣಕ್ಕೆ ಪರಮೇಶ್ವರ್ ಅವರು ಆರ್ಥಿಕ ನೆರವನ್ನೂ ನೀಡಿದ್ದರು. ಸುಮಾರು ಒಂದೂವರೆ ಕೋಟಿ ಹಣ ಈ ಕಾಮಗಾರಿಗೆ ನೀಡಿದ್ದರು. ಹೀಗಿದ್ದರೂ ಪರಮೇಶ್ವರ್ ಅವರು ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಭಾಗಿಯಾಗದೇ ಕೊರಟಗೆರೆ ಕ್ಷೇತ್ರದಲ್ಲೇ ಉಳಿದುಕೊಂಡಿದ್ದಾರೆ.
ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ನ ಅಖಂಡ ಶ್ರೀನಿವಾಸ್ ಮೂರ್ತಿ; ಡಿಕೆ ಶಿವಕುಮಾರ್ ವಿರುದ್ಧ ಪರೋಕ್ಷ ಕಿಡಿ
ರಾಜ್ಯ ಕಾಂಗ್ರೆಸ್ನಲ್ಲಿ ಉನ್ನತ ಸ್ಥಾನಗಳನ್ನು ಪಡೆದಿದ್ದರೂ ಸ್ವಪಕ್ಷದ ವಿರುದ್ಧ ಪರಮೇಶ್ವರ್ ಅವರು ಮುನಿಸುಕೊಳ್ಳುತ್ತಲೇ ಇದ್ದಾರೆ. ಸುಮಾರು 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್, ಉಪಮುಖ್ಯಮಂತ್ರಿ, ಗೃಹಸಚಿವರಾಗಿದ್ದರು. ಇಷ್ಟೆಲ್ಲಾ ಸ್ಥಾನಮಾನಗಳು ಸಿಕ್ಕಿದ್ದರೂ ಪಕ್ಷದ ವಿರುದ್ಧ ಮುನಿಸುಗೊಳ್ಳಲು ಕಾರಣ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬುದು. ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ನನ್ನನ್ನು ಪರಿಗಣಿಸುತ್ತಿಲ್ಲ ಎಂಬ ಅಸಮಾಧಾನ ಅವರಲ್ಲಿದೆ. ಚುನಾವಣೆಯ ಪ್ರಣಾಳಿಕೆ ತಯಾರಿ ಸಮಿಯ ಅಧ್ಯಕ್ಷರಾಗಿದ್ದರೂ ಘೋಷಣೆ ವೇಳೆ ತನ್ನನ್ನು ಪರಿಗಣಿಸಿಲ್ಲ, ಪಕ್ಷದಲ್ಲೂ ಸೂಕ್ತ ಸ್ಥಾನಮಾನ ನೀಡದೇ ಮೂಲೆ ಗುಂಪು ಮಾಡುತ್ತಿದ್ದಾರೆ ಎಂಬ ಅಸಮಾಧಾನ ಪರಮೇಶ್ವರ್ ಅವರಲ್ಲಿದೆ ಎನ್ನಲಾಗುತ್ತಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:33 pm, Sun, 16 April 23