
ಬೆಂಗಳೂರು, ಅಕ್ಟೋಬರ್ 06: ರಾಜ್ಯದಲ್ಲಿ ಜಾತಿಗಣತಿ ( Caste census ) ಶುರಾಗಿರುವ ಬೆನ್ನಲ್ಲೇ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕಾಗಿ ಹಲವು ಸ್ವಾಮೀಜಿಗಳು ಪಟ್ಟು ಹಿಡಿದಿದ್ದು, ಸಮೀಕ್ಷೆ ಸಮಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಬರೆಸಲೂ ಕರೆ ನೀಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ನಿನ್ನೆ (ಅ.5) ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದ ಬಸವ ಸಾಂಸ್ಕೃತಿಕ ಅಭಿಯಾನದ ಸಮಾರೋಪ ಸಮಾರಂಭದಲ್ಲಿಯೂ ಇದೇ ವಿಚಾರ ಪ್ರತಿಧ್ವನಿಸಿದೆ.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ವೀರಶೈವ ಮತ್ತು ಲಿಂಗಾಯತರನ್ನು ವಿಭಜಿಸಲು ಪ್ರಯತ್ನಿಸಿದ್ದರು. ಬಳಿಕ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು. ಈಗ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಸಿದ್ದರಾಮಯ್ಯನವರೇ ಸಿಎಂ ಆಗಿದ್ದಾರೆ. ಇದೇ ಹೊತ್ತಲ್ಲಿ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಎದ್ದಿರೋದು ಕಾಕತಾಳೀಯ. ಇನ್ನು ಈ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ಸಚಿವರಲ್ಲೇ ಅಸಮಾಧಾನ ಉಂಟಾಗಿದೆ. ಸಚಿವರಾದ ಈಶ್ವರ್ ಖಂಡ್ರೆ ಮತ್ತು ಎಂ.ಬಿ.ಪಾಟೀಲ್ ಅವರ ನಿಲುವಲ್ಲಿ ದ್ವಂದವಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಎಂ.ಬಿ.ಪಾಟೀಲ್ ಆಗ್ರಹಿಸಿದ್ದಾರೆ. ಆದರೆ ವೀರಶೈವ, ಲಿಂಗಾಯತ ಎರಡೂ ಒಂದೇ ಎಂಬುದು ಖಂಡ್ರೆ ವಾದ.
ಇದನ್ನೂ ಓದಿ: ನಾಳೆಗೆ ಮುಗಿಯಲ್ಲ ಜಾತಿ ಗಣತಿ? ಅವಧಿ ವಿಸ್ತರಣೆ ಸುಳಿವು ಕೊಟ್ಟ ಸಚಿವ ಪರಮೇಶ್ವರ
ಜೈನರು, ಸಿಖ್ಖರು, ಬೌದ್ಧರಿಂದ ಯಾರಿಗಾದರೂ ತೊಂದರೆ ಆಯ್ತಾ? ಹಾಗೆಯೇ ಲಿಂಗಾಯತ ಧರ್ಮ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಕಳೆದ ಬಾರಿ ಈ ವಿಚಾರ ವಿವಾದವಾದಾಗ ಅದನ್ನ ಸಿಎಂ ಸಿದ್ದರಾಮಯ್ಯ ತಲೆಗೆ ಕಟ್ಟಲಾಗಿತ್ತು. ಹಿಂದೆ ಆಟ ಆಡಿದ ಹಾಗೆ ಈಗ ಆಟ ಆಡಲು ಆಗುವುದಿಲ್ಲ. ಭೌಗೋಳಿಕವಾಗಿ ನಾವೆಲ್ಲ ಭಾರತೀಯರು, ಹಿಂದೂಗಳು. ಲಿಂಗಾಯತ ಧರ್ಮದವರು ಚತುರ್ವರ್ಣದಿಂದ ಹೊರಗೆ ಉಳಿದಿದ್ದೇವೆ. ನಿನ್ನೆ ಮಠಾಧಿಪತಿಗಳ ಒಕ್ಕೂಟದಿಂದ ಕಾರ್ಯಕ್ರಮ ನಡೆದಿದ್ದು, ದ್ವಂದ್ವ ನಿಲುವು ಇರುವವರನ್ನು ಸಭೆಗೆ ಕರೆದಿಲ್ಲ. ವೀರಶೈವ ಮಹಾಸಭಾ ಕೂಡ ಒಂದು ಹಂತಕ್ಕೆ ಹತ್ತಿರ ಬಂದಿದೆ. ನಾವು ಹಿಂದೂ ವಿರೋಧಿಗಳಲ್ಲ, ವೀರಶೈವ ವಿರೋಧಿಗಳೂ ಅಲ್ಲ. ಒಬಿಸಿಗೆ ಸೇರಿಸಿ ಎಂಬುದರಲ್ಲಿ ತಪ್ಪೇನಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಪ್ರಶ್ನಿಸಿದ್ದಾರೆ.
ಮತ್ತೆ ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಕೇಳ್ತಿದೆ. ಧರ್ಮ ಒಡೆಯುವ ಕೆಲಸವನ್ನು ಯಾರು ಮಾಡುತ್ತಿದ್ದಾರೆ? ಎಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ. ಒಕ್ಕಲಿಗರು, ವೀರಶೈವ ಲಿಂಗಾಯತ ಸಮುದಾಯದಲ್ಲೂ ಬಡವರಿದ್ದಾರೆ. ಆದರೆ ಕೆಲವರಿಂದ ಸಮಾಜ ಒಡೆಯುವ ಕೃತ್ಯಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:42 pm, Mon, 6 October 25